ಮಗು ಅಳ್ತಿದೆ ಎಂದ ಕೂಡಲೇ, ಮೊಲೆಯನ್ನು ಬಾಯಿಗಿಡಬೇಡಿ

First Published 29, Jun 2018, 2:19 PM IST
Breastfeeding mothers should be aware of these
Highlights

ಮಗುವಿಗೆ ತಾಯಿ ಹಾಲು ಬಹು ಮುಖ್ಯವಾಗಿದ್ದು,  ಅದರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹಾಲುಣಿಸುವ ರೀತಿ ಬದಲಾದರೂ, ಮಗುವಿಗೆ ಅತ್ಯಗತ್ಯ ಪೋಷಿಕಾಂಶ ಸಿಗುವಲ್ಲಿ ಹಿನ್ನಡೆಯಾಗುತ್ತದೆ. ಬಾಣಂತಿಯಿದ್ದಾಗ ತನ್ನ ಆರೋಗ್ಯ ಮಾತ್ರವಲ್ಲ ಮಗುವಿನ ಆರೈಕೆಗೂ ಹೆಚ್ಚಿನ ಕಾಳಜಿ ನೀಡುವುದರೊಂದಿಗೆ ಸ್ತನ ನೈರ್ಮಲ್ಯವನ್ನೂ ಗಮನಿಸಬೇಕು. 

ಇನ್ನು ಮಾತು ಬಾರದ ಮಗುವಿಗೆ ಅಳುವುದೊಂದೇ ತನ್ನ ಭಾವನೆಯನ್ನು ವ್ಯಕ್ತಪಡಿಸೋ ಮಾರ್ಗ. ಹಾಗಂತ ಅಳುತ್ತಿದೆ ಎಂದ ಕೂಡಲೇ ಹಸಿವಿಗಾಗಿಯೇ ಎಂದು ಅರ್ಥೈಸಿಕೊಳ್ಳಲೂ ಬಾರದು. ಬೇರೆ ಇನ್ನೇನಕ್ಕೋ ಅಳಬಹುದು. 'ಕೂಡಲೇ ಬಾಯಿಗೆ ಮೊಲೆ ಇಡಬೇಡಿ..' ಎನ್ನುತ್ತಾರೆ ಓಶೋ. ಮಗುವಿಗೆ ಸ್ವಾತಂತ್ರ್ಯವಾಗಿ ಚಿಂತಿಸುವಂತೆ ಆರಂಭದಿಂದಲೇ ಕಲಿಸಬೇಕು. ಮಗುವಿನ ಭಾವನೆ ಅರಿತುಕೊಂಡು, ಅದರ ಹೊಟ್ಟೆಯೆಡೆಗೆ ಗಮನ ಹರಿಸಬೇಕು.

ತಾಯಿ ತೆಗೆದುಕೊಳ್ಳುವ ಆಹಾರದ ಮೇಲೆ ಮಗುವಿಗೆ ಲಭ್ಯವಾಗುವ ಹಾಲಿನ ಪ್ರಮಾಣದ ಅವಲಂಬಿತವಾಗಿರುತ್ತದೆ. ಅಂದೆ ಮೇಲೆ ಹೇಗೆ ಹಾಲುಣಿಸಿದರೆ ಸೂಕ್ತ?

ಹುಟ್ಟಿನಿಂದ - 2 ತಿಂಗಳು :

ಹುಟ್ಟಿದ ಮಗು ಬಹುತೇಕ ಸಮಯವನ್ನು ನಿದ್ರೆಯಲ್ಲಿಯೇ ಕಳೆಯುತ್ತದೆ. ಅಮ್ಮನ ಎದೆಯಾಳದಲ್ಲಿ ಬೆಚ್ಚಿಗಿದ್ದ ಮಗು, ಒಮ್ಮೆ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ತುಸು ಸಮಯ ತೆಗೆದುಕೊಳ್ಳುತ್ತದೆ. ಅಮ್ಮನೊಂದಿಗೆ ಬಾಂಧವ್ಯ ಬೆಸೆದುಕೊಳ್ಳಲೂ ಇದು ಅದ್ಭುತ ಸಮಯ. ಹಾಲು ಚೀಪಲೂ ಕಷ್ಟ ಪಡುವ ಮಗುವಿಗೆ, ತಾಯಿ ಎಲ್ಲ ರೀತಿಯಲ್ಲಿಯೂ ಸಹಕರಿಸಬೇಕು. 15 ದಿನಗಳ ನಂತರ ದಿನಕ್ಕೆ 10-12 ಬಾರಿ ಹಾಲುಣಿಸಬೇಕು. 2-3 ಗಂಟೆಗೊಮ್ಮೆ, 25-45 ನಿಮಿಷಗಳ ಅಂತರದಲ್ಲಿ ಹಾಲುಣಿಸಿದರೆ ಒಳ್ಳೆಯದು. 

2-6 ತಿಂಗಳು ಹಾಗೂ ನಂತರ:

ಈ ಸಮಯದಲ್ಲಿ ಮಗುವಿನ ಹೊಟ್ಟೆ ಗಾತ್ರ ದೊಡ್ಡದಾಗುತ್ತಾ ಹೋಗುತ್ತದೆ. ಹಾಲು ಕುಡಿಯಲು ಚೆನ್ನಾಗಿ ಕಲಿಯುವ ಕಂದಮ್ಮ, ಯಾವುದೇ ತೊಂದರೆಯಿಲ್ಲದೇ ಹೊಟ್ಟೆ ತುಂಬಿಸಿಕೊಳ್ಳುತ್ತದೆ.  ಅದಕ್ಕೆ ಬೇಕಾದಷ್ಟು ಹಾಲು ಕುಡಿದುಕೊಳ್ಳುವುದರಿಂದ ದಿನಕ್ಕೆ 7-8 ಸಲ ಫೀಡ್ ಮಾಡಿಸಿ. ಪ್ರತಿ ಫೀಡ್ ಅವಧಿ 15-25 ನಿಮಿಷ ಕಾಲಾವಕಾಶ ಇರಬೇಕು. ಮಗು ತನಗೆ ಬೇಕಾದಷ್ಟು ಹಾಲು ಕುಡಿದು, ಬಿಡುವ ಜ್ಞಾನ ಈ ವಯಸ್ಸಲ್ಲಿ ಬಂದಿರುತ್ತದೆ.

ಮಗುವಿಗೆ ಆರು ತಿಂಗಳು ಆಗುತ್ತಿದ್ದಂತೆ ಮೆದುವಾಗಿರುವ ಆಹಾರ ತಿನ್ನಿಸಲು ಆರಂಭಿಸಿದರೂ ಒಳ್ಳೆಯದು. ತುಂಬಾ ಕಡಿಮೆ ಪ್ರಮಾಣದಲ್ಲಿ ಆರಂಭಿಸಿ, ನಂತರ ಹೆಚ್ಚಿಸುತ್ತಾ ಹೋಗಬೇಕು. ಯಾವುದೇ ಕಾರಣಕ್ಕೂ ಒತ್ತಾಯ ಮಾಡಬಾರದು. ಈ ಸಮಯದಲ್ಲಿ ಶೇ.50ರಷ್ಟು ಎದೆ ಹಾಲು ಹಾಗೂ ಶೇ.50ರಷ್ಟು ಹೊರಗಿನ ಆಹಾರ ನೀಡಿದರೂ ಓಕೆ. ಮಗುವಿನ ಮಗುವಿಗೆ ಇದರ ಅಗತ್ಯ ವಿಭಿನ್ನವಾಗಿರುತ್ತದೆ.

ಮಗುವಿಗೆ ವರ್ಷವಾದಾಗ...

ಈ ವಯಸ್ಸಿನಲ್ಲಿ ಮಗು 4-5 ಸಲ ಆಹಾರ ಸೇವಿಸಿದರೆ ಒಳ್ಳೆಯದು. ಮಕ್ಕಳು ಎಷ್ಟು ಆ್ಯಕ್ಟಿವ್ ಎನ್ನೋದರ ಮೇಲೆ, ಆಹಾರ ಪ್ರಮಾಣವೂ ಅವಲಂಬಿತವಾಗಿರುತ್ತದೆ. ಹಸಿವಾದರೆ ಒಂದಲ್ಲ, ಒಂದು ರೀತಿಯಲ್ಲಿ ಅಭಿವ್ಯಕ್ತಗೊಳಿಸಲು ಮಗು ಈ ಏಜ್‌ನಲ್ಲಿ ಕಲಿಯುವುದರಿಂದ, ಹಸಿವೆಂದಾಗಲೇ ಆಹಾರ ನೀಡಿ. ನಿಮಗೆ ಯಾವಾಗ ಬೇಕೋ ಆಗಲೇ, ಆ ಮುದ್ದು ಕಂದಮ್ಮನಿಗೆ ತಿನಿಸಲು ಪರದಾಡಬೇಡಿ. ಮಗುವಿಗೆ ಆಹಾರದ ಮೇಲೆ ಪ್ರೀತಿ ಬೆಳೆಸಲು ಯತ್ನಿಸಬೇಕೇ ಹೊರತು, ವ್ಯಾಕರಿಕೆ ಬರುವಂತೆ ಮಾಡಬಾರದು. 

loader