ಚಳಿಗಾಲದ ಮಂಜು ಮತ್ತು ತಂಪು ಗಾಳಿಯಿಂದ ಗಿಡಗಳ ಎಲೆ, ಕಾಂಡ ಹಾಗೂ ಬೇರುಗಳಿಗೆ ಹಾನಿಯಾಗಬಹುದು. ಹಳೆಯ ಬಟ್ಟೆಗಳಿಂದ ಮುಚ್ಚುವುದು, ಮಲ್ಚಿಂಗ್, ಸರಿಯಾದ ನೀರಾವರಿ ಸೇರಿದಂತೆ ಗಿಡಗಳನ್ನು ರಕ್ಷಿಸುವ 5 ಸುಲಭ ನೈಸರ್ಗಿಕ ಟಿಪ್ಸ್ ಇಲ್ಲಿವೆ.
ಚಳಿಗಾಲದ ಮಂಜು ಸಸ್ಯಗಳ ಎಲೆಗಳು, ಕಾಂಡಗಳು ಮತ್ತು ಬೇರುಗಳನ್ನು ಹಾಳುಮಾಡಬಹುದು. ಆದರೆ, ಕೆಲವು ಸರಳ ಮತ್ತು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ತೋಟವನ್ನು ಹಿಮದಿಂದ ರಕ್ಷಿಸಿ, ಗಿಡಗಳನ್ನು ಆರೋಗ್ಯವಾಗಿರಿಸಬಹುದು.
ಚಳಿಗಾಲದಲ್ಲಿ ಗಾರ್ಡನ್ ಗಿಡಗಳನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು, ಅದರಲ್ಲೂ ರಾತ್ರಿ ತಾಪಮಾನ ತೀವ್ರವಾಗಿ ಕುಸಿಯುವ ಕಡೆ. ತಾಪಮಾನವು ಶೂನ್ಯಕ್ಕೆ ಇಳಿದಾಗ ಗಿಡಗಳ ಮೇಲೆ ಮಂಜಿನ ಕಣಗಳು ಹೆಪ್ಪುಗಟ್ಟುತ್ತವೆ. ಇದರಿಂದ ಸೂಕ್ಷ್ಮ ಸಸ್ಯಗಳ ಎಲೆ, ಕಾಂಡ ಮತ್ತು ಬೇರುಗಳಿಗೆ ಹಾನಿಯಾಗುತ್ತದೆ. ಆದರೆ, ಕೆಲವು ನ್ಯಾಚುರಲ್ ಟಿಪ್ಸ್ ಫಾಲೋ ಮಾಡಿದರೆ ನಿಮ್ಮ ಮನೆಯ ತೋಟವನ್ನು ಈ ಹಿಮದಿಂದ ಸುಲಭವಾಗಿ ಕಾಪಾಡಬಹುದು.
ಈ ಚಳಿಗಾಲದಲ್ಲಿ ಗಿಡಗಳನ್ನು ಹಿಮದಿಂದ ರಕ್ಷಿಸಲು 5 ಸರಳ ವಿಧಾನಗಳು ಇಲ್ಲಿವೆ.
1. ಹಳೆಯ ಕಾಟನ್ ಬಟ್ಟೆಗಳಿಂದ ಗಿಡಗಳನ್ನು ಮುಚ್ಚಿ
ಗಿಡಗಳನ್ನು ಹಿಮದಿಂದ ಕಾಪಾಡಲು ಸುಲಭವಾದ ದಾರಿ ಎಂದರೆ ಹಳೆಯ ಕಾಟನ್ ಬೆಡ್ಶೀಟ್, ಹಗುರವಾದ ಬ್ಲಾಂಕೆಟ್ ಅಥವಾ ಉಸಿರಾಡಲು ಬಿಡುವ ಗಾರ್ಡನ್ ಫ್ಯಾಬ್ರಿಕ್ನಿಂದ ಅವನ್ನು ಮುಚ್ಚುವುದು. ಮಣ್ಣಿನಲ್ಲಿರುವ ಬೆಚ್ಚಗಿನ ವಾತಾವರಣವನ್ನು ಕಾಪಾಡಿಕೊಳ್ಳಲು ಸೂರ್ಯಾಸ್ತಕ್ಕೂ ಮುನ್ನವೇ ಗಿಡಗಳನ್ನು ಕವರ್ ಮಾಡಿ. ಬಟ್ಟೆ ನೆಲಕ್ಕೆ ತಾಗುವಂತಿರಬೇಕು, ಆದರೆ ಸೂಕ್ಷ್ಮ ಎಲೆಗಳ ಮೇಲೆ ಭಾರ ಬೀಳಬಾರದು. ಹಗಲಿನಲ್ಲಿ ತಾಪಮಾನ ಹೆಚ್ಚಾದಾಗ ಈ ಕವರ್ ತೆಗೆಯಿರಿ.
2. ಒಣ ಎಲೆಗಳು ಅಥವಾ ಹುಲ್ಲಿನ ಪದರ ಹಾಕಿ
ವಿಪರೀತ ಚಳಿಯಿಂದ ಬೇರುಗಳನ್ನು ಕಾಪಾಡಲು ಮಲ್ಚಿಂಗ್ (Mulching) ಒಂದು ನೈಸರ್ಗಿಕ ವಿಧಾನ. ಗಿಡದ ಬುಡದ ಸುತ್ತಲೂ ಒಣ ಎಲೆಗಳು, ಒಣಹುಲ್ಲು ಅಥವಾ ಕತ್ತರಿಸಿದ ಹುಲ್ಲನ್ನು ಹರಡಿ. ಇದು ಮಣ್ಣನ್ನು ಬೆಚ್ಚಗಿಡುತ್ತದೆ, ತೇವಾಂಶ ಕಾಪಾಡುತ್ತದೆ ಮತ್ತು ದಿಢೀರ್ ತಾಪಮಾನ ಬದಲಾವಣೆಯನ್ನು ತಡೆಯುತ್ತದೆ. ಆದರೆ, ಕಾಂಡ ಕೊಳೆಯದಂತೆ ತಡೆಯಲು ಈ ಪದರವನ್ನು ಮುಖ್ಯ ಕಾಂಡದಿಂದ ಸ್ವಲ್ಪ ದೂರವಿಡಿ.
3. ಮಂಜಿನ ರಾತ್ರಿಗೂ ಮುನ್ನ ಗಿಡಗಳಿಗೆ ನೀರುಣಿಸಿ
ಒಣ ಮಣ್ಣಿಗಿಂತ ಒದ್ದೆ ಮಣ್ಣು ಹೆಚ್ಚು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ, ಇದು ತಾಪಮಾನ ಕುಸಿದಾಗ ಬೇರುಗಳನ್ನು ರಕ್ಷಿಸುತ್ತದೆ. ಮಂಜು ಬೀಳುವ ನಿರೀಕ್ಷೆಯಿದ್ದರೆ, ಬೆಳಿಗ್ಗೆ ಅಥವಾ ಮಧ್ಯಾಹ್ನದ ಆರಂಭದಲ್ಲೇ ನಿಮ್ಮ ತೋಟಕ್ಕೆ ನೀರು ಹಾಕಿ. ಆದರೆ ಅತಿಯಾಗಿ ನೀರು ಹಾಕಬೇಡಿ, ಏಕೆಂದರೆ ಹೆಚ್ಚು ತೇವಾಂಶದಿಂದ ಬೇರುಗಳಿಗೆ ಹಾನಿಯಾಗಬಹುದು.
4. ಕುಂಡದ ಗಿಡಗಳನ್ನು ಸುರಕ್ಷಿತ ಜಾಗಕ್ಕೆ ಶಿಫ್ಟ್ ಮಾಡಿ
ನಿಮ್ಮ ಬಳಿ ಕುಂಡದಲ್ಲಿ ಬೆಳೆದ ಗಿಡಗಳಿದ್ದರೆ, ಅವನ್ನು ಗೋಡೆಯ ಹತ್ತಿರ, ಬಾಲ್ಕನಿಯ ಕೆಳಗೆ ಅಥವಾ ಸುರಕ್ಷಿತ ಮೂಲೆಗೆ ಶಿಫ್ಟ್ ಮಾಡಿ. ತಂಪಾದ ಗಾಳಿ ಮತ್ತು ಬಯಲು ಪ್ರದೇಶದಿಂದ ದೂರವಿಟ್ಟರೆ ಹಿಮದ ಹಾನಿ ಕಡಿಮೆಯಾಗುತ್ತದೆ. ಸಣ್ಣ ಕುಂಡಗಳನ್ನು ಒಟ್ಟಿಗೆ ಇಡುವುದರಿಂದಲೂ ತಾಪಮಾನದ ಏರಿಳಿತದಿಂದ ಅವನ್ನು ಕಾಪಾಡಬಹುದು.
5. ನೈಸರ್ಗಿಕ ತಡೆಗೋಡೆ (Wind Barrier) ನಿರ್ಮಿಸಿ
ತಂಪಾದ ಗಾಳಿ ಸೂಕ್ಷ್ಮ ಸಸ್ಯಗಳ ಮೇಲೆ ಹೆಚ್ಚು ಒತ್ತಡ ಬೀರುತ್ತದೆ. ನಿಮ್ಮ ತೋಟದ ಸುತ್ತ ಬಿದಿರಿನ ಪರದೆಗಳು, ಮರದ ಪ್ಯಾನಲ್ಗಳು ಅಥವಾ ದಪ್ಪಗಿರುವ ಪೊದೆಗಳನ್ನು ಬಳಸಿ ನೈಸರ್ಗಿಕವಾಗಿ ಗಾಳಿಯನ್ನು ತಡೆಯಬಹುದು. ಇದು ತಂಪಾದ ಗಾಳಿಗೆ ಗಿಡಗಳು ನೇರವಾಗಿ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ ಮತ್ತು ಚಳಿಯ ರಾತ್ರಿಗಳಲ್ಲಿ ರಕ್ಷಣೆ ನೀಡುತ್ತದೆ.
















