ಸದಾ ಸಂತೋಷವಾಗಿರಬೇಕು ಎಂಬ ಆಸೆ ಯಾರಿಗಿರುವುದಿಲ್ಲ ಹೇಳಿ? ಆದರೆ, ಅದಕ್ಕಾಗಿ ಪ್ರಯತ್ನ ಹಾಕಬೇಕು ಎಂಬುದು ಮಾತ್ರ ಹಲವರಿಗೆ ಸೇರದ ಸಂಗತಿ.  ಸಂತೋಷವಾಗಿರುವುದೂ ಒಂದು ಕಲೆ- ಅದನ್ನು ಕರಗತ ಮಾಡಿಕೊಳ್ಳಬೇಕು. ಅಭ್ಯಾಸದಿಂದ ಎಂಥ ಸಂದರ್ಭಗಳಲ್ಲೂ ಸಂತೋಷವಾಗಿರುವುದನ್ನು ರೂಢಿಸಿಕೊಳ್ಳಬಹುದು.  ಹೀಗೆ ಸಂತೋಷವಾಗಿರಲು ಏನು ಮಾಡಬೇಕೆಂದು ವಿಜ್ಞಾನ ಹೇಳುತ್ತದೆ ಗೊತ್ತಾ?

1. ಹೆಚ್ಚು ವ್ಯಾಯಾಮ
ವರ್ಕೌಟ್ ಬಳಿಕ ಬೇಜಾರಿನಿಂದ ಇರುವವರನ್ನು ಯಾರಾದರೂ ನೋಡಿದ್ದೀರಾ? ಎಕ್ಸರ್ಸೈಸ್ ಮಾಡಿದಾಗ ದೇಹದಲ್ಲಿ ಒಳ್ಳೆಯ ಮೂಡ್ ತರಿಸುವ ಎಂಡೋರ್ಫಿನ್ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಟೊರೊಂಟೋ ಯೂನಿವರ್ಸಿಟಿ ಈ ಸಂಬಂಧ ಸುಮಾರು 25 ಸಂಶೋಧನಾ ವರದಿಗಳನ್ನು ಪರಿಶೀಲಿಸಿದ್ದು, ದೈಹಿಕ ವ್ಯಾಯಾಮವು ಖಿನ್ನತೆಯನ್ನೂ ದೂರವಿಡಬಲ್ಲದು ಎಂದು ತಿಳಿಸಿದೆ. ಇನ್ನೊಂದು ಅಧ್ಯಯನವು ಖಿನ್ನತೆ ಹೊಂದಿರುವ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಒಂದು ಗುಂಪಿಗೆ ಆ್ಯಂಟಿ ಡಿಪ್ರೆಸೆಂಟ್ ಔಷಧ ನೀಡಿತು. ಮತ್ತೊಂದು ತಂಡಕ್ಕೆ ಕೇವಲ ವ್ಯಾಯಾಮ, ಇನ್ನೊಂದು ಗುಂಪಿಗೆ ಇವೆರಡರನ್ನೂ ನೀಡಿತು. ಮೂರೂ ತಂಡಗಳ ಎಲ್ಲರೂ ಗುಣಮುಖರಾದರು. ಆದರೆ, 6 ತಿಂಗಳ ಬಳಿಕ ಕೇವಲ ವ್ಯಾಯಾಮ ಮಾಡಿದ ಗುಂಪಿನ ಸದಸ್ಯರು ಹೆಚ್ಚು ಖುಷಿಯಾಗಿದ್ದರೆ, ಉಳಿದೆರಡು ಗುಂಪಿನ ಶೇ.38 ಹಾಗೂ ಶೇ.31ರಷ್ಟು ಸದಸ್ಯರು ಮತ್ತೆ ಖಿನ್ನತೆಗೆ ಜಾರಿದ್ದರು. 

2. ಸಕಾರಾತ್ಮಕ ಯೋಚನೆಗಳು
ಒತ್ತಡಕಾರಕಗಳು, ಸಂಬಂಧಗಳು, ಆರ್ಥಿಕ ಸ್ಥಿತಿಗತಿ, ಯಶಸ್ಸು ಇತ್ಯಾದಿ ವಿಷಯಗಳು ನಿಮ್ಮ ಧೀರ್ಘಕಾಲೀನ ಸಂತೋಷದಲ್ಲಿ ಕೇವಲ ಶೇ.10ರಷ್ಟು ಮಾತ್ರ ಪಾತ್ರ ಹೊಂದಿರುತ್ತವೆ. ಉಳಿದ ಶೇ.90ರಷ್ಟು ಭಾಗ ನೀವು ಹೇಗೆ ಯೋಚಿಸುತ್ತೀರಿ ಎಂಬುದರ ಸುತ್ತಲೇ ನಿಂತಿರುತ್ತದೆ. ಅಧ್ಯಯನಗಳ ಪ್ರಕಾರ ಪಾಸಿಟಿವ್ ಥಿಂಕಿಂಗ್ ಶೇ.30ರಷ್ಟು ಮಟ್ಟಿಗೆ ನಿಮ್ಮ ಸಾಮರ್ಥ್ಯ, ಎನರ್ಜಿ, ಸೃಜನಶೀಲತೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. 

3. ನೆಗೆಟಿವ್ ಯೋಚನೆಗಳು
ಕೆಲವರಲ್ಲಿ ನೆಗೆಟಿವ್ ಯೋಚನೆಗಳು ಎಷ್ಟಿರುತ್ತವೆ ಎಂದರೆ ಅದರಿಂದ ಹೊರಬರಬೇಕೆಂದು ಅವರು ಎಷ್ಟು ಯೋಚಿಸಿದರೂ ಸಾಧ್ಯವಾಗುವುದಿಲ್ಲ. ಇಂಥವರು ಪ್ರತಿದಿನ ತಮ್ಮ ನೆಗೆಟಿವ್ ಯೋಚನೆಗಳನ್ನು ಒಂದೆಡೆ ಬರೆದು ಪೇಪರನ್ನು ಹರಿದು ಹಾಕುವುದು, ಸುಡುವುದು ಅಥವಾ ಡಸ್ಟ್‌ಬಿನ್‌ಗೆ ಹಾಕುವುದರಿಂದ ನೆಗೆಟಿವ್ ಯೋಚನೆಯ ಕೆಟ್ಟ ಪರಿಣಾಮಗಳು ಅಲ್ಲೇ ನಿರ್ನಾಮವಾಗುತ್ತವೆ ಎಂದು ಮ್ಯಾಡ್ರಿಡ್ ಯೂನಿವರ್ಸಿಟಿಯ ಅಧ್ಯಯನ ಕಂಡುಕೊಂಡಿದೆ.

4. ಅನುಭವಗಳೇ ಆಸ್ತಿ
ಟಿವಿ, ಮನೆ, ಫ್ರಿಡ್ಜ್ ಇತ್ಯಾದಿ ಮೆಟೀರಿಯಲ್‌ಗಳನ್ನು ಕಲೆ ಹಾಕುವುದರಿಂದ ಸಿಗುವ ಖುಷಿ ತಾತ್ಕಾಲಿಕವಾಗಿರುತ್ತದೆ. ಆದರೆ ಅನುಭವಗಳು ನೀಡುವ ಸವಿನೆನಪು ಕಡೆವರೆಗೂ ಅದೇ ಭಾವನೆ ಹೊಮ್ಮಿಸಬಲ್ಲದು. ಅದು ನಮಗೆ ಮಾತ್ರ ಸೇರಿದ್ದಾಗಿರುತ್ತದೆ. ಹೀಗಾಗಿ, ವಸ್ತುಗಳಿಗಿಂತ ಹೆಚ್ಚು ಅನುಭವಗಳಿಗೆ ಬೆಲೆ ಕೊಡಿ. ಒಳ್ಳೆಯ ಅನುಭವ ಗಳಿಸುವತ್ತ ಚಿತ್ತ ಹರಿಸಿ, ಸುತ್ತಾಟ, ಸಾಹಸ ಚಟುವಟಿಕೆಗಳು, ಗೆಳೆಯರ ಭೇಟಿ ಹೀಗೆ ಖುಷಿ ಕೊಡುವ ಸಂಗತಿಗಳನ್ನೇ ಬದುಕಾಗಿಸಿ ಎನ್ನುವುದು ಸೈಕಾಲಜಿಸ್ಟ್ ಥಾಮಸ್ ಗಿಲೋವಿಚ್ ಸಲಹೆ. ಅವರು ಈ ಸಂಬಂಧ ನಡೆಸಿದ ಅಧ್ಯಯನದ ವರದಿಯು ಪರ್ಸನಾಲಿಟಿ ಆ್ಯಂಡ್ ಸೋಷ್ಯಲ್ ಸೈಕಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿದೆ. 

5. ಯಾವುದಕ್ಕಾಗಿ ನೀವು ಋಣಿ
ನಿಮಗೆ ಬದುಕುವ ಅವಕಾಶ ಸಿಕ್ಕಿದ್ದಕ್ಕಾಗಿ, ಮೂರು ಹೊತ್ತು ಊಟ, ಕನಸು ಕಾಣುವ ಮನಸು, ಯೋಚಿಸಲು ತಲೆ, ಕೆಲಸ ಮಾಡಲು ದೇಹ ಇವುಗಳನ್ನು ನೀಡಿದುದಕ್ಕಾಗಿ ಬೆಳಗ್ಗೆದ್ದ ಕೂಡಲೇ ಧನ್ಯವಾದ ಅರ್ಪಿಸುವುದು ಪಾಸಿಟಿವ್ ಆಗಿ ಯೋಚಿಸುವ ಆರಂಭ. ಇದಲ್ಲದೆ, ಉತ್ತಮ ಗೆಳೆಯರು, ಪೋಷಕರು ಇತ್ಯಾದಿ ಯಾವುದೇ ಸಂಗತಿ ನಿಮ್ಮ ಬದುಕಿನಲ್ಲಿರುವುದಕ್ಕೆ ನೀವು ಸಂತುಷ್ಟರಾಗಿದ್ದೀರಿ, ಚಿರಋಣಿಯಾಗಿದ್ದೀರಿ ಎನಿಸಿದರೆ, ಬೆಳಗೆದ್ದ ಕೂಡಲೇ ಆ 3 ಸಂಗತಿಗಳನ್ನು ಬರೆದಿಡಿ. ಸಾಮಾನ್ಯವಾಗಿ ನಾವು ಯಾವಾಗಲೂ ಚಿಂತೆ, ಕೊರಗು, ದುಃಖಗಳಲ್ಲೇ ಬಹುಪಾಲು ಸಮಯ ಕಳೆಯುತ್ತಿರುತ್ತೇವೆ. ಆದರೆ ಪಾಸಿಟಿವ್ ಆಗಿ ಯೋಚಿಸಲು ಬದುಕಿನಲ್ಲಿ ಹಲವು ವಿಷಯಗಳಿವೆ. ಅವುಗಳಿಂದಲೇ ದಿನ ಆರಂಭಿಸಿದರೆ ಸಂತೋಷವಾಗಿರಬಹುದು ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. 

6. ವರ್ತಮಾನದಲ್ಲಿರುವುದು
ದೇಹವಷ್ಟೇ ಅಲ್ಲ, ಮನಸ್ಸು ಕೂಡಾ ಪ್ರತಿ ಕ್ಷಣ ವರ್ತಮಾನದಲ್ಲಿರುವುದನ್ನು ಅಭ್ಯಾಸ ಮಾಡಿ. ಇದರಿಂದ ಹೆಚ್ಚು ಸಂತೋಷವಾಗಿರಬಹುದು ಎನ್ನುತ್ತಾರೆ ಈ ಕುರಿತು 15,000 ಜನರನ್ನು ಅಧ್ಯಯನಕ್ಕೊಳಪಡಿಸಿದ ಹಾರ್ವರ್ಡ್ ಸಂಶೋಧಕ ಮ್ಯಾಟ್ ಕಿಲ್ಲಿಂಗ್ಸ್‌ವರ್ತ್. ಈ ಕ್ಷಣ ಆಹಾರ ಸೇವಿಸುತ್ತಿದ್ದರೆ ಅರದ ರುಚಿ, ಪರಿಮಳವನ್ನು ಎಂಜಾಯ್ ಮಾಡುವುದು, ಆಡುತ್ತಿದ್ದರೆ ಸಂಪೂರ್ಣ ಆಟದಲ್ಲೇ ಮುಳುಗುವುದು, ಮಾತನಾಡುತ್ತಿದ್ದರೆ ಪೂರ್ತಿ ಗಮನ ಅದರಲ್ಲೇ ಇರುವುದು... ಹೀಗೆ ಪಂಚೇಂದ್ರಿಯಗಳೂ ವರ್ತಮಾನವನ್ನು ಗಮನಿಸುವಂತೆ ನೋಡಿಕೊಳ್ಳುವಂತೆ ಪ್ರಾಕ್ಟೀಸ್ ಮಾಡಿಸಿ. 

ಬದುಕನ್ನು ಸುಲಭಗೊಳಿಸೋ ಸರಳ ಉಪಾಯಗಳು