ಕಾಂತಿಯುತ ಕೂದಲ ಮಂತ್ರ ಕಿಚನ್‌ನಲ್ಲಿದೆ!
ಅಡುಗೆಮನೆಯಲ್ಲಿ ನಿಮ್ಮ ಕೇಶಕ್ಕೆ ಬೇಕಾದ ಪೋಷಣೆಗಳೆಲ್ಲವೂ ಇವೆ. ಒಮ್ಮೆ ಇವುಗಳ ಪರಿಣಾಮ ಕಂಡುಕೊಂಡಿರಾದರೆ ಕೆಮಿಕಲ್ಸ್‌ಯುಕ್ತ ಶಾಂಪೂ, ಹೇರ್‌ಪ್ಯಾಕ್, ಪಾರ್ಲರ್‌ಗಳ ಟ್ರೀಟ್‌ಮೆಂಟ್‌ಗೆ ಹಾಕುವ ಬಹಳಷ್ಟು ಹಣವನ್ನು ಉಳಿಸಬಹುದು.
ಗಾಳಿಗೆ ಹಾರಿ ಬಿಟ್ಟರೂ ಸಿಕ್ಕಾಗದ, ಹೊಳೆವ ದಟ್ಟ ಕೂದಲು ಎಲ್ಲ ಲಲನೆಯರ ಕನಸು. ಇಂಥ ಸಿಲ್ಕೀ ಸಾಫ್ಟ್ ಕೂದಲಿಗಾಗಿ ಪಾರ್ಲರ್‌ಗಳ ಮೊರೆ ಹೋಗುವವರು ಕೆಲವರು. ಮತ್ತೆ ಹಲವರು ಖರ್ಚುವೆಚ್ಚ ಕೇಳಿಯೇ ಬಾಯ್ಬಿಟ್ಟು ತೆಪ್ಪಗೆ ಹಿಂದಿರುಗುತ್ತಾರೆ. ಇವರಲ್ಲಿ ನೀವೂ ಒಬ್ಬರಾಗಿದ್ದರೆ ಪಾರ್ಲರ್‌ಗೆ ಬೈ ಹೇಳಿ, ಕಿಚನ್‌ಗೆ ಕಿಸ್ ಮಾಡಿ. ಹೌದು, ನಿಮ್ಮ ಕೂದಲಿಗೆ ಬೇಕಾದ ಪೋಷಣೆಗಳೆಲ್ಲವೂ ಅಡಿಗೆಮನೆಯಲ್ಲಿ ಅಡಗಿವೆ.
ಕೊಬ್ಬರಿ ಎಣ್ಣೆ
ವಾರಕ್ಕೆ ಮೂರು ಬಾರಿ ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದು ಕೂದಲನ್ನು ಬುಡದಿಂದ ಸದೃಢವಾಗಿಸುತ್ತದೆ. ಹೀಗಾಗಿ ಕೂದಲುದುರುವುದು ಕಡಿಮೆಯಾಗುತ್ತದೆ. ಡ್ಯಾಮೇಜ್ ಹಾಗೂ ಡ್ರೈನೆಸ್ ಕಡಿಮೆಯಾಗಿ ಕಾಂತಿ ಹೆಚ್ಚುತ್ತದೆ.
ಮೊಸರು
ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಕೂದಲಿಗೆ ಕಂಡೀಶನರ್‌ನಂತೆ ಕೆಲಸ ಮಾಡುತ್ತದೆ. ತಲೆಸ್ನಾನ ಮಾಡುವ 20 ನಿಮಿಷ ಮುಂಚೆ ಮೊಸರಿಗೆ ಸ್ವಲ್ಪ ನಿಂಬೆರಸ ಹಾಕಿ ಕೂದಲಿಗೆ ಹಚ್ಚಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಕೂದಲು ಒಣಗುತ್ತಿದ್ದಂತೆಯೇ ವ್ಯತ್ಯಾಸ ಕಾಣಬಹುದು.
ಅಲೋವೆರಾ
ಅಲೋವೆರಾವು ನ್ಯಾಚುರಲ್ ಕಂಡೀಶನರ್ ಆಗಿದ್ದು, ಸೌಂದರ್ಯ ಲೋಕದಲ್ಲಿ ವಿಶೇಷ ಸ್ಥಾನ ಹೊಂದಿದೆ. ಇದರ ಜೆಲ್ಲನ್ನು ಕೂದಲಿಗೆ ರಾತ್ರಿ ಪೂರ್ತಿ ಹಚ್ಚಿಟ್ಟು ಬೆಳಗ್ಗೆ ಎದ್ದು ಸ್ನಾನ ಮಾಡಿ. ಕೂದಲು ಮೃದುವಾಗುವ ಜೊತೆಗೆ ತಲೆ ತಂಪಾಗುತ್ತದೆ.
ಮೊಟ್ಟೆ
ಮೊಟ್ಟೆಯಲ್ಲಿ ಪ್ರೋಟೀನ್ ಹಾಗೂ ಫ್ಯಾಟಿ ಆ್ಯಸಿಡ್ ಹೆಚ್ಚಿದ್ದು, ಇದು ಕೂದಲಿಗೆ ಮಾಯಿಶ್ಚರೈಸರ್ ಒದಗಿಸುತ್ತದೆ. ಲೋಳೆ ತೆಗೆದು ಕೂದಲಿಗೆ ಮಾಸ್ಕ್ ಹಾಕಿ. ಅರ್ಧ ಗಂಟೆ ಬಳಿಕ ತೊಳೆದರೆ ನಿಮ್ಮ ಕೂದಲು ಕಿಲಕಿಲ ನಗುತ್ತಾ ನಳನಳಿಸುತ್ತಿರುತ್ತದೆ.
ನೆಲ್ಲಿ
ನೆಲ್ಲಿಕಾಯಿಯ ಪೌಡರ್ ಜೊತೆಗೆ ಎರಡು ಚಮಚ ನಿಂಬೆರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಇದು ಒಣಕೂದಲ ಸಮಸ್ಯೆ ನೀಗಿಸುವುದಲ್ಲದೆ ಕಾಂತಿಯನ್ನೂ ನೀಡುವುದು.
ಮೆಂತ್ಯೆ
ತಲೆಯಲ್ಲಿ ಹೊಟ್ಟಾಗಿದ್ದರೆ, ಅರ್ಧ ಲೋಟ ಮೆಂತ್ಯೆಯನ್ನು ರಾತ್ರಿಯಿಡೀ ನೆನೆಸಿ ಬೆಳಗ್ಗೆದ್ದು ಮಿಕ್ಸಿಗೆ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಕೂದಲಿನ ಬುಡ ಹಾಗೂ ಕೂದಲಿಗೆ ಹಚ್ಚಿ 1 ಗಂಟೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ.
ಮನೆ ಮದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ