ದಾಂಪತ್ಯದಲ್ಲಿ ಕಿರಿ ಕಿರಿ: ಡಿವೋರ್ಸ್‌ಗೆ ದಾರಿ!
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ವಿಚ್ಚೇದಿತ ದಂಪತಿ ಪರಿಚಯವಿರುತ್ತೆ. ನಮ್ಮ ಸುತ್ತಮುತ್ತಲೇ ವೈಮನಸ್ಯವಿರುವ ದಾಂಪತ್ಯ ಈಗಲೋ ಆಗಲೋ ಮುರಿಯುತ್ತದೆನ್ನುವಂಥ ಕತೆಗಳಿರುವ ಹತ್ತಾರು ಮನೆಗಳಿವೆ. ಈ ವೈಮನಸ್ಯಕ್ಕೆ, ವಿಚ್ಚೇದನಕ್ಕೆ ಅಂಥ ದೊಡ್ಡ ಕಾರಣಗಳೇನೂ ಬೇಕಾಗಿಲ್ಲ. ಸಣ್ಣ ಪುಟ್ಟ ಈಗೋಗಳು, ಜಗಳಗಳು, ಅಭ್ಯಾಸಗಳೇ ಸಾಕು... ಕೂಡಿ ಬಾಳಿದರೆ ಸ್ವರ್ಗ ಸುಖ ನಿಜ, ಆದರೆ ಯಾವ ಸುಖವೂ ಸುಲಭವಾಗಿ ಬರುವುದಿಲ್ಲ. ಕೂಡಿ ಬಾಳಲು ಒಂದಿಷ್ಟು ಬೆಲೆ ತೆರಬೇಕು. ಬಾಗಬೇಕು, ಕ್ಷಮಿಸಬೇಕು, ಸೋಲಬೇಕು, ಪ್ರೀತಿಸಬೇಕು...
ಪ್ರತಿ ಜೋಡಿಯೂ ಜೀವನಪೂರ್ತಿ ಒಟ್ಟಿಗಿರುವ ಕನಸಿನೊಂದಿಗೇ ವಿವಾಹವಾಗುತ್ತಾರೆ. ಆದರೆ, ಎಲ್ಲರ ವಿಷಯದಲ್ಲಿ ಈ ಕನಸು ನನಸಾಗುವುದಿಲ್ಲ. ಬರಬರುತ್ತಾ ಎಲ್ಲ ಬದಲಾಗುತ್ತದೆ. ಹೊಂದಾಣಿಕೆ ಕಷ್ಟವಾಗುತ್ತದೆ. ಕಡೆಗದು ವಿಚ್ಛೇದನಕ್ಕೆ ದಾರಿಯಾಗುತ್ತದೆ. ಭಾರತವು ಜಗತ್ತಿನಲ್ಲೇ ಅತಿ ಕಡಿಮೆ ಡಿವೋರ್ಸ್ ಆಗುವ ದೇಶಗಳಲ್ಲೊಂದು. ಆದರೂ ಇಲ್ಲಿ ಪ್ರತಿ 1000 ಜೋಡಿಗಳಲ್ಲಿ 13 ಜೋಡಿ ಬೇರೆ ಬೇರೆಯಾಗುತ್ತಾರೆ. ಹಾಗಂತ, ಉಳಿದ ಜೋಡಿಗಳೆಲ್ಲ ಸಂತೋಷವಾಗಿದ್ದಾರೆ ಎಂದಲ್ಲ. ವಿಫಲ ವಿವಾಹಗಳು ಪ್ರತಿ ಮನೆಯಲ್ಲೂ ಕಾಣಸಿಗುತ್ತವೆ. ಆದರೆ ಇಲ್ಲಿ ವಿಚ್ಚೇದನಕ್ಕೆ ಧೈರ್ಯ ತೋರುವವರು ಕಡಿಮೆಯಷ್ಟೇ. ಹಾಗಿದ್ದರೆ ಈ ಮದುವೆಗಳು ಮುರಿಯದ ಹಾಗೆ, ಮನಸ್ಸು ಮುರಿಯದ ಹಾಗೆ ನೋಡಿಕೊಳ್ಳುವುದು ಹೇಗೆ? ಯಾವ ಅಭ್ಯಾಸಗಳು ಹೆಚ್ಚಾಗಿ ಮನಸ್ಸು ಮುರಿಯುತ್ತವೆ ನೋಡೋಣ...
1. ನಿರಂತರ ದೂರುಗಳು
ನಿಮ್ಮ ಕಾರ್‌ನ ಡ್ಯಾಶ್‌ಬೋರ್ಡ್‌ನಲ್ಲಿ ವಾರ್ನಿಂಗ್ ಲೈಟ್ ಬಂದರೆ ಎಚ್ಚೆತ್ತುಕೊಳ್ಳಬೇಕಲ್ಲವೇ? ಹಾಗೆಯೇ ನಿರಂತರವಾಗಿ ನಿಮ್ಮ ಮೇಲೆ ದೂರುಗಳ ಸುರಿಮಳೆ ಬೀಳುತ್ತಿದೆ ಎಂದರೆ ಅದು ದಾಂಪತ್ಯದ ವಾರ್ನಿಂಗ್ ಲೈಟ್. ಅದರರ್ಥ ಎಲ್ಲೋ ಏನೋ ಸರಿಯಿಲ್ಲ ಎಂದು. ಯಾವಾಗ ಪತಿಪತ್ನಿ ಇಬ್ಬರೂ ಪರಸ್ಪರ ನೆಗೆಟಿವ್‌ಗಳನ್ನೇ ಹುಡುಕಿಕೊಂಡು ಒಬ್ಬರ ಮೇಲೊಬ್ಬರು ದೂರುತ್ತಲೇ ಇರುತ್ತಾರೋ, ಇದು ಸಂಬಂಧ ಹದಗೆಡಿಸುವುದರಲ್ಲಿ ಅನುಮಾನವೇ ಇಲ್ಲ.
ದಿನಾ ಲಡ್ಡು ತಿನಿಸುತ್ತಿದ್ದ ಪತ್ನಿ, ಡಿವೋರ್ಸ್‌ಗೆ ಅರ್ಜಿ ಹಾಕಿದ ಪತಿ
2. ಎಲ್ಲವನ್ನೂ ಅವನದು, ಅವಳದು ಎಂದು ವಿಭಾಗಿಸುವುದು
ಪತಿಪತ್ನಿ ಇಬ್ಬರ ಬ್ಯಾಂಕ್ ಖಾತೆ, ಗೆಳೆಯರು, ಹವ್ಯಾಸಗಳು, ಅಭಿರುಚಿಗಳು, ಕನಸುಗಳು ಎಲ್ಲವೂ ಸಂಪೂರ್ಣ ಬೇರೆಬೇರೆಯಾಗಿದ್ದಾಗ ಇಬ್ಬರ ಬದುಕೂ ಬೇರೆಯಾಗುವ ಸಂಭವಗಳು ಜಾಸ್ತಿ. ಮದುವೆ ಎನ್ನುವುದು ಎಲ್ಲವನ್ನೂ ಒಗ್ಗೂಡಿಸುವಂತಿರಬೇಕೇ ಹೊರತು ಬೇರೆ ಬೇರೆ ಮಾಡುವಂಥಲ್ಲ. ಅದರಲ್ಲೂ ಪ್ರತಿ ವಸ್ತುಗಳಿಂದ ಹಿಡಿದು ಜಾಗಗಳವರೆಗೆ ಇದು ನನ್ನದು, ಇದು ನಿನ್ನದು ಎಂದು ಬೇರ್ಪಡಿಸುವ ಅಭ್ಯಾಸವಿದ್ದರಂತೂ ಇಬ್ಬರೂ ಒಂದಾಗಲು ಸಾಧ್ಯವಿಲ್ಲ.
ಮೋಹ ಕಮರಿದಾಗ: ಬಯಸಿದಾಕೆಗಾಗಿ ರಾಜಪಟ್ಟ ಬಿಟ್ಟಾತನ ವಿಚ್ಚೇದನ ವರಾತ!
3. ಆರಂಭ ಶೂರತ್ವ
ಕೆಲ ಕೇಬಲ್ ಟಿವಿ ಕಂಪನಿಗಳು ಟ್ರಯಲ್ ಪೀರಿಯಡ್‌ನಲ್ಲಿ ಬಹಳ ಆಕರ್ಷಕ ಆಫರ್ ನೀಡುತ್ತವೆ. ಆದರೆ ಟ್ರಯಲ್ ಪೀರಿಯಡ್ ಮುಗಿದ ಮೇಲೆ ನೋಡಲು ಬಾರದ ಯಾವುದೋ ನಾಲ್ಕು ಚಾನಲ್‌ಗಳನ್ನು ನೀಡುತ್ತವೆ. ಅಂತೆಯೇ ಬಹಳಷ್ಟು ದಂಪತಿಗಳು ಕೂಡಾ ಆರಂಭದಲ್ಲಿ ಪ್ರೀತಿಯ ಮಳೆಯೇ ಸುರಿಸುತ್ತಾರೆ. ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಾರೆ. ಆದರೆ ದಿನಗಳೆದಂತೆಲ್ಲ ಅವರು ಅಲ್ಪಸ್ವಲ್ಪ ಕಾಳಜಿ ಪ್ರೀತಿಗೆ ಇಳಿದು ಬಿಡುತ್ತಾರೆ. ಪ್ರೀತಿ ಹೆಚ್ಚಿಸಲು ಅಥವಾ ವ್ಯಕ್ತಪಡಿಸಲು ಯಾವುದೇ ಹೊಸ ಪ್ರಯತ್ನ ಹಾಕುವುದಿಲ್ಲ. ಇದರಿಂದ ಇಬ್ಬರ ನಡುವೆ ಮಾನಸಿಕ ಬಂಧ ಕಳಚುತ್ತದೆ.
4. ದ್ವೇಷ ಸಾಧನೆ
ಗಂಡ ಹೆಂಡತಿ ನಡುವೆ ಆಗಾಗ ವಾದಗಳಾಗಬಹುದು. ಮಾತಿಗೆ ಮಾತು ಬೆಳೆಯಬಹುದು. ಆದರೆ, ಅದನ್ನು ಅಲ್ಲಿಯೇ ಕ್ಷಮಿಸಿ, ಮುಗಿಸುವುದು ಇಬ್ಬರಿಗೂ ಶ್ರೇಯಸ್ಕರ. ಆದರೆ, ಮುಂದಿನ ದಿನಗಳಲ್ಲೂ ಹಿಂದೆ ಯಾವತ್ತೋ ಆಡಿದ ಮಾತುಗಳನ್ನೇ ನೆನಪಿಟ್ಟುಕೊಂಡು ದ್ವೇಷ ಸಾಧನೆ ಮಾಡುವುದು, ಅದನ್ನೇ ಚುಚ್ಚಿ ಆಡುವುದು, ಅದಕ್ಕೆ ಮುಯ್ಯಿ ತೀರಿಸುವುದು, ಇಷ್ಟು ಬಾರಿ ಹೀಗೆ ಮಾಡಿದ್ದೀ ಎಂದು ಲೆಕ್ಕ ಇಡುವುದು - ಇವೆಲ್ಲ ದಾಂಪತ್ಯವನ್ನು ಕಹಿಯಾಗಿಸುತ್ತಾ ಹೋಗುತ್ತವೆ.
5. ಏಕಾಂಗಿ ನಿರ್ಧಾರ
ವಿವಾಹವಾದ ಮೇಲೆ ಇಬ್ಬರೂ ಒಬ್ಬರೇ ಎಂಬಂತಿರಬೇಕು. ಅಹಂಕಾರ ಅಡ್ಡ ಬರಬಾರದು. ನಾವು ತೆಗೆದುಕೊಳ್ಳುವ ಪ್ರತಿ ನಿರ್ಧಾರಕ್ಕೂ ಸಂಗಾತಿಯ ಅಭಿಪ್ರಾಯ ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಇದರಿಂದ ನಿಮ್ಮ ವ್ಯಕ್ತಿತ್ವವೇನೂ ಕುಗ್ಗುವುದಿಲ್ಲ. ಸಂಗಾತಿ ಹೇಳಿದ್ದೇ ನಿರ್ಧಾರ ತೆಗೆದುಕೊಳ್ಳಬೇಕೆಂದೇನೂ ಇಲ್ಲ. ಆದರೆ, ಅವರ ಅಭಿಪ್ರಾಯ ಪರಿಗಣಿಸಲು ಅರ್ಹವೆನಿಸಿದರೆ ಪರಿಗಣಿಸಬಹುದಲ್ಲಾ... ಏಕಾಂಗಿಯಾಗಿ ನಮ್ಮ ಮೂಗಿನ ನೇರಕ್ಕೆ ಪ್ರತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸಂಬಂಧ ವಿಚ್ಚೇದನದ ದಾರಿ ಹಿಡಿಯಬಹುದು.
6. ಬದಲಿಸಲು ಯತ್ನ
ವಿವಾಹದಲ್ಲಿ ಒಬ್ಬರನ್ನೊಬ್ಬರು ಬದಲಿಸಲು ಯತ್ನಿಸುವುದರಿಂದ ಸಿಟ್ಟು, ಕಿರಿಕಿರಿ ಹೆಚ್ಚುತ್ತದೆ. ಯಾರನ್ನೂ ಬದಲಿಸಲು ಹೋಗಬೇಡಿ. ಪ್ರೀತಿಸಿ ಅಷ್ಟೇ. ಪ್ರೀತಿಯ ಹಾದಿ ಕಾಲಾಂತರದಲ್ಲಿ ತಾನೇ ಬದಲಾವಣೆ ತರುತ್ತದೆ. ಅದು ಬಿಟ್ಟು ಬದಲಾಗು ಬದಲಾಗು ಎಂಬ ಒತ್ತಡ ಅವರಲ್ಲಿ ಕೀಳರಿಮೆಗೆ ಕಾರಣವಾಗುತ್ತದೆ. ತಾನು ಸರಿಯಾದ ಸಂಗಾತಿಯಲ್ಲ ಎಂಬ ಭಾವನೆ ನಿಧಾನವಾಗಿ ಬೇರೆ ಬೇರೆ ರೂಪಗಳನ್ನು ತಾಳಿ ಕಡೆಗೆ ವಿಚ್ಚೇದನದವರೆಗೆ ಹೋಗಿ ನಿಲ್ಲಬಹುದು.