ಹುಟ್ಟಿದ ಊರನು ಬಿಟ್ಟು ಬಂದ ಮೇಲೆ....
ವರ್ಕ್ ಫ್ರಮ್ ಹೋಮ್ ಸರಿ, ಆದರೆ ಯಾವುದು ಮನೆ, ಯಾವುದು ನಮ್ಮೂರು. ಎಲ್ಲಿದ್ದರೂ ಕೆಲಸ ಮಾಡಬಹುದು ಅಂತಾದರೆ ಮನೆ ಎಂಬುದು ಮನೆಯೋ ಆಫೀಸೋ? ಜಗತ್ತನ್ನು ತಂತ್ರಜ್ಞಾನ ಹತ್ತು ವರ್ಷಗಳಲ್ಲಿ ಬದಲಾಯಿಸಿತು. ಕೊರೋನಾ ಅದನ್ನು ಹತ್ತು ತಿಂಗಳಲ್ಲಿ ತಲೆಕೆಳಗು ಮಾಡಿತು. ಹೌದೇ?
- ಸಚಿನ್ ತೀರ್ಥಹಳ್ಳಿ
ಕೊರಿಯನ್ ಸಿನಿಮಾಗಳೆಂದರೆ ಬರಿ ದೆವ್ವ ಭೂತಗಳು, ಪರದೆಯ ಮೇಲೇ ಕ್ರೌರ್ಯದ ಅನಾವರಣ ಅಂತೆಲ್ಲಾ ಪೂರ್ವಾಗ್ರಹಗಳನ್ನು ಇಟ್ಟುಕೊಂಡಿದ್ದವನಿಗೆ ಕಳೆದ ವರ್ಷ ಲಾಕ್‌ಡೌನ್ ಆದಾಗ ಗೆಳೆಯನೊಬ್ಬ ‘ಲಿಟಲ್ ಫಾರೆಸ್‌ಟ್’ ಎನ್ನುವ ಕೊರಿಯನ್ ಸಿನಿಮಾ ನೋಡುವಂತೆ ಹೇಳಿದ. ದಕ್ಷಿಣ ಕೊರಿಯಾದ ಮಹಾನಗರವೊಂದರಲ್ಲಿ ಕೆಲಸ ಕಳೆದುಕೊಂಡು ಮತ್ತೆ ತನ್ನ ಹಳ್ಳಿಗೆ ವಾಪಾಸು ಬಂದು ಒಬ್ಬಳೇ ಸಣ್ಣ ಭೂಮಿಯಲ್ಲಿ ಕೃಷಿ ಮಾಡಿಕೊಂಡು, ಅಮ್ಮನನ್ನು ಅವಳು ಬಾಲ್ಯದಲ್ಲಿ ಹೇಳಿಕೊಟ್ಟ ಅಡಿಗೆಯ ರೆಸಿಪಿಗಳ ಮೂಲಕ ನೆನಪಿಸಿಕೊಳ್ಳುತ್ತಾ, ಬದುಕನ್ನ ಮತ್ತೆ ಮೊದಲಿಂದ ಬದುಕುವುದಕ್ಕೆ ಪ್ರಯತ್ನಿಸುವ ಸುಮಾರು ಇಪ್ಪತ್ತೈದರ ಯುವತಿಯೊಬ್ಬಳ ಕತೆಯದು.
ಮನೆಯೇ ಆಫೀಸಾದರೆ? #HappyWorkfromHome!
ಮತ್ತೆ ಹುಟ್ಟಿದ ಊರಿಗೆ ಹೋಗಿ ಬದುಕಬಲ್ಲೆನಾ , ಮಹಾನಗರವನ್ನ ತೊರೆದು ಬದುಕೋಕೆ ಸಾಧ್ಯವಾ ಅನ್ನುವುದೇ ಆ ಸಿನಿಮಾದ ಒಗಟು. ಇವತ್ತು ಕೊರೋನಾ ನಮ್ಮಲ್ಲಿ ಸೃಷ್ಟಿಸಿರುವ ಅಸಂಖ್ಯ ತಲ್ಲಣಗಳಲ್ಲಿ ಇದೂ ಒಂದು. ಹಬ್ಬ, ದೇವರ ಹರಕೆ, ಮಹಾಲಯ ಅಮಾವಾಸ್ಯೆ ಅಂತ ವರ್ಷಕ್ಕೆ ಮೂರ್ನಾಲ್ಕು ಬಾರಿಯಷ್ಟೆ ಊರಿನ ಕಡೆ ಮುಖ ಮಾಡುತ್ತಿದ್ದವರಿಗೆ ಕೊರೋನಾ ಬ್ಯಾಗು ಪ್ಯಾಕ್ ಮಾಡಿಕೊಂಡು ಸೀದಾ ನಡಿ-ಪರ್ಮನೆಂಟಾಗಿ ಊರಿನ ದಾರಿ ಹಿಡಿ ಅಂತ ಕರುಣೆಯಿಲ್ಲದೆ ಹೇಳುತ್ತಿದೆ. ಸದ್ಯಕ್ಕೆ ಜೀವ ಜೇಬು ಎರಡನ್ನೂ ಉಳಿಸಿಕೊಳ್ಳಬೇಕಾಗಿರುವುದರಿಂದ ಊರಿಗೆ ವಾಪಾಸು ಹೋಗಿ ಮಾಡುವುದೇನು ಅಂತ ಕೇಳಿಕೊಳ್ಳಲು ಯಾರಿಗೂ ಪುರುಸೊತ್ತಿಲ್ಲ. ಇಷ್ಟು ದಿನ ಊರು ನಮ್ಮ ನೆನಪುಗಳಲ್ಲಿ ಚೆನ್ನಾಗಿತ್ತು. ನಗರದಲ್ಲಿ ಮೈಮುರಿದು ದುಡಿಯುವಾಗ ಯಾವತ್ತೊ ಒಂದು ದಿನ ಊರಿಗೆ ಹೋಗಿ ನೆಮ್ಮದಿಯಾಗಿ ಬದುಕುತ್ತೇನೆ ಎಂಬ ಭರವಸೆಯಿತ್ತು, ನಾನು ಸುಖವಾಗಿ ಇಲ್ಲದೆ ಇರುವುದಕ್ಕೆ ನಾನು ಊರಿಂದ ವಲಸೆ ಬಂದಿದ್ದೆ ಕಾರಣ ಎನ್ನುವ ಗಟ್ಟಿ ನಂಬಿಕೆಯಿತ್ತು, ಮತ್ತೆ ಊರಿಗೆ ವಾಪಾಸು ಹೋಗುವುದಕ್ಕೆ ಸಾಧ್ಯವೇ ಇಲ್ಲದಂತೆ ಮಾಡಿದ್ದ ಈ ವ್ಯವಸ್ಥೆ, ವೃತ್ತಿ, ಹೆಂಡತಿ ಮಕ್ಕಳ ಮೇಲೆ ಅವ್ಯಕ್ತ ಸಿಟ್ಟಿತ್ತು.
ಆ ಸಿಟ್ಟು ಅಸಹನೆಯಲ್ಲಿ ಬೇಯುತ್ತಾ, ಮತ್ತೆ ಊರಿಗೆ ಹೋಗಿ ಸಾಧಿಸಿ ತೋರಿಸುತ್ತೇನೆ ಅಂತ ಬದುಕುತ್ತಿದ್ದ ಮಹಾನಗರದ ಮಂದಿಯ ಸಣ್ಣ ಕನಸನ್ನೂ ಕೊರೋನಾ ಛಿದ್ರ ಮಾಡಿದೆ. ಇವತ್ತು ಊರಿಗೆ ವಾಪಾಸು ಹೋಗುವುದಕ್ಕೆ ನಮಗೆ ಯಾವ ಅಡೆತಡೆಗಳೂ ಇಲ್ಲ. ಕಷ್ಟ ಬಂದಾಗ ಹೆಣ್ಮಕ್ಕಳಿಗೆ ತವರಿನ ಗಟ್ಟಿ ಮೊಸರು ನೆನಪಾದಂತೆ ಇವತ್ತು ನಮ್ಮೆಲ್ಲರಿಗೆ ಕೊರೋನಾ ನೆಪದಲ್ಲಿ ಊರು ಸೇರಿದರೆ ಸಾಕು ಎನ್ನುವ ಧಾವಂತ ಶುರುವಾಗಿದೆ.
ಅಬ್ಬಬ್ಬಾ...! ನೀವು ವರ್ಕ್ ಫ್ರಂ ಹೋಂ ಮಾಡ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ!
ಆದರೆ ಊರಿಗೆ ಹೋಗಿ ಮಾಡುವುದೇನು ಅನ್ನುವುದಕ್ಕೆ ಯಾರ ಹತ್ತಿರವೂ ಸರಿಯಾದ ಉತ್ತರಗಳೇ ಇದ್ದಂತಿಲ್ಲ. ಕೊರೋನಾ ಬರುವುದಕ್ಕೂ ಮೊದಲೇ ಬೆಂಗಳೂರಲ್ಲಿದ್ದ ಐಟಿ ಹುಡುಗ ಹುಡುಗಿಯರು ಈ ಕೆಲಸ ಎಲ್ಲಾ ಸಾಕಾಗಿದೆ ಊರಿಗೆ ಹೋಗಿ ಗದ್ದೆ ತೋಟ ನೋಡಿಕೊಂಡು ಇರುತ್ತೇನೆ, ಐಟಿಯಿಂದ ಮೇಟಿಗೆ ಅಂತೆಲ್ಲಾ ಮಾತಾಡುತ್ತಿದ್ದರು. ಕೊರೋನಾ ಹೀಗೆಲ್ಲಾ ಮಾತಾಡುತ್ತಾ ಕಾಲ ತಳ್ಳುತ್ತಿದ್ದವರನ್ನ ಅದೇ ಗದ್ದೆ ತೋಟದ ಅಂಚಲ್ಲಿ ಶೆಡ್ಡು ಹಾಕಿಕೊಂಡು ಒಂದು ಕೈಯಲ್ಲಿ ಲ್ಯಾಪ್‌ಟಾಪು ಇನ್ನೊಂದು ಕೈಯಲ್ಲಿ ಮೊಬೈಲಿನಲ್ಲಿ ನೆಟ್‌ವರ್ಕ್ ಹುಡುಕುವಂತೆ ಮಾಡಿದೆ. ಇವತ್ತು ಕೊಂಚ ಭೂಮಿಯಿರುವ ಯಾರೂ ಬೇಕಾದರೂ ಕೃಷಿ ಮಾಡಬಹುದು. ಆದರೆ ಬಹುತೇಕರಿಗೆ ತಮಗಿದ್ದ ಒಂದು ಸಣ್ಣ ಭ್ರಮೆಯನ್ನೂ ಒಡೆದದ್ದಕ್ಕಾಗಿ ಕೊರೋನಾ ಮೇಲೆ ಸಿಟ್ಟಿದೆ.
ಆದರೆ ಕಂಪನಿ ಕೊಡುವ ಪೆನ್ಷನ್ನು ಇನ್ಶೂರೆನ್ಸು ಬೋನಸ್ಸುಗಳನ್ನ ನಂಬಿಕೊಳ್ಳದೆ ದಿನದ ಲೆಕ್ಕದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದವರೇ ಇವತ್ತು ಊರಿಗೆ ಹೋಗಿ ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಿರುವವರು. ದಿನಸಿ ಅಂಗಡಿ ತೆರೆದು ಊರಿನ ಪರವೂರಿನವರ ನಂಬರ್‌ಗಳನ್ನ ಸೇರಿಸಿ ಒಂದು ವಾಟ್ಸ್ಯಾಪ್ ಗ್ರೂಪ್ ಮಾಡಿ ಅಲ್ಲೇ ಆರ್ಡರ್ ತೆಗೆದುಕೊಂಡು ಹೋಮ್ ಡೆಲಿವರಿ ಮಾಡುವುದು, ಅಡಿಕೆ ತೋಟವನ್ನ ಮಾಲಿಕರಿಂದ ಗುತ್ತಿಗೆ ಪಡೆದು ಕೆಲಸಗಾರರನ್ನ ಒಟ್ಹಾಕಿ ಅಡಿಕೆ ಸುಲಿತ ಮಾಡುವುದು, ಅಪ್ಪನ ಆಸ್ತಿಯಲ್ಲಿ ಭಾಗ ಮಾಡಿಕೊಂಡು ಮತ್ತೆ ಮೊದಲಿಂದ ಬೆವರು ಹರಿಸಿ ದುಡಿಯುವುದು ಹೀಗೆ ಅವರೆಲ್ಲಾ ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಪಂಚಾಯ್ತಿ ಎಲೆಕ್ಷನ್ನಲ್ಲಿ ನಿಂತು ಸೋಲುವುದು, ಉದ್ಯೊಗ ಖಾತ್ರಿ ಹೆಸರಲ್ಲಿ ರಸ್ತೆ ಬದಿ ಗಿಡ ಕೆತ್ತುವುದು, ಅಪರೂಪಕ್ಕೆ ಶಿಕಾರಿ ಮಾಡಿ ಗಾರ್ಡು ಫಾರೆಸ್ಟರ್‌ಗಳಿಂದ ತಲೆತಪ್ಪಿಸಿಕೊಂಡು ಓಡಾಡುವುದು, ಮೂರು ತಿಂಗಳಿಗೊಮ್ಮೆ ಕೇಳುತ್ತಿದ್ದ ಅಪ್ಪನ ಬಯ್ಗುಳಗಳನ್ನ ದಿನಾ ಕೇಳುವುದು, ಅಪರೂಪಕ್ಕೆ ಸಿಕ್ಕಾಗ ನಿಲ್ಲಿಸಿ ನಾಲ್ಕು ಮಾತಾಡಿಸುತ್ತಿದ್ದ ಊರವರ ಎದುರಲ್ಲಿ ದಿನಾ ಓಡಾಡಿ ಸಸಾರವಾಗುವುದು- ಇವೆಲ್ಲಾ ನಿತ್ಯಚಿತ್ರಗಳು. ಒಂದು ವಯಸ್ಸಿನ ನಂತರ ಊರಲ್ಲಿ ನಮ್ಮವರು ಅನಿಸಿಕೊಂಡವರ ಎದುರು ಬದುಕುವುದಕ್ಕೆ ಕಷ್ಟಪಡುವುದು ಯಾತನೆ ಅನಿಸುತ್ತದೆ. ಒಂಟಿತನ, ಅಸಹಾಯಕತೆ, ಬಡತನ, ಹಸಿವು- ಇವು ಮಹಾನಗರಗಳಲ್ಲಿ ನಮ್ಮನ್ನು ಕಾಯುತ್ತವೆ. ಊರಲ್ಲಿ ಬಡತನ ಹೇಳಿಕೊಳ್ಳುವ ಹಾಗಿಲ್ಲ, ಒಂಟಿಯೆಂದರೆ ಯಾರೂ ನಂಬಲ್ಲ.
ಇಂತಹ ಕ್ಷಣಗಳಲ್ಲೇ ನಮ್ಮ ಮನಸ್ಸಲ್ಲಿದ್ದ ಊರಿಗೂ ಈಗಿರುವ ಊರಿಗೂ ಸಾಕಷ್ಟು ವ್ಯತ್ಯಾಸವಿದೆ ಅಂತ ಗೊತ್ತಾಗುವುದು, ಕತ್ತಲಾದ ಮೇಲೆ ಮಹಾನಗರದ ಗದ್ದಲದ ಅಸ್ಪಷ್ಟ ಸದ್ದು ಕೇಳಿಸಿದಂತಾಗಿ ಎಚ್ಚರಾಗುವುದು.
ಅತಿರೇಕಗಳಿಲ್ಲದೆ ಎಷ್ಟು ಬೇಕೋ ಅಷ್ಟೆ ಮಾತಾಡಿಸಿ ಕೆಲಸ ಕೊಟ್ಟು ಬದುಕುವ ಛಲ ತುಂಬುವ ಮಹಾನಗರದ ಅನಾಮಿಕತೆಯಲ್ಲಿ ನಮ್ಮ ಅಸ್ತಿತ್ವ ಕರಗಿ ಹೋಗಿರುತ್ತದೆ. ಅಲ್ಲಿ ಕಷ್ಟ ಬಂದರೆ ಕೈ ಮುಗಿಯುವುದಕ್ಕೆ ಹರಕೆ ಹೇಳಿಕೊಳ್ಳುವುದಕ್ಕೆ ನಾಗಬನವಾಗಲಿ ಚೌಡಿಯ ಬನವಾಗಲಿ ಇಲ್ಲ, ನಗರ ಅಂದರೆ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ನಂಬಿಕೊಂಡು ಬದುಕುವ ಜಾಗ. ಜಾಸ್ತಿ ಕುಡಿಯಬೇಡಿ ಅಂತ ಬುದ್ಧಿ ಹೇಳುವ ಪಬ್ಬಿನ ಹುಡುಗಿ, ಹಳೇ ಲವ್ ಸ್ಟೋರಿಗಳನ್ನ ಹೇಳುವ ಕ್ಯಾಬ್ ಡ್ರೈವರ್‌ಗಳು, ಮಳೆ ಬಂದು ಅರ್ಧ ನೆಂದು ಟೀ ಅಂಗಡಿಯ ಪಕ್ಕ ನಿಂತು ಸಿಗರೇಟು ತುಟಿಗಿಟ್ಟರೆ ಬೆಂಕಿ ಗೀರುವ ಅಪರಿಚಿತ, ಹತ್ತು ರೂಪಾಯಿ ಕೊಟ್ಟರೆ ಹತ್ತು ಜನ್ಮಕ್ಕೆ ಹರಸುವ ಮಂಗಳಮುಖಿಯರು.. ನಮ್ಮನ್ನು ಮತ್ತೆ ಮನುಷ್ಯತ್ವದಲ್ಲಿ ನಂಬಿಕೆ ಹುಟ್ಟಿಸುವ ಇಂತಹ ಚಿತ್ರಗಳು ನೋಡುವುದಕ್ಕೆ ನಗರಗಳಲ್ಲಿ ಮಾತ್ರ ಸಾಧ್ಯ. ನೀವು ತೀರ್ಥಹಳ್ಳಿಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಭಿಕ್ಷುಕರನ್ನ, ಕೈಲಾಗದೆ ರಸ್ತೆ ಬದಿ ನಿಂತು ಬೇಡುವ ಅಬಲರನ್ನ ನೋಡುವುದಕ್ಕೆ ಸಾಧ್ಯವೇ ಇಲ್ಲ. ಬೇಡಿದರೂ ಅನುಮಾನದಿಂದ ನೋಡುತ್ತಾರೆ ಹೊರತು ಯಾರೂ ಒಂದು ರೂಪಾಯಿಯನ್ನು ಕೊಡುವುದಿಲ್ಲ. ಮಹಾನಗರಕ್ಕೆ ಮಾತ್ರ ವಾಪಸು ಏನನ್ನೂ ಬಯಸದೆ ಕೈಚಾಚಿ ಕೊಡುವ ಕರುಣೆಯಿರುವುದು.
ಕೊರೋನಾ ಜನರ ಕಾಲಿಗೆ ಕೆಂಡ ಅಂಟಿಸಿ ಓಡಿಸುತ್ತಿರುವಾಗ ನಾವು ಎಲ್ಲಿ ಹೋಗಿ ಬದುಕಬೇಕು, ಊರಲ್ಲಾ ಮಹಾನಗರದಲ್ಲಾ ಅಂತ ಕೇಳಿದರೆ ಎಲ್ಲವನ್ನೂ ಟೆಕ್ನಾಲಜಿ ನಿಯಂತ್ರಿಸುತ್ತಿರುವ ಯುಗದಲ್ಲಿ ಈ ಪ್ರಶ್ನೆಯೇ ಅಪ್ರಸ್ತುತವಾಗುತ್ತಿದೆ ಅನ್ನಿಸುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ಒಟ್ಟಿಗೆ ದನ ಕಾಯುತ್ತಿದ್ದ ನಾಲ್ವರಲ್ಲಿ ಒಬ್ಬ ಧೈರ್ಯ ಮಾಡಿ ಊರು ಬಿಡುತ್ತಿದ್ದ, ಅವನಿಗೆ ಊರಿನ ಸಂಪರ್ಕ ಸಹಚಾರ ಸುಲಭಕ್ಕೆ ದಕ್ಕುತ್ತಿರಲಿಲ್ಲ. ಇವತ್ತಿನ ಸ್ಮಾರ್ಟ್‌ಫೋನ್ ಸ್ಟೇಟಸ್ಸುಗಳ ಯುಗದಲ್ಲಿ ಊರಿಗೂ ನಗರಕ್ಕೂ ಅಂತರ ಕಡಿಮೆಯಾಗಿದೆ. ಹಣದ ಹರಿವೂ ಸಮಾನವಾಗುತ್ತಿರುವದರಿಂದ ಜೀವನ ಕ್ರಮದಲ್ಲೂ ಅಂತಹ ಬದಲಾವಣೆಗಳೇನು ಇಲ್ಲ.
ಇವತ್ತು ನಾವು ಬಹುತೇಕರು ಮಾಡುವ ಕೆಲಸಗಳು ಮೀಟಿಂಗಗಳೂ ಲ್ಯಾಪ್‌ಟಾಪ್ ಮೊಬೈಲಿನಲ್ಲೇ ಮುಗಿಯುತ್ತದೆ. ಲ್ಯಾಪ್‌ಟ್ಯಾಪ್, ಒಂದು ಸ್ಮಾರ್ಟ್‌ಫೋನ್ , ಫೋರ್-ಜಿ ನೆಟ್‌ವರ್ಕ್ ಇದ್ದರೆ ಇವತ್ತು ನೀವು ಜಗತ್ತಿನ ಯಾವ ಮೂಲೆಯಲ್ಲಿ ಕೂತು ಬೇಕಾದರೂ ಕೆಲಸ ಮಾಡಬಹುದು. ಶಿಥಿಲವಾಗುತ್ತಿರುವ ಊರಿನ ಚಿತ್ರಗಳನ್ನ ಪಾಲಿಶ್ ಮಾಡುವ ವ್ಯರ್ಥ ಪ್ರಯತ್ನ ಮಾಡುತ್ತಾ, ನಗರದ ಏಕತಾನತೆಯನ್ನ ಶಪಿಸುತ್ತಾ ನೆಪಗಳನ್ನ ಹೇಳಿಕೊಂಡು ಬದುಕನ್ನ ತಳ್ಳುವುದಕ್ಕೆ ಇವತ್ತಿನ ಒಂದೂವರೆ ಜೀಬಿ ಫ್ರೀ ಇಂಟರ್ನೆಟ್ಟಿನ ಕಾಲದಲ್ಲಿ ಅರ್ಥವೇ ಇಲ್ಲ. ನೀವು ಸಾಫ್‌ಟ್ವೇರ್ ಕಂಪನಿಗೆ ಕೋಡ್ ಬರೆಯ್ವುಉದನ್ನ, ಜರ್ನಲಿಸ್‌ಟ್ ಆಗಿ ವರದಿ ತಯಾರಿಸುವುದನ್ನ, ನಿರ್ದೇಶಕ ಹೇಳಿದ ದೃಶ್ಯಕ್ಕೆ ಚಿತ್ರಕತೆ ಬರೆಯುವುದನ್ನ, ಕಂಪನಿಯ ಅಕೌಂಟ್‌ಸ್ ನೋಡಿಕೊಳ್ಳುವುದನ್ನ, ಕಸ್ಟಮರ್‌ಗಳ ಫೋನ್ ಕಾಲ್ ಅಟೆಂಡ್ ಮಾಡುವುದನ್ನ ಇವತ್ತೂ ಎಲ್ಲಿಂದ ಬೇಕಾದರೂ ಮಾಡಬಹುದು. ಅದಕ್ಕೆ ವರ್ಕ್ ಫ್ರಂ ಹೋಮ್ ಎನ್ನುವ ಹೆಸರಿದೆ, ಇಲ್ಲಿ ‘ಹೋಂ’ ಅನ್ನು ಹುಡುಕಿಕೊಳ್ಳುವುದು ನಿಮಗೆ ಬಿಟ್ಟಿದ್ದು. ಅದು ನಿಮ್ಮ ಊರಾದರೂ ಆಗಬಹುದು, ನಿಮಗೆ ಪರಿಚಯವೇ ಇಲ್ಲದ ನಗರವೂ ಆಗಬಹುದು. ನೀವು ನಿಮ್ಮ ಕೆಲಸ ಸರಿಯಾಗಿ ಮಾಡುತ್ತಿದ್ದೀರ ಅಂತ ಕೇಳುವ ಕಾಲದಲ್ಲಿ ಇವತ್ತು ಕೊರೋನಾ ನಮ್ಮನ್ನ ಬದುಕುವಂತೆ ಮಾಡಿದಿಯೇ ಹೊರತು ನೀವು ಎಲ್ಲಿ ಕುಳಿತು ಕೆಲಸ ಮಾಡುತ್ತಿದ್ದರಾ ಎನ್ನುವುದು ಯಾರಿಗೂ ಬೇಕಾಗಿಲ್ಲ.
Home, is it just a word?or is it something that you carry within you..? ಇದು ಈ ಸಲದ ಆಸ್ಕರ್ ಗೆದ್ದ ನೋ ಮ್ಯಾಡ್‌ಲ್ಯಾಂಡ್ ಎನ್ನುವ ಸಿನಿಮಾದ ಮಾತು. ನಮ್ಮಲ್ಲಿ ಇವತ್ತು ಕೆಲವರಿಗಾದರೂ ಬಾಲ್ಯದಲ್ಲಿ ಕಂಡ ಚಿತ್ರಗಳನ್ನ ಮನಸ್ಸಲ್ಲಿ ಹಾಗೆ ಕೆಡದಂತೆ ಕಾಪಿಟ್ಟುಕೊಂಡು, ಮಹಾನಗರದ ಬಿಸಿಯುಸಿರಿನ ಅಡಿಯಲ್ಲಿ ಆಗಾಗ ಹೊರಳಾಡಿ ನಮ್ಮ ಊರು ಯಾವುದು ಅಂತ ಹುಡುಕಿಕೊಂಡು ಅಲೆಯುವುದಕ್ಕೆ ಕೊರೋನಾ ದಾರಿ ಮಾಡಿಕೊಟ್ಟಿದೆ.
ಇನ್ಮೇಲೆ ನೀವು ಎಲ್ಲಿ ಕೆಲಸ ಮಾಡಿಕೊಂಡು ಬದುಕಲು ಬಯಸುತ್ತಿರೋ ಅದೇ ನಿಮ್ಮ ಊರು..ಇನ್ನೂ ಸರಿಯಾಗಿ ಹೇಳಬೇಕೆಂದರೆ ಈಗ ಇಡೀ ಜಗತ್ತೇ ನಿಮ್ಮ ಊರು.