ತೀರ್ಥಹಳ್ಳಿಗೆ ಮಳೆ ಬಂದರೆ ಮನೆಯೊಳಗೆ ಹುಡುಗರಿರಲ್ಲ!

ಮಳೆಗಾಲ ಶುರುವಾಗಿದೆ. ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಯಾರೂ ಹೊರ ಬರಲು ಆಗುತ್ತಿಲ್ಲ. ಬೆಚ್ಚಗೆ ಹೊದ್ದು ಮಲಗಬೇಕು ಎನಿಸುತ್ತದೆ. ತೀರ್ಥಹಳ್ಳಿಯಲ್ಲಿ ಜೋರು ಮಳೆ ಬಂದರೆ ಈ ಹುಡುಗರ್ಯಾರು ಮನೆಯಲ್ಲಿರಲ್ಲ. ಹಾಗಾದರೆ ಏನು ಮಾಡ್ತಾರೆ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ! 

Fish specila in Thirthahalli

ಮಳೆಗಾಲ ಶುರುವಾಯ್ತು ಅಂದರೆ ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಕಡೆ ಹುಡುಗರು ಮನೆಯಿಂದ ನಾಪತ್ತೆ. ಎಲ್ಲಾ ಮೀನು ಬೇಟೆಗೆ ಹೊರಟಿರ‌್ತಾರೆ. ಹತ್ತು ಹದಿನೈದು ಜನರ ಗುಂಪು ಮೊದಲೇ ಗುರುತು ಮಾಡಿಕೊಂಡಿರುವ ಗದ್ದೆ, ಗುಂಡಿಗಳತ್ತ ಹೋಗುತ್ತಾರೆ.

ತಲೆಗೆ ಹೆಡ್‌ಲೈಟ್ ಕಟ್ಟಿಕೊಂಡು ಗದ್ದೆಗೆ ಇಳಿದರೆ ಮುಂಗಾಲು ಮುಳುಗುವಷ್ಟೇ ನೀರು. ರಾಶಿ ರಾಶಿ ಮೀನುಗಳು ಪುತಪುತ ಅನ್ನುವಷ್ಟು. ಕಾಲಿಗೆ ಮುತ್ತಿಕೊಳ್ಳುವ ಮೀನುಗಳನ್ನು ಕತ್ತಿಯಿಂದ ಅದರ ತಲೆ ಮತ್ತು ಕುತ್ತಿಗೆಯ ನಡುವಿನ ಭಾಗಕ್ಕೆ ಹೊಡಿಯೋದು. ಒಬ್ಬ ಹೊಡೆದ ಕೂಡಲೇ ಮತ್ತೊಬ್ಬ ಅದನ್ನು ಆಯ್ದು ಚೀಲಕ್ಕೆ ಹಾಕಿಕೊಳ್ಳುತ್ತಾನೆ. ರಾತ್ರಿ 9 ರ ಸುಮಾರಿಗೆ ಶುರುವಾಗುವ ಈ ಮೀನು ಬೇಟೆ ಬಹಳ ಹೊತ್ತು ಮುಂದುವರಿಯುತ್ತದೆ.

ಗದ್ದೆಯಲ್ಲಿ ಮೀನು ಹಿಡಿದು ಪೂರೈಸಿದವರು ಗುಂಡಿಗಳ ಕಡೆ ಹೋಗುತ್ತಾರೆ. ನೀರು ಹರಿದು ಬರುವ ಕಡೆಯೇ ಬಲೆ ಹಾಕಿದರೆ ರಾಶಿ ರಾಶಿ ಮೀನುಗಳು ಬಂದು ಬಲೆಗೆ ಬೀಳುತ್ತವೆ. ಒಂದು ರಾತ್ರಿ ಐದಾರು ಕೆಜಿಗಳಷ್ಟು ಮೀನು ಸಿಗುತ್ತದೆ.

ಏಡಿ ಬೇಟೆ:

ಏಡಿಗಳನ್ನು ಕಲ್ಲಿನಡಿಯಿಂದ ಹುಡುಕಿ ತೆಗೆಯುತ್ತಾರೆ. ಏಡಿ ಹಿಡಿಯುವಾಗ ಬಹಳ ಜಾಗೃತೆಯಿಂದಿರಬೇಕು. ಗಮನ ಅತ್ತಿತ್ತ ಹೋದರೂ ಏಡಿ ಕೊಂಬು ಕೈಯಲ್ಲಿ ನಾಟಿ ಬಿಡುತ್ತದೆ. ರಕ್ತ ಬರುವಷ್ಟು ಜೋರಾದ ಗಾಯವಾಗುತ್ತದೆ. ಏಡಿ ಹಿಡಿದ ಕೂಡಲೇ ಕೊಂಬು ಮುರಿದು ಚೀಲಕ್ಕೆ ಹಾಕಿಕೊಳ್ಳುತ್ತಾರೆ. ನಮ್ಮೂರಿನ ಕಡೆ ಸಿಗುವ ಏಡಿಗಳ ಗಾತ್ರ ಚಿಕ್ಕದು. ಸಮುದ್ರದ ಏಡಿಗಳ ಹಾಗೆ ದೊಡ್ಡ ಗಾತ್ರದವಲ್ಲ. ಹಾಗಂತ ರುಚಿಗೇನೂ ಕಡಿಮೆ ಇಲ್ಲ.

ಬೆಳ್ಳಂಬೆಳಗ್ಗೆ ಹಿಡಿದ ಮೀನು, ಏಡಿಗಳ ರಾಶಿ ಬಿದ್ದಿರುತ್ತದೆ. ಕೈಯಳತೆಯಲ್ಲೇ ಅವುಗಳ ಸಮಪಾಲು. ಅವತ್ತು ಊರಿನ ಹೆಚ್ಚಿನ ಮನೆಗಳಲ್ಲಿ ಅದ್ಭುತ ರುಚಿಯ ಮೀನೂಟ ಮತ್ತು ಏಡಿಯ ಚಟ್ನಿ.  

-ಸಚಿನ್ ತೀರ್ಥಹಳ್ಳಿ 

Latest Videos
Follow Us:
Download App:
  • android
  • ios