ಬೇಸಿಗೆ ರಜೆಯ ರಂಗು ಹೆಚ್ಚಿಸುವ ಹಬ್ಬಗಳು!
ಬೇಸಿಗೆ ರಜೆ ಬಂದಿದೆ. ಸುಮ್ಮನೆ ಮನೆಯಲ್ಲಿ ಕೂತು ಕಾಲಹರಣ ಮಾಡುವ ಬದಲು ಫೆಸ್ಟಿವಲ್ ಟೂರ್ ಗೆ ಸಜ್ಜಾಗಿ. ಭಾರತೀಯ ಸಂಸ್ಕೃತಿಯ ಅನುಭವದಲ್ಲಿ ಮಿಂದೇಳಿ.
ಮಕ್ಕಳಿಗೆಲ್ಲ ರಜೆ ನಡೆಯುತ್ತಿದೆ. ಅವರನ್ನು ಸಮ್ಮರ್ ಕ್ಯಾಂಪ್ ಗೋ, ಸ್ವಿಮ್ಮಿಂಗ್ ಕ್ಲಾಸ್ ಗೋ ಹಾಕಿ ನಿರಾಳರಾಗುವ ಬದಲು, ನೀವೂ ಅವರೊಂದಿಗೆ ಬೆರೆತು ಒಂದು ಚೆಂದದ ಟ್ರಿಪ್ ಮಾಡಬಹುದಲ್ಲವೇ? ಅದರಲ್ಲೂ ಮೇ ತಿಂಗಳಲ್ಲಿ ದೇಶದ ಅನೇಕ ಕಡೆ ಅನೇಕ ರೀತಿಯ ಹಬ್ಬಗಳು ನಡೆಯುತ್ತವೆ. ಅವುಗಳತ್ತ ಒಂದು ಸುತ್ತು ಹಾಕಿ ಬಂದರೆ ಭಾರತೀಯ ಸಂಸ್ಕೃತಿಯೊಂದಿಗೆ ಹಬ್ಬಗಳ ವೈವಿಧ್ಯತೆಯ ಅರಿವೂ ಆದೀತು. ಒಂದಿಷ್ಟು ಹೊಸ ತಾಣಗಳನ್ನು ನೋಡಿ ರಿಫ್ರೆಶ್ ಆದಂತೆಯೂ ಆಗುತ್ತದೆ. ಈ ತಿಂಗಳಲ್ಲಿ ಎಲ್ಲೆಲ್ಲಿ ಯಾವ ಹಬ್ಬಗಳಿವೆ ತಿಳಿಯೋಣ ಬನ್ನಿ.
ಮೌಂಟ್ ಅಬು ಸಮ್ಮರ್ ಫೆಸ್ಟಿವಲ್
ರಾಜಸ್ಥಾನದ ಮೌಂಟ್ ಅಬು ಮನಮೋಹಕ ವಾತಾವರಣ ಹಾಗೂ ಸುಂದರ ಬೆಟ್ಟಗಳೊಂದಿಗೆ ಪ್ರಕೃತಿ ಪ್ರೇಮಿಗಳನ್ನು ಮರುಳು ಮಾಡುತ್ತದೆ. ಸ್ಥಳೀಯ ನೃತಿ ಪ್ರಾಕಾರಗಳನ್ನು ಪ್ರಸ್ತುತಪಡಿಸುವ ಸಲುವಾಗಿ ಇಲ್ಲಿ ಪ್ರತಿ ವರ್ಷ ಸಮ್ಮರ್ ಫೆಸ್ಟಿವಲ್ ನಡೆಸಲಾಗುತ್ತದೆ. ಇದರಲ್ಲಿ ರೋಲರ್ ಸ್ಕೇಟಿಂಗ್, ಬೋಟ್ ರೇಸ್, ಫೈರ್ ವರ್ಕ್ ಡಿಸ್ಪ್ಲೇ ಹಾಗೂ ಕವ್ವಾಲಿ ಸಂಗೀತ ಸಂಜೆಗಳು ಜನಾಕರ್ಷಿಸುತ್ತವೆ.
ಯಾವಾಗ?: ಮೇ 17, 18
ಮೋಟ್ಸು ಹಬ್ಬ
ನಾಗಾಲ್ಯಾಂಡ್ ನ ಚುಚುಯಿಮ್ ಲ್ಯಾಂಗ್ ಹಳ್ಳಿಯ ಆವೋ ಬುಡಕಟ್ಟು ಜನರು ಸುಗ್ಗಿ ಕಾಲವನ್ನು ಸಂಭ್ರಮಿಸುವ ಹಬ್ಬವೇ ಮೋಟ್ಸು. ಹಬ್ಬದುಡುಗೆಗಳನ್ನು ತೊಟ್ಟು ನರ್ತಿಸಿ, ಹಾಡಿ ನಲಿಯುವ ಈ ಮುಗ್ಧ ಜನರನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಆಚರಣೆಯಲ್ಲಿ ಪ್ರವಾಸಿಗರೂ ಭಾಗವಹಿಸಬಹುದು.
ಸ್ಥಳ: ಮೊಕೊಕ್ಚುಂಗ್ ಜಿಲ್ಲೆ, ನಾಗಾಲ್ಯಾಂಡ್, ಮೇ ಮೊದಲ ವಾರ
ರಂಜಾನ್
ಮುಸ್ಲಿಮರ ಉಪವಾಸಾಚರಣೆಯ ಹಬ್ಬ ಸುಮಾರು ಒಂದು ತಿಂಗಳ ಕಾಲ ದೇಶಾದ್ಯಂತ ನಡೆಯುತ್ತದೆ. ಈದ್ ಉಲ್ ಫಿತರ್ ನೊಂದಿಗೆ ಉಪವಾಸ ಕಾಲ ಮುಗಿಯುತ್ತದೆ. ಈ ದಿನ ಮುಸ್ಲಿಂ ಸಮುದಾಯವು ಸಾಂಪ್ರದಾಯಿಕ ಉಡುಗೆ ತೊಟ್ಟು ಹಬ್ಬದ ಊಟ ತಯಾರಿಸಿ, ಉಡುಗೊರೆಗಳನ್ನು ಕೊಟ್ಟುಕೊಳ್ಳುತ್ತಾರೆ. ದೆಲ್ಲಿ, ಲಖನೌ, ಶ್ರೀನಗರ, ಹೈದರಾಬಾದ್ ಹಾಗೂ ಮುಂಬೈಗಳಲ್ಲಿ ದೊಡ್ಡ ಮಟ್ಟದ ಆಚರಣೆ ಕಾಣಬಹುದು.
ಯಾವಾಗ?: ಮೇ 6ರಿಂದ ಜೂನ್ 5
ಧುಂಗ್ರಿ ಹಿಡಿಂಬಾ ದೇವಿ ಮೇಳ
ರಾಕ್ಷಸ ಸಮುದಾಯದಲ್ಲಿ ಹುಟ್ಟಿದ, ದೇವತೆಗಳ ಗುಣ ಹೊಂದಿದ್ದ ಭೀಮನ ಪತ್ನಿ ಹಿಡಿಂಬೆಯ ಜನ್ಮ ದಿನವೆಂದು ಇದನ್ನು ಆಚರಿಸಲಾಗುತ್ತದೆ. ಆಕೆಗಾಗಿ ಮನಾಲಿಯ ಧುಂಗ್ರಿ ವನವಿಹಾರ ಪ್ರದೇಶದಲ್ಲಿ ದೇವಸ್ಥಾನವೂ ಇದೆ. ಇಲ್ಲಿ ಪ್ರತಿ ವರ್ಷ ಮೂರು ದಿನಗಳ ಹಬ್ಬಾಚರಣೆ ನಡೆಯುತ್ತದೆ. ಆಚರಣೆಯು ಕುಲು ನೃತ್ಯ, ಶಾಪಿಂಗ್, ಫುಡ್ ಇತ್ಯಾದಿ ಮನರಂಜನೆಗಳಿಂದ ಸಮೃದ್ಧವಾಗಿದೆ.
ಸ್ಥಳ: ಹಿಡಿಂಬಾ ದೇವಸ್ಥಾನ, ಮನಾಲಿ, ಮೇ 14ರಿಂದ 16
ಊಟಿ ಬೇಸಿಗೆ ಹಬ್ಬ
ತಣ್ಣನೆಯ ಹಸಿರು ಬೆಟ್ಟಗಳಿಂದ ಕೂಡಿರುವ ಊಟಿ, ಹನಿಮೂನ್ ತಾಣವಾಗಿ ಅಲ್ಲದೆ ಫ್ಲವರ್ ಶೋ, ವೆಜಿಟೇಬಲ್ ಶೋ, ಫ್ರೂಟ್ ಶೋಗಳಿಗೂ ಖ್ಯಾತಿ ಪಡೆದಿದೆ.
ಸ್ಥಳ: ಊಟಿ ಬಟಾನಿಕಲ್ ಗಾರ್ಡನ್ ಹಾಗೂ ಕೂನೂರು ಸಿಮ್ಸ್ ಪಾರ್ಕ್, ಮೇ 17-26
ಬುದ್ಧ ಪೂರ್ಣಿಮಾ
ಗೌತಮ ಬುದ್ಧನ ಹುಟ್ಟುಹಬ್ಬದಂದು ಗುರು ಪೂರ್ಣಿಮೆಯೆಂದೂ ದೇಶಾದ್ಯಂತ ಆಚರಿಸಲಾಗುತ್ತದೆ. ಎಲ್ಲ ದೇಗುಲಗಳಲ್ಲಿ ಈ ದಿನ ವಿಷೇಶ ಪೂಜೆ ಇರುತ್ತದೆ. ದೇಶದ ವಿವಿಧೆಡೆ ಇರುವ ಋಷಿಮುನಿಗಳ ಐಕ್ಯ ತಾಣಗಳಲ್ಲಿ ಜನರು ಸೇರಿ ಅವರನ್ನು ಸ್ಮರಿಸುತ್ತಾರೆ. ಬಿಹಾರದ ಬೋಧ್ ಗಯಾ ಹಾಗೂ ಇತರೆ ಬೌದ್ಧ ದೇವಾಲಯಗಳನ್ನು ಭೇಟಿ ಮಾಡಿ ಈ ದಿನದ ಸಂಭ್ರಮದಲ್ಲಿ ಪಾಲುದಾರರಾಗಬಹುದು.
ಯಾವಾಗ?: ಮೇ 12