ಜೀವನದಲ್ಲಿ ಮುಂದೆ ಏನಾಗುತ್ತದೆ ಎಂದು ಯಾರಿಗೂ ಗೊತ್ತಿರಲ್ಲ. ಉತ್ತರ ಪ್ರದೇಶದ ವಾರಣಾಸಿಯ 10 ವರ್ಷದ ಸಚಿನ್ ನಾಗ್ ಲಾಠಿ ಚಾರ್ಜ್ ನಿಂದ ತಪ್ಪಿಸಿಕೊಳ್ಳಲು ಗಂಗಾ ನದಿಗೆ ಹಾರಿದ ಮೇಲೆ ಲೈಫೇ ಚೇಂಜ್ ಆಯ್ತು. ಆ ನಂತರದ ದಿನಗಳಲ್ಲಿ ಈ ಪುಟ್ಟ ಹುಡುಗ ದೇಶಕ್ಕೆ ಕೀರ್ತಿ ತಂದದ್ದು ಇತಿಹಾಸ.

ಸಚಿನ್ ನಾಗ್ ಜುಲೈ 5, 1920 ರಂದು ವಾರಣಾಸಿಯಲ್ಲಿ ಜನಿಸಿದರು. ಗಂಗಾ ನದಿಯ ದಡದಲ್ಲಿರುವ ವಾರಣಾಸಿಯಲ್ಲಿ ಜನಿಸಿದ ಅವರಿಗೆ ಈಜುವ ಬಗ್ಗೆ ಒಲವಿತ್ತು. ಆದರೆ ಈ ಕ್ರೀಡಾ ಕ್ಷೇತ್ರಕ್ಕೆ ಬಂದಿದ್ದು ಕೇವಲ ಕಾಕತಾಳೀಯ ಮಾತ್ರ. ವರದಿಯ ಪ್ರಕಾರ, 1930 ರಲ್ಲಿ ನಾಗರಿಕ ಅಸಹಕಾರ ಚಳವಳಿಯ ಸಮಯದಲ್ಲಿ ವಾರಣಾಸಿಯ ಗಂಗಾ ಘಾಟ್‌ನಲ್ಲಿ ಸಾರ್ವಜನಿಕ ರಾಲಿ ನಡೆದಿತ್ತು. 10 ವರ್ಷದ ಸಚಿನ್ ಕೂಡ ಈ ರಾಲಿಯ ಭಾಗವಾಗಿದ್ದ. ಬ್ರಿಟಿಷ್ ಅಧಿಕಾರಿಗಳು ಜನಸಮೂಹದ ಮೇಲೆ ಲಾಠಿ ಚಾರ್ಜ್ ಮಾಡಲು ಪ್ರಾರಂಭಿಸಿದಾಗ, 10 ವರ್ಷದ ಸಚಿನ್ ತನ್ನನ್ನು ತಾನು ಉಳಿಸಿಕೊಳ್ಳಲು ಗಂಗಾ ನದಿಗೆ ಹಾರಿ ವೇಗವಾಗಿ ಈಜಲು ಪ್ರಾರಂಭಿಸಿದನು. ಕಾಕತಾಳೀಯವಾಗಿ, ಆ ಸಮಯದಲ್ಲಿ ನದಿಯಲ್ಲಿ ಈಜು ಸ್ಪರ್ಧೆ ನಡೆಯುತ್ತಿತ್ತು. ಸಚಿನ್ ಈಜುಗಾರರ ಸಾಲಿನಲ್ಲಿದ್ದನು. 10 ಕಿ.ಮೀ ಸ್ಪರ್ಧೆ ಮುಗಿದಾಗ, ಸಚಿನ್ ಮೂರನೇ ಸ್ಥಾನ ಪಡೆದನು. ದೇಶಕ್ಕೆ ಕೀರ್ತಿ ತಂದ ಈಜುಗಾರನ ವೃತ್ತಿಜೀವನದ ಆರಂಭ ಇದು.

1930 ಮತ್ತು 1936 ರ ನಡುವೆ, ಸಚಿನ್ ನಾಗ್ ಅನೇಕ ಸ್ಥಳೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅವರ ಪ್ರತಿಭೆಯಿಂದ ಪ್ರಭಾವಿತರಾದ ಪ್ರಸಿದ್ಧ ಈಜು ತರಬೇತುದಾರ ಜಾಮಿನಿ ದಾಸ್ ಅವರನ್ನು ಕೋಲ್ಕತ್ತಾಗೆ ಕರೆಸಿ ಉನ್ನತ ಮಟ್ಟದಲ್ಲಿ ತರಬೇತಿ ನೀಡಲು ಪ್ರಾರಂಭಿಸಿದರು. ಸಚಿನ್ ಹತ್ಖೋಲಾ ಕ್ಲಬ್ ಆಫ್ ಬಂಗಾಳದ ಪರವಾಗಿ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಇವರು ಸತತ 9 ವರ್ಷಗಳ ಕಾಲ ರಾಜ್ಯ ಮಟ್ಟದಲ್ಲಿ 100 ಮೀ ಫ್ರೀಸ್ಟೈಲ್ ಈಜು ಸ್ಪರ್ಧೆಯ ವಿಜೇತರಾಗಿದ್ದರು.

1948 ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಚಿನ್ ನಾಗ್ ಬಯಸಿದ್ದರು. ಆದರೆ 1947 ರಲ್ಲಿ ತರಬೇತಿಯಿಂದ ಹಿಂತಿರುಗುವಾಗ ಅವರಿಗೆ ಗುಂಡು ಹಾರಿಸಲಾಯಿತು. ಮುಂದಿನ ಎರಡು ವರ್ಷಗಳ ಕಾಲ ಈಜುವುದರಿಂದ ದೂರವಿರಲು ವೈದ್ಯರು ಸಲಹೆ ನೀಡಿದರು. ಒಲಿಂಪಿಕ್ಸ್‌ಗೆ ಹೋಗುವ ಅವಕಾಶವನ್ನು ಕಳೆದುಕೊಳ್ಳಲು ನಾಗ್ ಬಯಸಲಿಲ್ಲ, ಆದ್ದರಿಂದ 6 ತಿಂಗಳ ಕಠಿಣ ಪರಿಶ್ರಮದ ನಂತರ ಅವರು ಸಿದ್ಧರಾದರು. ಒಲಿಂಪಿಕ್ಸ್‌ಗಾಗಿ ಹಣವನ್ನು ಸಂಗ್ರಹಿಸುವುದು ಅವರಿಗೆ ಕಷ್ಟಕರವಾಗಿದ್ದರೂ, ಅವರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣಿಸುವ ಮೂಲಕ ಹಣವನ್ನು ಸಂಗ್ರಹಿಸಿದರು. ಆ ಕಾಲದ ಪ್ರಮುಖ ಗಾಯಕ ಹೇಮಂತ್ ಮುಖೋಪಾಧ್ಯಾಯ ಅವರು ಕಾರ್ಯಕ್ರಮವನ್ನು ಆಯೋಜಿಸಿ ಅವರಿಗಾಗಿ ಹಣವನ್ನು ಸಂಗ್ರಹಿಸಿದರು. ಕೊನೆಗೆ 1948 ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ, 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಆರನೇ ಸ್ಥಾನವನ್ನು ಪಡೆದರು.

ಕಾಡಿತ್ತು ಆರ್ಥಿಕ ಸಮಸ್ಯೆ
ಸಚಿನ್ ನಾಗ್ ಅವರ ಜೀವನದ ಅತ್ಯಂತ ಮಹತ್ವದ ದಿನ ಮಾರ್ಚ್8, 1951 ರಂದು ಬಂದಿತು. ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಅವರು ಚಿನ್ನದ ಪದಕ ಗೆದ್ದರು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಕೂಡ ಗ್ಯಾಲರಿಯಲ್ಲಿ ಉಪಸ್ಥಿತರಿದ್ದರು. ನಾಗ್ ಅವರ ಪ್ರದರ್ಶನದಿಂದ ನೆಹರು ತುಂಬಾ ಸಂತೋಷಪಟ್ಟರು. ಆ ಕ್ಷಣದಲ್ಲಿ ಅವರು ನಾಗ್ ಅವರನ್ನು ಅಪ್ಪಿಕೊಂಡು ತಮ್ಮ ಜೇಬಿನಿಂದ ಗುಲಾಬಿ ಹೂವನ್ನು ನೀಡಿದರು. 1951 ರ ಏಷ್ಯನ್ ಕ್ರೀಡಾಕೂಟದಲ್ಲಿ, ನಾಗ್ 4×100 ಮೀಟರ್ ಫ್ರೀಸ್ಟೈಲ್ ರಿಲೇ ಮತ್ತು 3×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಕಂಚಿನ ಪದಕಗಳನ್ನು ಗೆದ್ದರು.

1952 ರ ಒಲಿಂಪಿಕ್ಸ್‌ನಲ್ಲಿ ಸಚಿನ್ ಭಾರತೀಯ ತಂಡದ ಭಾಗವಾಗಿದ್ದರು. ಯಶಸ್ವಿ ಈಜುಗಾರರಾಗಿ ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದರೂ, ಸಚಿನ್ ನಾಗ್ ತಮ್ಮ ಜೀವನದುದ್ದಕ್ಕೂ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರು ಆಗಸ್ಟ್ 19, 1987 ರಂದು ತಮ್ಮ 67 ನೇ ವಯಸ್ಸಿನಲ್ಲಿ ನಿಧನರಾದರು. ಸಚಿನ್ ನಿಧನರಾದ 36 ವರ್ಷಗಳ ನಂತರ 2020 ರಲ್ಲಿ ಕೇಂದ್ರ ಸರ್ಕಾರವು ಧ್ಯಾನ್ ಚಂದ್ ಪ್ರಶಸ್ತಿಯನ್ನು ಅವರಿಗೆ ನೀಡಿತು.