ಮೇರಠ್‌[ಆ.21]: ಮಂತ್ರವಾದಿಯ ಮಾತು ನಂಬಿ, ದಿನವೂ ತನಗೆ ಲಾಡುಉಂಡೆ ತಿನ್ನಿಸುತ್ತಿದ್ದ ಪತ್ನಿಯ ವರ್ತನೆಯಿಂದ ಬೇಸತ್ತ ವ್ಯಕ್ತಿಯೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ಮೇರಠ್‌ನಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ಪತಿ ಕಾಯಿಲೆ ಬಿದ್ದ ಕಾರಣ ಪತ್ನಿ ಮಾಂತ್ರಿಕನ ಬಳಿ ತೆರಳಿ ಸಮಸ್ಯೆಗೆ ಪರಿಹಾರ ಕೇಳಿದ್ದಾಳೆ. ಇದಕ್ಕೆ ಮಾಂತ್ರಿಕ ದಿನವೂ ನಿನ್ನ ಗಂಡನಿಗೆ ಬೆಳಗ್ಗೆ ನಾಲ್ಕು, ರಾತ್ರಿ ನಾಲ್ಕು ಲಡ್ಡುಗಳನ್ನು ಮಾತ್ರ ತಿನ್ನಿಸು ಎಂದು ಸಲಹೆ ನೀಡಿದ್ದಾನೆ. ಇದರಂತೆ ಪತ್ನಿ ದಿನವೂ ಲಡ್ಡುಗಳನ್ನು ಮಾತ್ರ ತಿನ್ನಲು ಕೊಡುತ್ತಾಳೆ. ಇದರ ಮಧ್ಯೆ ಬೇರೇನೂ ತಿನ್ನುವಂತಿಲ್ಲ ಗೋಗರೆದಿದ್ದಾನೆ. ಅಲ್ಲದೇ ಇದರಿಂದ ಬೇಸತ್ತು ಮೇರಠ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ ಪತಿರಾಯ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಕುಟುಂಬ ಸಮಾಲೋಚನಾ ಅಧಿಕಾರಿಗಳು ದಂಪತಿಯನ್ನು ಕರೆದು ಸಮಾಲೋಚನೆ ನಡೆಸಿದ್ದಾರೆ. ಆದರೆ, ಲಡ್ಡುಗಳನ್ನು ತಿಂದರೆ ಮಾತ್ರ ಗಂಡನ ಕಾಯಿಲೆ ನಿವಾರಣೆಯಾಗುತ್ತದೆ ಎಂದು ಆ ಮಹಿಳೆ ಬಲವಾಗಿ ನಂಬಿದ್ದಾಳೆ. ಆಕೆಗೆ ಎಷ್ಟೇ ತಿಳಿದರೂ ಕೇಳುತ್ತಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿದ್ದಾರೆ. ಈ ದಂಪತಿಗೆ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ.