Lioness Sirga: ಸಿಂಹಿಣಿಯೊಂದು ತಾನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತನ್ನ ಸಾಕಿದ ಯುವಕನೊಂದಿಗೆ ಹಂಚಿಕೊಳ್ಳುವ ಅಪರೂಪದ ವಿಡಿಯೋ ವೈರಲ್ ಆಗಿದೆ. ತಾಯಿ ತೊರೆದಿದ್ದ ಈ ಸಿಂಹದ ಮರಿಯನ್ನು ವ್ಯಾಲೆಂಟಿನ್ ಗ್ರೂನರ್ ಎಂಬುವವರು ಸಾಕಿದ್ದಾರೆ.
ಸಾಕಿದವನ ಜೊತೆ ಬೇಟೆಯಾಡಿದ ಮಾಂಸ ಹಂಚಿಕೊಂಡ ಸಿಂಹ
ಸಿಂಹಿಣಿಯೊಂದು ತನ್ನನ್ನು ಸಾಕಿದ ಯುವಕನೊಂದಿಗೆ ತಾನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಹಂಚಿಕೊಳ್ಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವನ್ಯಲೋಕದ ಈ ಅಪರೂಪದ ವೀಡಿಯೋ ಈಗ ಜನರ ಸೆಳೆಯುತ್ತಿದೆ. ಆಫ್ರಿಕಾ ಮೂಲದ ಈ ಸಿಂಹದ ಹೆಸರಿನಲ್ಲಿಯೇ ಇರುವ sirgathelioness ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. Valentin Gruener ಎಂಬುವವರು ತಾಯಿ ತೊರೆದ ಈ ಪುಟ್ಟ ಮರಿ ಸಿಂಹವನ್ನು ಸಾಕಿದ್ದು, ಈಗ ಅದು ಬೆಳೆದು ದೊಡ್ಡವಳಾಗಿದ್ದು, ಬೇಟೆಯಾಡುವ ಹಂತಕ್ಕೆ ಬಂದಿದೆ. ಇವರ ಇನ್ಸ್ಟಾಗ್ರಾಮ್ ಪೇಜ್ ತುಂಬಾ ಈ ಸಿಂಹಿಣಿ ಸಿಗ್ರಾದ ಸಾಕಷ್ಟು ಫೋಟೋ ಹಾಗೂ ವೀಡಿಯೋಗಳಿವೆ. ಅಂತಹ ಅಪರೂಪದ ವಿಡಿಯೋಗಳಲ್ಲಿ ಇದು ಒಂದಾಗಿದ್ದು, ವನ್ಯಲೋಕದ ಬಗ್ಗೆ ಕುತೂಹಲ ಸೃಷ್ಟಿಸಿದೆ.
ಸಿಂಹಿಣಿ ಹಾಗೂ ಕೇರ್ ಟೇಕರ್ ವೀಡಿಯೋ ಭಾರಿ ವೈರಲ್
ಸಿಂಹಿಣಿ ಸಿಗ್ರಾ ಇತ್ತೀಚೆಗೆ oryx antelope ಎಂದು ಕರೆಯಲ್ಪಡುವ ಕಡವೆ ಜಾತಿಗೆ ಸೇರಿದ ಪ್ರಾಣಿಯನ್ನು ಬೇಟೆಯಾಡಿತ್ತು. ತಾನು ಸಾಕಿದ ಸಿಂಹಿಣಿ ಆಡಿದ ಬೇಟೆಯಲ್ಲಿ ಚೂರು ಪಾಲು ತೆಗೆದುಕೊಳ್ಳುವುದಕ್ಕೆ ಅದರ ಕೇರ್ ಟೇಕರ್ ಆಗಿದ್ದ ವ್ಯಾಲೆಂಟಿನ್ ಗ್ರೂನರ್ ಅವರು ಮುಂದಾಗುತ್ತಾರೆ. ಸಾಮಾನ್ಯವಾಗಿ ತಾವು ಆಡಿದ ಬೇಟೆಯನ್ನು ಬೇರೆಯವರು ತಿನ್ನುವುದಕ್ಕೆ ಸಿಂಹಗಳು ಬಿಡುವುದಿಲ್ಲ, ಆದರೆ ಇಲ್ಲಿ ಸಿಂಹಿಣಿ ಸಿಗ್ರಾ ಮಾತ್ರ ತನ್ನ ಮಾಲೀಕ ತಾನು ಬೇಟೆಯಾಡಿದ ಪ್ರಾಣಿಯ ಮಾಂಸದಲ್ಲಿ ಪಾಲು ಪಡೆದರು ಆಕ್ರಮಣಕಾರಿಯಾಗಿ ವರ್ತಿಸದೇ ಅಥವಾ ವಿರೋಧಿಸದೇ ಸುಮ್ಮನೇ ಕುಳಿತಿದೆ.
ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್
ಈ ವೀಡಿಯೋವನ್ನು ವ್ಯಾಲೆಂಟಿನ್ ಗ್ರೂನರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವಳು ಇತ್ತೀಚೆಗೆ ಹಿಡಿದ ಮಾಂಸದಲ್ಲಿ ಸ್ವಲ್ಪ ಭಾಗವನ್ನು ಬೆಂಕಿಯ ಮೇಲೆ ಬಾರ್ಬೆಕ್ಯೂ ಮಾಡಲು ತೆಗೆದುಕೊಂಡೆ, ಅವಳ ಹತ್ತಿರ ಬೆಂಕಿಹಚ್ಚುವ ಅಪರೂಪದ ಸಂದರ್ಭ ಅದು. ಸಾಮಾನ್ಯವಾಗಿ, ನಾನು ಅದನ್ನು ಮಾಡುವುದಿಲ್ಲ. ಆದರೆ ನನಗಾಗಿ ಮತ್ತು ತಂಡಕ್ಕಾಗಿ ಸ್ವಲ್ಪ ಮಾಂಸವನ್ನು ತೆಗೆದುಕೊಳ್ಳುವುದು ಸಹಜ, ವಿಶೇಷವಾಗಿ ತಂಪಾದ ಶುಷ್ಕ ಋತುವಿನಲ್ಲಿ ರಾತ್ರಿಗಳು ಶೂನ್ಯ ಡಿಗ್ರಿಗೆ ಇಳಿಯುತ್ತವೆ. ಮಾಂಸವು ದಿನಗಳವರೆಗೆ ತಾಜಾವಾಗಿರುತ್ತದೆ ಎಂದು ಗ್ರೂನರ್ ವೀಡಿಯೊದಲ್ಲಿ ಬರೆದುಕೊಂಡಿದ್ದಾರೆ.
ಸಿಂಹಿಣಿ ಬೇಟೆಯಾಡಿದ ಮಾಂಸದಿಂದ ಚಾಕು ಬಳಸಿ ಅವರು ಸ್ವಲ್ಪ ಮಾಂಸವನ್ನು ತೆಗೆದುಕೊಂಡು ಅಲ್ಲೇ ಬೆಂಕಿ ಹೊತ್ತಿಸಿ ಆ ಮಾಂಸವನ್ನು ಬೇಯಿಸುತ್ತಾರೆ. ನಂತರ ಸಿಂಹಿಣಿಗೂ ಅದನ್ನು ನೀಡುತ್ತಾರೆ. ಆದರೆ ಬೇಯಿಸಿದ ಮಾಂಸವನ್ನು ಮೂಸಿ ನೋಡುವ ಅದು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಸಿಗ್ರಾ ಆಡಿದ ಬೇಟೆಯಲ್ಲಿ ನಾನು ಪಾಲು ತೆಗೆದುಕೊಳ್ಳುವುದಕ್ಕೆ ಆಕೆಗೆ ಯಾವುದೇ ಅಭ್ಯಂತರವಿಲ್ಲ. ಇದು ಹಲವು ವರ್ಷಗಳ ಒಡನಾಟದ ಪರಿಣಾಮವಾಗಿದೆ. ಹಾಗಂತ ಇದನ್ನೂ ಯಾರೂ ಪ್ರಯತ್ನಿಸಬಾರದು ಏಕೆಂದರೆ ಯಾವುದೇ ಕಾಡಿನ ಪ್ರಾಣಿಯನ್ನು ವಿಶೇಷವಾಗಿ ಸಿಂಹವನ್ನು ಹೀಗೆ ಸಮೀಪಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಂಹಿಣಿ ಸಿಗ್ರಾ ಹಾಗೂ ಅದನ್ನು ಸಾಕಿದ ಗ್ರೂನರ್ ಅವರ ನಡುವಿನ ಈ ಅಪರೂಪದ ಒಡನಾಟಕ್ಕೆ ಜನ ಅಚ್ಚರಿಪಡುತ್ತಿದ್ದಾರೆ. ಇದನ್ನು ಸ್ವತಃ ಕಣ್ಣಿನಿಂದ ನೋಡುವವರೆಗೂ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಿಗ್ರಾ ಆಕೆಯನ್ನು ಸಾಕಿದ ಗ್ರೂನರ್‌ನನ್ನು ತನ್ನ ರಕ್ತಸಂಬಂಧಿಯಂತೆಯೇ ನೋಡುತ್ತಿದೆ. ಆಕೆಯ ಅಪ್ಪನೂ ಅಣ್ಣನೂ ಎಂಬಂತೆ ನೋಡುತ್ತಿದೆ. ಸಿಂಹಿಂಣಿ ಬೇಟೆಯಲ್ಲಿ ಪಾಲು ಪಡೆಯುವುದು ಒಂದು ಅತ್ಯಂತ ಧೈರ್ಯದ ನಡೆ ಇಂತಹದನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾಡುಪ್ರಾಣಿ ಸಿಂಹವೊಂದು ತನ್ನ ಮಾನವ ತಂದೆಯೊಂದಿಗೆ ತನ್ನ ಬೇಟೆಯನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚು ಅದ್ಭುತವಾದ ಬಾಂಧವ್ಯದ ಅನುಭವವನ್ನು ನಾನು ಊಹಿಸಲು ಸಾಧ್ಯವಿಲ್ಲ. ಸಿರ್ಗಾ ಜೊತೆಗಿನ ನಿಮ್ಮ ಒಡನಾಟ ತುಂಬಾ ಪ್ರೀತಿ, ತುಂಬಾ ಅರ್ಥವನ್ನು ಹೊಂದಿರುವಾಗ ಜಾತಿಗಳ ನಡುವಿನ ಗೆರೆಗಳು ತುಂಬಾ ತೆಳುವಾಗುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ವ್ಯಾಲೆಂಟಿನ್ ಗ್ರೂನರ್ ಅವರು ಸಿಗ್ರಾಳನ್ನು ಮೊದಲು ಭೇಟಿ ಮಾಡಿದಾಗ ಆಕೆ ಕೇವಲ 10 ದಿನದ ಮರಿಯಾಗಿದ್ದಳು. ದಕ್ಷಿಣ ಆಫ್ರಿಕಾದ ನಮಿಬೀಯಾದ ವೆಸ್ಟರ್ನ್ ಬೊಟ್ಸವಾನದಲ್ಲಿ ಆಕೆ ಜನಿಸಿದ್ದಳು.ಆಕೆಯ ತಾಯಿ ಆಕೆಯನ್ನು ಆರೈಕೆ ಮಾಡದೇ ನಿರ್ಲಕ್ಷಿಸಿ ಹೋಗಿದ್ದಳು. ಆದರೆ ವ್ಯಾಲೆಂಟಿನ್ ಗ್ರೂನರ್ ಅವರು ಆಕೆಯನ್ನು ರಕ್ಷಿಸಿ ಸಾಕುವ ನಿರ್ಧಾರ ಮಾಡಿದರು. ಆಕೆಗೆ ಬೆಚ್ಚಗಿನ ರಕ್ಷಣೆ ನೀಡುವುದಕ್ಕೆ ತಿಂಗಳುಗಳ ಕಾಲ ಬಿಸಿಲು ಮಳೆ ಚಳಿ ಎನ್ನದೇ ಆಕೆಯ ಜೊತೆಗೆ ಕಳೆದರು. ಈಗ ಸಿರ್ಗಾ ಬೆಳೆದು ದೊಡ್ಡವಳಾಗಿದ್ದಾಳೆ.
ಇದನ್ನೂ ಓದಿ: ತಾಯ್ತನದ ಸುಖ ನೀಡುವ ಗಂಡು ಬೇಕು ಎಂದು ಜಾಹೀರಾತು: ಚೆಂದುಳ್ಳಿ ಚೆಲುವೆಗೆ ಮನಸೋತು 11 ಲಕ್ಷ ಕಳೆದುಕೊಂಡ ಕಂಟ್ರಾಕ್ಟರ್
ಇದನ್ನೂ ಓದಿ: ಟೋಲ್ ಕೇಳಿದ ಟೋಲ್ ಸಿಬ್ಬಂದಿಗೆ ನನ್ನ ಅಪ್ಪ ಯಾರು ಗೊತ್ತಾ ಎಂದು ಕೇಳಿ ಹೊಡೆದ ಯುವಕ
