Asianet Suvarna News Asianet Suvarna News

ದುಬೈಯ ಬೀದಿಗಳಲ್ಲಿ ಕಂಡದ್ದನ್ನು ಕೊಂಡು ತಿನ್ನುತ್ತಾ...?

ವಿದೇಶ ಪ್ರವಾಸ ಮಾಡುವಾಗಲೋ, ಬೇರೆ ಊರುಗಳಿಗೆ ಹೋಗುವಾಗಲೇ ಮನೆಯಿಂದಲೇ ತಿಂಡಿ ಮಾಡಿ ಕಟ್ಟಿಕೊಂಡು ಹೋಗುವವರನ್ನು ನೋಡಿದ್ದೇವೆ. ಈಗಂತೂ ಪ್ಯಾಕೆಟ್‌ ಆಹಾರಗಳು ಬಂದ ನಂತರ, ತಿಂಗಳುಗಟ್ಟಲೆ ಕೆಡದೇ ಇರುವ ಆಹಾರಗಳನ್ನು ಅನೇಕರು ಜೊತೆಗೆ ಒಯ್ಯುತ್ತಾರೆ. ಹೋಟೆಲುಗಳಿಗೆ ಹೋಗುವುದಿಲ್ಲ, ಅಲ್ಲಿಯ ಆಹಾರ ಸೇವಿಸುವುದಿಲ್ಲ. ತಮ್ಮ ಜೊತೆಗೇ ಒಯ್ದ ಆಹಾರವನ್ನೇ ತಿನ್ನುತ್ತಾರೆ.

Everything you need to know about foods Dubai Street
Author
Bangalore, First Published May 19, 2019, 2:45 PM IST

ಜೋಗಿ

ಪ್ರವಾಸ ಅಂದರೆ ಅದಲ್ಲವೇ ಅಲ್ಲ. ಪ್ರತಿಯೊಂದು ಪ್ರದೇಶಕ್ಕೂ ಅಲ್ಲಿಗೇ ವಿಶಿಷ್ಟವಾದ ಆಹಾರಪದ್ಧತಿ ಇರುತ್ತದೆ. ಇವತ್ತು ಜಗತ್ತಿನ ತುಂಬ ಪ್ರಸಿದ್ಧವಾಗಿರುವುದು ಓರಿಯೆಂಟಲ್‌, ಕಾಂಟಿನೆಂಟಲ್‌, ಇಂಡಿಯನ್‌ ಮತ್ತು ಇಟಾಲಿಯನ್‌ ಆಹಾರಪದ್ಧತಿ. ಯಾವ ದೇಶಕ್ಕೇ ಹೋದರೂ ಅಲ್ಲಿರುವ ಹೋಟೆಲುಗಳಲ್ಲಿ ಇವು ಸಿಕ್ಕೇ ಸಿಗುತ್ತವೆ. ಅನಪೇಕ್ಷಿತ ಅತಿಥಿಯಂತೆ ಎದುರಾಗುತ್ತವೆ. ಹೀಗಾಗಿ ನಿಮಗೆ ಆಯಾ ಊರಿನ ವಿಶಿಷ್ಟವಾದ ತಿಂಡಿಗಳು ಬೇಕೆಂದರೆ ನೀವು ಅಲ್ಲಿಯ ಬೀದಿಗಳಲ್ಲಿ ಸುತ್ತಾಡಬೇಕು. ಫುಡ್‌ ಸ್ಟ್ರೀಟುಗಳಿಗೆ ನುಗ್ಗಬೇಕು. ಅಲ್ಲಿಯ ಸಾಮಾನ್ಯ ಪ್ರಜೆ, ನೌಕರ, ಕಾರ್ಮಿಕ ಏನು ತಿನ್ನುತ್ತಾನೆ ಅನ್ನುವುದನ್ನು ಗಮನಿಸಬೇಕು.

ಅಮಾವಾಸ್ಯೆಯಂದು ಈ ಕೋಟೆಯಿಂದ ಕೇಳಿ ಬರುತ್ತೆ ವಿಚಿತ್ರ ಕೂಗು!

ನಮ್ಮ ದುಬೈ ಪ್ರವಾಸದಲ್ಲಿ ನಮ್ಮ ಮಾರ್ಗದರ್ಶಕಿ ಕ್ಲಾರಾ ನಮ್ಮನ್ನು ಟ್ರಟೋರಿಯಾ ಟೋಸ್ಕಾನಾ ಎಂಬ ಹೋಟೆಲಿಗೆ ಕರೆದೊಯ್ದರು. ಅದು ವಿಶ್ವಾದ್ಯಂತ ಇರುವ ಹೋಟೆಲ್ಲು. ಮಿಲಾನ್‌, ಬುಡಾಪೆಸ್ಟ್‌, ಪ್ಯಾರಿಸ್‌ಗಳಲ್ಲೂ ಅದರ ಶಾಖೆಗಳಿವೆ. ಹೇಳಿಕೇಳಿ ಅದು ಇಟಾಲಿಯನ್‌ ರೆಸ್ಟುರಾಂಟ್‌. ಅಲ್ಲಿಂದ ನಮಗೆ ಅಲ್‌ ಅರಬ್‌ ಕಟ್ಟಡವೂ ಕಾಣಿಸುತ್ತದೆ. ಪಕ್ಕದಲ್ಲೇ ಸಮುದ್ರ ಒಳನುಗ್ಗಿದ ಸಂಭ್ರಮವಿದೆ. ಜುಮೈರಾ ಬೀಚಿನ ಅಂಚಿನಲ್ಲಿರುವ ಹೋಟೆಲ್‌ ಅದು. ಸಂಜೆಯ ಹೊತ್ತು ತಣ್ಣಗಿರುವ ಟ್ರಟೋರಿಯಾಕ್ಕೆ ದುಬೈ ಭೇಟಿ ನೀಡಿದ ಗಣ್ಯರೆಲ್ಲ ಬಂದು ಹೋಗುತ್ತಾರೆ. ಆ ಹೋಟೆಲಿನಲ್ಲಿ ಊಟ ಮಾಡಿದೆವು ಎಂದು ಹೇಳುವುದೇ ಒಂದು ಹೆಮ್ಮೆ.

Everything you need to know about foods Dubai Street

ಆ ಹೋಟೆಲಿನ ಮೆನು ಕೈಗೆತ್ತಿಕೊಂಡರೆ ಗಾಬರಿಯಾಗುತ್ತದೆ. ಉದಾಹರಣೆಗೆ ಮೊದಲು ಕಾಣಿಸುವುದೇ ಸ್ಟೂಜಿಕಿನಿ ಎಂಬ ವಿಭಾಗ. ಅದೇನೋ ನಮಗೆ ಗೊತ್ತಿಲ್ಲದ್ದು ಅಂತ ಅಶ್ಚರ್ಯ ಪಡಬೇಕಾಗಿಲ್ಲ. ನಮ್ಮಲ್ಲಿ ಅಪಿಟೈಸರ್‌ ಎನ್ನುವುದನ್ನು ಇಟೆಲಿಯಲ್ಲಿ ಸ್ಟೂಜಿಕಿನಿ ಅನ್ನುತ್ತಾರಂತೆ. ಹೀಗೆ ಎಲ್ಲವನ್ನೂ ನಮಗೆ ಅರ್ಥವಾಗದ ಭಾಷೆಯಲ್ಲಿ ಬರೆದಿರುತ್ತಾರೆ. ಇಟಾಲಿಯನ್‌ ಆದ್ದರಿಂದ ಪಾಸ್ತಾ ಮತ್ತು ಪಿಜ್ಜಾಗಳದ್ದೇ ದರ್ಬಾರು.

ಪ್ಯಾಲೇಸ್‌ ಡೌನ್‌ಟೌನ್‌ ಅಂಥದ್ದೇ ಮತ್ತೊಂದು ಹೋಟೆಲ್‌. ದಿ ಪಾಮ್‌ ಅಟ್ಲಾಂಟಿಸ್‌ ಒಳಗಿರುವ ಕೆಲೆಡೋಸ್ಕೋಪ್‌ ಮುಂತಾದ ಹೋಟೆಲುಗಳಲ್ಲೂ ಕಾಂಟಿನೆಂಟಲ್‌, ಓರಿಯೆಂಟಲ್‌ ಮತ್ತು ಅರಬಸ್ತಾನದ ಆಹಾರಗಳು ಸಿಗುತ್ತವೆ.

ಬೇಸಿಗೆ ಮುಗಿಯೋ ಮುನ್ನ ದೇಹ, ಮನವನ್ನು ಮುದಗೊಳಿಸುವ ಈ ತಾಣಗಳಿಗೆ ಭೇಟಿ ನೀಡಿ!

ದುಬೈಯಲ್ಲಿ ಬಹುಜನಪ್ರಿಯ ಖಾದ್ಯವೆಂದರೆ ಹಮ್ಮೂಸ್‌. ಅದರ ಜೊತೆ ರೊಟ್ಟಿ, ಬ್ರೆಡ್ಡು, ಒಣರೊಟ್ಟಿಯಂಥದ್ದೆಲ್ಲ ಸಿಗುತ್ತವೆ. ರಸ್ತೆ ಬದಿಯಲ್ಲಿ ಸಿಗುವ ಹಮ್ಮೂಸ್‌ ರುಚಿಯೇ ಬೇರೆ. ಅದರ ಜೊತೆ ಫಲಾಫೆಲ್‌ ಕೂಡ ಸಿಗುತ್ತದೆ.

 

ಬಹುತೇಕ ದೇಶಗಳ ಹಾಗೆ ದುಬೈ ಕೂಡ ಸಸ್ಯಾಹಾರಿಗಳಿಗೆ ಶತ್ರು, ಮಾಂಸಾಹಾರಿಗಳ ಮಿತ್ರ. ನಾನ್‌ವೆಜ್‌ ಪ್ರಿಯರಿಗೆ ಅಲ್ಲಿ ತೆರದ ಬಾಗಿಲು. ನೂರೆಂಟು ಹೋಟೆಲುಗಳೂ ರಸ್ತೆ ಬದಿಯ ಅಂಗಡಿಗಳೂ ಟೀ ಪಾಯಿಂಟುಗಳೂ ಬೇಕು ಬೇಕಾದ್ದನ್ನು ಕೊಡಲು ಕಾಯುತ್ತಿರುತ್ತವೆ. ಯಾವುದಾದರೂ ಮಾಲ್‌ ಹೊಕ್ಕರೆ ಸಾಕು, ಅಲ್ಲೂ ತಿಂಡಿಯ ಮೇಳವೇ ಇರುತ್ತದೆ. ಸಸ್ಯಾಹಾರಿಗಳಿಗೆ ಅಷ್ಟೇನೂ ವೈವಿಧ್ಯ ಸಿಗದು. ಅವರೇನಿದ್ದರೂ ಶರವಣ ಭವನದಂಥ ಹೋಟೆಲುಗಳಲ್ಲಿ ಇಡ್ವಿವಡೆ ಚಪಾತಿ ತಿಂದು ತೃಪ್ತಿಪಟ್ಟುಕೊಳ್ಳಬೇಕು.

***

ಪ್ರವಾಸ ಎಂದರೆ ನಡಿಗೆ, ಅಡುಗೆ ಮತ್ತು ತೊಡುಗೆ. ಆಯಾ ದೇಶಕ್ಕೆ ತಕ್ಕ ತೊಡುಗೆ ತೊಟ್ಟುಕೊಂಡು ನಡೆದಾಡುತ್ತಾ ಅಲ್ಲಿಯ ಆಹಾರ ಸೇವಿಸುತ್ತಾ ಇದ್ದುಬಿಟ್ಟರೆ ಆ ಮಣ್ಣಿನ ಒಂದಂಶವಾದರೂ ನಮಗೆ ದಕ್ಕುತ್ತದೆ. ಅಲ್ಲಿಯೂ ಇಲ್ಲಿ ತಿನ್ನುವುದನ್ನೇ ತಿಂದು, ಏರ್‌ ಕಂಡೀಶನ್‌ ವಾಹನಗಳಲ್ಲಿ ಓಡಾಡುತ್ತಾ, ಹವಾನಿಯಂತ್ರಿತ ಕೋಣೆಗಳಲ್ಲಿ ನಿದ್ದೆ ಹೋಗುತ್ತಾ ಇದ್ದುಬಿಟ್ಟರೆ ಅಲ್ಲಿ ಹವಾಮಾನ ನಮಗೆ ದಕ್ಕುವುದಿಲ್ಲ.

ನಿಜವಾದ ದುಬೈ ನಮಗೆ ಪರಿಚಯವಾಗುವ ಕ್ಷಣವೆಂದರೆ ಸ್ಯಾಂಡ್‌ ಸಫಾರಿಯಲ್ಲಿ ಮಾತ್ರ. ಮಿಕ್ಕಂತೆ ಪ್ರವಾಸಿಗರು ನೋಡುವುದು ಹೊರಗಿನಿಂದ ಬಂದವರ ಅನುಕೂಲಕ್ಕೆಂದು ನಿರ್ಮಾಣವಾದ ದುಬೈಯನ್ನು ಮಾತ್ರ. ಅದೇ ಕಣ್ಣು, ಅದೇ ಮಣ್ಣು!

Follow Us:
Download App:
  • android
  • ios