ಬಾಲಿವುಡ್ ನಟ ಆಮಿರ್ ಖಾನ್ ತಮ್ಮ 'ಲಲ್ಕಾರಾ' ಸಿನಿಮಾದ ಕ್ರಿಕೆಟ್ ತರಬೇತಿಗಾಗಿ ಗರ್ಲ್‌ಫ್ರೆಂಡ್ ಗೌರಿ ಸ್ಪ್ರ್ಯಾಟ್ ಜೊತೆ ದಕ್ಷಿಣ ಮುಂಬೈನ ಕೊಲಾಬಾದ ಐಷಾರಾಮಿ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ.

ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ಮುಂಬರುವ 'ಲಲ್ಕಾರಾ' ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ತಮ್ಮ ಗರ್ಲ್‌ಫ್ರೆಂಡ್ ಗೌರಿ ಸ್ಪ್ರ್ಯಾಟ್ ಜೊತೆ ಮುಂಬೈನ ಕೊಲಾಬಾದಲ್ಲಿರುವ ಐಷಾರಾಮಿ ಫ್ಲಾಟ್‌ಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಆಮಿರ್ ಖಾನ್ ಅವರ ಬಾಂದ್ರಾ ಮನೆ ನವೀಕರಣಗೊಳ್ಳುತ್ತಿದೆ. ಹೀಗಾಗಿ ಅವರು ತಾತ್ಕಾಲಿಕವಾಗಿ ಅಲ್ಲಿಂದ ಶಿಫ್ಟ್ ಆಗಿದ್ದಾರೆ. ಆದರೆ ಹೊಸ ಮನೆಗೆ ಹೋಗಿರುವುದು ಅವರಿಗೆ ವೃತ್ತಿಪರವಾಗಿಯೂ ಸಹಾಯ ಮಾಡುತ್ತಿದೆ.

ತಮ್ಮ ಮುಂದಿನ ಚಿತ್ರಕ್ಕಾಗಿ ಅವರು ಕ್ರಿಕೆಟ್ ತರಬೇತಿ ಪಡೆಯುತ್ತಿದ್ದು, ಹೊಸ ಮನೆಯಿಂದ ಆ ಮೈದಾನಕ್ಕೆ ಹೋಗಲು ಸುಲಭವಾಗುತ್ತಿದೆ. ಮಿಡ್-ಡೇ ವರದಿ ಪ್ರಕಾರ, ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಮುಂಬರುವ ಸ್ಪೋರ್ಟ್ಸ್ ಡ್ರಾಮಾ ಸಿನಿಮಾಗಾಗಿ ಆಮಿರ್ ಖಾನ್ ದಕ್ಷಿಣ ಮುಂಬೈನ ಕ್ರಿಕೆಟ್ ಮೈದಾನದ ಹತ್ತಿರವೇ ವಾಸವಿದ್ದಾರೆ. ಇದು ಅವರ ಬ್ಯುಸಿ ಪ್ರಾಕ್ಟೀಸ್ ಶೆಡ್ಯೂಲ್‌ಗೆ ಅನುಕೂಲವಾಗಿದೆ.

ಆಮಿರ್ ಖಾನ್ ಕೊಲಾಬಾಗೆ ಯಾಕೆ ಶಿಫ್ಟ್ ಆದರು?

ವರದಿಗಳ ಪ್ರಕಾರ, ಅವರ ಬಾಂದ್ರಾ ಮನೆ ರಿಪೇರಿ ಆಗುತ್ತಿರುವುದು ಒಂದು ಕಾರಣವಾದರೆ, ಸಿನಿಮಾಗೆ ಬೇಕಾದ ತಯಾರಿ ನಡೆಸಲು ಅನುಕೂಲವಾಗಲಿ ಎಂದು ಆಮಿರ್ ಹಾಗೂ ಗೌರಿ ಕೊಲಾಬಾದ ಸುಂದರವಾದ ಮನೆಗೆ ಶಿಫ್ಟ್ ಆಗಿದ್ದಾರೆ. ಈ ಏರಿಯಾದಿಂದ ನಟನಿಗೆ ಕ್ರಿಕೆಟ್ ಪ್ರಾಕ್ಟೀಸ್ ಸೆಷನ್‌ಗಳಿಗೆ ಹೋಗುವುದು ತುಂಬಾ ಸುಲಭ. 1952ರಲ್ಲಿ ನಡೆದ ಭಾರತ-ಪಾಕಿಸ್ತಾನ ಟೆಸ್ಟ್ ಸರಣಿ ಆಧರಿಸಿದ 'ಲಲ್ಕಾರಾ' ಚಿತ್ರದಲ್ಲಿ ಆಮಿರ್, ಖ್ಯಾತ ಭಾರತೀಯ ಕ್ರಿಕೆಟರ್ ಲಾಲಾ ಅಮರ್‌ನಾಥ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ನಟ ಕಟ್ಟುನಿಟ್ಟಾದ ಫಿಟ್‌ನೆಸ್ ಹಾಗೂ ಡಯಟಿಷಿಯನ್ ಸೂಚಿಸಿದಂತೆ ಸಸ್ಯಾಹಾರಿ ಡಯಟ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

'ಲಲ್ಕಾರಾ' ಚಿತ್ರಕ್ಕಾಗಿ ಆಮಿರ್ ಕ್ರಿಕೆಟ್ ತರಬೇತಿ ಆರಂಭ

ಆಮಿರ್ ಒಬ್ಬರೇ ಈ ಸಿನಿಮಾಗಾಗಿ ತಯಾರಿ ನಡೆಸುತ್ತಿಲ್ಲ. ಅವರ ಸಹನಟರಾದ ವಿಕ್ರಾಂತ್ ಮಾಸ್ಸೆ, ಜಿತೇಂದ್ರ ಕುಮಾರ್ ಹಾಗೂ ಧೈರ್ಯ ಕರ್ವಾ ಕೂಡ ದಕ್ಷಿಣ ಮುಂಬೈನ ಐತಿಹಾಸಿಕ ಕ್ಲಬ್‌ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾರೆ. ಕುತೂಹಲದ ಸಂಗತಿ ಎಂದರೆ, ಇಬ್ಬರು ಮಾಜಿ ಭಾರತೀಯ ಕ್ರಿಕೆಟರ್ಸ್ ಈ ನಟರಿಗೆ ತರಬೇತಿ ನೀಡುತ್ತಿದ್ದಾರೆ. ಕಬೀರ್ ಖಾನ್ ಅವರ 2021ರ ಸ್ಪೋರ್ಟ್ಸ್ ಡ್ರಾಮಾ '83' ಸಿನಿಮಾದ ನಟರಿಗೂ ಇವರೇ ತರಬೇತಿ ನೀಡಿದ್ದರು. ಸ್ವಾತಂತ್ರ್ಯದ ನಂತರದ ಭಾರತದ ಮೊದಲ ಟೆಸ್ಟ್ ಕ್ಯಾಪ್ಟನ್ ಲಾಲಾ ಅಮರ್‌ನಾಥ್ ಪಾತ್ರದಲ್ಲಿ ಆಮಿರ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಹಾಗೇ, ಮಾಜಿ ಪಾಕಿಸ್ತಾನ ಕ್ಯಾಪ್ಟನ್ ಅಬ್ದುಲ್ ಹಫೀಜ್ ಕರ್ದಾರ್ ಪಾತ್ರವನ್ನು ವಿಕ್ರಾಂತ್ ಮಾಸ್ಸೆ ನಿರ್ವಹಿಸಲಿದ್ದಾರೆ.

ಜನವರಿ 4, 2027ರಂದು 'ಲಲ್ಕಾರಾ' ಶೂಟಿಂಗ್ ಶುರು

ಸಿನಿಮಾದ ತಯಾರಿಗಾಗಿ ಸ್ಕ್ರಿಪ್ಟ್ ಓದುವಿಕೆ, ಲುಕ್ ಟೆಸ್ಟ್ ಹಾಗೂ ರೈಟಿಂಗ್ ಟೀಮ್ ಜೊತೆ ಚರ್ಚೆಗಳು ನಡೆಯುತ್ತಿವೆ. ಕಥೆ, ಸ್ಕ್ರಿಪ್ಟ್ ಮತ್ತು ಡೈಲಾಗ್ ಬರೆದಿರುವ ಪಿಯೂಷ್ ಮಿಶ್ರಾ ಹಾಗೂ ನೀರಜ್ ಸಿಂಗ್ ಅವರನ್ನೂ ಆಮಿರ್ ಭೇಟಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಜನವರಿ 4, 2027ರಂದು ಶುರುವಾಗುವ ನಿರೀಕ್ಷೆ ಇದೆ. ವಿಶೇಷ ಎಂದರೆ, ಇದೇ ದಿನಾಂಕ ಆಮಿರ್ ಹಾಗೂ ಅಶುತೋಷ್ ಗೋವಾರಿಕರ್ ಅವರಿಗೆ ತುಂಬಾ ಮುಖ್ಯ. ಯಾಕೆಂದರೆ ಜನವರಿ 4, 2000ರಂದು ಅವರ ಜನಪ್ರಿಯ 'ಲಗಾನ್' ಚಿತ್ರದ ಶೂಟಿಂಗ್ ಕೂಡ ಶುರುವಾಗಿತ್ತು.

ಇನ್ನು 1952ರ ವಿಭಜನೆಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಮೊದಲ ಕ್ರಿಕೆಟ್ ಸರಣಿ ಬಗ್ಗೆ 'ಲಲ್ಕಾರಾ' ಸಿನಿಮಾ ಇದೆ. ಈ ಸರಣಿಯನ್ನು ಲಾಲಾ ಅಮರ್‌ನಾಥ್ ನಾಯಕತ್ವದಲ್ಲಿ ಭಾರತ 2-1 ರಿಂದ ಗೆದ್ದಿತ್ತು. ಈ ಹಿಂದೆ ಆಮಿರ್ ಖಾನ್ ಹಾಗೂ ಅಶುತೋಷ್ ಗೋವಾರಿಕರ್ 'ಲಗಾನ್' ಚಿತ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡಿದ್ದರು. ಇದು ಭಾರತೀಯ ಸಿನಿಮಾರಂಗದ ಅತ್ಯುತ್ತಮ ಸ್ಪೋರ್ಟ್ಸ್ ಡ್ರಾಮಾಗಳಲ್ಲಿ ಒಂದು. ಆಮಿರ್ ತಮ್ಮ ಮುಂದಿನ ಐತಿಹಾಸಿಕ ಸ್ಪೋರ್ಟ್ಸ್ ಡ್ರಾಮಾಗಾಗಿ ಕ್ರಿಕೆಟ್ ತರಬೇತಿ, ಡಯಟ್ ಹಾಗೂ ತಾತ್ಕಾಲಿಕ ಮನೆ ಶಿಫ್ಟಿಂಗ್ ಮೂಲಕ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.