ಮಗುವಿಗೆ ತಾಯಿಯಂತೆ ಬೆಳೆಯುವ ಬುದ್ಧಿಗೆ ಗುರು ಅತ್ಯವಶ್ಯಕ. ಜೀವನದ ಪ್ರಶ್ನೆಗಳಿಗೆ ಉತ್ತರ, ಕಷ್ಟಗಳಿಗೆ ಪರಿಹಾರ ನೀಡುವವರು ಗುರುಗಳು. ಜ್ಞಾನರಕ್ಷೆ, ದುಃಖಕ್ಷಯ, ಸುಖಾವಿರ್ಭಾವ, ಸರ್ವ ಸಂವರ್ಧನೆ, ಸಮೃದ್ಧಿ - ಇವು ಗುರುವಿನಿಂದ ಲಭಿಸುವ ಐದು ಲಕ್ಷಣಗಳು.

ಗುರುವಿನ ಮಹತ್ವ ಏನು ಅಂತ, ಅಲ್ವಾ. ಈಗ, ಒಂದು ಚಿಕ್ಕ ಮಗುವಿಗೆ ತಾಯಿಯ ಅಗತ್ಯ ಹೇಗಿದೆಯೋ ಹಾಗೆಯೇ ಬೆಳೆಯತಕ್ಕಂತಹ ಬುದ್ಧಿಗೆ ಗುರುವಿನ ಅಗತ್ಯವೂ ಇದೆ. ಮಗು ಮೂರು ತಿಂಗಳು ಆಗುವವರೆಗೂ, ಆ ಮಗುವಿನ, ಹೇಗೆ ಪಾಲನೆ ಪೋಷಣೆ ತಾಯಿಯ ಮಡಿಲಲ್ಲಿ ಆ ಮಗುವನ್ನು ಮಲಗಿಸಿ ನಿದ್ದೆ ಮಾಡೋದ್ರಿಂದ ಹಿಡಿದು, ಆ ಮಗುವಿಗೆ ಆಹಾರ ಕೊಟ್ಟು ಬೆಳೆಸುವುದು, ಹೇಗೆ ತಾಯಿ ತನ್ನ ಅಂಗವಾಗಿ, ತನ್ನದೇ ಜೀವನದ ಅಂಗವಾಗಿ ಇಟ್ಟುಕೊಂಡು ಆ ಕೆಲಸ ಮಾಡ್ತಾಳೋ; ತಾಯಿಯ ಪ್ರಾಣ ಮಗುವಿನಲ್ಲಿರ್ತದೆ.

ಹಾಗೆಯೇ, ಆ ಮಗು ಸ್ವಲ್ಪ ದೊಡ್ಡದಾಯ್ತು, ಮೂರು ವರ್ಷ ಮಗು ಆಗ್ತಿದ್ದ ಹಾಗೇ, ಪ್ರಶ್ನೆಗಳನ್ನು ಕೇಳಲಿಕ್ಕೆ ಶುರು ಮಾಡುತ್ತದೆ. ಅಂದ್ರೆ, ಆವಾಗ ಅದರ ಬುದ್ಧಿಶಕ್ತಿ ಬೆಳೆಯಲಿಕ್ಕೆ ಶುರುವಾಯ್ತು ಅಂತ. ಆ ಬುದ್ಧಿಯಲ್ಲಿ ಪ್ರಶ್ನೆಗಳು ಬರಬೇಕು, ಅದು ಬರುವುದು ಸಹಜ.

ಆ ಪ್ರಶ್ನೆಗಳು ಬರದಿದ್ರೆ, ಬುದ್ಧಿ ಬೆಳೀತಿಲ್ಲ ಅಂತ ಆಯ್ತು. ಅದಿಕ್ಕೆ ಮಕ್ಕಳಲ್ಲಿ ನೀವು ನೋಡಿ, ಮೂರು ವರ್ಷ ಆದ ತಕ್ಷಣ, ‘ಅದು ಯಾಕೆ ಅಲ್ಲಿ ಹೋಗ್ತಾ ಇದೆ? ಈ ಮೋಡ ಎಲ್ಲಿ ಹೋಗುತ್ತೆ? ಅದು ಯಾಕೆ ಹೀಗಿದೆ?

ಹೀಗೆಲ್ಲಾ ಹಲವಾರು ಪ್ರಶ್ನೆಗಳು ಮಕ್ಕಳು ಕೇಳ್ತಾರೆ. ಆ ಮಕ್ಕಳ ಪ್ರಶ್ನೆಗೆ ಉತ್ತರ ಕೊಡ್ಲಿಕ್ಕೆ ಒಬ್ಬರು ಬೇಕು. ಆದ್ದರಿಂದ ತಾಯಿ ಮೂರು ವರ್ಷದ ಮಗುವಿಗೆ ಗುರುವಾಗಿ ಪಾತ್ರವನ್ನು ವಹಿಸುತ್ತಾಳೆ. ತಂದೆ ತಾಯಿ ಇಬ್ಬರೂ ಗುರುವಿನ ಪಾತ್ರವನ್ನು ವಹಿಸುತ್ತಾರೆ.

ಆಮೇಲೆ ಆ ಮಗು ಇನ್ನೂ ಸ್ವಲ್ಪ ದೊಡ್ಡದಾದ ಮೇಲೆ ಸ್ಕೂಲಿಗೆ ಹೋಗಲು ಶುರುವಾಗುತ್ತೆ. ಅಲ್ಲಿಗೆ, ಗುರು ಇಲ್ಲದಿದ್ದರೆ ಆ ಸ್ಕೂಲು ಇರಕ್ಕೆ ಸಾಧ್ಯವೇ ಇಲ್ಲ. ಶಿಕ್ಷಕರು ಬೇಕೇ ಬೇಕು. ಆ ಶಿಕ್ಷಕರಿಂದ ಏನಾಗುತ್ತೆ? ಬುದ್ಧಿಶಕ್ತಿ ಪ್ರಖಾಂಡವಾಗಿ ಬೆಳೆಯುತ್ತದೆ.

ಹಾಗೆಯೇ ಜೀವನದ ಹಂತದಲ್ಲಿ ಮೇಲೆ ಬೆಳೆಯುತ್ತಿದ್ದ ಹಾಗೇ ಎಷ್ಟೋ ಜೀವನದಲ್ಲಿ ಸಮಸ್ಯೆಗಳು ಬರುತ್ತವೆ. ದುಗುಡ ದುಮ್ಮಾನಗಳು, ಪರಿಸ್ಥಿತಿಗಳು – ಕ್ಲಿಷ್ಟವಾದ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುತ್ತದೆ. ಆ ಎಲ್ಲಾ ಪರಿಸ್ಥಿತಿಗೂ ಎದುರಿಸತಕ್ಕಂತಹ ಧೈರ್ಯ ತುಂಬತಕ್ಕಂತಹವರು ಗುರು. ಪ್ರಶ್ನೆಗಳಿಗೆ ಸಮಾಧಾನ ಕೊಡತಕ್ಕಂತಹವರು ಗುರು ಆಗೇ ಆಗ್ತಾರೆ. ಯಾರೂ, ನಾನು ಗುರು ಅಲ್ಲ, ಆದ್ರೆ ನಾನು ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ತೀನಿ ಅಂತಂದ್ರೆ, ಅದು ಹೆಂಗೆ ಅನ್ನಿಸ್ತದೆ ಅಂತಂದ್ರೆ, ನಾನು ಡಾಕ್ಟರಲ್ಲ, ಆದ್ರೆ ನಿಮಗೆ ಔಷಧಿ ಕೊಡ್ತೀನಿ ಅಂದ ಹಂಗೆ ಆಗ್ತದೆ.

ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ಯಾವುದೂ ಪ್ರಶ್ನೆ ಯಾವತ್ತೂ ಬಂದೇ ಇಲ್ಲ ಅಂತ ಅಂದ್ಮೇಲೆ ಗುರುವಿನ ಅವಶ್ಯಕತೆ ಇಲ್ಲ. ಆದರೆ ಪ್ರಶ್ನೆಗಳು ಬರುತ್ತಿದ್ದ ಹಾಗೇ ಅದಕ್ಕೆ ಉತ್ತರ ಕೊಡುವ ಜವಾಬ್ದಾರಿಯುತವಾದ, ತಿಳಿದವರ ಅವಶ್ಯಕತೆಯೂ ಬರುತ್ತದೆ. ಆ ತಿಳುವಳಿಕೆ ಇದ್ದವರು, ಜ್ಞಾನಿಗಳಿಗೆ ಗುರುಗಳು ಅಂತೀವಿ ನಾವು. ಹಾಗೆಯೇ, ಕಷ್ಟಗಳು ಎಷ್ಟೋ ಬರುತ್ತದೆ. ಆ ಕಷ್ಟ ಬಂದಾಗ, ಆ ಕಷ್ಟಗಳ ಪರಿಹಾರಕ್ಕಾಗಿ ಎಲ್ಲಿ ಹೋಗಬೇಕು? ಮಾನಸಿಕವಾದ, ಆತ್ಮಿಕವಾದ ಕಷ್ಟಗಳು ಬಂದಾಗ, ಬೌದ್ಧಿಕವಾದ ಪ್ರಶ್ನೆಗಳು ಉಂಟಾದಾಗ ಗುರುಗಳು ಅವೆಲ್ಲದಕ್ಕೂ ಸಮಾಧಾನ ಕೊಡ್ತಾರೆ.

ಆದ್ದರಿಂದ, ಗುರುವಿನಲ್ಲಿ 5 ಲಕ್ಷಣ ಕಂಡುಬರಬೇಕು.

ಒಂದು, ಜ್ಞಾನ ರಕ್ಷಾ. ನಮ್ಮಲ್ಲಿ ಜ್ಞಾನ ಪಡ್ಕೋತೀವಿ. ಆದರೆ ಆ ಜ್ಞಾನದ ರಕ್ಷೆ ಉಂಟಾಗಬೇಕು. ಅಂದ್ರೆ, ಅವೇರ್ನೆಸ್ ಅಂತೀವಲ್ಲ. ಆ ಜಾಗರೂಕತೆ ಇರಬೇಕು. ಅದು ಉಂಟಾಗುತ್ತದೆ, ಗುರುಗಳ ಸಾನ್ನಿಧ್ಯದಿಂದ.

ಮತ್ತೆ, ದುಃಖ ಕ್ಷಯ. ದುಃಖಿಗಳು ಗುರುಗಳ ಹತ್ತಿರ ಬರುತ್ತಿದ್ದ ಹಾಗೇ, ದುಃಖವೆಲ್ಲಾ ದೂರ ಆಗುತ್ತದೆ. ಯಾರಿಗೆ ಗುರು ಇದ್ದಾರೋ, ಅವರಿಗೆ ಜೀವನದಲ್ಲಿ ದುಃಖವನ್ನು ಸಂಭಾಳಿಸತಕ್ಕಂತಹ ಶಕ್ತಿ ಬಂದುಬಿಡುತ್ತದೆ. ದುಃಖ ಬರೋದಿಲ್ಲ ಅವರಿಗೆ. ಬಂದ್ರೂ ಆ ದುಃಖ ಅಂತ ಅನ್ನಿಸೋದಿಲ್ಲ. ಅದನ್ನು ಸಂಭಾಳಿಸತಕ್ಕಂತಹ ಶಕ್ತಿ ಇರುತ್ತದೆ. ಇದು ಎರಡನೆಯ ಮಾತು – ದುಃಖ ಕ್ಷಯ.

ಸುಖ ಆವಿರ್ಭಾವ – ಯಾವ ಸುಖವು ಇಂದ್ರಿಯ ಸುಖಕ್ಕಿಂತ ಮೇಲಾಗಿರತಕ್ಕಂತಹ ಸುಖವೋ ಆ ಸುಖದ ಅನುಭೂತಿ ಉಂಟಾಗುತ್ತದೆ. ಗುರುಗಳನ್ನು ನೋಡಿದ ತಕ್ಷಣ ಏನೋ ಮನಸ್ಸಿಗೆ ಒಂದು ತಂಪು, ಒಂತರ ಉತ್ಸಾಹ, ಪ್ರೀತಿ, ಪ್ರೇಮ ಇವೆಲ್ಲ ಮೇಲೆ ಬರುತ್ತದೆ. ಅದಿಕ್ಕೆ ಸುಖ ಆವಿರ್ಭಾವ ಅಂತಾರೆ.

ಜ್ಞಾನ ರಕ್ಷಾ, ದುಃಖ ಕ್ಷಯ, ಸುಖ ಆವಿರ್ಭಾವ, ಸರ್ವ ಸಂವರ್ಧನ. ಎಲ್ಲಾ ತರದಲ್ಲೂ ಜೀವನದಲ್ಲಿ ಏಳಿಗೆ ಉಂಟಾಗುತ್ತದೆ. ಮತ್ತೆ ಸಮೃದ್ಧಿ. ಯಾವುದೂ ಕಡಿಮೆ ಅಂತ ಅನ್ನಿಸುವುದಿಲ್ಲ. ಎಲ್ಲ ತುಂಬಿದೆ ಅಂತ ಅನ್ನಿಸುತ್ತದೆ. ಜೀವನದಲ್ಲಿ ಒಂದು ಪೂರ್ಣತೆಯ ಅನುಭವ ಉಂಟಾಗುತ್ತೆ.

ಈ ಐದು ಲಕ್ಷಣಗಳು ಒಬ್ಬ ಶಿಷ್ಯನಲ್ಲಿ ಆಗ್ತದೆ. ಈ ಘಟನೆ ಉಂಟಾಗುತ್ತದೆ; ಘಟಿಸುತ್ತವೆ ಒಬ್ಬ ಗುರುಗಳು ಇದ್ದ ಹಾಗೆ. ಆದ್ದರಿಂದ, ಗುರು ಜೀವನದಲ್ಲಿ ಮಾಡ್ಕೊಳ್ಳೋದು ಬಹಳ ಅವಶ್ಯಕತೆ ಇದೆ.

ಅದು, ಹೆಂಗೆ ಮಾಡ್ಕೊಳ್ಳೋದು ಗುರು, ಎಷ್ಟೋ ಜನ ಇದ್ದಾರಲ್ಲಾ ಅಂತಂದ್ರೆ, ಮನಸ್ಸನ್ನು ಕೇಳಿದ್ರೆ.. ನಮ್ಮ ಮನಸ್ಸಿನ ಒಳಗಡೆ ಅನ್ನಿಸುತ್ತದೆ ಇವರು ಗುರುಗಳು ಅಂತ. ಆವಾಗ, ಮನಸ್ಸಿಗೆ ಅನ್ನಿಸಿದ್ದನ್ನು ನೀವು ಫಾಲೋ ಮಾಡ್ರಿ. ಮತ್ತೆ, ಎಲ್ಲಾರಿಂದಲೂ ಕಲಿಯಿರಿ. ಆದರೆ, ಒಬ್ಬ ಗುರುಗಳನ್ನು ಪೂರ್ಣವಾಗಿ ಅನುಕರಿಸಿ. ಇದು ಅವಶ್ಯಕತೆ ಇದೆ.