Asianet Suvarna News Asianet Suvarna News

ಮಗುವಿಗೆ ಹೆಸರಿಟ್ಟ ಕೋರ್ಟ್ : ವಿಚ್ಛೇದನ ಘೋಷಿಸಿದ ಮೆಲೋನಿ, ಡಿವೋರ್ಸ್ ಪಡೆದ ಶಿಖರ್ ಧವನ್

2023ರ ಆಕ್ಟೋಬರ್ ತಿಂಗಳಲ್ಲಿ ಜೀವನಶೈಲಿ,  ಸೆಲೆಬ್ರಿಟಿಗಳ ವಿಚ್ಛೇದನ, ಸಂಸಾರಿಕಾ ಕಲಹ, ಆರೋಗ್ಯ,  ಕೋರ್ಟ್ ತೀರ್ಪು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸುದ್ದಿಯಾಗಿ ಸಂಚಲನ ಸೃಷ್ಟಿಸಿದ ಕೆಲ ಮಹತ್ವದ ಸುದ್ದಿಗಳು ಇಲ್ಲಿವೆ. ಇಟಲಿ ಅಧ್ಯಕ್ಷೆ ಮೆಲೋನಿ ಪತಿಯಿಂದ ದೂರಾಗಿದ್ದರಿಂದ ಹಿಡಿದು  ಕ್ರಿಕೆಟಿಗ ಶಿಖರ್ ಧವನ್ ವಿಚ್ಛೇದನವರೆಗೆ ಕೆಲ ಮಹತ್ವದ ಸುದ್ದಿಗಳ ಹಿನ್ನೋಟ.

Court named the child Italy president giorgia Meloni announced divorce, cricketer Shikhar Dhawan got divorce News which created buzz in october 2023 akb
Author
First Published Dec 14, 2023, 7:49 PM IST

2023ರ ಆಕ್ಟೋಬರ್ ತಿಂಗಳಲ್ಲಿ ಜೀವನಶೈಲಿ,  ಸೆಲೆಬ್ರಿಟಿಗಳ ವಿಚ್ಛೇದನ, ಸಂಸಾರಿಕಾ ಕಲಹ, ಆರೋಗ್ಯ,  ಕೋರ್ಟ್ ತೀರ್ಪು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸುದ್ದಿಯಾಗಿ ಸಂಚಲನ ಸೃಷ್ಟಿಸಿದ ಕೆಲ ಮಹತ್ವದ ಸುದ್ದಿಗಳು ಇಲ್ಲಿವೆ. ಇಟಲಿ ಅಧ್ಯಕ್ಷೆ ಮೆಲೋನಿಯಿಂದ ಹಿಡಿದು ಶಿಖರ್ ಧವನ್ ವರೆಗೆ ವಿಚ್ಛೇದನ ಪಡೆದ ಕೆಲ ಜೋಡಿಗಳ ಜೊತೆ ಮತ್ತಷ್ಟು ಮಹತ್ವದ ಸುದ್ದಿಗಳು ಹಿನ್ನೋಟ.

ಮೇಡ್‌ ಇನ್‌ ಇಂಡಿಯಾ ವಿಸ್ಕಿಗೆ 'ಜಗತ್ತಿನ ಸರ್ವಶ್ರೇಷ್ಠ ವಿಸ್ಕಿ' ಎನ್ನುವ ಮನ್ನಣೆ
ವಿಸ್ಕಿಸ್ ಆಫ್ ದಿ ವರ್ಲ್ಡ್, ಭಾರತದಲ್ಲಿ ತಯಾರಾದ ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2023 ವಿಸ್ಕಿಯನ್ನು ಜಗತ್ತಿನ ಅತ್ಯುತ್ತಮ ವಿಸ್ಕಿ ಎಂದು ಹೆಸರಿಸಿಸಿದೆ. ಬ್ಲೈಂಡ್‌ ಟೇಸ್ಟಿಂಗ್‌ ಸ್ಪರ್ಧೆಯಲ್ಲಿ ಭಾರತದಲ್ಲಿ  ಭಾರತೀಯ ಪೀಟೆಡ್ ಕ್ಲಾಸ್ ವಿಸ್ಕಿ 100 ಕ್ಕೂ ಹೆಚ್ಚು ಅಂತರಾರಾಷ್ಟ್ರೀಯ ಬ್ರಾಂಡ್‌ಗಳನ್ನು ಸೋಲಿಸಿ ಈ ಮನ್ನಣೆ ಪಡೆದುಕೊಂಡಿದ್ದು, ಭಾರತೀಯ ಮದ್ಯಪ್ರಿಯರು ಖುಷಿ ಪಡುವಂತೆ ಮಾಡಿದೆ. 
 
ಹೆಸರಿಡುವ ವಿಚಾರಕ್ಕೆ ಅಪ್ಪ ಅಮ್ಮನ ನಡುವೆ ಜಗಳ: ಮಗುವಿಗೆ ಹೆಸರಿಟ್ಟ ಕೋರ್ಟ್‌

ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿ ನಡುವೆ ಮಗುವಿನ ಹೆಸರಿನ ವಿಚಾರವಾಗಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಮಗುವಿಗೆ ತಾನೇ ಹೊಸ ಹೆಸರನ್ನು ಸೂಚಿಸಿ ನಾಮಕರಣ ಮಾಡುವ ಮೂಲಕ ಈ ಸುದ್ದಿ ಆಕ್ಟೋಬರ್ ತಿಂಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. 

ನಟಿ ಖುಷ್ಬುಗೆ ದೇಗುಲ
80-90ರ ದಶಕದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಖುಷ್ಬೂ ಸುಂದರ್‌ಗೆ ತಮಿಳುನಾಡಿನಲ್ಲಿ ದೇಗುಲ ನಿರ್ಮಿಸಿ ಪಾದಪೂಜೆ ಮಾಡುವ ಮೂಲಕ ಅಭಿಮಾನಿಗಳು ಭಕ್ತಿಯ ಪರಾಕಾಷ್ಠೆ ತೋರಿದರು. 

ಪತ್ನಿಯಿಂದ ಅತೀವ ಹಿಂಸೆ, ಶಿಖರ್‌ ಧವನ್‌ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ ದೆಹಲಿ ಕೋರ್ಟ್‌!
ಪತ್ನಿಯಿಂದ ಅತೀವ ಹಿಂಸೆಗೆ ಒಳಗಾದ ಹಿನ್ನಲೆಯಲ್ಲಿ ಟೀಮ್‌ ಇಂಡಿಯಾ ಆರಂಭಿಕ ಆಟಗಾರ ಶಿಖರ್‌ ಧವನ್‌ಗೆ ವಿಚ್ಛೇದನ ಪಡೆದುಕೊಳ್ಳಲು ದೆಹಲಿ ಹೈಕೋರ್ಟ್‌ ಒಪ್ಪಿಗೆ ನೀಡುವ ಮೂಲಕ ಈ ಪ್ರಕರಣ ದೇಶಾದ್ಯಂತ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.

ಬೆನ್ನುಮೂಳೆಯಿಂದ ಅಂತರಿಕವಾಗಿ ಬೇರ್ಪಟ್ಟಿದ್ದ ಬಾಲಕನ ತಲೆ ಬುರುಡೆ ಯಶಸ್ವಿ ಮರು ಜೋಡಣೆ
ಅಪಘಾತದಲ್ಲಿ ಆಂತರಿಕ ಶಿರಚ್ಛೇದ (ತಲೆ ಮತ್ತು ಕುತ್ತಿಗೆಯ ಸಂಪರ್ಕ ಕಡಿತಗೊಂಡಿದ್ದ ಅಥವಾ ಬೆನ್ನುಮೂಳೆಯಿಂದ ತಲೆ ಬುರುಡೆ ಬೇರ್ಪಟ್ಟ)ಕ್ಕೆ ತುತ್ತಾಗಿದ್ದ 12 ವರ್ಷದ ಬಾಲಕನ ತಲೆಯನ್ನು ಇಸ್ರೇಲ್‌ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಕುತ್ತಿಗೆಗೆ ಜೋಡಿಸಿ ಮಗುವಿಗೆ ಜೀವದಾನ ಮಾಡಿದ್ದರು.

ವೈದ್ಯಕೀಯ ಅಚ್ಚರಿ: 3ನೇ ಹಂತದ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆ ಸಂಪೂರ್ಣ ಗುಣಮುಖ
3ನೇ ಹಂತದ ಕರುಳಿನ ಕ್ಯಾನ್ಸರ್‌ ಸಮಸ್ಯೆಯಿಂದ ಬಳಲುತ್ತಿದ್ದ ವೇಲ್ಸ್ ದೇಶದ ಮಹಿಳೆಯೊಬ್ಬರು ಡೋಸ್ಟರ್‌ಲಿಮಬ್ ಎಂಬ ಔಷಧಿಯನ್ನು ಸೇವಿಸಿದ ನಂತರ  ಅಚ್ಚರಿ ಎಂಬಂತೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಇದು ವೈದ್ಯಕೀಯ ಲೋಕದಲ್ಲಿ ಹೊಸ ಭರವಸೆ ಮೂಡಿಸಿತು.

97ನೇ ವಯಸ್ಸಿನಲ್ಲಿ ಅಕ್ಷರ ಕಲಿತ, 'ನಾರಿಶಕ್ತಿ' ಪ್ರಶಸ್ತಿ ಪುರಸ್ಕೃತೆ ಕಾರ್ತ್ಯಾಯಿನಿ ಅಮ್ಮ ನಿಧನ

ಅತೀ ಹಿರಿಯ ಸಾಕ್ಷರತಾ ವಿದ್ಯಾರ್ಥಿನಿ ಕೇರಳದ ಕಾರ್ತ್ಯಾಯಿನಿ ಅಮ್ಮ ಆಕ್ಟೋಬರ್‌ನಲ್ಲಿ ನಿಧನರಾದರು. ಅವರಿಗೆ 101 ವಯಸ್ಸಾಗಿತ್ತು.  ಕೇರಳ ಸರ್ಕಾರದ 'ಅಕ್ಷರಲಕ್ಷಂ' ಪರೀಕ್ಷೆಯಲ್ಲಿ ಕಾರ್ತ್ಯಾಯಿನಿ ಅಮ್ಮ ಟಾಪರ್ ಆಗಿದ್ದು, 98 ಪರ್ಸೆಂಟ್ ಮಾರ್ಕ್ಸ್‌ ಪಡೆದಿದ್ದರು. ಕಲಿಕೆಗೆ ವಯಸ್ಸು ಅಡ್ಡಿಯಾಗಲ್ಲ ಎಂಬುದನ್ನು ಸಾಬೀತುಪಡಿಸಿ ಎಲ್ಲರಿಗೂ ಮಾದರಿಯಾಗಿದ್ದರು.

ಚಿಕಿತ್ಸೆಗಾಗಿ ಬಾಲಕಿ ಮೆದುಳಿನ ಒಂದು ಭಾಗ ಸ್ವಿಚ್ ಆಫ್ ಮಾಡಿದ ವೈದ್ಯರು!
ಉರಿಯೂತ ಉಂಟುಮಾಡುವ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಲು ಯುಎಸ್ ವೈದ್ಯರು ಆರು ವರ್ಷದ ಬಾಲಕಿಯ ಮೆದುಳಿನ ಭಾಗವನ್ನು ಬಂದ್ ಮಾಡಿ ಚಿಕಿತ್ಸೆ ನಡೆಸಿದ್ದರು. ಬ್ರಿಯಾನಾ ಬೋಡ್ಲಿ ಎಂಬ 6 ವರ್ಷದ ಬಾಲಕಿಗೆ 10 ಗಂಟೆ ಆಪರೇಷನ್ ನಡೆಸಿ ಯಶಸ್ವಿಯಾಗಿದ್ದಾರೆ.

89 ವರ್ಷದ ವೃದ್ಧನಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಹೇಳಿದ್ದೇನು?
ನವದೆಹಲಿ: ಹಲವು  ದಶಕಗಳ ದಾಂಪತ್ಯ ವಿರಸದ ನಂತರ ಬದುಕಿನ ಮುಸಂಜೆಯಲ್ಲಿ 89 ವರ್ಷದ ವೃದ್ಧರೊಬ್ಬರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದ್ದು, ವೃದ್ಧ ದಂಪತಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ ಘಟನೆ ನಡೆದಿತ್ತು.  ಮದುವೆ ಎಂಬ ಸಂಪ್ರದಾಯವೂ ಸಮಾಜದಲ್ಲಿ ಒಂದು ಪ್ರಮುಖ ಸ್ಥಾನವನ್ನು ಆಕ್ರಮಿಸಿದೆ ಹಾಗೂ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇತ್ತೀಚೆಗೆ ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿದ್ದರೂ ಕೂಡ ವಿವಾಹ ಎಂಬ ಸಂಸ್ಥೆಯೂ(ಸಂಪ್ರದಾಯ) ಭಾರತೀಯ ಸಮಾಜದಲ್ಲಿದಂಪತಿಗಳ ನಡುವೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಅಮೂಲ್ಯವಾದ ಭಾವನಾತ್ಮಕ ಜೀವನ ಜಾಲ ಎಂದು ಪರಿಗಣಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಈ ಅರ್ಜಿಯ ವಜಾಗೊಳಿಸುವ ವೇಳೆ ಹೇಳಿದೆ. 

3 ವರ್ಷ ಗರ್ಭಾಧಾರಣೆ ತಡೆವ ಇಂಪ್ಲಾಂಟ್: 4 ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ
ತೋಳಿನ ಚರ್ಮದೊಳಗೆ ಅಳವಡಿಸುವ ಪುಟ್ಟ ಸಾಧನದಿಂದ (ಸಬ್ ಡರ್ಮಲ್‌ ಇಂಪ್ಲಾಂಟ್) ಮೂರು ವರ್ಷಗಳವರೆಗೆ ಗರ್ಭಧಾರಣೆಯನ್ನು ತಡೆಯಬಲ್ಲ ಹೊಸ ಗರ್ಭ ನಿರೋಧಕ ಆಯ್ಕೆಯನ್ನು ರಾಜ್ಯ ಆರೋಗ್ಯ ಇಲಾಖೆ ಪರಿಚಯಿಸಿತ್ತು. ಇದನ್ನು  ಬೀದರ್, ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಯೋಗಿಕವಾಗಿ ಜಾರಿ ಮಾಡಲಾಗಿದೆ

26 ವರ್ಷದ ಸುಂದರಿಯನ್ನೇ ಬಲಿ ತೆಗೆದುಕೊಂಡ ಗರ್ಭನಾಳ ಕ್ಯಾನ್ಸರ್
ಮಾಜಿ ವಿಶ್ವ ಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ ಅಕ್ಟೋಬರ್ 13 ರಂದು ನಿಧನರಾದರು.  ಕೇವಲ 26 ವರ್ಷದ ಅವರು ಗರ್ಭನಾಳ ಕ್ಯಾನ್ಸರ್‌ನಿಂದ ಬಳುತ್ತಿದ್ದರು. 2015ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಶೆರಿಕಾ ಉರುಗ್ವೆಯನ್ನು ಪ್ರತಿನಿಧಿಸಿದ್ದರು. 
 
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು
ದೇಶದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ಐವರು ಜಡ್ಜ್‌ಗಳ ಸಾಂವಿಧಾನಿಕ ಪೀಠವು ಈ ಮಹತ್ವದ ತೀರ್ಪು ನೀಡಿತ್ತು. ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿಗೆ ಭಾರತದ ಖ್ಯಾತ ಅಥ್ಲೀಟ್‌ ದ್ಯುತಿ ಚಂದ್‌ ಬೇಸರ ವ್ಯಕ್ತಪಡಿಸಿದ್ದರು. 

ಪುರುಷರಿಗೆ ಗರ್ಭನಿರೋಧಕ ಇಂಜೆಕ್ಷನ್‌, ಯಶಸ್ವಿ ಪ್ರಯೋಗ ನಡೆಸಿದ ಐಸಿಎಂಆರ್‌

ಕುಟುಂಬ ನಿಯಂತ್ರಣ ವಿಚಾರ ಬಂದಾಗ ಮಹಿಳೆಯರಿಗೆ ಹಲವಾರು ರೀತಿಯ ವಿಧಾನಗಳು ಪ್ರಸ್ತುತ ಮಾರುಕಟ್ಟೆಯಲ್ಲಿದೆ. ಇನ್ನು ಮುಂದೆ ಇಂಥ ಗರ್ಭನಿರೋಧಕ ವ್ಯವಸ್ಥೆ ಪುರುಷರಿಗೂ ಬರಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿರುವ ಈ ಪ್ರಯೋಗ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಗರ್ಭ ನಿಯಂತ್ರಣ ವಿಚಾರ ಇನ್ನು ಮುಂದೆ ಬರೀ ಮಹಿಳೆಯರ ವಿಚಾರವಾಗಿರೋದಲ್ಲ. ಶೀಘ್ರದಲ್ಲಿಯೇ ಪುರುಷರಿಗೂ ಗರ್ಭನಿರೋಧಕ ಇಂಜೆಕ್ಷನ್‌ ಮಾರುಕಟ್ಟೆಗೆ ಬರಲಿದೆ. 

ಹದಿಹರೆಯದ ಹುಡುಗಿಯರು ಲೈಂಗಿಕ ಪ್ರಚೋದನೆ ನಿಯಂತ್ರಿಸಬೇಕು; ಹೈಕೋರ್ಟ್ ಸೂಚನೆ
ಕೋಲ್ಕತ್ತಾ: ಯುವತಿಯರು, ಮಹಿಳೆಯರನ್ನು ಗೌರವಿಸುವುದು ಹುಡುಗರ ಕರ್ತವ್ಯವಾಗಿದೆ. ಹುಡುಗಿಯರ ಬಗ್ಗೆ ಅಶ್ಲೀಲವಾಗಿ ಮಾತನಾಡದೆ ಅವರನ್ನು ಗೌರವಿಸಲು ಹುಡುಗರು ತಮ್ಮ ಮನಸ್ಸಿಗೆ ತರಬೇತಿ ನೀಡಬೇಕು. ಅವರ  ಘನತೆ ಮತ್ತು ಖಾಸಗಿತನವನ್ನು ಕಾಪಾಡಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ. ಮಾತ್ರವಲ್ಲ, ಹದಿಹರೆಯದ ಹುಡುಗಿಯರು ಎರಡು ನಿಮಿಷಗಳ ಆನಂದಕ್ಕೆ ಮಣಿಯುವ ಬದಲು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು ಎಂದು ನೀಡಿದ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. 

ಕ್ಯಾನ್ಸರ್‌ಗೆ 2 ವರ್ಷ ಔಷಧಿ ತೆಗೆದುಕೊಂಡವಳಿಗೆ ರೋಗವೇ ಇರ್ಲಿಲ್ಲ
ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ನಡೆಯುವ ತಪ್ಪು ಒಬ್ಬರ ಜೀವ ತೆಗೆಯೋದಿದೆ. ಯಾವುದೋ ವ್ಯಕ್ತಿಗೆ ನೀಡ್ಬೇಕಾಗಿದ್ದ ಚುಚ್ಚುಮದ್ದನ್ನು ಇನ್ನಾರಿಗೋ ನೀಡುವ ಕೆಲ ಆಸ್ಪತ್ರೆ ಸಿಬ್ಬಂದಿ ರೋಗಿಗಳ ಜೀವನವನ್ನು ನರಕ ಮಾಡ್ತಾರೆ. ಅದೇ ರೀತಿ ಯುನೈಟೆಡ್ ಕಿಂಗ್‌ಡಮ್ (United Kingdom)ನಲ್ಲಿ. ಯಾರ್ಕ್‌ಷೈರ್ ನಿವಾಸಿ ಮಹಿಳೆಯೊಬ್ಬರು 2 ವರ್ಷಗಳಿಂದ ಚರ್ಮ (Skin) ದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ಅವಧಿಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ (Surgery) ಯೂ ನಡೆದಿದೆ. ಮಹಿಳೆ ನಿರಂತರವಾಗಿ ಚಿಕಿತ್ಸೆ ಪಡೆದಿದ್ದಾಳೆ.  ಆದರೆ ನಂತರ ಅವರಿಗೆ ರೋಗವೇ ಇರಲಿಲ್ಲ ಎಂಬುದು ಸಾಬೀತಾಗಿದೆ.

ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ( Giorgia Meloni) ತಾನು ತನ್ನ ಪತಿ ಆಂಡ್ರಿಯಾ ಗಿಂಬ್ರೂನೊರಿಂದ ದೂರವಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.  ಈ ಬಗ್ಗೆ ಸ್ವತಃ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ವಿಚಾರ ಬಹಿರಂಗಪಡಿಸಿದ್ದರು. ಇದು ವಿಶ್ವದಾದ್ಯಂತ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. 

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 100 ಗ್ರಾಮ್‌ ಎಕ್ಸ್ಟ್ರಾ ಬ್ಯಾಗೇಜ್‌ ಇದ್ರೂ ರಿಜೆಕ್ಟ್‌!
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕರು 100 ಗ್ರಾಂ ಹೆಚ್ಚುವರಿ ತೂಕವನ್ನು ಸಾಗಿಸಲು ಈಗ ಸುತಾರಾಂ ಅನುಮತಿ ನೀಡಲಾಗುವುದಿಲ್ಲ. ಅದಕ್ಕೆ ಕಾರಣ, ಅಟೋಮೇಟೆಡ್‌ ಬ್ಯಾಗೇಜ್‌ ಡ್ರಾಪ್‌ ಮಷಿನ್‌ಗಳಲ್ಲಿ ಏರ್‌ಪೋರ್ಟ್‌ನಲ್ಲಿ ಹಾಕಲಾಗಿದ್ದು, 100 ಗ್ರಾಂ ಹೆಚ್ಚಿನ ತೂಕವಿದ್ದರೂ ಆ ಬ್ಯಾಗೇಜ್‌ ರಿಜೆಕ್ಟ್‌ ಆಗಲಿದೆ.

ಫೇಮಸ್ ಬಾಡಿ ಬಿಲ್ಡರ್, ಫಿಟ್‌ನೆಸ್ ಪ್ರಭಾವಿ ಮಹಿಳೆ ನಿಧನ
ನ್ಯೂಜಿಲೆಂಡ್‌ನ ಜನಪ್ರಿಯ ಬಾಡಿ ಬಿಲ್ಡರ್ ಮತ್ತು ಫಿಟ್‌ನೆಸ್ ಪ್ರಭಾವಿ ರೇಚೆಲ್ ಚೇಸ್ ನಿಧನರಾಗಿದ್ದಾರೆ. ಚೇಸ್, 5 ಮಕ್ಕಳ ತಾಯಿ. ಫೇಸ್‌ಬುಕ್‌ನಲ್ಲಿ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಆಗಾಗ ಫಿಟ್‌ನೆಸ್ ಮತ್ತು ಸಿಂಗಲ್‌ ಪೇರೆಂಟಿಂಗ್‌ ಬಗ್ಗೆ ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಮಾಡುತ್ತಿದ್ದರು. ಅವರಿಗೆ 41 ವರ್ಷ ವಯಸ್ಸಾಗಿತ್ತು.

ಗರ್ಬಾ ಸಂಭ್ರಮದಲ್ಲಿ ದುರಂತ: ಕೇವಲ 24 ಗಂಟೆಯಲ್ಲಿ 10 ಮಂದಿ ಹೃದಯಾಘಾತಕ್ಕೆ ಬಲಿ!
ನವರಾತ್ರಿಯ ಸಂಭ್ರಮದಲ್ಲಿದ್ದ ಆಕ್ಟೋಬರ್ ತಿಂಗಳು ಹಲವು ಜನರ ಹೃದಯಾಘಾತಕ್ಕೆ ಕಾರಣವಾಗಿತ್ತು. ಅದರಲ್ಲೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ಗರ್ಬಾ ಸಂಭ್ರಮದಲ್ಲಿ ದುರಂತವೇ ನಡೆದು ಹೋಗಿದೆ. ಕೇವಲ 24 ಗಂಟೆಯಲ್ಲಿ 10 ಮಂದಿ ಹೃದಯಾಘಾತಕ್ಕೆ ಬಲಿಯಾದ ಸುದ್ದಿ ಜನರನ್ನು ಬೆಚ್ಚಿ ಬೀಳಿಸಿತ್ತು.

ಅತೀ ಹೆಚ್ಚು ಭಾಷೆ ಮಾತನಾಡುವ ದೇಶಗಳ ಪೈಕಿ ಭಾರತಕ್ಕೆ 4ನೇ ಸ್ಥಾನ, ನಂ.1 ಯಾರು?
ಭಾರತದ ಪ್ರತಿ ರಾಜ್ಯದಲ್ಲಿ ಆಯಾ ಭಾಷೆಗಳಿವೆ. ರಾಜ್ಯದೊಳಗೆ ಉಪಭಾಷೆಗಳಿವೆ. ಇನ್ನು ಹಲವು ಭಾಷೆಗಳು ಪುಸ್ತಕಕ್ಕೆ ಸೀಮಿತವಾಗಿದ್ದರೆ, ಮಾತಿನಲ್ಲಿ ಉಳಿದಿಲ್ಲ. ಇಷ್ಟಾದರೂ ಭಾರತದಲ್ಲಿ ಸದ್ಯ ಮಾತನಾಡುವ ಭಾಷೆಗಳ ಸಂಖ್ಯೆ 453. ಭಾರತ ನಾಲ್ಕನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿ ಪಪುವಾ ನ್ಯೂಗಿನಿಯಾ ದೇಶವಿದೆ. ಇಲ್ಲಿ ಬರೋಬ್ಬರಿ 840 ಭಾಷೆ ಮಾತನಾಡುವ ಜನರಿದ್ದಾರೆ.
 
ರಾಜ್ಯಾದ್ಯಂತ ಡೆಂಘೀ ಜ್ವರ ಅಬ್ಬರ, ಕೇವಲ 20 ದಿನದಲ್ಲಿ 1404 ಪ್ರಕರಣ!
ಆಕ್ಟೋಬರ್ ತಿಂಗಳಲ್ಲಿ ರಾಜ್ಯಾದ್ಯಂತ ದಿನೇದಿನೆ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗಿದ್ದವು, ಆರೋಗ್ಯ ಇಲಾಖೆ ಪ್ರಕಾರ ಆ ತಿಂಗಳಲ್ಲಿ ಕಳೆದ 20 ದಿನಗಳಲ್ಲಿ 1,404 ಮಂದಿಗೆ ಜ್ವರ ದೃಢಪಟ್ಟಿತ್ತು. 

7 ದೇಶದ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಶ್ರೀಲಂಕಾ
ಭಾರತ ಸೇರಿದಂತೆ  7 ದೇಶಗಳಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ತೀರ್ಮಾನಿಸಿದೆ. ಈ ಮೂಲಕ ಪ್ರವಾಸೋಧ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ. ಇನ್ನು ಮುಂದೆ ಶ್ರೀಲಂಕಾ ಹೋಗಬೇಕಾದರೆ ವೀಸಾ ಬೇಕಾಗಿಲ್ಲ. ಭಾರತ ಸೇರಿದಂತೆ  7 ದೇಶಗಳಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ತೀರ್ಮಾನಿಸಿದೆ. ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಹೀಗೆ ಒಟ್ಟು ಏಳು ದೇಶಗಳ ಪ್ರಯಾಣಿಕರಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ಕ್ಯಾಬಿನೆಟ್ ತನ್ನ ಒಪ್ಪಿಗೆ ನೀಡಿದೆ. 

ಬೆಂಗಳೂರಿಗರೇ ಹುಷಾರ್‌..ನಗರಕ್ಕೆ ಬರೋ ತರಕಾರಿಯಲ್ಲಿದೆ ಡೇಂಜರಸ್‌ ಲೋಹದ ಅಂಶ!
ಬೆಂಗಳೂರಿಗರೇ ಹುಷಾರ್‌..ನಗರಕ್ಕೆ ಬರೋ ವೆಜಿಟೇಬಲ್ಸ್‌ ಸಿಕ್ಕಾಪಟ್ಟೆ ಡೇಂಜರಸ್‌.. ಚರಂಡಿ ನೀರಲ್ಲಿ ಬೆಳೆಯೋ ತರಕಾರಿಯಲ್ಲಿದೆ ಅಪಾಯಕಾರಿ ಲೋಹದ ಅಂಶ. ಇದನ್ನು ತಿಂದ್ರೆ ಅನಾರೋಗ್ಯ ಗ್ಯಾರಂಟಿ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ತರಕಾರಿಗಳ ಸೇವನೆಯಿಂದ ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ತರಕಾರಿಗಳನ್ನು ಬೆಳೆಯಲು ತ್ಯಾಜ್ಯನೀರಿನ ಬಳಕೆಯು ಅವುಗಳಲ್ಲಿ ಭಾರೀ ಲೋಹಗಳ ಹೆಚ್ಚಿನ ಸಾಂದ್ರತೆಗೆ ಕಾರಣವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 10 ತರಕಾರಿಗಳ 400 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆ (FAO) ನಿಗದಿಪಡಿಸಿದ ಅನುಮತಿಸುವ ಮಿತಿಗಳಿಗಿಂತ ಹೆಚ್ಚಿನ ಮಾಲಿನ್ಯವನ್ನು ತರಕಾರಿಯಲ್ಲಿ ಕಂಡುಹಿಡಿದಿದೆ. 

ಫೇಸ್‌ಬುಕ್‌ನಿಂದ ಮಕ್ಕಳ ಮಾನಸಿಕತೆ ಮೇಲೆ ಪರಿಣಾಮ; 33 ರಾಜ್ಯಗಳಿಂದ ದೂರು
ಮಕ್ಕಳ ಮಾನಸಿಕತೆ ಮೇಲೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಂಥ ಮೆಟಾ ಕಂಪನಿಯ ಸಾಮಾಜಿಕ ಮಾಧ್ಯಮಗಳು ದುಷ್ಪರಿಣಾಮ ಬೀರುತ್ತಿವೆ. ಅವರನ್ನು ವ್ಯಸನ ಮನೋಭಾವಕ್ಕೆ ನೂಕುತ್ತಿವೆ ಎಂದು ಅಮೆರಿಕದ 33 ರಾಜ್ಯಗಳು ಕ್ಯಾಲಿಫೋರ್ನಿಯಾ ಕೋರ್ಟ್‌ನ ಮೆಟ್ಟಿಲೇರಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ದೀಪಾವಳಿಗೂ ಮೊದಲೇ ವಿಷಮಿಸಿದ ದಿಲ್ಲಿ ವಾಯು ಗುಣಮಟ್ಟ
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿದು ಜನರು ಉಸಿರಾಡಲು ಕಷ್ಟಪಡುವ ಪರಿಸ್ಥಿತಿ ದೀಪಾವಳಿಗೂ ಮೊದಲೇ ಎದುರಾಗಿತ್ತು.

ಕೇರಳದಲ್ಲಿ ಚಿಕನ್ ಶವರ್ಮ ತಿಂದು 22 ವರ್ಷದ ಯುವಕ ಸಾವು
ಕೇರಳ: ತಮಿಳುನಾಡಿನಲ್ಲಿ ಚಿಕ್ಕನ್ ಶವರ್ಮ ತಿಂದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮಾಸುವ ಮೊದಲೇ ಆಕ್ಟೋಬರ್‌ನಲ್ಲಿ ಕೇರಳದಲ್ಲಿ ಚಿಕನ್‌ ಶವರ್ಮ ತಿಂದ ಬಳಿಕ ಅಸ್ವಸ್ಥನಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ

ಇಷ್ಟಪಟ್ಟವನನ್ನು ಮದುವೆಯಾಗುವುದು ವ್ಯಕ್ತಿಯ ಹಕ್ಕು, ಕುಟುಂಬದವರು ಆಕ್ಷೇಪಿಸುವಂತಿಲ್ಲ; ಹೈಕೋರ್ಟ್
 ಪ್ರತಿಯೊಬ್ಬ ವ್ಯಕ್ತಿಗೂ ತಾನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗುವ ಹಕ್ಕಿದೆ. ಇದನ್ನು ಕುಟುಂಬದವರು ಆಕ್ಷೇಪಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ವಿವಾಹದ ನಂತರ ಕುಟುಂಬದಿಂದ ಬೆದರಿಕೆಯನ್ನು ಎದುರಿಸುತ್ತಿರುವ ದಂಪತಿಗೆ ಪೊಲೀಸ್ ರಕ್ಷಣೆಯನ್ನು ನೀಡಿದ ದೆಹಲಿ ಹೈಕೋರ್ಟ್, ಒಬ್ಬರು ಸ್ವಂತ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಅಳಿಸಲಾಗದು. ಇದು ಸಾಂವಿಧಾನಿಕವಾಗಿ ರಕ್ಷಿಸಲ್ಪಟ್ಟಿದೆ ಮತ್ತು ಕುಟುಂಬದ ಸದಸ್ಯರೂ ಇದನ್ನು ವಿರೋಧಿಸುವಂತಿಲ್ಲ ಎಂದು ಹೇಳಿದೆ. 

ಅನೈತಿಕ ಸಂಬಂಧದ ಕಾರಣ, ಕರ್ನಾಟಕದಲ್ಲಿ ಎಷ್ಟಿದೆ ಡಿವೋರ್ಸ್ ರೇಟ್?
ಭಾರತದಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹಿಂದೆ ಬಹಳ ಕಡಿಮೆ ಇತ್ತು. ಅಲ್ಲಿ ಇಲ್ಲಿ ಒಂದೋ ಎರಡೋ ವಿಚ್ಛೇದನಗಳು ನಡೆಯುತ್ತಿದ್ದವು. ಅದು ತೀರ ಅಪರೂಪಕ್ಕೆ. ಆದ್ರೆ ಈಗ ಭಾರತದ ಸ್ಥಿತಿ ಬದಲಾಗಿದೆ. ಈಗ ನಮ್ಮ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದ ವಿಚ್ಛೇದನ ದರ ಶೇಕಡಾ 11.7 ರಷ್ಟಿದೆ.  ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ ಬರುತ್ತದೆ. ಭಾರತದ ವಿಚ್ಛೇದನದಲ್ಲಿ ಶೇಕಡಾ18.7 ರಷ್ಟು ವಿಚ್ಛೇದನ ಮಹಾರಾಷ್ಟ್ರದಲ್ಲಾಗುತ್ತದೆ.

ಮೊಬೈಲ್‌ನಂತೆ ಇವಳ ಹೃದಯ ಚಾರ್ಜ್ ಮಾಡ್ತಿದ್ರೆ ಮಾತ್ರ ಈ ಮಹಿಳೆ ಬದುಕೋದು!
ಜಗತ್ತಿನಲ್ಲಿ ಅನೇಕ ಬಗೆಯ ಹೃದಯದ ಖಾಯಿಲೆಗಳಿವೆ. ಈ ಮಹಿಳೆಯ ಖಾಯಿಲೆ ಎಲ್ಲ ಖಾಯಿಲೆಗಳಿಗಿಂತ ಭಿನ್ನವಾಗಿದೆ. ಅಮೆರಿಕದ ಹಾರ್ಟ್ ಬೊಸ್ಟನ್ ನಿವಾಸಿಯಾಗಿರುವ ಸೋಫಿಯಾ ಎಂಬಾಕೆ ಜೀವನ ಈಗ ಬ್ಯಾಟರಿಯಿಂದಲೇ ನಡೆಯುತ್ತಿದೆ. ಬ್ಯಾಟರಿ ಪವರ್ ನಿಂದ ಈಕೆಯ ಪಲ್ಸ್ ಹೊಡೆದುಕೊಳ್ತಿರೋದು. ಸೋಫಿ ಲೆಫ್ಟ್ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್ (LVAD)ಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಳೆ. ಆದ್ದರಿಂದ ಅವಳ ಹೃದಯವು ಯಂತ್ರದ ಮೂಲಕ ಬಡಿದುಕೊಳ್ಳುತ್ತದೆ. ಸೋಫಿಯಾ ಇರ್ರಿವರ್ಸಿಬಲ್ ಡೈಲೆಟೆಡ್ ಕಾರ್ಡಿಯೋಮಯೋಪೈಥಿ ಎನ್ನುವ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಇದು ಒಂದು ಬಗೆಯ ಸ್ನಾಯುವಿನ ಖಾಯಿಲೆಯಾಗಿದ್ದು, ಇದರಿಂದಾಗಿ ಅವಳ ಹೃದಯ ಬಡಿತವಾಗುವುದು ಸಾಧ್ಯವಿಲ್ಲ. ಇದಕ್ಕಾಗಿ ಅವಳಿಗೆ ಹೃದಯ ಬಡಿತದ ಸಾಧನವನ್ನು ಅಳವಡಿಸಲಾಗಿದೆ. ಎಲ್ ವಿ ಎ ಡಿ ಸಾಧನದಿಂದ ಅವಳ ಹೃದಯ ಬಡಿದುಕೊಳ್ಳುತ್ತದೆ. ಸೋಫಿಯಾ ತಮಗಿರುವ ಈ ಅಪರೂಪದ ಖಾಯಿಲೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ.

Matrimonial Ad: ರೀಲ್ಸ್‌ ಮಾಡೋ ಹುಡ್ಗ ಬೇಕಾಗಿದ್ದಾನೆ; ಡ್ಯಾನ್ಸ್ ಮಾಡ್ಬೇಕು, ಕ್ಯಾಮರಾ ಶೈ ಇರ್ಬಾದು!
ಕೆಲವೊಂದು ಮ್ಯಾಟ್ರಿಮೋನಿಯಲ್ ಆಡ್‌ಗಳು ತುಂಬಾ ವಿಚಿತ್ರ (Weird)ವಾಗಿರುತ್ತವೆ. ಇಂಜಿನಿಯರ್ ವರನೇ ಬೇಕು, ವೆಜಿಟೇರಿಯನ್ಸ್ ವರನೇ ಆಗಬೇಕು, ಹೌಸ್‌ವೈಫ್ ಆಗಿದ್ದರೆ ಸಾಕು ಮೊದಲಾದ ಕಂಡೀಷನ್ಸ್ ಇಟ್ಕೊಂಡು ವಧು-ವರರು (Bride-groom) ಬೇಕೆಂಬ ಜಾಹೀರಾತು ನೀಡುತ್ತಾರೆ. ಆದ್ರೆ ಇದೆಲ್ಲಕಿಂತ ವಿಭಿನ್ನವಾಗಿ ಇಲ್ಲೊಬ್ಬ ಯುವತಿ (Girl) ನೀಡಿರೋ ವರ ಬೇಕೆಂಬ ಜಾಹೀರಾತು (Advertisement) ಸಿಕ್ಕಾಪಟ್ಟೆ ವೈರಲ್ ಆಗಿದೆ.

ಖ್ಯಾತ ಮಾಡೆಲ್​ ಮೃತದೇಹ ಫ್ರಿಡ್ಜ್​ನಲ್ಲಿ ಪತ್ತೆ! ಗರ್ಭಿಣಿಯಾಗಿದ್ದೇ ಕೊಲೆಗೆ ಕಾರಣ?
ಲಾಸ್ ಏಂಜಲೀಸ್​ನ (Los Angeles) ಪ್ರಸಿದ್ಧ ಮಾಡೆಲ್​. 31 ವರ್ಷದ ಖ್ಯಾತ ರೂಪದರ್ಶಿ ಮಲೀಸಾ ಮೂನಿ (Maleesa Mooney) ತುಂಡು ತುಂಡಾದ ಮೃತದೇಹವು ಫ್ರಿಡ್ಜ್​ನಲ್ಲಿ ಸಿಕ್ಕಿದೆ.  ಮಲೀಸಾ ಅವರ ಕೈ ಕಾಲುಗಳನ್ನು ಬಿಗಿಯಾಗಿ ಕಟ್ಟಿ ದೇಹವನ್ನು ತುಂಡು ಮಾಡಿದ  ಸ್ಥಿತಿಯಲ್ಲಿ ಪತ್ತೆಯಾಗಿದೆ.   ಈ ಸಮಯದಲ್ಲಿ ಮಲೀಸಾ ಎರಡು ತಿಂಗಳ ಗರ್ಭಿಣಿ ಎಂದು ವರದಿಯಾಗಿತ್ತು.

3 ತಿಂಗಳು 20 ದಿನ ತುತ್ತು ಆಹಾರ ಸೇವಿಸದೇ ಕಠಿಣ ಉಪವಾಸ ಮಾಡಿದ 16 ವರ್ಷದ ಸುಂದರಿ
ಮುಂಬೈನ ಕಂಡಿವಲಿಯ ಗುಜರಾತಿ ಕುಟುಂಬದ 16 ವರ್ಷದ ಹುಡುಗಿ ಮೂರು ತಿಂಗಳು ಮತ್ತು 20 ದಿನಗಳ ಕಾಲ ನಿರಂತರವಾಗಿ ಆಹಾರವಿಲ್ಲದೆ ಉಳಿದು 110 ದಿನಗಳ ಕಠಿಣ ಉಪವಾಸವನ್ನು ಪೂರ್ಣಗೊಳಿಸಿದ ಘಟನೆ ಆಕ್ಟೋಬರ್‌ನಲ್ಲಿ ಸುದ್ದಿಯಾಗಿತ್ತು.

ಯವಕರು ವಾರಕ್ಕೆ 70 ಗಂಟೆ ಕೆಲಸ ಮಾಡ್ಬೇಕೆಂದ ನಾರಾಯಣ ಮೂರ್ತಿ ದೇಶದ ಒಟ್ಟಾರೆ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಲು ಭಾರತದ ಯುವಕರು ಪ್ರತಿ ವಾರ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಇತ್ತೀಚೆಗೆ ಸಲಹೆ ನೀಡಿದ್ದರು. ಅವರ ಸಲಹೆಯು ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳಲ್ಲಿ ವೈರಲ್‌ ಆಗಿದ್ದು, ಹಲವು ಉದ್ಯಮಿಗಳು ಇದಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ಬಳಕೆದಾರರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದ್ದರು.

ಮಗನ ಬರ್ತ್‌ಡೇ ಜೊತೆಯಾಗಿ ಆಚರಿಸಿದ ಸಾನಿಯಾ-ಶೋಯೆಬ್‌, 
ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಹಾಗೂ ಮಾಜಿ ನಾಯಕ ಶೋಯೆಬ್‌ ಮಲೀಕ್‌ ವಿಚ್ಛೇದನಕ್ಕೆ ಒಳಪಟ್ಟಿದ್ದಾರೆ ಎನ್ನುವ ಸುದ್ದಿಗಳ ನಡುವೆ ಅವರು ಪುತ್ರ ಇಝಾನ್ ಮಿರ್ಜಾ ಮಲೀಕ್‌ ಬರ್ತ್‌ಡೇಯನ್ನು ಜೊತೆಯಾಗಿ ಆಚರಣೆ ಮಾಡಿ ಸುದ್ದಿಯಾಗಿದ್ದರು. 2018ರ ಅಕ್ಟೋಬರ್‌ 30 ರಂದು ಜನಿಸಿದ್ದ ಪುತ್ರ ಇಝಾನ್ ಮಿರ್ಜಾ ಮಲೀಕ್‌ ಅವರ ಜನ್ಮದಿನವನ್ನೂ ಇಬ್ಬರೂ ಜೊತೆಯಾಗಿಯೇ ದುಬೈನಲ್ಲಿ ಆಚರಿಸಿದ್ದರು.

70 ಗಂಟೆ ಕೆಲಸ ಸೂತ್ರದ ಬಗ್ಗೆ ಪತಿ ಹೇಳಿಕೆಗೆ ಸುಧಾಮೂರ್ತಿ ಪ್ರತಿಕ್ರಿಯೆ

ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ತಮ್ಮ ಪತಿ ವಾರಕ್ಕೆ 80 ರಿಂದ 90 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ ಹೀಗಾಗಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿ ಪತಿ ಹೇಳಿಕೆಗೆ ಟೀಕೆ ವ್ಯಕ್ತವಾಗುತ್ತಿರುವ ಬಗೆಗೆ ಪ್ರತಿಕ್ರಿಯಿಸಿದ್ದರು. 

ಕೋವಿಡ್ ಪರೀಕ್ಷೆ ವೇಳೆ ನೀಡಿದ 81.5 ಕೋಟಿ ಜನರ ವೈಯಕ್ತಿಕ ಮಾಹಿತಿ ಸೋರಿಕೆ?
ಐಸಿಎಂಆರ್ ವೆಬ್‌ಸೈಟಲ್ಲಿ ಕೋವಿಡ್ ಪರೀಕ್ಷೆ ಸಂಬಂಧ ಸಂಗ್ರಹಿಸಲಾಗಿದ್ದ ದೇಶದ 81.5 ಕೋಟಿ ನಾಗರಿಕರ ಮಾಹಿತಿ ಕಳ್ಳತನವಾಗಿದ್ದು, ಇದನ್ನು ಮಾರಾಟಕ್ಕೆ ಇಡಲಾಗಿದೆ ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಇದು ದೇಶದಲ್ಲೇ ನಡೆದ ಅತಿದೊಡ್ಡ ದತ್ತಾಂಶ ಕಳ್ಳತನ ಎಂದು ಹೇಳಲಾಗುತ್ತಿದೆ. ಪರೀಕ್ಷೆ ವೇಳೆ ಜನರು ನೀಡಿದ್ದ ಆಧಾರ್, ಪಾಸ್‌ಪೋರ್ಟ್ ಮಾಹಿತಿ, ಮೊಬೈಲ್ ನಂಬರ್, ವಿಳಾಸ ಮೊದಲಾದ ಮಾಹಿತಿಗಳು ಸೋರಿಕೆಯಾಗಿವೆ ಎನ್ನಲಾಗಿದೆ. ಆದರೆ ಈ ಕುರಿತಾಗಿ, ಐಸಿಎಂಆರ್ ಯಾವುದೇ ದೂರು ದಾಖಲಿಸಿಲ್ಲ. ಒಂದು ವೇಳೆ ದೂರು ದಾಖಲಾದರೆ ಸಿಬಿಐ ಈ ಪ್ರಕರಣದ ತನಿಖೆ ನಡೆಸಬಹುದು ಎಂದು ವರದಿಗಳು ತಿಳಿಸಿವೆ.

31 ವರ್ಷ ಶಿಕ್ಷೆಗೊಳಗಾಗಿ ಜೈಲಲ್ಲಿರುವ ಇರಾನ್‌ ಮಹಿಳಾ ಹಕ್ಕುಗಳ ಹೋರಾಟಗಾರ್ತಿಗೆ ನೊಬೆಲ್
ಒಸ್ಲೋ: ಮಹಿಳೆಯ ಮೇಲಿನ ದೌರ್ಜನ್ಯದ ವಿರುದ್ಧ ಇರಾನ್‌ನಲ್ಲಿ ಹೋರಾಟ ಮಾಡಿ ಜೈಲು ಪಾಲಾಗಿರುವ ಇರಾನ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ, ನರ್ಗಿಸ್‌ ಮೊಹಮ್ಮದಿ ಅವರಿಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ 19ನೇ ಮಹಿಳೆಯಾಗಿ ನರ್ಗಿಸ್ ಹೊರಹೊಮ್ಮಿದ್ದು, ಪ್ರಸ್ತುತ ನರ್ಗಿಸ್ ಮೊಹಮ್ಮದಿ ಜೈಲಿನಲ್ಲೇ ಇದ್ದಾರೆ. 

ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!

ಈ ವರ್ಷ ಶ್ರೀಲಂಕಾ ನಂತರ ಥೈಲ್ಯಾಂಡ್ ಕೂಡ ಭಾರತೀಯರಿಗೆ ತನ್ನ ದೇಶಕ್ಕೆ ಬರುವುದಕ್ಕೆ ವೀಸಾ ಬೇಕಿಲ್ಲ ಎಂಬ ಆಫರ್ ನೀಡಿ ಪ್ರವಾಸಿಗರಿಗೆ ಖುಷಿ ನೀಡಿದೆ.

Follow Us:
Download App:
  • android
  • ios