Tomato Varieties: ಎಲ್ಲಾ ಟೊಮೆಟೊ ಒಂದೇ ರೀತಿ ಇರಲ್ಲ. ಚೆರಿ, ದೇಸಿ, ರೋಮಾ ಮತ್ತು ಹೈಬ್ರಿಡ್ ಟೊಮೆಟೊಗಳದ್ದೇ ಆದ ಪ್ರತ್ಯೇಕ ವಿಶೇಷತೆಗಳಿವೆ. ಯಾವ ತಳಿಯ ಟೊಮೆಟೊ ಹೆಚ್ಚು ಕಾಲ ಫಸಲು ಕೊಡುತ್ತದೆ ಮತ್ತು ಭರ್ಜರಿ ಇಳುವರಿಗಾಗಿ ಅದರ ಆರೈಕೆ ಹೇಗೆ ಮಾಡಬೇಕು? ಇಲ್ಲಿದೆ ಮಾಹಿತಿ.
ಬಹುತೇಕ ಎಲ್ಲಾ ಭಾರತೀಯ ಅಡುಗೆಮನೆಗಳಲ್ಲಿ ಟೊಮೆಟೊ ಒಂದು ಪ್ರಮುಖ ತರಕಾರಿ. ಈಗ ಇದನ್ನು ಕೇವಲ ಹೊಲಗಳಲ್ಲಿ ಮಾತ್ರವಲ್ಲ, ಮನೆಯ ಟೆರೇಸ್, ಬಾಲ್ಕನಿ ಅಥವಾ ಸಣ್ಣ ಪಾಟ್‌ಗಳಲ್ಲಿಯೂ ಸುಲಭವಾಗಿ ಬೆಳೆಯಬಹುದು ಎಂಬುದು ಖುಷಿಯ ವಿಚಾರ. ಮಾರುಕಟ್ಟೆಯಲ್ಲಿ ಹಲವು ಬಗೆಯ ಟೊಮೆಟೊ ತಳಿಗಳು ಲಭ್ಯವಿವೆ, ಆದರೆ ಪ್ರತಿಯೊಂದು ತಳಿಯ ರುಚಿ, ಗಾತ್ರ, ಇಳುವರಿ ಮತ್ತು ಆರೈಕೆಯ ವಿಧಾನ ಬೇರೆ ಬೇರೆಯಾಗಿರುತ್ತದೆ. ನೀವು ವರ್ಷಪೂರ್ತಿ ಫ್ರೆಶ್ ಟೊಮೆಟೊ ಕೀಳಲು ಬಯಸಿದರೆ, ಸರಿಯಾದ ತಳಿಯನ್ನು ಆಯ್ಕೆ ಮಾಡುವುದರ ಜೊತೆಗೆ ಗಿಡದ ಆರೈಕೆಯನ್ನೂ ಅಚ್ಚುಕಟ್ಟಾಗಿ ಮಾಡಬೇಕು. ಬನ್ನಿ, ಟೊಮೆಟೊದ ಪ್ರಮುಖ ತಳಿಗಳು ಮತ್ತು ಅವುಗಳನ್ನು ಆರೋಗ್ಯವಾಗಿಡುವ ಸುಲಭ ವಿಧಾನಗಳ ಬಗ್ಗೆ ತಿಳಿಯೋಣ.
ಟೊಮೆಟೊದಲ್ಲಿ ಎಷ್ಟು ವಿಧಗಳಿವೆ?
ಚೆರಿ ಟೊಮೆಟೊ (Cherry Tomato): ಗಾತ್ರದಲ್ಲಿ ಸಣ್ಣದಾಗಿದ್ದು, ತಿನ್ನಲು ಸ್ವಲ್ಪ ಸಿಹಿಯಾಗಿರುತ್ತದೆ. ಪಾಟ್‌ಗಳು ಅಥವಾ ಬಾಲ್ಕನಿ ಗಾರ್ಡನ್‌ಗೆ ಇದು ಬೆಸ್ಟ್ ಆಯ್ಕೆ.
ದೇಸಿ ಟೊಮೆಟೊ: ಹುಳಿ-ಸಿಹಿ ಮಿಶ್ರಿತ ರುಚಿಯನ್ನು ಹೊಂದಿರುವ ಈ ತಳಿಯನ್ನು ದಿನನಿತ್ಯದ ಅಡುಗೆ, ಸಲಾಡ್ ಮತ್ತು ಚಟ್ನಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ರೋಮಾ ಟೊಮೆಟೊ (Roma Tomato): ಇದರಲ್ಲಿ ತಿರುಳು ಹೆಚ್ಚು ಮತ್ತು ಬೀಜಗಳು ಕಡಿಮೆ ಇರುತ್ತವೆ. ಸಾಸ್, ಪ್ಯೂರಿ ಮತ್ತು ಕೆಚಪ್ ತಯಾರಿಸಲು ಇದು ಅತ್ಯುತ್ತಮ.
ಹೈಬ್ರಿಡ್ ಟೊಮೆಟೊ: ಹೆಚ್ಚು ಇಳುವರಿ ನೀಡುವ ಈ ತಳಿ, ರೋಗಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ವಾಣಿಜ್ಯ ಕೃಷಿಯಲ್ಲಿ ಇದು ಹೆಚ್ಚು ಜನಪ್ರಿಯ.
ಬೀಫ್‌ಸ್ಟೇಕ್ ಟೊಮೆಟೊ (Beefsteak Tomato): ದೊಡ್ಡ ಗಾತ್ರ, ದಪ್ಪನೆಯ ತಿರುಳು. ಸ್ಯಾಂಡ್‌ವಿಚ್, ಬರ್ಗರ್ ಮತ್ತು ಸಲಾಡ್‌ಗಳಿಗೆ ಸೂಕ್ತವಾಗಿದೆ.
ಗ್ರೇಪ್ ಟೊಮೆಟೊ (Grape Tomato): ದ್ರಾಕ್ಷಿಯಂತೆ ಸಣ್ಣ ಗಾತ್ರದಲ್ಲಿರುವ ಈ ಟೊಮೆಟೊ, ಸ್ನ್ಯಾಕ್ಸ್, ಸಲಾಡ್ ಮತ್ತು ಗಾರ್ನಿಶಿಂಗ್‌ಗೆ ಚೆನ್ನಾಗಿರುತ್ತದೆ.
ಯಾವ ತಳಿ ವರ್ಷಪೂರ್ತಿ ಫಸಲು ಕೊಡುತ್ತದೆ?
ನೀವು ದೀರ್ಘಕಾಲದವರೆಗೆ ಟೊಮೆಟೊ ಫಸಲು ಪಡೆಯಲು ಬಯಸಿದರೆ, 'ಇಂಡಿಟರ್ಮಿನೇಟ್' (Indeterminate) ತಳಿಗಳು ಅತ್ಯುತ್ತಮ ಆಯ್ಕೆ. ಈ ಮಾದರಿಯ ಗಿಡಗಳು ನಿರಂತರವಾಗಿ ಬೆಳೆಯುತ್ತಲೇ ಇರುತ್ತವೆ ಮತ್ತು ಸರಿಯಾದ ಆರೈಕೆ ಮಾಡಿದರೆ ಹಲವು ತಿಂಗಳುಗಳ ಕಾಲ ಹಣ್ಣು ಕೊಡುತ್ತವೆ. ಚೆರಿ ಟೊಮೆಟೊ ಮತ್ತು ಹಲವು ಹೈಬ್ರಿಡ್ ತಳಿಗಳು ವರ್ಷಪೂರ್ತಿ ಇಳುವರಿ ನೀಡುವ ಸಾಮರ್ಥ್ಯ ಹೊಂದಿವೆ. ಆದರೆ, 'ಡಿಟರ್ಮಿನೇಟ್' (Determinate) ತಳಿಗಳು ನಿರ್ದಿಷ್ಟ ಸಮಯದವರೆಗೆ ಮಾತ್ರ ಹಣ್ಣು ನೀಡಿ, ನಂತರ ಇಳುವರಿ ನಿಲ್ಲಿಸುತ್ತವೆ. ಹೀಗಾಗಿ, ಹೋಮ್ ಗಾರ್ಡನಿಂಗ್‌ಗೆ ಇಂಡಿಟರ್ಮಿನೇಟ್ ತಳಿ ಹೆಚ್ಚು ಲಾಭದಾಯಕ.
ಭರ್ಜರಿ ಫಸಲಿಗೆ ಈ ಕೇರ್ ಟಿಪ್ಸ್ ಫಾಲೋ ಮಾಡಿ
ಟೊಮೆಟೊ ಗಿಡಕ್ಕೆ ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಬಿಸಿಲು ಬೇಕು. ಮಣ್ಣಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಮತ್ತು ನಿಯಮಿತವಾಗಿ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಸೇರಿಸುತ್ತಿರಿ. ಗಿಡದಲ್ಲಿ ಹೂವು ಬಂದ ನಂತರ ಪೊಟ್ಯಾಶ್ ಯುಕ್ತ ಗೊಬ್ಬರವನ್ನು ನೀಡಿದರೆ ಹಣ್ಣುಗಳು ಹೆಚ್ಚು ಬಿಡುತ್ತವೆ. ಕಾಲಕಾಲಕ್ಕೆ ಒಣಗಿದ ಎಲೆಗಳನ್ನು ಕತ್ತರಿಸಿ ತೆಗೆಯಿರಿ. ಗಿಡಕ್ಕೆ ಆಸರೆಯಾಗಿ ಕೋಲು ಅಥವಾ ಟ್ರೆಲ್ಲಿಸ್ ಬಳಸಿ. ಅಗತ್ಯಕ್ಕೆ ತಕ್ಕಂತೆ ಮಾತ್ರ ನೀರುಣಿಸಿ, ಏಕೆಂದರೆ ಹೆಚ್ಚು ನೀರು ಹಾಕಿದರೆ ಬೇರುಗಳು ಕೊಳೆತು ಗಿಡಕ್ಕೆ ರೋಗ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.
ಈ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಿ
ಟೊಮೆಟೊ ಗಿಡವನ್ನು ಆರೋಗ್ಯವಾಗಿಡಲು ಕೀಟ ಮತ್ತು ಶಿಲೀಂಧ್ರಗಳಿಂದ ರಕ್ಷಿಸುವುದು ಕೂಡಾ ಮುಖ್ಯ. ಕಾಲಕಾಲಕ್ಕೆ ಬೇವಿನ ಎಣ್ಣೆಯನ್ನು ಸಿಂಪಡಿಸುವುದರಿಂದ ಸಾಮಾನ್ಯ ಕೀಟಗಳಿಂದ ರಕ್ಷಣೆ ಸಿಗುತ್ತದೆ. ಒಂದು ವೇಳೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ, ಗೊಬ್ಬರ ಮತ್ತು ನೀರಿನ ಪ್ರಮಾಣವನ್ನು ಪರಿಶೀಲಿಸಿ. ಸರಿಯಾದ ತಳಿಯ ಆಯ್ಕೆ, ಸಾಕಷ್ಟು ಬಿಸಿಲು, ಸಮತೋಲಿತ ಗೊಬ್ಬರ ಮತ್ತು ನಿಯಮಿತ ಆರೈಕೆಯೊಂದಿಗೆ ನಿಮ್ಮ ಮನೆಯಲ್ಲೇ ವರ್ಷಪೂರ್ತಿ ತಾಜಾ, ರಸಭರಿತ ಮತ್ತು ರುಚಿಕರವಾದ ಟೊಮೆಟೊಗಳನ್ನು ಬೆಳೆಯಬಹುದು.


