ಇಂದಿನ ತಲೆಮಾರು ಫಿಟ್ನೆಸ್ ಹಿಂದೆ ಬಿದ್ದಿದೆ. ಅದು ಒಳ್ಳೆಯದೇ. ಆದರೆ, ಫಿಟ್ನೆಸ್‌ ಎಂಬ ಡ್ರಗ್ ತಲೆಗೆ ಹತ್ತಿದ ಮೇಲೆ ನಿಧಾನವಾಗಿ ಸಿಕ್ಸ್ ಪ್ಯಾಕ್, ತೂಕ ಇಳಿಕೆ, ಮಸಲ್ ಬಿಲ್ಡಿಂಗ್ ಎಂಬ ಹತ್ತು ಹಲವು ಆಮಿಷಗಳು ಸೆಳೆಯಲಾರಂಭಿಸುತ್ತವೆ. ಅವೇನು ಕೆಟ್ಟವಲ್ಲ. ಆದರೆ, ಅದು ತಕ್ಷಣವೇ ಆಗಬೇಕು ಎಂಬ ಹಟದ ಬೆನ್ನು ಹತ್ತಿತೆಂದರೆ ಮಾತ್ರ ಡಯಟ್ ಸಪ್ಲಿಮೆಂಟ್ಸ್ ಕೈಬೀಸಿ ಕರೆಯಲಾರಂಭಿಸುತ್ತವೆ. ಆದರೆ, ಈ ಸಪ್ಲಿಮೆಂಟ್ಸ್ ಎಂಬ ಅಡ್ಡದಾರಿ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳನ್ನು ಬೀರಬಲ್ಲದು. ಅವುಗಳಿಂದ ದೂರ ಉಳಿಯುವ ಮೆಚ್ಯುರಿಟಿಯನ್ನು ಯುವಜನತೆ ಬೆಳೆಸಿಕೊಳ್ಳಬೇಕಿದೆ. 

ಹೌದು, ತೂಕ ಇಳಿಸಲು, 6 ಪ್ಯಾಕ್ ಬೆಳೆಸಲು, ಎನರ್ಜಿ ಇತ್ಯಾದಿಗಾಗಿ ತೆಗೆದುಕೊಳ್ಳುವ ಡಯಟ್ ಸಪ್ಲಿಮೆಂಟ್ಸ್, ಮಕ್ಕಳು ಹಾಗೂ ಯುವಕರಿಗೆ ವಿಟಮಿನ್ಸ್ ಸಪ್ಲಿಮೆಂಟ್ಸ್‌ನ ಮೂರು ಪಟ್ಟು ಹೆಚ್ಚು ಅನಾರೋಗ್ಯಕಾರಿ. ಅವು 
ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ. 

'ಅಮೆರಿಕದ ಫುಡ್ ಆ್ಯಂಡ್ ಅಡ್ಮಿನಿಸ್ಟ್ರೇಶನ್ (ಎಫ್‌ಡಿಎ) ವ್ಹೈಟ್ ಲಾಸ್, ಮಸಲ್ ಬಿಲ್ಡಿಂಗ್, ಕ್ರೀಡಾ ಪ್ರದರ್ಶನ, ಲೈಂಗಿಕ ಉತ್ಸಾಹ ಹಾಗೂ ಎನರ್ಜಿಗಾಗಿ ಮಾರುವ ಬಗ್ಗೆಯೂ ಬಗ್ಗೆ ಹಲವು ಬಾರಿ ಎಚ್ಚರಿಸಿದೆ. ಆದರೆ, ಈ ಉತ್ಪನ್ನಗಳು ತಮ್ಮ ಮಾರ್ಕೆಟಿಂಗ್ ತಂತ್ರಗಾರಿಕೆಯಿಂದಲೇ ಹೆಚ್ಚು ಜನರನ್ನು ಆಕರ್ಷಿಸುತ್ತವೆ,' ಎನ್ನುತ್ತಾರೆ ಹಾರ್ವರ್ಡ್‌ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಫ್ಲೋರಾ ಓರ್. 

ಸಾವಯವ ಬ್ರೇಕ್‌ಫಾಸ್ಟ್ ಮಾಡೋದು ಹೇಗೆ?

ಅಡೋಲೆಸೆಂಟ್ ಹೆಲ್ತ್‌ ಜರ್ನಲ್‌ನಲ್ಲಿ ಈ ಅಧ್ಯಯನ ವರದಿಯಾಗಿದ್ದು, ಡಯಟರಿ ಸಪ್ಲಿಮೆಂಟರಿ ತೆಗೆದುಕೊಳ್ಳುವವರಲ್ಲಿ ಸಾವು, ಡಿಸೆಬಿಲಿಟಿ ಹಾಗೂ  ಹಾಸ್ಪಿಟಲೇಜೇಶನ್ ರಿಸ್ಕ್ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಅಧ್ಯಯನಕ್ಕೊಳಗಾದ 0-27 ವಯೋಮಾನದವರಲ್ಲಿ ಸಪ್ಲಿಮೆಂಟ್‌ನಿಂದ ಸಮಸ್ಯೆಗೊಳಗಾದವರಲ್ಲಿ ಶೇ.40ರಷ್ಟು ಮಂದಿ ಸಾವು ಹಾಗೂ ಡಿಸೆಬಿಲಿಟಿಗೆ ಒಳಗಾಗಿದ್ದಾರೆ. ವಿಟಮಿನ್ ತೆಗೆದುಕೊಳ್ಳುತ್ತಿದ್ದವರಿಗೆ ಹೋಲಿಸಿದರೆ ಅದಕ್ಕಿಂತ ಮೂರು ಪಟ್ಟು ಹೆಚ್ಚು ಜನರು ತೂಕ ಇಳಿಕೆ, ಮಸಲ್ ಬಿಲ್ಡಿಂಗ್ ಹಾಗೂ ಎನರ್ಜಿ ಡಯಟ್ ಸಪ್ಲಿಮೆಂಟ್ಸ್ ತೆಗೆದುಕೊಂಡು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇನ್ನು ಸೆಕ್ಷುಯಲ್ ಫಂಕ್ಷನ್ ಹಾಗೂ ಕೋಲನ್ ಕ್ಲೆನ್ಸ್‌ಗಾಗಿ ಸಪ್ಲಿಮೆಂಟ್ಸ್ ತೆಗೆದುಕೊಂಡವರಲ್ಲಿ ವಿಟಮಿನ್ ಸಪ್ಲಿಮೆಂಟ್ಸ್‌ ತೆಗೆದುಕೊಂಡವರಿಗಿಂತ ಎರಡು ಪಟ್ಟು ಹೆಚ್ಚು ಸಮಸ್ಯೆ ಕಂಡುಬಂದಿದೆ. 

ಇಂಥ ಡಯಟರಿ ಸಪ್ಲಿಮೆಂಟ್‌ಗಳನ್ನು ಉತ್ತಮ ವೈದ್ಯರು ಖಂಡಿತಾ ಶಿಫಾರಸು ಮಾಡುವುದಿಲ್ಲ ಎನ್ನುತ್ತಾರೆ ಹಾರ್ವರ್ಡ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಬ್ರಿನ್ ಆಸ್ಟಿನ್.

ಹೌದು, ಮಾದಕ ದ್ರವ್ಯಗಳಂತೆ ಡಯಟರಿ ಸಪ್ಲಿಮೆಂಟ್ಸ್ ಕೂಡಾ ಬಹುತೇಕ ಬಾರಿ ಬೇಕಾದವರೇ ಯಾವುದೇ ಪ್ರಿಸ್ಕ್ರಿಪ್ಶನ್ ಇಲ್ಲದೆ ಕೊಂಡು ಸೇವಿಸುತ್ತಾರೆ. ಬಹಳಷ್ಟು ಜನ ಈ ವಿಷಯವನ್ನು ಗುಟ್ಟಾಗಿಡುತ್ತಾರೆ ಕೂಡಾ. ಡ್ರಗ್ಸ್‌ನಷ್ಟೇ ರಿಸ್ಕ್ ಹಾಗೂ ಸೈಡ್ ಎಫೆಕ್ಟ್ಸ್ ಈ ಡಯಟರಿ ಸಪ್ಲಿಮೆಂಟ್ಸ್‌ಗಳು ಹೊಂದಿವೆ. 

ಭಾರತದ ಸಮೋಸಾ ಮುಂದೆ ಮಂಡಿಯೂರಿದ ಬರ್ಗರ್!

ಕಲಬೆರಕೆ ಸಾಮಾನ್ಯ!
ಸಪ್ಲಿಮೆಂಟರಿ ಪೌಡರ್ ಆಗಿ ಬರುವ ವಿಟಮಿನ್ಸ್, ಹರ್ಬ್ಸ್, ಪ್ರೋಟೀನ್ ಪೌಡರ್ಸ್ ಹಾಗೂ ಬಾಟನಿಕಲ್ಸ್ ಹೆಸರು ಕೇಳಿದರೆ ಅವೇನು ವಿಷವೆಂದು ಯಾರೂ ಬಗೆಯಲಾರರು. ಎಲ್ಲವೂ ಆರೋಗ್ಯಕ್ಕೆ ಲಾಭಕಾರಿ ಎಂದೇ ಎನಿಸುತ್ತದೆ. ಆದರೆ, ಈ ಡಯಟರಿ ಸಪ್ಲಿಮೆಂಟರಿಗಳಲ್ಲಿ ಬಹುತೇಕವನ್ನು ಕಲಬೆರಕೆ ಮಾಡಲಾಗಿರುತ್ತದೆ. ಔಷಧ, ನಿಷೇಧಿತ ವಸ್ತುಗಳು, ಹೆವೀ ಮೆಟಲ್ಸ್, ಕೀಟನಾಶಕಗಳು ಹಾಗೂ ಇತರೆ ಅಪಾಯಕಾರಿ ಕೆಮಿಕಲ್‌ಗಳನ್ನು ಇವುಗಳಿಗೆ ಸೇರಿಸಲಾಗಿರುತ್ತದೆ. 

ತೂಕ ಇಳಿಕೆ ಹಾಗೂ ಮಸಲ್ಸ್ ಬಿಲ್ಡಿಂಗ್ ಸಪ್ಲಿಮೆಂಟ್ಸ್‌ನಿಂದ ಸ್ಟ್ರೋಕ್, ಕ್ಯಾನ್ಸರ್, ಲಿವರ್ ಡ್ಯಾಮೇಜ್ ಹಾಗೂ ಸಾವು ಸಂಭವಿಸಬಹುದು ಎಂಬುದನ್ನು ಇತರೇ ಅಧ್ಯಯನಗಳೂ ಇದುವರೆಗೂ ಹಲವು ಬಾರಿ ಹೇಳಿವೆ. ಯುವಜನತೆ ಈ ಡಯಟ್ ಸಪ್ಲಿಮೆಂಟ್‌ಗಳಿಂದ ದೂರ ಉಳಿಯುವ ಕುರಿತು ಜಾಗೃತಿ ಮೂಡಿಸುವುದು ಸಧ್ಯದ ಅಗತ್ಯ. ಅದರಲ್ಲೂ ಕ್ಯಾನ್ಸರ್ ಚಿಕಿತ್ಸೆ ಪಡೆಯುವವರು ಈ ಪೌಡರ್‌ಗಳಿಂದ ಸಂಪೂರ್ಣ ದೂರ ಉಳಿಯಬೇಕು ಎಂದು ಎಫ್‌ಡಿಎ ಎಚ್ಚರಿಸಿದೆ.