ಮಧುಕೇಶ್ವರ ಯಾಜಿ

ಈ ಘಟಕದಲ್ಲಿ ಪಂಪ್‌ಗಳನ್ನು ನಿರಂತರವಾಗಿ ಜೋಡಿಸಲಾಗುತ್ತಿದೆ. ಸರಿಸುಮಾರು 250 ಮಹಿಳೆಯರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಘಟಕದಲ್ಲಿ ಜನರಲ್‌ ಮ್ಯಾನೇಜರ್‌, ಸೂಪರ್‌ವೈಜರ್‌, ಕೆಲ ವಿಭಾಗಗಳ ಮುಖ್ಯಸ್ಥರು ಸೇರಿ ಎಲ್ಲರೂ ಮಹಿಳೆಯರೇ ಎಂಬುದು ವಿಶೇಷ. ಲೋಡಿಂಗ್‌, ಪ್ಯಾಕಿಂಗ್‌ ಹಾಗೂ ಇನ್ನಿತರ ಕೆಲವೇ ಕೆಲವು ವಿಭಾಗಗಳಲ್ಲಿ ಮಾತ್ರ ಕೈಬೆರಳೆಣಿಕೆಯ ಪುರುಷರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗೆ ಮಹಿಳಾ ಸಬಲೀಕರಣ, ಮಹಿಳಾ ಭದ್ರತೆ ಹಾಗೂ ಸುರಕ್ಷತೆ ವಿಚಾರದಲ್ಲಿ ಐಎಸ್‌ಒ ಸರ್ಟಿಫಿಕೆಟ್‌ ಸಹ ಸಿಕ್ಕಿದೆ.

ಈ ಘಟಕದ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ಲಕ್ಷ್ಮೇ ಯು. ಅವರ ಸಮರ್ಥ ನಾಯಕತ್ವದಲ್ಲಿ 9 ವರ್ಷಗಳಿಂದ ಈ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಲಕ್ಷ್ಮೇ ಅವರು ಎಂಜಿನಿಯರಿಂಗ್‌ ಪದವೀಧರರಾಗಿದ್ದು, ಸಿಮನ್ಸ್‌, ಕರ್ಲಾನ್‌ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿ 20 ವರ್ಷಗಳ ಸೇವಾ ಅನುಭವ ಹೊಂದಿದ್ದು ಕಳೆದ 3 ವರ್ಷದಿಂದ ಕೊಯಮತ್ತೂರಿನ ಈ ಕಿರ್ಲೋಸ್ಕರ್‌ ಬ್ರದರ್ಸ್‌ ಲಿಮಿಟೆಡ್‌ (ಕೆಬಿಎಲ್‌) ಕಂಪನಿಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.

ಇಲ್ಲಿ ಸಾಮಾನ್ಯವಾಗಿ ದಿನ ನಿತ್ಯ ಮನೆಯಲ್ಲೇ ಬಳಸುವ ಸಣ್ಣ ಪಂಪ್‌ಗಳ (ಅರ್ಧ ಎಚ್‌ಪಿ) ಜೋಡಣೆ ನಡೆಯುತ್ತಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಈ ಪಂಪ್‌ಗಳ ದುರಸ್ತಿ ಮಾಡುವ ತರಬೇತಿಯನ್ನೂ ಪಡೆದಿದ್ದು, ಹಲವರು ತಮ್ಮ ಗ್ರಾಮಗಳಲ್ಲಿ, ತಮ್ಮ ಸ್ನೇಹಿತರ ಮನೆಯಲ್ಲಿ ಪಂಪ್‌ ಕೆಟ್ಟಿದ್ದರೆ ದುರಸ್ತಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಈ ಘಟಕದಲ್ಲಿ ಬಾಯ್ಲರ್‌ ಫರ್ನೇಸ್‌ ಘಟಕ ಹಾಗೂ ಮೂರು ಹಂತದ ಕ್ವಾಲಿಟಿ ಚೆಕ್‌ನಲ್ಲಿ ಮಹಿಳೆಯರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ಹಂತದಲ್ಲಿ ಮೋಟರ್‌ ಟೆಸ್ಟ್‌, ಏರ್‌ ಲೀಕೇಜ್‌ ಟೆಸ್ಟ್‌ ಮತ್ತು ಫೈನಲ್‌ ಟೆಸ್ಟ್‌ಗಳನ್ನು ಮಾಡುತ್ತಾರೆ. ಎಲ್ಲರಿಗೂ ಸುರಕ್ಷತಾ ಉಪಕರಣ, ತರಬೇತಿ ನೀಡಲಾಗಿದೆ. ಅಪಾಯದ ಸಂದರ್ಭದಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂಬ ಸೂಚನೆ, ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಈ ಘಟಕ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರಿದೆ.

4 ಎಕರೆ ಪ್ರದೇಶದಲ್ಲಿ ಈ ಘಟಕದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಮಹಿಳೆಯರನ್ನೂ ಮುಂಜಾನೆ ಮನೆಯಿಂದ ವಾಹನದಲ್ಲಿ ಕರೆದುಕೊಂಡು ಬಂದು ಸಂಜೆ ಅವರ ಮನೆಯ ವರೆಗೆ ಬಿಟ್ಟು ಬರಲಾಗುತ್ತದೆ. ಈ ಘಟಕದಲ್ಲಿ ಕೆಲಸ ಮಾಡಲು ಕೇರಳದಿಂದಲೂ 12 ಮಹಿಳೆಯರು ಆಗಮಿಸುತ್ತಿದ್ದು ಅವರಿಗೂ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ಇಲ್ಲಿ ಅಗತ್ಯ ಹಾಗೂ ಪಂಪ್‌ನ ಬೇಡಿಕೆ ಇದ್ದಲ್ಲಿ ರಾತ್ರಿ ಪಾಳಿಯಲ್ಲೂ ಕಾರ್ಯ ನಿರ್ವಹಿಸಬೇಕಾಗುತ್ತದೆ (ಮಧ್ಯಾಹ್ನ 3 ರಿಂದ ರಾತ್ರಿ 11) ಆಗಲೂ ಸಹ ಅವರ ಮನೆಯ ವರೆಗೂ ಬಿಟ್ಟು ಬರಲಾಗುತ್ತದೆ. ರಾತ್ರಿಯ ಪಾಳಿಯ ವೇಳೆ ವಿಶೇಷ ಮಹಿಳಾ ಭದ್ರತಾ ಸಿಬ್ಬಂದಿಯೂ ಇರುತ್ತಾರೆ. ಮಹಿಳೆಯರ ಭದ್ರತೆ, ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಅಗತ್ಯವಿದ್ದ ಎಲ್ಲ ಸೌಲಭ್ಯ ನೀಡಲಾಗುತ್ತಿದೆ ಎಂದು ಲಕ್ಷ್ಮೇ ಹೇಳುತ್ತಾರೆ. ಇದರಿಂದ ಹೆಚ್ಚು ಹೆಚ್ಚಾಗಿ ಮಹಿಳಾ ಉದ್ಯೋಗಿಗಳು ಇಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ಹೆಚ್ಚಿನ ಮಹಿಳಾ ಉದ್ಯೋಗಿಗಳು ಸ್ವಾವಲಂಬಿಗಳಾಗಿದ್ದು, ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಈ ಘಟಕ ವಾರ್ಷಿಕ 200 ಕೋಟಿ ರು.ಗಳ ವ್ಯವಹಾರ ಮಾಡುತ್ತಿದೆ. 2010 ರಲ್ಲಿ ಈ ಘಟಕಕ್ಕೆ ಶಂಕುಸ್ಥಾಪನೆ ನಡೆದಿದ್ದು ಕೇವಲ 1 ವರ್ಷದಲ್ಲಿ ಘಟಕ ಕಾರ್ಯಾರಂಭ ಮಾಡಿದೆ.

ಘಟಕದಲ್ಲಿ ಪ್ರತಿ ತಿಂಗಳು 70 ಸಾವಿರದಿಂದ 80 ಸಾವಿರ ಪಂಪ್‌ ಉತ್ಪಾದಿಸಲಾಗುತ್ತಿದೆ. ಮೇ ತಿಂಗಳಲ್ಲಿ 1 ಲಕ್ಷ ಪಂಪ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ವರ್ಷದಲ್ಲಿ 8 ರಿಂದ 9 ಲಕ್ಷ ಪಂಪ್‌ ಉತ್ಪಾದಿಸಲಾಗುತ್ತಿದೆ. ಈ ಘಟಕದಲ್ಲಿ 1 ನಿಮಿಷದಲ್ಲಿ ಮೂರು ಪಂಪ್‌ಗಳನ್ನು ಜೋಡಿಸಲಾಗುತ್ತದೆ. ಸರಾಸರಿ 20 ಸೆಕೆಂಡ್‌ಗೆ 1 ಪಂಪ್‌ ಜೋಡಣೆ ನಡೆಯುತ್ತಿದ್ದು, 17 ಸೆಕೆಂಡ್‌ಗಳಲ್ಲಿ ಪಂಪ್‌ ಜೋಡಿಸಿ ಲಿಮ್ಕಾ ಬುಕ್‌ ಆಪ್‌ ರೆಕಾರ್ಡ್‌ನಲ್ಲಿ ಸಹ ಸೇರಿದೆ.

ಸಂಸ್ಥೆಯಿಂದ ತನ್ನ ಮಹಿಳಾ ಉದ್ಯೋಗಿಗಳ ಸಾಮಾಜಿಕ, ಆರ್ಥಿಕ ಕಾಳಜಿಯನ್ನು ನಿಭಾಯಿಸಲಾಗುತ್ತಿದೆ. ಮಹಿಳೆಯರಲ್ಲಿ ಉಳಿತಾಯ ಪ್ರವೃತ್ತಿ ಬೆಳೆಸಲಾಗುತ್ತಿದೆ. ಎಲ್ಲ ಉದ್ಯೋಗಿಗಳು ಬ್ಯಾಂಕ್‌ ಖಾತೆ ಆರಂಭಿಸುವಂತೆ ಪ್ರೇರೇಪಿಸಲಾಗಿದ್ದು, ಉದ್ಯೋಗಿಗಳಿಗೆ ವಿಶೇಷ ಸಂದರ್ಭದಲ್ಲಿ ಧನ ಸಹಾಯ ನೀಡಲಾಗುತ್ತಿದೆ. ಮಹಿಳಾ ಉದ್ಯೋಗಿಗಳ ಚಿಕ್ಕ ಮಕ್ಕಳಿಗೆ ದಿನದ ಪಾಲನೆಗಾಗಿ ಇಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಮಧ್ಯಾಹ್ನ ಇಲ್ಲಿ ಕೇವಲ 5 ರು.ಗೆ ರುಚಿಯಾದ, ಶುಚಿಯಾದ ಸತ್ವಭರಿತ ಊಟ ನೀಡಲಾಗುತ್ತಿದ್ದು, ಮುಂಜಾನೆ ಮತ್ತು ಸಂಜೆ ಚಹಾದ ಜೊತೆ ಅಲ್ಪೋಪಹಾರದ ವ್ಯವಸ್ಥೆಯೂ ಇದೆ. ಉದ್ಯೋಗಿಗಳು ಅವರ ಕುಟುಂಬದವರಿಗೆ ಆರೋಗ್ಯ ಶಿಬಿರ, ನ್ಯೂಟ್ರಿಷಿಯಸ್‌ ಆಹಾರ ನೀಡುವುದು ನಾಟಕ, ಚರ್ಚಾ ಸ್ಪರ್ಧೆ ಏರ್ಪಡಿಸುವುದು ನಡೆದಿದೆ. ಘಟಕದ ಹಲವಾರು ಉದ್ಯೋಗಿಗಳು ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಜಪಾನದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಈ ಘಟಕದ ಕ್ವಾಲಿಟಿ ಸರ್ಕಲ್‌ ಆಯ್ಕೆಯಾಗಿದೆ. ಅವಿದ್ಯಾವಂತರನ್ನೂ ತರಬೇತಿಗೊಳಿಸಿ ಅವರು ಸೂಪರವೈಜರ್‌ ಹಾಗೂ ಮೇಲ್ವಿಚಾರಕರಾಗಿ ನೇಮಿಸಲಾಗಿದೆ.

ಸಂಸ್ಥೆಯ ಬಗ್ಗೆ

ಶತಮಾನದ ಇತಿಹಾಸವಿರುವ ಮೂಲತಃ ರಾಜ್ಯದ ಬೆಳಗಾವಿಯಲ್ಲಿ ಆರಂಭವಾಗಿ ಮಹಾರಾಷ್ಟ್ರದ ಪುಣಾದಲ್ಲಿ ನೆಲೆ ನಿಂತಿರುವ ಪಂಪ್‌ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ಕಿರ್ಲೋಸ್ಕರ್‌ ಸಂಸ್ಥೆಯ ಅಡಿಯಲ್ಲಿ ಈ ಘಟಕ ಬರುತ್ತದೆ. ಇಲ್ಲಿ ಕೇವಲ ಅರ್ಧ ಎಚ್‌.ಪಿ. ಪಂಪ್‌ಗಳನ್ನು ಮಾತ್ರ ತಯಾರಿಸಲಾಗುತ್ತದೆ. ಏಷ್ಯಾದ ಪಂಪ್‌ ಸಿಟಿ ಎಂದೇ ಖ್ಯಾತವಾಗಿರುವ ಇಲ್ಲಿ ಪಂಪ್‌ ತಯಾರಿಕೆಗೆ ಅಗತ್ಯವಿರುವ ಪೌಂಡ್ರಿ ಘಟಕಗಳು ಹಾಗೂ ಅಗತ್ಯ ಮೂಲ ವಸ್ತುಗಳು ಸಿಗುವುದರಿಂದ ದೇಶದ ಬಹುತೇಕ ಹೆಸರಾಂತ, ಪ್ರಸಿದ್ಧ ಪಂಪ್‌ ಉತ್ಪಾದನಾ ಘಟಗಳು ಕೊಯಮತ್ತೂರಿನಲ್ಲಿಯೇ ಇವೆ.

ಶತಮಾನದ ಹಿಂದೆ (1888) ಲಕ್ಷ್ಮಣರಾವ್‌ ಕಿರ್ಲೋಸ್ಕರ್‌ ಮತ್ತು ರಾಮಣ್ಣ ಕಿರ್ಲೋಸ್ಕರ್‌ ಎಂಬ ಸಹೋದರರು ಆರಂಭಿಸಿರುವ ಕಿರ್ಲೋಸ್ಕರ್‌ ಬ್ರದರ್ಸ್‌ ಲಿಮಿಟೆಡ್‌ ಕಂಪನಿ ಇದೀಗ ದೇಶದ ವಿವಿಧೆಡೆ 75 ಮಾದರಿಯ ಪಂಪ್‌ ಮತ್ತು 28 ಬಗೆಯ ವಾಲ್‌್ವಗಳನ್ನು ಉತ್ಪಾದನೆ ಮಾಡುತ್ತ ದೇಶದಲ್ಲಿ ಪಂಪ್‌ ಉತ್ಪಾದನೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಸಂಸ್ಥೆಯಲ್ಲಿ 6 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಸಂಜಯ ಕಿರ್ಲೋಸ್ಕರ್‌ ಇದರ ನೇತೃತ್ವ ವಹಿಸಿದ್ದಾರೆ.

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಕೊಯಮತ್ತೂರಿನ ಘಟಕ ವಿಸ್ತರಣೆಗೂ ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಆರಂಭವಾಗಿರುವ ಈ ಘಟಕ ಇಂದು ಇತರ ಘಟಕಗಳಿಗೆ ಮಾದರಿಯಾಗಿದೆ.