ಪ್ರವಾಸಕ್ಕೆ ಹೊರಟಿದ್ದೀರಾ? ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಪ್ರವಾಸ ಹೋಗೋ ಕ್ರೇಜ್ ಇಂದಿನ ಯುವ ಜನರಲ್ಲಿ ಹೆಚ್ಚಾಗುತ್ತಿದೆ. ಕೈಯಲ್ಲೊಂದು ಬ್ಯಾಗ್ ಹಿಡಿದು, ಹುಟ್ಟೂರು, ಹೆತ್ತೂರನ್ನು ಬಿಟ್ಟು ಹೋಗುವುದೆಂದರೆ ಅಷ್ಟು ಸುಲಭವಲ್ಲ. ಹೀಗೆ ಹೋಗುವಾಗ ನಿಮ್ಮ ಕೈಯಲ್ಲಿ ಏನೇನು ಇರಬೇಕು? ಇಲ್ಲಿದೆ ಟಿಪ್ಸ್...
'ಕೋಶ ಓದಿ ನೋಡು, ದೇಶ ಸುತ್ತಿ ನೋಡು...' ಎನ್ನುವ ಗಾದೆ ಇದೆ. ದೇಶ ಸುತ್ತುವುದರಿಂದ ಹೆಚ್ಚಾಗೋ ಜ್ಞಾನ ಅಷ್ಟಿಷ್ಟಲ್ಲ. ಈಗೀಗಂತೂ ಪ್ರವಾಸದ ಬಗ್ಗೆ ಯುವಜನರಲ್ಲಿ ಕ್ರೇಜ್ ಹೆಚ್ಚಾಗಿದ್ದು, ಟೈಂ ಸಿಕ್ಕಾಗಲೆಲ್ಲ ದೇಶ ವಿದೇಶಗಳನ್ನು ಸುತ್ತುತ್ತಲೇ ಇರುತ್ತಾರೆ.
ಇಂಥ ಪ್ರವಾಸ ಮಾಡುವಾಗ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾದದ್ದು ತುಂಬಾ ಮುಖ್ಯ. ಮೊದಲ ಬಾರಿ ಟ್ರಾವೆಲ್ ಮಾಡುವವರಾಗಿದ್ದರೆ ಈ ಟಿಪ್ಸ್‌ಗಳನ್ನು ನೆನಪಿನಲ್ಲಿಟ್ಟುಕೊಂಡರೆ ಒಳಿತು..
- ಮಾಹಿತಿ ಇರಲಿ: ನೀವು ಹೋಗುವ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಇಱಲಿ. ಅಲ್ಲಿನ ಜಾಗ ಹೇಗೆ? ಎಲ್ಲಿ ಏನು ನೋಡಬೇಕು? ಎಲ್ಲಿ ಉಳಿದುಕೊಳ್ಳಬೇಕು? ಇವೆಲ್ಲವನ್ನೂ ಮೊದಲೇ ನಿರ್ಧರಿಸಿದರೆ, ಸಮಯದ ಉಳಿತಾಯವಾಗುತ್ತದೆ. ಪ್ರವಾಸವನ್ನು ಎಂಜಾಯ್ ಮಾಡಬಹುದು.
- ಟ್ರಾವೆಲ್ ಇನ್ಶೂರೆನ್ಸ್ ತೆಗೆದುಕೊಳ್ಳಿ: ಬ್ಯಾಗ್ ಮಿಸ್ ಆದಾಗ ಅಥವಾ ಫ್ಲೈಟ್ ಮಿಸ್ ಆದಾಗ ದುಡ್ಡು ಉಳಿಸಲು ಇದು ನೆರವಾಗುತ್ತದೆ.
- ನಿಮ್ಮ ಬಳಿ ಇರುವ ಎಲ್ಲಾ ಎಲೆಕ್ಟ್ರಾನಿಕ್ ಸಾಮಾನುಗಳನ್ನು ತೆಗೆದುಕೊಂಡು ಹೋಗಬೇಡಿ. ಎಷ್ಟು ಅಗತ್ಯವೋ ಅಷ್ಟು ಮಾತ್ರ ಇರಲಿ. ಲ್ಯಾಪ್‌ಟಾಪ್ ಅಂತೂಬೇಡವೇ ಬೇಡ. ಇದರಿಂದ ಹೊರೆ ಜಾಸ್ತಿ ಅಷ್ಟೇ.
- ಹೊಸ ಜಾಗಕ್ಕೆ ಬಂದಾಗ ಗೂಗಲ್ ಮ್ಯಾಪ್ ನೋಡುತ್ತಾ ನಿಮ್ಮ ಸಮಯ ಕಳೆಯಬೇಡಿ. ಬದಲಾಗಿ ವಾಯ್ಸ್ ಗೈಡ್ ಆಯ್ಕೆ ಮಾಡಿಕೊಂಡು, ತಲುಪಬೇಕಾದ ಜಾಗ ತಲುಪಿ.
- ನೀವು ಭೇಟಿ ನೀಡಿದ ಪ್ರತಿ ಸ್ಥಳ ವಿವರವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡಬೇಡಿ. ಇದರಿಂದ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಟ್ರಾವೆಲ್ ಮಾಡುವ ಸಮಯದಲ್ಲಿ ಟಿಂಡರ್ ಮೊದಲಾದ ಡೇಟಿಂಗ್ ಆ್ಯಪ್‌ಗಳನ್ನು ಬಳಸಲೇ ಬೇಡಿ.
- ಟ್ರಾವೆಲ್ ಮಾಡುವಾಗ ಸೇಫ್ಟಿ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಸುರಕ್ಷತೆಯ ಬಗ್ಗೆ ಇತರರಿಗೆ ಅರಿವು ಇರುತ್ತದೆ. BeSafe, Drunk Mode, Uber ಮೊದಲಾದ ಆ್ಯಪ್ ಇದ್ದರೆ ಉತ್ತಮ.
"
- ಹಣ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇವೆಲ್ಲವನ್ನೂ ಸುರಕ್ಷಿತವಾದ ಜಾಗದಲ್ಲಿಡಿ. ಪಾಕೆಟ್‌ನಲ್ಲಿ ಹಾಗೆ ಇಟ್ಟುಕೊಂಡು ಸುತ್ತಾಡಿದರೆ ಕಳ್ಳತನವಾಗುವ ಸಾಧ್ಯತೆ ಇದೆ.
- ತೆಗೆದುಕೊಂಡು ಹೋಗುವ ಡ್ರೆಸ್ ಆ ತಾಣಕ್ಕೆ ಹೊಂದುವಂತಿರಲಿ. ಹೆಚ್ಚು ಬಟ್ಟೆಯನ್ನು ಇಟ್ಟುಕೊಳ್ಳಬೇಡಿ. - ಪ್ರವಾಸಿ ತಾಣಗಳಿಗೆ ಹೋದಾಗ ಅಲ್ಲಿ ನೀವು ಮೋಸ ಹೋಗುವ ಸಾಧ್ಯತೆ ಇದೆ. ಆದುದರಿಂದ ದಯವಿಟ್ಟು ಸಾಧ್ಯವಾದಷ್ಟು ಇತರರ ಮಾತಿನ ಮೋಡಿಗೆ ಬಲಿಯಾಗೋದನ್ನು ತಪ್ಪಿಸಿ.
- ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸೋದನ್ನು ಮರೆಯಬೇಡಿ. ಸಿಕ್ಕ ಸಿಕ್ಕ ಆಹಾರ ತಿನ್ನಬೇಡಿ. ಅಲ್ಲದೆ ನಿಮ್ಮ ಬಳಿ ಫಸ್ಟ್ ಏಡ್ ಕಿಟ್ ಇಟ್ಟುಕೊಳ್ಳುವುದನ್ನು ಮರೆಯಬೇಡಿ.