Asianet Suvarna News Asianet Suvarna News

ಬದುಕನ್ನು ಸುಲಭಗೊಳಿಸೋ ಸರಳೋಪಾಯಗಳಿವು!

ಬದುಕು ಅಷ್ಟು ಸುಲಭವಲ್ಲ, ಸಂಕೀರ್ಣತೆಯಿಂದ ಕೂಡಿದೆ ಎಂದು ಈಗಾಗಲೇ ನಿಮ್ಮ ಅರಿವಿಗೆ ಬಂದಿರಬಹುದು. ಆದರೆ, ಅದನ್ನು ಒಂದು ಮಟ್ಟಿಗೆ ಯೋಜಿಸಿಕೊಂಡು ಶಿಸ್ತು ರೂಢಿಸಿಕೊಂಡು ಮುಂದುವರಿದರೆ ದಿನ ಸುಲಭವಾಗಿ ಕಳೆದು ಹೋಗುತ್ತದೆ. 

12 Easy ways to simplify life
Author
Bangalore, First Published Jul 7, 2019, 9:53 AM IST
  • Facebook
  • Twitter
  • Whatsapp

ಓದು, ಕೆಲಸ, ಸಂಬಂಧಗಳು, ಸ್ವಂತದ ಸಮಯ, ವ್ಯಕ್ತಿತ್ವ ವಿಕಸನ, ಆರೋಗ್ಯ, ದುಡಿಮೆ, ಕನಸುಗಳು, ಜವಾಬ್ದಾರಿಗಳು, ಮಕ್ಕಳು, ಮನೆ, ನಿರೀಕ್ಷೆಗಳು, ಸ್ವಚ್ಛತೆ, ಸೌಂದರ್ಯ...ಅಬ್ಬಬ್ಬಾ! ಬದುಕು ಆಗಾಗ ಜಟಿಲ ಕಾನನದ ಕಠಿಣ ಪಥದೊಳು ಹರಿಯುವ ತೊರೆಯಂತೆ ಭಾಸವಾಗುತ್ತದೆ. ಅದರಲ್ಲೂ ನಾವು ಶಿಸ್ತಿಲ್ಲದೆ ಅಡ್ಡಾದಿಡ್ಡಿಯಾಗಿದ್ದರೆ ನಮ್ಮ ಬದುಕೂ ಇನ್ನಷ್ಟು ಗೋಜಲು ಗೋಜಲಾಗುತ್ತದೆ.

ಇಂಥ ಬದುಕನ್ನು ಸರಳ, ಸುಲಭವಾಗಿಸಲು ಇಲ್ಲಿದೆ ಟಿಪ್ಸ್. 

1. ತಿಂಗಳ ಗುರಿ ಹಾಕಿಕೊಳ್ಳ

ಹೊಸ ವರ್ಷದ ರೆಸಲ್ಯೂಶನ್ ಬದಲಿಗೆ ತಿಂಗಳಿಗೆ 2-3 ಗುರಿಗಳನ್ನು ಇಟ್ಟುಕೊಳ್ಳಿ. ಇದು ವರ್ಷದ ದೊಡ್ಡ ಗುರಿಯನ್ನು ಸಣ್ಣ ಸಣ್ಣದಾಗಿ ತುಂಡರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ನಾವು ಆ ಗುರಿಗಳನ್ನು ಸುಲಭವಾಗಿ ಸಾಧಿಸಬಹುದು. ಇದನ್ನು ಪ್ರತಿ ತಿಂಗಳ ಆರಂಭದಲ್ಲಿ ಬರೆದಿಟ್ಟರೆ, ಸಾಧಿಸಿದೊಡನೆ ಟಿಕ್ ಮಾರ್ಕ್ ಹಾಕುವ ಖುಷಿಯೇ ಬೇರೆ. 

2. ನೀರಿನ ಬಾಟಲ್

ನಾವು ಯಾವಾಗಲೂ ಹೈಡ್ರೇಟ್ ಆಗಿರುವುದು ಮುಖ್ಯ. ಇದು ಪದೇ ಪದೆ ಸುಸ್ತಾಗುವುದನ್ನು ತಡೆಯುವುದರೊಂದಿಗೆ ಮೂಡ್ ಕೂಡಾ ಸರಿ ಮಾಡುತ್ತದೆ. ಹೀಗಾಗಿ, ಎಲ್ಲೇ ಹೋದರೂ ನೀರನ್ನು ತುಂಬಿಕೊಂಡ ಬಾಟಲ್ ಜೊತೆಗಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ವೃಥಾ ಪ್ಲ್ಯಾಸ್ಟಿಕ್ ಬಾಟಲ್ ಕೊಳ್ಳುವುದು ಕೂಡಾ ತಪ್ಪುತ್ತದೆ.

ಟೆಕ್ನಾಲಜಿ ಟೆನ್ಷನ್‌ನಿಂದ ಹೊರ ಬರೋದು ಹೇಗೆ?

3. ನಿಮ್ಮ ವಾರ್ಡ್ರೋಬ್ ಕಿರಿದುಗೊಳಿಸಿ.

ಮೂಟೆಗಟ್ಟಲೆ ಬಟ್ಟೆಯಿದ್ದರೂ ದಿನಾ ಧರಿಸಲು ಬಟ್ಟೆಯಿಲ್ಲ ಎಂಬ ರಾಗ ನಿಮ್ಮದಾದರೆ ಒಮ್ಮೆ ನಿಮ್ಮ ವಾರ್ಡ್ರೋಬ್ ತೆರೆದು ನೋಡಿ. ಅದೆಷ್ಟೋ ಬಟ್ಟೆಗಳ ಪ್ರೈಸ್ ಟ್ಯಾಗ್ ಕೂಡಾ ಕಿತ್ತಿರುವುದಿಲ್ಲ! ಅಂಥವುಗಳನ್ನು ಕೂಡಲೇ ಕ್ಲಿಯರ್ ಮಾಡಿ. ನೀವು ಧರಿಸುವಷ್ಟೇ ಬಟ್ಟೆಗಳನ್ನು ಇಟ್ಟುಕೊಂಡು ಉಳಿದವನ್ನು ಅಗತ್ಯವಿರುವವರಿಗೋ, ಅಕ್ಕತಂಗಿಯರಿಗೋ ಕೊಟ್ಟುಬಿಡಿ. ಕಡಿಮೆ ಬಟ್ಟೆಯಿದ್ದಷ್ಟೂ ಬಟ್ಟೆ ಆಯ್ಕೆಯೂ ಸುಲಭ, ನಿರ್ವಹಣೆಯೂ ಸರಳ. ಇದು ನಿಮ್ಮ ಬಹಳಷ್ಟು ಹಣವನ್ನೂ, ಸಮಯವನ್ನೂ ಉಳಿಸುವುದನ್ನು ನೀವೇ ಕಂಡುಕೊಳ್ಳುತ್ತೀರಿ.

4. ಇಮೇಲ್ ಟಾಸ್ಕ್‌ಗಳನ್ನು ಪೇಪರ್‌ನಲ್ಲಿ ಬರೆದಿಡಿ. 

ಇಮೇಲ್‌ನಲ್ಲಿ ಬಂದ ಕೆಲಸವಾಗಬೇಕಾದ ಮೇಲ್‌ಗಳನ್ನು ಪ್ರಾಮುಖ್ಯತೆಯ ಆಧಾರದ ಮೇಲೆ ಪೇಪರ್‌ನಲ್ಲಿ ಬರೆದು ಪಟ್ಟಿ ಮಾಡಿಕೊಳ್ಳಿ. ನೀವು ನಂಬೋಲ್ಲ, ಎಷ್ಟು ಸುಲಭವಾಗಿ ಒಂದಾದ ನಂತರ ಒಂದು ಕೆಲಸವಾಗುತ್ತದೆ ಎಂದು. 

5. ಅನ್‌ಸಬ್‌ಸ್ಕ್ರೈಬ್ ಮಾಡಿ

ಜಂಕ್ ಮೇಲ್‌ಗಳು ನಿಮ್ಮ ಅದೆಷ್ಟು ಸಮಯ ತಿನ್ನುತ್ತವೆ ಎಂಬ ಐಡಿಯಾ ಕೂಡಾ ನಿಮಗಿರುವುದಿಲ್ಲ. ಹೀಗಾಗಿ, ಪ್ರತಿದಿನ ಮೇಲ್‌ಗೆ ಬಂದು ಬೀಳುವ ಮೇಲ್‌ಗಳಲ್ಲಿ ಕನಿಷ್ಠ 25ರಿಂದ 50  ಮೇಲ್‌ಗಳು ಯೂಸ್ಲೆಸ್. ಹೀಗಾಗಿ, ಇಂಥ ಮೇಲ್‌ಗಳನ್ನು ಅನ್‌ಸಬ್‌ಸ್ಕೈಬ್ ಮಾಡಿ. 

6. ಮುಂದಾಲೋಚನೆ

ಪ್ರತಿದಿನ ಮಲಗುವ ಮುನ್ನ ಮರುದಿನ ತಿಂಡಿಗೆ, ಊಟಕ್ಕೆ ಏನು ಮಾಡಬೇಕೆಂದು, ಮನೆಯಲ್ಲಿ ಯಾವೆಲ್ಲ ತರಕಾರಿ ಹಾಗೂ ದಿನಸಿಗಳಿವೆ ಎಂಬುದನ್ನೂ ಮಲಗುವ ಮುನ್ನ ಯೋಚಿಸಿಟ್ಟುಕೊಳ್ಳಿ. ಇದರಿಂದ ತಿಂಡಿ ಏನು ಮಾಡುವುದೆಂಬ ಟೆನ್ಷನ್‌ನಲ್ಲೇ ಅರ್ಧ ಮುಕ್ಕಾಲು ಗಂಟೆ ವೇಸ್ಟ್ ಆಗುವುದು ತಪ್ಪುತ್ತದೆ. ಇನ್ನೂ ಬೆಟರ್ ಎಂದರೆ ವಾರದಲ್ಲಿ ಇಂತಿಂಥ ದಿನಕ್ಕೆ ಇಂಥ ತಿಂಡಿಗಳನ್ನು ಮಾಡುವುದೆಂದು ಲಿಸ್ಟ್ ಮಾಡಿ. 

ಜಂಟಿ ತಿರುಗಾಡೋರ ಲೈಂಗಿಕ ಬದುಕೂ ಬಿಂದಾಸ್!

7. ಎಂಟರ್ಟೇನ್‌ಮೆಂಟ್ ಸಮಯ ವ್ಯರ್ಥವಾಗದಿರಲಿ

ಟಿವಿ ನೋಡುವಾಗ, ಮಾತನಾಡುವಾಗ ಬೆಳ್ಳುಳ್ಳಿ ಬಿಡಿಸಿಟ್ಟುಕೊಂಡು ಪ್ಲ್ಯಾಸ್ಟಿಕ್ ಕವರ್‌ಗೆ ಅಥವಾ ಡಬ್ಬಿಗೆ ಹಾಕಿಟ್ಟುಕೊಳ್ಳಿ. ಸೊಪ್ಪನ್ನು ಸೋಸಿ, ತೊಳೆದು ಬಟ್ಟೆಯ ಮೇಲೆ ಆರಲು ಹಾಕಿ ಮರುದಿನ ಕಟ್ ಮಾಡಿ ಫ್ರಿಡ್ಜ್‌ನಲ್ಲಿಟ್ಟುಕೊಳ್ಳಿ. ಕಾಯಿ ತುರಿಯುವಾಗ ನಾಲ್ಕು ದಿನಕ್ಕಾಗುವಷ್ಟು ಒಮ್ಮೆಯೇ ತುರಿದಿಟ್ಟುಕೊಂಡು ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ. ತರಕಾರಿಗಳನ್ನು ಮಾರ್ಕೆಟ್‌ನಿಂದ ತಂದಾಗಲೇ ತೊಳೆದು ನೀರು ಆರಿಸಿ ಕವರ್‌ಗೆ ಹಾಕಿ ಫ್ರಿಡ್ಜ್‌ನಲ್ಲಿಡಿ. ಇಂಥ ಮುಂಜಾಗ್ರತೆಯಿಂದ ಧಾರಾವಾಹಿ ಮುಗಿಯುವ ಹೊತ್ತಿನಲ್ಲೇ ಕೆಲಸವೂ ಆಗುತ್ತದೆ. ಅಡುಗೆಯೂ ಪ್ರತಿದಿನ ಫಟಾಪಟ್ ಆಗಿ ಹೋಗುತ್ತದೆ. 

8. ಸಾಲ ಉಳಿಸಿಕೊಳ್ಳಬೇಡಿ

ಜೀವನವನ್ನು ಬಹಳಷ್ಟು ಸುಲಭವಾಗಿಸಿಕೊಳ್ಳುವ, ಒತ್ತಡ ಇಳಿಸಿಕೊಳ್ಳುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಸಾಲದಿಂದ ಮುಕ್ತಿ ಹೊಂದುವುದು. ಕಾರ್ ಲೋನ್, ಸ್ಟೂಡೆಂಟ್ ಲೋನ್, ಕೈಸಾಲ, ಮನೆಸಾಲ ಏನೇ ಇರಲಿ, ದುಡಿಮೆಯ ಹಣ ಬರುತ್ತಲೇ ಎಲ್ಲ ಸಾಲದಿಂದಲೂ ಮುಕ್ತರಾಗುವತ್ತ ಮೊದಲ ಪ್ರಾಶಸ್ತ್ಯ ನೀಡಿ. 

9. ಸೋಷ್ಯಲ್ ಮೀಡಿಯಾಗಳಿಂದ ಹೊರಬನ್ನಿ

ಫೇಸ್ಬುಕ್, ಇನ್ಸ್ಟಾಗ್ರಾಂಗಳನ್ನು ಫೋನ್‌ನಿಂದ ಅನ್‌ಇನ್ಸ್ಟಾಲ್ ಮಾಡಿ. ಸುಮ್ಮನೆ ಸ್ಕ್ರಾಲ್ ಮಾಡುವುದರಲ್ಲಿ ದಿನದ ಅದೆಷ್ಟು ಸಮಯ ವ್ಯರ್ಥ ಮಾಡಿರುತ್ತೀರಿ ಎಂಬುದು ಅದರಿಂದ ಹೊರ ಬಂದ ಮೇಲೆ ಅರ್ಥವಾದೀತು. ಇನ್ನು ಸ್ಕೈಪ್, ವಾಟ್ಸಾಪ್, ಐಎಂ, ಟ್ವಿಟ್ಟರ್, ಸ್ನ್ಯಾಪ್‌ಚಾಟ್ ಇವುಗಳಲ್ಲಿ ಯಾವುದೆಲ್ಲ ಬಿಟ್ಟೂ ಬದುಕಬಹುದು ಎಂಬುದನ್ನು ಗಮನಿಸಿ ನೋಡಿ.

10. ಪೇಮೆಂಟ್ಸ್ ಆಟೋಮೇಟ್ ಮಾಡಿ

ಈ ಆಟೋಮೇಟ್ ಯುಗದಲ್ಲಿ ಬಿಲ್ ಕಟ್ಟೋಕೆ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವೇ ಇಲ್ಲ. ಮನೆ ಬಾಡಿಗೆ, ಕ್ರೆಡಿಟ್ ಕಾರ್ಡ್ ಬಿಲ್ ಹಾಗೂ ಇತರೆ ಹತ್ತು ಹಲವು ಬಿಲ್‌ಗಳನ್ನು ಆಟೋಮೇಟ್ ಮಾಡಬಹುದು. ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಆ ಬಿಲ್‌ಗಳು ನಿಮ್ಮ ಅಕೌಂಟ್‌ನಿಂದ ಕಟ್ಟಾಗಿ ಬೇಕೆಂದಲ್ಲಿ ಜಮೆಯಾಗುತ್ತವೆ. ನೀವು ಸುಮ್ಮನೆ ಒಮ್ಮೆ ಕಣ್ಣಾಡಿಸಿ ಸಾಕು.

11. ಮೆಟೀರಿಯಲಿಸಂನಿಂದ ಹೊರಬನ್ನಿ

ಕಂಡಕಂಡಿದ್ದೆಲ್ಲ ಕೊಳ್ಳೋ ಸಂಸ್ಕೃತಿಗೆ ಬ್ರೇಕ್ ಹಾಕಿ. ಕಡಿಮೆ ವಸ್ತುಗಳಲ್ಲಿ ಜೀವಿಸುವುದು ಅಭ್ಯಾಸ ಮಾಡಿಕೊಳ್ಳಿ. ಇದು ಹಣ ಉಳಿತಾಯ ಮಾಡುವುದರ ಜೊತೆಗೆ, ಅವುಗಳನ್ನು ಕ್ಲೀನ್ ಮಾಡುವ, ಬಳಸುವ, ಶಾಪಿಂಗ್ ಮಾಡುವ ಸಮಯವೂ ಉಳಿಯುತ್ತದೆ. 

12. ಜಂಕ್ ಫುಡ್ ಬಿಟ್ಟುಬಿಡಿ

ಪ್ರತಿದಿನ ಚಾಟ್‌ಸ್ಟ್ರೀಟ್‌ಗೆ ಹೋಗಿ ಬೇಕಾಬಿಟ್ಟಿ ತಿಂದು ಬರುವುದನ್ನು ನಿಲ್ಲಿಸಿ, ಅಷ್ಟೇ ಸಮಯವನ್ನು ಫಿಟ್ನೆಸ್ ಚಟುವಟಿಕೆಗೆ ಮೀಸಲಿಡಿ. ಡಯಟ್‌ನೊಂದಿಗೆ ಫಿಟ್ನೆಸ್ ಕೂಡಾ ಆಯಿತು. ಸಮಯದ ಸದುಪಯೋಗ ಕೂಡ ಆಯಿತು. 
 

Follow Us:
Download App:
  • android
  • ios