ತಲೆ ಇದ್ದವರಿಗೆ ಮಾತ್ರವೇಕೆ ತಲೆ ಇಲ್ಲದವರಿಗೆ ಕೂಡಾ ತಲೆನೋವು ಬರುತ್ತದೆ! ಸಮಸ್ಯೆಗಳು ದೊಡ್ಡ ತಲೆನೋವಾಗುವುದು ಸಾಮಾನ್ಯ. ಆದರೆ, ತಲೆನೋವೇ ದೊಡ್ಡ ಸಮಸ್ಯೆಯಾದರೆ ಮಾತ್ರ ಕಷ್ಟ ಕಷ್ಟ.

ಹೊಟ್ಟೆ ನೋವು, ತಲೆನೋವಿಗೂ ಶುಂಠಿ ಮನೆ ಮದ್ದು....

ಸಾಮಾನ್ಯವಾಗಿ ಬಾಳೆಹಣ್ಣು ತಿಂದು ನೀರು ಕುಡಿದರೆ ತಲೆನೋವು ಮಂಗಮಾಯವಾಗುತ್ತದೆ. ಆದರೆ ಈ ಟ್ರಿಕ್ ಎಲ್ಲ ಸಂದರ್ಭಗಳಲ್ಲೂ ಕೆಲಸಕ್ಕೆ ಬರೋಲ್ಲ. ಏಕೆಂದರೆ ತಲೆನೋವಿನಲ್ಲಿ ಹತ್ತು ಹಲವಾರು ವಿಧಗಳಿವೆ. ಸುಸ್ತು, ಡಿಹೈಡ್ರೇಶನ್, ನಿದ್ರಾಹೀನತೆ, ಶೀತ ಸೇರಿದಂತೆ ಬೇರೆ ಬೇರೆ ಕಾರಣಗಳಿಗೆ ತಲೆನೋವು ಅಟಕಾಯಿಸಿಕೊಳ್ಳಬಹುದು. ಹೀಗೆ ನಿಮಗೆ ಬಂದದ್ದು ಯಾವ ತಲೆನೋವು ಎಂದು ಕಂಡುಹಿಡಿಯಲು ಕೆಲ ಟ್ರಿಕ್‌ಗಳಿವೆ. ಅದನ್ನು ಕಲಿತುಕೊಂಡರೆ ಶೀಘ್ರವಾಗಿ ತಲೆನೋವನ್ನು ಗುರುತಿಸಿ ಚಿಕಿತ್ಸೆ ಮಾಡಿಕೊಳ್ಳಬಹುದು. 

ಸಾಮಾನ್ಯವಾಗಿ ನಾಲ್ಕು ವಿಧದ ತಲೆನೋವುಗಳು ನಿಮ್ಮನ್ನು ಬಾಧಿಸುತ್ತವೆ. ಅವೆಲ್ಲವೂ ದೇಹದ ಆರೋಗ್ಯದ ಬಗ್ಗೆ ಏನನ್ನೋ ಹೇಳುತ್ತಿರುತ್ತವೆ. ಈ ಸೂಚನೆಗಳನ್ನು ಅರಿತರೆ ತಲೆನೋವಿಗೆ ಮಾತ್ರೆ ತೆಗೆದುಕೊಳ್ಳದೆಯೇ ಶಮನ ಮಾಡಿಕೊಳ್ಳಬಹುದು. 

1. ಸೈನಸ್ ತಲೆನೋವು

ಸೈನಸ್ ಉರಿಯೂತವಿದ್ದರೆ ತಡೆಯಲಸಾಧ್ಯ ತಲೆನೋವು ಸಾಮಾನ್ಯ. ಸೈನಸ್ ತಲೆನೋವು ಬಂದಾಗ ಕೆನ್ನೆ, ಕಣ್ಣಿನ ಮೇಲ್ಭಾಗ ಹಾಗೂ ಹಣೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಜ್ವರವೂ ಇರಬಹುದು. 

ಚಿಕಿತ್ಸೆ; ಸಾಧ್ಯವಾದಷ್ಟು ಬಿಸಿನೀರು, ಸೂಪ್ ಹಾಗೂ ಇತರೆ ದ್ರವಾಹಾರಗಳನ್ನು ಸೇವಿಸಿ. ಇದು ಕಟ್ಟಿಕೊಂಡ ಮೂಗನ್ನು ತೆರೆದು ಆರಾಮಾಗಿಸುತ್ತದೆ. ನಿಂಬೆ, ಕಿತ್ತಳೆ, ಬೆಳ್ಳುಳ್ಳಿ ಸೇವನೆ ಹೆಚ್ಚು ಮಾಡಿ.

2. ಟೆನ್ಷನ್ ತಲೆನೋವು

ಸಾಮಾನ್ಯವಾಗಿ ಬರುವ ತಲೆನೋವು ಇದಾಗಿದ್ದು, ತಲೆಯ ಎರಡೂ ಬದಿ, ಕುತ್ತಿಗೆ, ಹಣೆ, ಬೆನ್ನುಗಳಲ್ಲಿ, ಕಣ್ಣಿನ ಮೇಲೆ ನೋವು ಕಂಡುಬರುತ್ತದೆ. ಇದರಿಂದ ಸಂಕಟ ಹಾಗೂ ವಾಂತಿಯಾಗುವ ಸಾಧ್ಯತೆಗಳೂ ಇರುತ್ತವೆ. ಇದು ಟೆನ್ಷನ್ ಹಾಗೂ ಒತ್ತಡದಿಂದ ಕಂಡುಬರುವ ತಲೆನೋವು.

ಲೈಂಗಿಕ ಶಕ್ತಿ ವೃದ್ಧಿಸುತ್ತೆ, ತಲೆನೋವಿಗೂ ಮದ್ದಿದು

ಚಿಕಿತ್ಸೆ; ಪುದೀನಾ ಎಣ್ಣೆ ಹಾಗೂ ಶುಂಠಿ ಟೀ ಇದಕ್ಕೆ ಸಹಾಯಕವಾಗಬಹುದು. ಪುದೀನಾ ಎಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಶುಂಠಿ ಟೀ ಸೇವಿಸಿ ಸ್ನಾಯುಗಳನ್ನು ಫ್ರೀಗೊಳಿಸಿ.

3. ಕ್ಲಸ್ಟರ್ ತಲೆನೋವು

ಇದು ಸಾಮಾನ್ಯವಾಗಿ ಸ್ಮೋಕರ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ದಿನದಲ್ಲಿ ಮತ್ತೆ ಮತ್ತೆ ಬರಬಹುದು. ಅಲ್ಲದೆ ಇದ್ದಕ್ಕಿದ್ದಂತೆ ಅರ್ಧರಾತ್ರಿಯಲ್ಲಿ ಬರುವ ಈ ತಲೆನೋವು ಒಂದು ಭಾಗದಲ್ಲಿ ಮಾತ್ರ ಬರುತ್ತದೆ. ಕಣ್ಣಿನ ಒಳಗೆ ಹಾಗೂ ಕಣ್ಣಿನ ಸುತ್ತ ನೋವು ಕಾಣಿಸಿಕೊಳ್ಳುತ್ತದೆ. ತಡೆದುಕೊಳ್ಳಲಸಾಧ್ಯ ನೋವು ಕಾಣಿಸಿಕೊಂಡು ಬಹುಬೇಗ ಮರೆಯಾಗುತ್ತದೆ. ಮತ್ತೆ ಮರಳುತ್ತದೆ. ನರದ ಸಮಸ್ಯೆಯಿಂದ ಇದು ಬರಬಹುದು ಎಂದು ಎಣಿಸಲಾಗಿದೆಯಾದರೂ ನಿಖರ ಕಾರಣ ತಿಳಿದುಬಂದಿಲ್ಲ. 

ಚಿಕಿತ್ಸೆ; ಕ್ಯಾಪ್‌ಸೈಸಿನ್ ಕ್ರೀಮ್ ಹಾಗೂ ಸಯೆನ್ನೆ ಪೆಪ್ಪರ್ ಸಹಾಯಕವಾಗಬಹುದು. ಇವುಗಳನ್ನು ಮೂಗಿನಲ್ಲಿ ಸ್ವಲ್ಪ ಹಚ್ಚಿ. ಇದಲ್ಲದೆ ಆಮ್ಲಜನಕ ತೆಗೆದುಕೊಳ್ಳುವುದು ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ. 

4. ಮೈಗ್ರೇನ್

25ರಿಂದ 55 ವಯೋಮಾನದ ನಡುವಿನವರಲ್ಲಿ ಮೈಗ್ರೇನ್ ಕಂಡುಬರುತ್ತದೆ. ಇದರಲ್ಲಿ ತಲೆಯ ಒಂದು ಭಾಗದಲ್ಲಿ ವಿಪರೀತ ನೋವು ಕಂಡುಬರುತ್ತದೆ. ಅಲ್ಲದೆ ಹಲವಾರು ನರಸಂಬಂಧಿ ಸೂಚನೆಗಳಿರುತ್ತವೆ. ತಲೆಸುತ್ತುವಿಕೆ, ಸಂಕಟ,  ದೃಷ್ಟಿತೊಂದರೆ, ಮುಖದಲ್ಲಿ ಕಚಗುಳಿಯಿಟ್ಟಂಥ ಸೆನ್ಸೇಶನ್ ಕಂಡುಬರಬಹುದು. ಈ ಲಕ್ಷಣಗಳು ತಲೆಯ ಮೇಲಿನಿಂದ ಆಱಂಭವಾಗಿ ಕೆಳಗಿಳಿಯುತ್ತಾ ಸಾಗುತ್ತವೆ. 

ಚಿಕಿತ್ಸೆ; ಬಹಳಷ್ಟು ಮೈಗ್ರೇನ್ ಪೇಶೆಂಟ್‌ಗಳು ಒಮೆಗಾ-3 ಫ್ಯಾಟಿ ಆ್ಯಸಿಡ್, ವಿಟಮಿನ್ ಬಿ12 ಹಾಗೂ ಮೆಗ್ನೀಶಿಯಂ ತೆಗೆದುಕೊಳ್ಳುವುದರಿಂದ ಸರಿಹೋಗುತ್ತಾರೆ. ಜೊತೆಗೆ ಏರೋಬಿಕ್ ವರ್ಕೌಟ್ ಕೂಡಾ ಸಹಾಯವಾಗುತ್ತದೆ.