Asianet Suvarna News Asianet Suvarna News

ಸಾಹಿತಿ ಟಿ.ಎನ್.ಸೀತಾರಾಮ್ ಬರೆದ 'ನೆನಪಿನ ಪುಟಗಳು' ಕೃತಿ ಲೋಕಾರ್ಪಣೆ

ಖ್ಯಾತ ನಟ, ನಿರ್ದೇಶಕ, ಸಾಹಿತಿ ಟಿ.ಎನ್.ಸೀತಾರಾಮ್ ಬರೆದ 'ನೆನಪಿನ ಪುಟಗಳು' ಕೃತಿ ಲೋಕಾರ್ಪಣೆಗೊಳ್ಳುತ್ತಿದೆ. ಕಿರುತೆರೆ, ಸಿನಿಮಾ, ರಂಗಭೂಮಿ, ರಾಜಕೀಯ, ಪತ್ರಿಕೋದ್ಯಮ, ಸಾಹಿತ್ಯ, ವಕೀಲಿಕೆ ಹೀಗೆ  ವಿವಿಧ ರಂಗಗಳಲ್ಲಿ ಕೆಲಸ ಮಾಡಿದ ಕನ್ನಡದ ಸಾಕ್ಷಿಪ್ರಜ್ಞೆ ಎಂಬಂತಿರುವ ಟಿಎನ್ನೆಸ್ ಅವರ ಬದುಕಿನ ಪುಟಗಳು ಅನಾವರಣಗೊಂಡಿರುವ ಪುಸ್ತಕ ಇದು. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಆ ಕೃತಿಯ ಒಂದು ಅಧ್ಯಾಯ ಇಲ್ಲಿದೆ.

Famous actor, director, writer T.N. Sitaram's Nenapina putagalu is being launched Vin
Author
First Published Dec 10, 2023, 2:13 PM IST

- ಟಿ.ಎನ್.ಸೀತಾರಾಮ್, ಖ್ಯಾತ ನಟ, ನಿರ್ದೇಶಕ, ಸಾಹಿತಿ

ಕರ್ನಾಟಕದ ಈಗಿನ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ನನಗೆ ತುರ್ತುಪರಿಸ್ಥಿತಿಯಿಂದಲೂ ಪರಿಚಯ. ನಾವು ನೂರಾರು ಸಲ ಭೇಟಿ ಮಾಡಿದ್ದೇವೆ. ಆದರೆ ಎಲ್ಲದರ ಪಟ್ಟಿ ಮಾಡಲು ನಾನು ಹೋಗುವುದಿಲ್ಲ. ಅವರು ಮೊಟ್ಟ ಮೊದಲು ಪರಿಚಯವಾಗಿದ್ದು ತುರ್ತುಪರಿಸ್ಥಿತಿಯ ದಿನಗಳಲ್ಲಿ. ಆಗ ಒಂದು ದಿನ, ನನ್ನ ಗುರುಗಳಾಗಿದ್ದ ಎಂ.ಡಿ. ನಂಜುಂಡಸ್ವಾಮಿಯವರು ಮಲ್ಲೇಶ್ವರದ ಸೇತುವೆ ಬಳಿ ಸಿಕ್ಕಿದರು. ನಾನು ಅಲ್ಲಿಗೆ ಟೀ ಕುಡಿಯಲು ಹೋಗಿದ್ದೆ. ಆಗ ಬೆಳಗ್ಗೆ ಸುಮಾರು ಏಳು-ಏಳೂವರೆ ಗಂಟೆ. ‘ಮೈಸೂರಿಗೆ ಬರ್ತೀರೇನ್ರಿ?’ ಎಂದು ಕೇಳಿದರು. ‘ಹೋಗೋಣ ನಡೀರಿ ಸರ್’ ಎಂದು ಹೇಳಿದೆ. ನಂಜುಂಡಸ್ವಾಮಿಯವರ ಜೊತೆ ಹೋದರೆ ಒಂದಷ್ಟು ಬುದ್ಧಿ ಮಾತುಗಳು, ರೈತರ ಹೋರಾಟದ ಮಾತುಗಳು, ಎಲ್ಲವನ್ನೂ ಹೇಳುತ್ತಾರೆ ಮತ್ತು ಕಾನೂನನ್ನೂ ಹೇಳುತ್ತಾರೆ ಎಂಬ ಕಾರಣಕ್ಕೆ ನಾನು ಅವರ ಜೊತೆ ಹೋದೆ. ಕಾರಿನಲ್ಲಿ ನಾವಿಬ್ಬರೂ ಮೈಸೂರಿಗೆ ಹೋದೆವು.

ಮೈಸೂರಿನಲ್ಲಿ ಯಾವುದೋ  ಕಾಫಿ ಕ್ಲಬ್‌ನಲ್ಲಿ ಕಾಫಿ ಕುಡಿಯುತ್ತಿದ್ದಾಗ ಅಲ್ಲಿಗೆ ಸಿದ್ದರಾಮಯ್ಯನವರು ಬಂದರು. ಅವರನ್ನು ನನಗೆ ಪರಿಚಯ ಮಾಡಿಸಿದರು. ‘ಇವರೂ ಲಾ ಮಾಡಿದ್ದಾರೆ, ಇವರು ಸಿದ್ದರಾಮಯ್ಯನವರು’ ಎಂದಾಗ, ನಾನು ‘ನಮಸ್ಕಾರ’ ಹೇಳಿದೆ. ಅವತ್ತೇ ನಮ್ಮ ಪರಿಚಯವಾಗಿದ್ದು. ಅಂದು ಸಿದ್ದರಾಮಯ್ಯನವರು ಪ್ಯಾಂಟ್, ಶರ್ಟ್ ಹಾಕಿದ್ದು, ಚಪ್ಪಲಿ ಧರಿಸಿದ್ದರು. ನೋಡಲು ಇನ್ನೂ ಹುಡುಗ. ತಲೆ ಕೂದಲು ಪೂರ್ತಿ ಕಪ್ಪಾಗಿತ್ತು ಮತ್ತು ಕಪ್ಪು ಗಡ್ಡವಿತ್ತು. ಗುಂಗುರು ಗುಂಗುರು ಕೂದಲು. ಒಂದು ರೀತಿಯಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದರು. ಅವರ ಧ್ವನಿ ಕೇಳಿ, ‘ನಿಮ್ಮ ವಾಯ್ಸ್ ಒಳ್ಳೆ ಆ್ಯಕ್ಟರ್‌ ದನಿಯ ಥರ ಇದೆ’ ಎಂದೆ. ಅವರು ನಕ್ಕು ಸುಮ್ಮನಾದರು.

ಔತ್ತಮ್ಯದ ಗೀಳಿನಲ್ಲಿ

ನಂತರ ಎಷ್ಟೋ ಬಾರಿ ಬಹಿರಂಗ ಸಭೆಗಳಲ್ಲಿ ಅವರನ್ನು ನೋಡುತ್ತಿದ್ದೆ. ನಾನು ನಮಸ್ಕಾರ ಎಂದು ಹೇಳುತ್ತಿದ್ದೆ. ಅವರೂ ನಮಸ್ಕಾರ ಹೇಳಿ ಹೋಗುತ್ತಿದ್ದರು. ಪರಿಚಯ ಚೆನ್ನಾಗಿ ಆಗಿತ್ತು. ೧೯೮೩ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದರು. ಜಾರ್ಜ್ ಫೆರ್ನಾಂಡಿಸ್ ಅವರೇ ಇವರನ್ನು ಚುನಾವಣೆಗೆ ನಿಲ್ಲಲು ಹೇಳಿದ್ದರು. ಒಮ್ಮೆ ಜಾರ್ಜ್ ಫೆರ್ನಾಂಡಿಸ್‌ರವರ ಜೊತೆಯೂ ಅವರನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು. ಅವತ್ತು ಹೆಚ್ಚಿಗೆ ಮಾತನಾಡಲಿಲ್ಲ.
 
ಅದಾದ ಮೇಲೆ ರಾಮಕೃಷ್ಣ ಹೆಗಡೆಯವರು ಅವರನ್ನು ‘ಕನ್ನಡ ಕಾವಲು ಸಮಿತಿ’ ಅಧ್ಯಕ್ಷರನ್ನಾಗಿ ಮಾಡಿದರು. ‘ಕನ್ನಡ ಕಾವಲು ಸಮಿತಿ’ ಅಧ್ಯಕ್ಷರಾದಾಗ ನಾನು ಅನೇಕ ಬಾರಿ ಅವರನ್ನು, ವಿಧಾನಸೌಧಕ್ಕೆ ಹೋದಾಗ, ಅಲ್ಲಿ ಇಲ್ಲಿ ಹೋದಾಗ ಭೇಟಿ ಮಾಡುತ್ತಿದ್ದೆ. ಅದೇ ಸರಳ ನಡೆ, ಸರಳ ನುಡಿ ಇದರಲ್ಲೇ ಇದ್ದ ಇವರು ಒಂದು ದಿವಸ ಮಳವಳ್ಳಿ ಶೇಖರ್ ಮತ್ತು ಸಿ. ನರಸಿಂಹಪ್ಪನವರ ಜೊತೆ ಎಂ.ಪಿ ಪ್ರಕಾಶ್‌ರವರ ಮನೆಗೆ ಬಂದರು. ನನಗೆ ಎಂ.ಪಿ. ಪ್ರಕಾಶ್ ತುಂಬಾ ಆಪ್ತರಾಗಿದ್ದರು. ನಾನು ಅವರ ಮನೆಯಲ್ಲಿಯೇ ಕುಳಿತಿದ್ದೆ. ಹಾಗಾಗಿ, ಸಿದ್ದರಾಮಯ್ಯ ಬಂದಾಗ ಬಹಳ ಹೊತ್ತು ಹರಟೆ ಹೊಡೆದೆವು. ಅವರು ಸಾಮಾಜಿಕ ನ್ಯಾಯದ ಬಗ್ಗೆ ಮತ್ತು ಸಮಾನತೆಯ ಬಗ್ಗೆ ಅವರದೇ ವಿಶಿಷ್ಟ ರೀತಿಯಲ್ಲಿ ತುಂಬಾ ಹೊತ್ತು ಹೇಳುತ್ತಿದ್ದರು. ಪ್ರಕಾಶ್‌ರವರು ಅದನ್ನು ಅದ್ಭುತವಾಗಿ ತಿಳಿದುಕೊಂಡಿದ್ದ ಮನುಷ್ಯ. ನಾವೆಲ್ಲರೂ ಸುಮಾರು ಮೂರ್‌ನಾಲ್ಕು ಗಂಟೆಗಳ ಕಾಲ ಹರಟೆ ಹೊಡೆಯುತ್ತಾ ಸಮಯ ಕಳೆದೆವು. ಅದಾದ ಮೇಲೆ ತುಂಬಾ ಚೆನ್ನಾಗಿ ಪರಿಚಯವಾದರು.

ಅದಾದ ಕೆಲವು ದಿವಸಕ್ಕೆ ಸಿದ್ದರಾಮಯ್ಯ ರಾಮಕೃಷ್ಣ ಹೆಗಡೆಯವರ ಮಂತ್ರಿಮಂಡಲದಲ್ಲಿ ಪಶು ಸಂಗೋಪನಾ ಮಖಾತೆ ತೆಗೆದುಕೊಂಡಿದ್ದರು ಎಂದು ನೆನಪು. ನನ್ನ ಪತ್ನಿ ಗೀತಾಳ ಅಕ್ಕನ ಗಂಡ, ಷಡ್ಡಕ, ಶಾಂತಾರಾಮ್‌ರವರು ಒಂದು ದಿವಸ ಬಂದು ತಾವು ಡಾಗ್ ಶೋ ಒಂದನ್ನು ಮಾಡುತ್ತಿದ್ದೇವೆ, ಸಿದ್ದರಾಮಯ್ಯನವರನ್ನು ಅಧ್ಯಕ್ಷತೆಗೆ ಕರೆಯಬೇಕು, ಮೈಸೂರಿನ ರಾಣಿ ಅವರು ಚೇರ‌್ಮನ್ ಎಂದರು. ಮೈಸೂರಿನ ರಾಣಿ ಎಂದರೆ  ಪ್ರಮೋದಾದೇವಿ  ಎಂದು  ನೆನಪು. ನನಗೆ ಸಿದ್ದರಾಮಯ್ಯನವರು ಪರಿಚಯವಿದ್ದುದು ಅವರಿಗೆ ಗೊತ್ತಿದ್ದರಿಂದ ಶಾಂತಾರಾಮರನ್ನು ಅವರ ಮನೆಗೆ ಕರೆದುಕೊಂಡು ಹೋದೆ. ಅಲ್ಲಿ ಚಿನ್ನಪ್ಪ ಎಂದು ಸಿದ್ದರಾಮಯ್ಯನವರ ಪಿ.ಎ ಇದ್ದರು. ಅವರು ‘ಸೀತಾರಾಮ್ ಬಂದಿದ್ದಾರೆ’ ಎಂದ ತಕ್ಷಣ ಒಳಗೆ ಕರೆಸಿಕೊಂಡರು. ನಾವು ಕೂತು ಮಾತನಾಡುತ್ತಾ ವಿಚಾರ ತಿಳಿಸಿದಾಗ, ಸಿದ್ದರಾಮಯ್ಯನವರು ‘ನಾಯಿ ಶೋಗೆ ಕರೆಯಲು ಬಂದಿದ್ದೀರೇನ್ರೀ, ನಾಯಿಗೂ ನಾನು ಮಂತ್ರೀನಾ’ ಎಂದು ತಮಾಷೆ ಮಾಡುತ್ತಾ ಹೇಳಿದರು. ನಂತರ ಡಾಗ್ ಶೋಗೆ ಹೋಗಿದ್ದರು ಎಂದು ನೆನಪು. ಅದಾಗಿ ಕೆಲವು ದಿನಗಳಾದ ಮೇಲೆ, ಯಾವ ಕಾರಣವೋ ನನಗೆ ಮರೆತು ಹೋಗಿದೆ. ಮಂತ್ರಿ ಮಂಡಲದಿಂದ ಎಲ್ಲರನ್ನೂ ತೆಗೆದಿದ್ದರು. ಆಗ ಅವರೂ ಕೂಡ ಮಂತ್ರಿಗಳಾಗಿರಲಿಲ್ಲ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಒಂದು ದಿವಸ ನಾನು ಮತ್ತು ನನ್ನ ಫ್ಯಾಕ್ಟರಿ ಗೆಳೆಯ ಶ್ರೀನಾಥ ಇಬ್ಬರೂ ಸ್ಕೂಟರ್‌ಮೇಲೆ ಶೇಷಾದ್ರಿಪುರದಲ್ಲಿ ಹೋಗುತ್ತಿದ್ದವರು, ಆನಂದರಾವ್ ಸರ್ಕಲ್ ಬಳಿ ಸಿಗ್ನಲ್‌ನಲ್ಲಿ ಗಾಡಿ ನಿಲ್ಲಿಸಿದ್ದೆವು. ಆಗ ಪಕ್ಕದಲ್ಲೇ ಯಾರೋ ವ್ಯಕ್ತಿ ಹಳೇ ಸ್ಕೂಟರ್‌ನಲ್ಲಿ ಗಡಗಡ ಬಂದು ನಿಂತರು, ಅದು ಸಿದ್ದರಾಮಯ್ಯನವರು! ಅವರು ಹೆಲ್ಮೆಟ್‌ನ ಪಟ್ಟಿ ಕಟ್ಟಿಕೊಳ್ಳುತ್ತಿದ್ದರು. ‘ನಮಸ್ಕಾರ’ ಎಂದವನು ‘ಇದೇನು ಕಾರ್‌ನಲ್ಲಿ ಬರಲಿಲ್ಲವೆ? ನೀವು ಮಿನಿಸ್ಟರು’ ಎಂದೆ. ‘ಯಾವಾಗಲೂ ಇಲ್ಲಪ್ಪ, ಸ್ಕೂಟರ್ ಮುಂಚೆಯೇ ತೆಗೆದುಕೊಂಡಿದ್ದು’ ಎಂದು ಅವರು ಹೇಳಿದರು. ಹೀಗೆ ಸರಳವಾಗಿದ್ದ ಮನುಷ್ಯ ಸಿದ್ದರಾಮಯ್ಯನವರು. ಅವರನ್ನು ನೋಡಿ ನನಗೆ ಮೆಚ್ಚುಗೆಯಾಗಿತ್ತು.

ನಾನಾಗ ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದೆ. ಜನತಾ ಪಕ್ಷದ ಪರವಾಗಿಯೇ ಹೆಚ್ಚು ಬರೆಯುತ್ತಿದ್ದೆವು. ಆಗ ಒಮ್ಮೆ ಲೋಕಸಭಾ ಚುನಾವಣೆ ಬಂದಾಗ ಅಲ್ಲಿ ಶ್ರೀಕಂಠದತ್ತ ಒಡೆಯರ್‌ರವರು ಮೈಸೂರಿನ ಕಾಂಗ್ರೆಸ್ ಕ್ಯಾಂಡಿಡೇಟ್  ಆಗುತ್ತಾರೆ ಎಂಬ ಸುದ್ದಿ ಬಂತು. ಆಗ ಲಂಕೇಶ್ ಅವರು ನನ್ನನ್ನು ಕರೆದು, ‘ನಿಮಗೆ ಸಿದ್ದರಾಮಯ್ಯನವರ ಪರಿಚಯ ಇದೆ ಅಂತ ಗೊತ್ತು. ಅವರಿಗೆ ಹೇಳಿ. ಶ್ರೀಕಂಠದತ್ತ ಒಡೆಯರ್ ಮಹಾರಾಜರ ಎದುರು ಸಿದ್ದರಾಮಯ್ಯನವರು ನಿಂತುಕೊಳ್ಳಲಿ, ಎಲ್ಲರ ಮನಸ್ಸು ಪರಿವರ್ತನೆ ಆಗುತ್ತದೆ. ಸಣ್ಣ ಹುಡುಗನ ಎದುರು ಶ್ರೀಕಂಠದತ್ತ ಒಡೆಯರ್‌ಸೋಲುತ್ತಾರೆ. ಅಸಹಾಯಕರನ್ನ, ಬಡವರನ್ನು ಸಿದ್ದರಾಮಯ್ಯ ಪ್ರತಿನಿಧಿಸಿದರೆ, ಒಡೆಯರ್ ಶ್ರೀಮಂತರನ್ನು ಪ್ರತಿನಿಧಿಸುತ್ತಾರೆ. ಅದೊಂದೇ ಪಾಯಿಂಟ್ ಸಾಕು’ ಎಂದು ಲಂಕೇಶರು ನನಗೆ ಹೇಳಿದ್ದರು. ನಾನಾಗ ‘ಕೇಳುತ್ತೇನೆ’ ಎಂದು ಹೇಳಿದೆ.

ಸಿದ್ದರಾಮಯ್ಯನವರು ಪಾರ್ಟಿ ಆಫೀಸಿನಲ್ಲಿ ಸಿಕ್ಕಿದಾಗ ಅವರಲ್ಲಿ ಲಂಕೇಶರ ಪ್ರಸ್ತಾಪವನ್ನು ಹೇಳಿದೆ. ಅವರಾಗ ‘ಬಿಲ್‌ಕುಲ್ ಆಗುವುದಿಲ್ಲ, ನಾನು ಯೋಚನೆ ಮಾಡುತ್ತೇನೆ’ ಎಂದು ಹೇಳಿದರು. ಬಹುಶಃ ಅವರು ಆಗ ಒಡೆಯರ್ ವಿರುದ್ಧ ಸ್ಪರ್ಧಿಸಿರಲಿಲ್ಲ. ಅಂದು ಸ್ಪರ್ಧಿಸಿದ್ದಿದ್ದರೆ ಏನಾಗುತ್ತಿತ್ತೋ? ನನಗೆ ಗೊತ್ತಿಲ್ಲ.

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಅದಾದ ನಂತರ ಅನೇಕ ಸಾರಿ ಅವರನ್ನು ಭೇಟಿಯಾಗಿದ್ದೇನೆ. ಅವರು ‘ಅಹಿಂದ’ ಪಕ್ಷ ಕಟ್ಟಿದ್ದರು. ನಂತರ ಅವರು ಉಪ ಮುಖ್ಯಮಂತ್ರಿಗಳಾಗಿದ್ದರು. ಆಗ ಚಿತ್ರರಂಗದ  ಅನೇಕರು ಅವರನ್ನು ನೋಡಲು ಬಯಸಿದರು. ಅವರನ್ನು ನೋಡಲು ಹೋದರೆ, ಅವರು ಮೈದಾನದಲ್ಲಿ ವಾಕ್ ಮಾಡುತ್ತಿದ್ದರು. ಆಗ ಅವರು ಇಡಿಯ ಚಿತ್ರರಂಗದ ಎಲ್ಲಾ ವ್ಯಕ್ತಿಗಳ ಬಗ್ಗೆ, ನನ್ನ ಬಗ್ಗೆ ಎಲ್ಲಾ ಮಾಹಿತಿ ಇಟ್ಟುಕೊಂಡು ಮಾತನಾಡಿದರು. ತಮಾಷೆಯಾಗಿ ಮಾತನಾಡುತ್ತಿದ್ದರು. ನಮ್ಮ ಜತೆ ಬಂದಿದ್ದ ಕೆ.ಎಸ್.ಎಲ್ ಸ್ವಾಮಿಯವವರಿಗೆ, ‘ಏನಪ್ಪಾ ನನ್ನ ಹೆಂಡತಿ ನಿನಗೆ ಸಂಬಂಧಿಕರು ಅಂತ ನೀನು ಇಷ್ಟೊಂದು ಕೇಳುತ್ತಿದ್ದೀಯಾ ನನ್ನ’ ಎಂದು ನಗುತ್ತಾ ಹೇಳುತ್ತಿದ್ದರು. ಯಾವಾಗಲೂ ಹಾಸ್ಯಪ್ರಜ್ಞೆ, ಎಲ್ಲದರ ಬಗ್ಗೆ ತಿಳಿದುಕೊಂಡಿರುವುದು ಸಿದ್ದರಾಮ್ಯನವರ ಗುಣ. ಆದರೆ ಅದು  ಅವರ ಗ್ರಾಮ್ಯ ಭಾಷೆ, ಅವರು ಹೃದಯದಿಂದ ಮಾತನಾಡುತ್ತಾರೆ ಎಂದು ನಮಗೆ ಅರಿವಾಗುತ್ತಿತ್ತು. ಅದನ್ನು ಅವರ ಬಳಿ ಎಂದೂ ಪ್ರಸ್ತಾಪಿಸಿರಲಿಲ್ಲ.

ನನ್ನ ಮಗಳ ಮದುವೆಗೆ ಕರೆದಾಗ ಅವರು ರಿಸೆಪ್ಷನ್‌ಗೆ ಬಂದು, ಒಂದು ಗಂಟೆ ಕಾಲ ಕೂತಿದ್ದರು. ಆ ವೇಳೆಗಾಗಲೇ ದೇವೇಗೌಡರು ಮತ್ತು ಅವರು ಬೇರೆ ಬೇರೆಯಾಗಿದ್ದರು. ಅವರು ಕ್ರಿಕೆಟ್ ಆಟ ಆಡುವಾಗ ಕಾಲು ಉಳುಕಿ, ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದರು. ಒಂದು ಗಂಟೆಗಿಂತಲೂ ಹೆಚ್ಚುಕಾಲ ಅಲ್ಲಿ ಕೂತು, ನಮ್ಮೊಂದಿಗೆ ಊಟ ಮಾಡಿ ನನ್ನ ಮಗಳನ್ನು ತಮಾಷೆ ಮಾಡಿ ಹೋಗಿದ್ದರು. ಆ ರೀತಿಯ ಆತ್ಮೀಯತೆಯನ್ನು ಉಳಿಸಿಕೊಂಡು ಬಂದಿರುವ ಸಿದ್ದರಾಮಯ್ಯನವರು ಈಗ ಮುಖ್ಯಮಂತ್ರಿಯಾಗಿದ್ದಾರೆ.

ನಮ್ಮ ನಡುವೆ ಮಧ್ಯದಲ್ಲಿ ಅನೇಕ ಭೇಟಿಗಳಾದವು. ನಮ್ಮ ಪರಿಚಯ ತುಂಬಾ ಆಪ್ತತೆಯಾಗಿ ಬೆಳೆಯಿತು. ೧೯೯೯ರಲ್ಲಿ ಅವರು ಜನತಾದಳ (ಎಸ್)ನಲ್ಲಿದ್ದರು. ನಾನು ರಾಮಕೃಷ್ಣ ಹೆಗಡೆಯವರ ಲೋಕಶಕ್ತಿ ಪಕ್ಷದಲ್ಲಿದ್ದೆ. ಗೌರಿಬಿದನೂರಿನಿಂದ ನಾನು ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದೆ. ಎದುರುಗಡೆ ಪಕ್ಷದಲ್ಲಿ ಅಂದರೆ ಜನತಾದಳ (ಎಸ್) ಪಕ್ಷದಿಂದ ಜ್ಯೋತಿ ರೆಡ್ಡಿಯವರು ಸ್ಪರ್ಧಿಸಲು ನಾಮಪತ್ರ ಹಾಕಿದ್ದರು. ಚುನಾವಣಾ ಪ್ರಚಾರದ ಉದ್ಘಾಟನೆಗಾಗಿ ಜ್ಯೋತಿ ರೆಡ್ಡಿಯವರ  ಕಡೆ ಅವತ್ತು ಸಿದ್ದರಾಮಯ್ಯನವರು ಬಂದಿದ್ದರು. ಅವರದು ಟ್ರ್ಯಾಕ್ಟರ್‌ಗುರುತು. ನನ್ನ ಚುನಾವಣಾ ಆಫೀಸಿನ ಎದುರುಗಡೆಯೇ ಅವರ ಆಫೀಸು ಇತ್ತು. ನಾನು ಅಲ್ಲಿ ಅವರನ್ನು ನೋಡಿ, ‘ಏನ್ ಸರ್ ಇಲ್ಲಿ ಬಂದಿದ್ದೀರಿ? ನಿಮ್ಮ ಚುನಾವಣಾ ಪ್ರಚಾರಕ್ಕಾ’ ಎಂದೆ. ಅದಕ್ಕೆ ಅವರು, ‘ಹೌದು, ನೀನೂ ನಿಂತಿದ್ದೀಯಾ?’ ಎಂದರು. ‘ಹೌದು, ನಾನೂ ನಿಂತಿದ್ದೇನೆ. ರಾಮಕೃಷ್ಣ ಹೆಗಡೆ ಅವರ ಪಕ್ಷದಿಂದ’ ಅಂದೆ. ನಾನು ಸುಮ್ಮನೆ ಮಾತನಾಡುತ್ತಾ, ‘ನಿಮ್ಮ ಕ್ಯಾಂಡಿಡೇಟ್ ಸೋಲುತ್ತಾರೆ’ ಎಂದೆ. ‘ನೀನೂ ಸೋಲುತ್ತೀಯ’ ಅಂದರು. ಚುನಾವಣೆಯಲ್ಲಿ ಹಾಗೆಯೇ ಆಯಿತು. ಜ್ಯೋತಿ ರೆಡ್ಡಿಯವರು ಮತ್ತು ನಾನು ಇಬ್ಬರೂ ಆ ಚುನಾವಣೆಯಲ್ಲಿ ಸೋತುಹೋದೆವು. ಸಿದ್ದರಾಮಯ್ಯನವರಿಗೆ ಒಮ್ಮೆ ಇದನ್ನು ಹೇಳಿದ್ದೆ.

ನ್ಯೂಸ್ ಫಸ್ಟ್ ಕನ್ನಡ ಚಾನಲ್‌ನವರು ‘ನಾನು ಮುಖ್ಯಮಂತ್ರಿ’ ಎನ್ನುವ ಸರಣಿಯನ್ನು ಆರಂಭಿಸಿದ್ದರು. ಅದು ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಸಂದರ್ಶನ ಮಾಡುವ ಸರಣಿ. ಸಂದರ್ಶನವೆಂದರೆ ಪೂರ್ತಿ ರಾಜಕೀಯ ಸಂದರ್ಶನವಲ್ಲ. ಅವರ ವೈಯಕ್ತಿಕ ಜೀವನ ಮತ್ತು ಅವರ ಹೃದಯಕ್ಕೆ ಸಂಬಂಧಪಟ್ಟ, ಅವರ ಹೃದಯ ಭಾವನೆಗಳಿಗೆ ಸಂಬಂಧಪಟ್ಟ ಸಂದರ್ಶನ. ನಾನು ಮೊಟ್ಟಮೊದಲನೆಯದಾಗಿ ಎಚ್.ಡಿ. ಕುಮಾರಸ್ವಾಮಿಯವರ ಸಂದರ್ಶನ ಮಾಡಿದೆ. ಎರಡನೆಯವರಾಗಿ ಸಿದ್ದರಾಮಯ್ಯನವರನ್ನು ಅವರು ಕರೆದುಕೊಂಡು ಬಂದರು. ಸಿದ್ದರಾಮಯ್ಯನವರು ಎಷ್ಟು ರಿಲ್ಯಾಕ್ಸ್ಡ್ ಆಗಿದ್ದರೆಂದರೆ, ನಾನು ಅವತ್ತು ನನಗೆ ಗೊತ್ತಿದ್ದೆಲ್ಲ ಆಪ್ತವಾಗಿ ಮಾತನಾಡುತ್ತಾ ಹೋದೆ. ಅವರೂ ನನ್ನ ವಿಚಾರವಾಗಿ ಗೊತ್ತಿದ್ದನ್ನೆಲ್ಲಾ ತುಂಬಾ ಹೊತ್ತು ಮಾತನಾಡಿದರು. ಯಾರಿಗೂ, ಎಲ್ಲೂ ಹೇಳದ ಮಾತುಗಳು ಎಂದು ನನ್ನ ಸಂದರ್ಶನದ ಬಗ್ಗೆ ನ್ಯೂಸ್ ಫಸ್ಟ್‌ನವರು ಆಗಾಗ ಯೂಟ್ಯೂಬ್‌ನಲ್ಲಿ ಹಾಕುತ್ತಾರೆ, ಸಿದ್ದರಾಮಯ್ಯನವರು ಆಪ್ತವಾಗಿ ತಮ್ಮ ಬಗ್ಗೆ, ಅವರ ಬಾಲ್ಯ, ಹಣ ಸಂಪಾದಿಸಿದ್ದು, ಕಷ್ಟಪಟ್ಟಿದ್ದು, ಚುನಾವಣೆಗೆ ನಿಂತಿದ್ದು, ಎಲ್ಲವನ್ನೂ ಹೇಳಿದರು. ಅವರ ಶೈಲಿ ಜನರಿಗೆ ಎಷ್ಟು ಇಷ್ಟವಾಯಿತೆಂದರೆ, ಅದು ಮತ್ತು ಆ ವೇಳೆಗೆ ಬಿಜೆಪಿ ನಡೆದುಕೊಂಡಿದ್ದ ರೀತಿ ಇದೆಲ್ಲದರ ವಿರುದ್ಧ ಎಷ್ಟು ಕೋಪ ಇತ್ತೆಂದರೆ, ಎರಡೂ ಸೇರಿ ಅವರ ಆ ಸಂದರ್ಶನ ಸುಮಾರು ಒಂದು ಕೋಟಿ ಅರವತ್ತೈದು ಲಕ್ಷ ಜನ ನೋಡಿದ್ದಾರೆಂದು ನ್ಯೂಸ್ ಫಸ್ಟ್‌ನ  ರವಿಕುಮಾರ್ ಹೇಳಿದ್ದರು. ಆಗ ಸಿದ್ದರಾಮಯ್ಯನವರೂ ಅಲ್ಲಿದ್ದರು. ಸಿದ್ದರಾಮಯ್ಯನವರು ನಂತರ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. 
ನನ್ನ ಹಳೆಯ ನೆನಪುಗಳನ್ನು ಹೇಳುತ್ತಾ ಶುಭಾಶಯಗಳನ್ನು ಹೇಳುವುದು ನನ್ನ ಉದ್ದೇಶ.

Follow Us:
Download App:
  • android
  • ios