ಸಾಧನೆಯ ಮೆಟ್ಟಿಲುಗಳ ಹಿಂದೆ ನೂರಾರು ನೋವುಗಳಿರುತ್ತವೆ. ಅಲ್ಲಿ ಏಳು-ಬೀಳುಗಳ ಪ್ರಯಾಣ ಇರುತ್ತದೆ. ಒಂದೊಂದು ಕ್ಷಣ ಇಲ್ಲಿಗೆ ಮುಕ್ತಾಯ ಇನ್ನು ಮುಂದೆ ಸಾಗಲು ಸಾಧ್ಯವೇ ಇಲ್ಲ ಎಂಬ ಭಾವನೆಯೂ ಮನಸಿನ ಪುಟಗಳಲ್ಲಿ ಅಚ್ಚೊತ್ತಲು ಆರಂಭಿಸಿರುತ್ತದೆ. ಇದೆಲ್ಲವನ್ನು ಮೀರಿ ನಿಂತವನೇ ಸಾಧಕರ ಸೀಟಿನಲ್ಲಿ ಆಸೀನರಾಗುವ ಹಕ್ಕು ಪಡೆದುಕೊಳ್ಳುತ್ತಾನೆ.

ಕುಟುಂಬದ ನೆರಳಿಲ್ಲದೇ, ತಂದೆಯ ಹೆಸರಿಲ್ಲದೇ, ಯಾವುದೇ ಹಿನ್ನೆಲೆಯಿಲ್ಲದೆ ಸಾಧನೆ ಮಾಡಿದ ಅನೇಕರು ನಮ್ಮ ಮುಂದೆ ಇದ್ದಾರೆ. ಹಲವರು ಇನ್ನು ಎಲೆ ಮರೆಕಾಯಿಯಂತೆ ಸಾಧನೆ ಮಾಡುತ್ತಲೇ ಇದ್ದಾರೆ. ಅವರೆಲ್ಲರ ಜೀವನದ ಒಂದೊಂದು ಅಧ್ಯಾಯಗಳು ಒಂದೊಂದು ಪಾಠವಾಗುತ್ತದೆ. ಆ ಪಾಠದಲ್ಲಿ ಒಂದು ಸಂದೇಶ ಇರುತ್ತದೆ. ನಮ್ಮ ಜೀವನದ ಆಗು ಹೋಗುಗಳನ್ನು ಎದುರಿಸುವ ಸ್ಥೈರ್ಯವನ್ನು ತುಂಬಬಹುದು. ಆತ್ಮವಿಶ್ವಾಸ ಗಟ್ಟಿಗೊಳಿಸಿಕೊಳ್ಳಲು ವೇದಿಕೆಯಾಗಬಹುದು.

ಇಂಥ ಸಾಧಕರನ್ನು ಮಾತನಾಡಿಸಿದ ನಮಗೆ ಗೊತ್ತಿಲ್ಲದ ದಿನಗಳ ಅನಾವರಣ ಆಯಿತು. ಅಲ್ಲಿ ಖುಷಿಯಿತ್ತು. ನೋವಿತ್ತು, ಸಹಾಯ ಮಾಡಿದ ನೆನಪಿತ್ತು, ಸಹಾಯ ಪಡೆದುಕೊಂಡ ಧನ್ಯತಾಭಾವ ಇತ್ತು.. ಭಾವನೆಗಳಿದ್ದವು, ಕಠೋರ ನಿರ್ಧಾರಗಳಿದ್ದವು.. ನಿರಂತರ ಓದಿತ್ತು,,, ನಿದ್ರೆ-ಆಹಾರ ತ್ಯಜಿಸಿದ ಉದಾಹರಣೆ ಇತ್ತು...

ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ, ರಾಜಾ ಗುರು ದ್ವಾರಕನಾಥ ಗುರುಜಿ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ, ಐಪಿಎಸ್ ಅಧಿಕಾರಿ ಡಿ. ರೂಪಾ, ಪತ್ರಕರ್ತ ಸಿದ್ದರಾಜು, ಸ್ವಾತಂತ್ರ್ಯ ಹೋರಾಟಗಾರ ದೋರೆಸ್ವಾಮಿ, ಟೈಗರ್ ಅಶೋಕ್ ಕುಮಾರ್, ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಠಾಗೋರ್ ಮತ್ತು ವಾಯುಸೇನೆಯ ಕಮಾಂಡರ್ ಎಂ.ಕೆ.ಚಂದ್ರಶೇಖರ್ ಅವರ ಜೀವನದ ಘಟನಾವಳಿಗಳನ್ನು ನಿಮ್ಮ ಮುಂದೆ ತಂದಿಡುವ ಪ್ರಯತ್ನ ಈ ಸ್ವಾತಂತ್ರ್ಯೋತ್ಸವದ ಎದುರು ನಮ್ಮಿಂದ ಆಗುತ್ತಿದೆ. ನಾವು ಆಡಂಬರ ಮಾಡಿ ನೀರಿಕ್ಷಿಸಿ ಎಂದು ಹೇಳ್ತಾ ಇಲ್ಲ.. ಶಾಂತ ಚಿತ್ತರಾಗಿ ಕೇಳಿ.. ನಿಮ್ಮಲ್ಲಿ ಹುದುಗಿರುವ ಹಲವು ಅನುಮಾನಗಳಿಗೆ ಇದು ತೆರೆ ಎಳೆಯುತ್ತದೆ ಎಂಬ ಖಾತ್ರಿ ನಾವು ನೀಡುತ್ತಿದ್ದೇವೆ.