childhood school memories: ಶಾಲೆಗೆ ಹೋಗಲು ಹಠ ಹಿಡಿದ ಬಾಲಕನೊಬ್ಬನನ್ನು, ಆತ ಹಿಡಿದುಕೊಂಡಿದ್ದ ಮಂಚದ ಸಮೇತ ಪೋಷಕರು ಶಾಲೆಗೆ ಹೊತ್ತು ತಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ತಮ್ಮ ಬಾಲ್ಯದ ದಿನಗಳನ್ನು, ತಾವು ಹೇಳುತ್ತಿದ್ದ ನೆಪಗಳನ್ನು ನೆನಪಿಸಿಕೊಂಡಿದ್ದಾರೆ.
ಶಾಲೆಗೆ ಹೋಗದ ಬಾಲಕನಿಗೆ ಪೋಷಕರು ಮಾಡಿದ್ದೇನು?
ಶಾಲೆಗೆ ಹೋಗಲು ಒಪ್ಪದ ಬಾಲಕನನ್ನು ಮನೆಯವರು ಮಂಚದ ಸಹಿತ ಶಾಲೆಗೆ ಕರೆತಂದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ವೀಡಿಯೋ ನೋಡಿದ ಅನೇಕರು ಬಾಲ್ಯದ ನೆನಪುಗಳಿಗೆ ಜಾರಿದ್ದಾರೆ. Ritesh Kumar Todabhim ಎಂಬುವವರು ಫೇಸ್‌ಬುಕ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಬಾಲಕನೋರ್ವ ಮಂಚದ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಶಾಲೆಗೆ ಬರಲ್ಲ ಎಂದು ಅಳುತ್ತಿದ್ದರೆ, ಆತನ ಮನೆಯವರು ಆತ ತಬ್ಬಿ ಹಿಡಿದ ಮಂಚದ ಸಮೇತ ಆತನನ್ನು ಶಾಲೆಗೆ ಕರೆದುಕೊಂಡು ಬಂದಿದ್ದಾರೆ. ಇತ್ತ ಬಾಲಕ ಜೋರಾಗಿ ಅಳುತ್ತಾ ಶಾಲೆಗೆ ಹೋಗಲ್ಲ ಎಂದು ಹೇಳುವುದನ್ನು ಕಾಣಬಹುದು. ವೀಡಿಯೋದಲ್ಲಿ ಬಟ್ಟೆಯಿಂದ ಹೆಣೆದ ಮರದ ಕಾಲುಗಳಿರುವ ಮಂಚದ ಒಂದು ಪಕ್ಕದಲ್ಲಿ ಬಾಲಕ ಅದರ ಕಾಲನ್ನು ಹಿಡಿದು ಶಾಲೆಗೆ ಬರಲ್ಲ ಎಂದು ಅಳುತ್ತಿದ್ದರೆ, ಇಬ್ಬರು ಯುವಕರು ಈ ಮಂಚವನ್ನು ಎತ್ತಿಕೊಂಡೆ ಶಾಲೆಯ ಆವರಣಕ್ಕೆ ಬಂದಿದ್ದಾರೆ.
ಬಾಲಕನ ಶಾಲೆಗೆ ಕರೆತರುತ್ತಿರುವ ವೀಡಿಯೋ ಭಾರಿ ವೈರಲ್
ಅಲ್ಲಿ ಶಾಲೆಗೆ ಬಂದ ಹಲವು ಮಕ್ಕಳಿದ್ದು, ಅವರೆಲ್ಲರೂ ಶಾಲೆಗೆ ಬರಲ್ಲ ಎಂದು ಅಳುತ್ತಿರುವ ಈ ಬಾಲಕನನ್ನು ನೋಡಿ ನಗುತ್ತಿದ್ದಾರೆ. ಶಾಲೆಯ ಬಾಗಿಲಲ್ಲಿ ಮಂಚವನ್ನು ಕೆಳಗೆ ಇಟ್ಟ ಯುವಕರು ಅಲ್ಲಿದ್ದ ಬಹುಶಃ ಶಿಕ್ಷಕರೋ ಅಥವಾ ಕ್ಲಾರ್ಕ್ ಅಂತ ಗೊತ್ತಿಲ್ಲ, ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಅಲ್ಲಿಗೆ ಬಂದ ಅವರು ಬಾಲಕನ ಕೈಗಳನ್ನು ಮಂಚದಿಂದ ಬಿಡಿಸಲು ನೋಡುತ್ತಿದ್ದು, ಆದರೆ ಬಾಲಕ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಮಂಚದಿಂದ ಕೈ ಬಿಟ್ಟು ಶಾಲೆಗೆ ಹೋಗುವುದಕ್ಕೆ ಆತ ಯಾವುದೇ ಕಾರಣಕ್ಕೂ ಸಿದ್ಧನಿಲ್ಲ. ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ರಿತೇಶ್ ಕುಮಾರ್ ಅವರು ಮಕ್ಕಳು ಶಾಲೆಗೆ ಹೋಗುವುದಕ್ಕೆ ಹಠ ಹಿಡಿದಾಗ ಕುಟುಂಬದವರು ಏನು ಮಾಡಿದರು ನೋಡಿ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋ ನೋಡಿದ ಅನೇಕರು ಬಾಲ್ಯದ ನೆನಪು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಆತ ಯಾಕೆ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ ಆತನ ಬಳಿ ಕಾರಣ ಕೇಳಿ ಬಹುಶಃ ಶಾಲೆಯಲ್ಲಿ ಏನಾದರು ಘಟನೆ ನಡೆದಿರಬಹುದು ಎಂದು ಒಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಅನೇಕರನ್ನು ಬಾಲ್ಯದ ನೆನಪುಗಳಿಗೆ ಜಾರಿಸಿದ ವೀಡಿಯೋ
ಅದೇನೆ ಇರಲಿ ಬಾಲ್ಯದಲ್ಲಿ ಶಾಲೆಗೆ ಹೋಗುವುದೆಂದರೆ ಅನೇಕರಿಗೆ ಅದೊಂದು ಭಯಾನಕ ಅನುಭವ. ಅದರಲ್ಲೂ ಶಿಕ್ಷಕರು ಕೊಟ್ಟ ಹೋಮ್ ವರ್ಕ್ ಮಾಡದೇ ಹೋದಾಗ ನೋಟ್ಸ್, ಕಾಪಿ ಪುಸ್ತಕ ಬರೆಯದೇ ಇದ್ದಾಗ, ಮೊದಲ ತರಗತಿಯೇ ಗಣಿತ ಇದ್ದಾಗ ಅಥವಾ ಸರಿಯಾಗಿ ಬಾರಿಸುವ ಶಿಕ್ಷಕರಿದ್ದಾಗ ಶಾಲೆಗೆ ಹೋಗುವುದಕ್ಕೆ ಬಹುತೇಕ ಮಕ್ಕಳು ಹಿಂಜರಿಯುತ್ತಾರೆ. ಪೋಷಕರು ಶಾಲೆಗೆ ಹೋಗುವಂತೆ ಹೇಳಿದರೆ ಮೊದಲು ಬರುವ ಕಾರಣವೇ ಹೊಟ್ಟೆನೋವು, ಬಹುತೇಕ ಮಕ್ಕಳು ಇದೊಂದು ಕಾರಣವನ್ನು ತಮ್ಮ ಪೋಷಕರಿಗೆ ಹೇಳಿಯೇ ಇರ್ತಾರೆ. ಹೊಟ್ಟೆನೋವಾಗ್ತಿದೆ ಶಾಲೆಗೆ ಹೋಗಲ್ಲ, ನಂತರ ತಲೆನೋವು ಹಾಗೂ ತಲೆ ತಿರುಗೋದು ಇವು ನಾವು ಶಾಲೆಗೆ ಹೋಗ್ತಿದ್ದ ಸಮಯದಲ್ಲಿ ಮಕ್ಕಳು ನೀಡ್ತಿದ್ದ ಸಾಮಾನ್ಯ ಕಾರಣಗಳು.
ಈಗಿನಂತೆ ಆಗಿನ ಪೋಷಕರು ಮುದ್ಧು ಮಾಡ್ತಿರಲಿಲ್ಲ, ಮಕ್ಕಳು ಶಾಲೆಗೆ ಹೋಗಲ್ಲ ಎಂದು ಹೇಳಿದ್ದಾರೆ ಪೋಷಕರ ಅದರಲ್ಲೂ ಅಪ್ಪನ ಕೈಲಿ ಬೆತ್ತದ ಜೊತೆ ಬೆಲ್ಟ್ ರೆಡಿಯಾಗಿರುತ್ತಿತ್ತು. ಹೀಗಾಗಿಯೇ ಕೆಲ ಮಕ್ಕಳು ವಿಶೇಷವಾಗಿ ಹಳ್ಳಿಗಳಲ್ಲಿ ಮನೆಯಿಂದ ಹೊರಟು ಶಾಲೆಗೆ ತಲುಪುತ್ತಿರಲಿಲ್ಲ, ಬದಲಿಗೆ ಮರದ ಕೆಳಗೆ ಕುಳಿತು ಅಲ್ಲೇ ಅಮ್ಮ ಕೊಟ್ಟ ಬುತ್ತಿ ಬಿಚ್ಚಿ ತಿಂದು ಸಂಜೆ ಶಾಲೆ ಬಿಡುವಂತಹ ವೇಳೆ ವಾಪಸ್ ಮನೆಗೆ ಬರುತ್ತಿದ್ದರು. ಈ ವಿಚಾರ ಮನೆಯಲ್ಲಿ ಗೊತ್ತಾದಾಗ ಶಿಕ್ಷಕರಿಗಿಂತ ಜಾಸ್ತಿ ಮನೆಯಲ್ಲಿದ್ದ ಅಪ್ಪನೇ ಬೆನ್ನು ಹುಡಿಯಾಗುವಂತೆ ಥಳಿಸುತ್ತಿದ್ದರು. ಜೊತೆಗೆ ಮರುದಿನ ಶಾಲೆಯವರೆಗೆ ಬಂದು ಶಿಕ್ಷಕರಿಗೂ ದೂರು ಹೇಳಿ ಅವರಿಂದಲೂ ಸರಿಯಾಗಿ ಇಕ್ಕಿಸುತ್ತಿದ್ದರು. ಹೀಗಾಗಿ ಅಪ್ಪನ ಏಟಿಗಿಂತ ಶಿಕ್ಷಕರ ಏಟು ಓಕೆ ಅಂತ ಮಕ್ಕಳು ಶಾಲೆಗೆ ಭಯದಿಂದಲೇ ಹೋಗುತ್ತಿದ್ದರು. ಶಾಲೆಗೆ ಹೋಗದೇ ಇದ್ದವರು ಬೇರೆನೋ ಆಗ್ತಿದ್ರು. ಆದರೆ ಯಾರೂ ಕೂಡ ಇಂದಿನ ಮಕ್ಕಳಂತೆ ಸಾಯುವ ಪ್ರಯತ್ನ ಮಾಡ್ತಿರಲಿಲ್ಲ. ಏಟು ತಿಂದು ಮತ್ತಷ್ಟು ಗಟ್ಟಿಯಾಗುತ್ತಿದ್ದರು. ಹೀಗಿರುವಾಗ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿರುವ ವೀಡಿಯೋ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ..
ಇದನ್ನೂ ಓದಿ: ತನ್ನ ಸಾಕಿದವನಿಗೆ ತಾನು ಬೇಟೆಯಾಡಿದ ಮಾಂಸದಲ್ಲಿ ಪಾಲು ನೀಡಿದ ಸಿಂಹ: ವನ್ಯಲೋಕದ ವೀಡಿಯೋ ವೈರಲ್
ಇದನ್ನೂ ಓದಿ: ತಾಯ್ತನದ ಸುಖ ನೀಡುವ ಗಂಡು ಬೇಕು ಎಂದು ಜಾಹೀರಾತು: ಚೆಂದುಳ್ಳಿ ಚೆಲುವೆಗೆ ಮನಸೋತು 11 ಲಕ್ಷ ಕಳೆದುಕೊಂಡ ಕಂಟ್ರಾಕ್ಟರ್
