ಅಂಧರ ಬಾಳಿಗೆ ಬೆಳಕಾದ ಅನಿತಾ ಸತೀಶ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Oct 2018, 4:59 PM IST
Anitha Sathesh got a Women Achievers Award By Suverna News -Kannada Prabha
Highlights

ಅನಿತಾ ಸತೀಶ್ ಅವರಿಗೆ ಹೊರಗಿನ ದೃಷ್ಟಿಯಿಲ್ಲ. ಹಾಗಂತ ಒಳಗಣ್ಣು ಬಹಳ ಚುರುಕಾಗಿದೆ. ಇನ್ನೊಬ್ಬರ ದುಃಖ, ನೋವು ಬಹಳ ಚೆನ್ನಾಗಿ ಅರ್ಥವಾಗುತ್ತದೆ. ಆ ಶಕ್ತಿಯಿಂದ ಅವರು ಕಟ್ಟಿ ಬೆಳೆಸಿದ್ದು ಶಾರದಾ ದೇವಿ ಅಂಧರ ಶಾಲೆ. ಇವರು ಈ ಬಾರಿಯ ಸುವರ್ಣ ನ್ಯೂಸ್- ಕನ್ನಡ ಪ್ರಭ ಮಹಿಳಾ ಸಾಧಕಿಯರು ಪ್ರಶಸ್ತಿ ಪಡೆದುಕೊಂಡಿದ್ದಾರೆ. 

ಶಿವಮೊಗ್ಗ (ಅ. 09): ಹುಟ್ಟಿದಾರಭ್ಯದಿಂದ ಬೆಳಕೇ ಕಂಡಿಲ್ಲ. ಬೆಳಕೆಂದರೇನು ಎಂದೂ ಗೊತ್ತಿಲ್ಲ. ಆದರೆ ಬೆಳೆಯುತ್ತಾ ತನ್ನಂತಹವರ ಬದುಕಿಗೆ ಬೆಳಕಾಗಬೇಕು ಎಂಬ ಹಠ ಮಾತ್ರ ಅವರಲ್ಲಿ ಬೆಳೆಯುತ್ತಿತ್ತು. ಮನಸ್ಸಿನೊಳಗೆ ಮೂಡಿದ ಚುಕ್ಕಿಯನ್ನು ಚಿತ್ತಾರವಾಗಿ ಬೆಳೆಸಿದರು.

ಚಿತ್ತಾರ ಬೆಳೆದು ಹೆಮ್ಮರವಾಯಿತು. ಅಂದುಕೊಂಡಿದ್ದು ನನಸಾಗುವ ಮಾರ್ಗ ಎದುರಿಗೆ ಬಂದು ನಿಂತಿತು. ಆ ಮಾರ್ಗದಲ್ಲಿ ಸಾಗಿ ದೂರಕ್ಕೆ ಬಂದರು. ನಿಜವಾಗಿ ಬೆಳಕಾದರು. ಇದು ಶಿವಮೊಗ್ಗದ ಶ್ರೀ ಶಾರದಾದೇವಿ ಅಂಧರ ಶಾಲೆಯ ಟ್ರಸ್ಟಿ ಅನಿತಾ ಸತೀಶ್ ಅವರ ಹಾದಿ. ಆ ಶಾಲೆಗೆ ಕೇವಲ ಟ್ರಸ್ಟಿ ಮಾತ್ರವಲ್ಲ, ಅಲ್ಲಿನ ಶಕ್ತಿ. ಇಡೀ ಶಾಲೆಯನ್ನು ಯಾವುದೇ ಆಡಳಿತಾತ್ಮಕ ಪದವಿ ಪಡೆದವರಿಗಿಂತಲೂ ಅಚ್ಚುಕಟ್ಟಾಗಿ ನಡೆಸಿ ಸೈ ಎನಿಸಿಕೊಂಡರು.

ಮೃದು ಮಾತು, ಅಷ್ಟೇ ಸೂಕ್ಷ್ಮ. ಹಿಂದಿರುವ ಅಗಾಧವಾದ ಕಠಿಣವಾದ ಕತೃತ್ವ ಶಕ್ತಿಯನ್ನು ತಡೆಯುವ ಶಕ್ತಿ  ಯಾರಿಗೂ ಇರಲಿಲ್ಲ. ಎಲ್ಲರ ಸಹಕಾರವನ್ನು ಅಷ್ಟೇ ಚೆನ್ನಾಗಿ ಪಡೆದುಕೊಂಡರು.

ಅಂತಃಶಕ್ತಿಯೇ ಎಲ್ಲಾ..:

ಶಾರದಾದೇವಿಯ ಅಂಧರ ವಿಕಾಸ ಕೇಂದ್ರಕ್ಕೆ ಹೋಗಿ ನೋಡಿದರೆ ಅಲ್ಲಿ ಚುರುಕಾಗಿ ಓಡಾಡುತ್ತಾ, ಎಲ್ಲರನ್ನೂ ಮಾತನಾಡಿಸುತ್ತಾ, ಮಕ್ಕಳನ್ನು ವಿಚಾರಿಸುತ್ತಾ, ಬಂದವರನ್ನು ಕರೆದು ಕೂರಿಸಿ ಮಾತನಾಡಿಸುವಾಗ ಇವರು ಅಂಧರು ಎಂದು ಯಾರೂ ಆ ಕ್ಷಣದಲ್ಲಿ ಅಂದುಕೊಳ್ಳುವುದಿಲ್ಲ. ಕಣ್ಣಿದ್ದವರಿಗಿಂತಲೂ ಚುರುಕುತನದಿಂದ ಕರ್ತವ್ಯ ನಿಭಾಯಿಸುವಾಗ ಇವರ ಒಳಗಿನ ಅಂತಃಶಕ್ತಿಯನ್ನು ಕಂಡು ದಂಗಾಗುವಂತಾಗುತ್ತದೆ.

ಒಡಹುಟ್ಟಿದವರೂ ಅಂಧರು!:

ಅನಿತಾ ಅವರು ಹುಟ್ಟಿದ್ದು ಮೇಗರವಳ್ಳಿಯಲ್ಲಿ. ಇಬ್ಬರು ಸೋದರಿಯರು ಮತ್ತು ಓರ್ವ ಸೋದರನ ಜೊತೆಯ ಮನೆಯಲ್ಲಿ ಮೂರು ಮಂದಿ ಹೆಣ್ಣು ಮಕ್ಕಳೂ ಹುಟ್ಟು ಕುರುಡರು ಎಂದು ತಾಯಿ ಸಾವಿತ್ರಮ್ಮ ಅವರಿಗೆ ತಿಳಿದಾಗ ಆ ತಾಯಿಯ ಹೃದಯದಲ್ಲಿ ಆದ ಆಘಾತಕ್ಕೆ ಶಬ್ದಗಳ ತೂಕ ಸಾಲದಾಗುತ್ತದೆ. ಆದರೆ ಎದೆಗುಂದದ ತಾಯಿ ಮೇಗರವಳ್ಳಿಯ ಸರ್ಕಾರಿ ಶಾಲೆಗೆ ನಾಲ್ಕು ಜನರನ್ನೂ ಕಳುಹಿಸಿದರು. ಅಲ್ಲಿನ ಶಿಕ್ಷಕರು ಇವರಿಗೆ ಪಾಠವನ್ನು ಅರ್ಥವಾಗುವಂತೆ ಹೇಳುತ್ತಿದ್ದರು.

ಮನೆಗೆ ಬಂದಾಗ ತಾಯಿ ಆ ಪಾಠಗಳನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸುತ್ತಿದ್ದರು. 7 ನೇ ತರಗತಿಯವರಿಗೆ ಅಲ್ಲಿಯೇ ಓದು. ಆಗ ಯಾರೋ ಬೆಂಗಳೂರಿನಲ್ಲಿ ಇರುವ ಅಂಧರ ಶಾಲೆಯ ಕುರಿತು ಮಾಹಿತಿ ನೀಡಿದಾಗ ಮೂರು ಜನ ಅಂಧ ಹೆಣ್ಣು ಮಕ್ಕಳನ್ನು ಅಲ್ಲಿಗೆ ಕಳುಹಿಸಿದರು. ಅಲ್ಲಿಯೇ ಇವರ ಬದುಕಿಗೆ ನಿಜವಾದ ತಿರುವು ಸಿಕ್ಕಿದ್ದು. ಬೆಂಗಳೂರಿನ ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದ ಬ್ಲೈಂಡ್ ಶಾಲೆಗೆ ಸೇರಿ ಶಿಕ್ಷಣ ಮುಂದುವರೆಸಿದರು.

ಆಧ್ಯಾತ್ಮದ ಬೆಳಕು:

ಅದುವರೆಗೆ ತಮ್ಮಂತಹವರಿಗಾಗಿ ಬೇರೆಯದೇ ಶಾಲೆ, ಕಲಿಯುವ ವ್ಯವಸ್ಥೆ, ಬ್ರೈಲ್ ಲಿಪಿ ಇದೆ ಎಂದು ಗೊತ್ತಿರದೇ ಇದ್ದ ಈ ಅಂಧ ಮಕ್ಕಳು ಹೊಸ ಜಗತ್ತಿನಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳತೊಡಗಿದರು. ಎಸ್‌ಎಸ್‌ಎಲ್‌ಸಿ ಪಾಸಾಯಿತು. ಪಿಯುಸಿ, ಪದವಿಯೂ ಆಯಿತು. ನಂತರ ಅಲ್ಲಿನ ಶ್ರೀ ರಮಣ ಮಹರ್ಷಿ ಅಕಾಡೆಮಿಯಲ್ಲಿಯೇ ಶಿಕ್ಷಕರಾಗಿ ಸೇವೆ ಆರಂಭಿಸಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಆಶ್ರಮದ ಸಂಪರ್ಕ ಬೆಳೆಯಿತು. ಅಲ್ಲಿನ ಸ್ವಾಮೀಜಿಗಳ ಮಾತುಗಳು ಸೆಳಯಿತು. ರಾಮಕೃಷ್ಣ ಆಶ್ರಮದ ಬೆಳಕಿನಲ್ಲಿ ಕರಗಿ ಹೋದರು.ರಾಮಕೃಷ್ಣ ಪರಮಹಂಸ, ವಿವೇಕಾನಂದರ ತತ್ವಗಳು ಗಾಢವಾಗಿ ಆಕರ್ಷಿಸಿದವು.

ಸಂಕಲ್ಪದ ಫಲ:

ಆ ಹೊತ್ತಿನಲ್ಲಿ ಶ್ರೀ ರಮಣಮಹರ್ಷಿ ಅಕಾಡೆಮಿಗೆ ಕೇರಳ ಮೂಲದ ಪದ್ಮನಾಭನ್ ಎಂಬುವವರು ಬರುತ್ತಿದ್ದರು. ಈಗ ಗದಗಿನ ಶ್ರೀ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಗಳಾಗಿರುವ ಪೂರ್ವಾಶ್ರಮದಲ್ಲಿ ಶಿವಕುಮಾರ್ ನಾಮಾಂಕಿತದಲ್ಲಿದ್ದರು ಜೊತೆಯಾದರು. ಇವರಿಬ್ಬರ ಜೊತೆ ತಮ್ಮ ಇಬ್ಬರು ಅಂಧ ಸೋದರಿಯರನ್ನು ಸೇರಿಸಿಕೊಂಡು ತಾವೇ ಒಂದು ಅಂಧರ ಶಾಲೆ ತೆರೆಯಬೇಕೆಂದು ಸಂಕಲ್ಪ ಮಾಡಿದರು. ಆ ಸಂಕಲ್ಪ ಇಂದು ಕಲ್ಪವೃಕ್ಷವಾಗಿದೆ.

ಒಬ್ಬಳೇ ವಿದ್ಯಾರ್ಥಿನಿ:

1986 ರಲ್ಲಿ ಶಿವಮೊಗ್ಗದ ಹೊಸಮನೆಯಲ್ಲಿ ಪುಟ್ಟದೊಂದು ಮನೆಯಲ್ಲಿ ಶಾಲೆ ಆರಂಭ. ಬಳಿಕ ವಿನೋಬನಗರಕ್ಕೆ ಸ್ಥಳಾಂತರ. ಅಲ್ಲಿಂದ ಬಾಲರಾಜ ಅರಸ್ ರಸ್ತೆಯಲ್ಲಿ ಪುಟ್ಟದೊಂದು ಹಳೆಯ ಮನೆಗೆ ಶಿಫ್ಟ್. ಈ ಮೂರು ಮಂದಿ ಸೋದರಿಯರೇ ಶಿಕ್ಷಕಿಯರು. ಮೊದಲ ಅಂಧ ವಿದ್ಯಾರ್ಥಿಯಾಗಿ ತಮ್ಮ ಊರಿನ ಅಂಧ ಬಾಲಕಿಯರನ್ನು ಕರೆ ತಂದರು. ಅನಿತಾ ಅವರ ಮನೆಯಿಂದಲೇ ಅರ್ಧ ಚೀಲ ಅಕ್ಕಿ ಬಂದಿತು.

ನಾಳೆ ಏನು ಎಂಬ ಚಿಂತೆಯೊಂದಿಗೇ ಹೊಸ ಚಿಂತನೆಗಳು ಇಲ್ಲಿ ಬೆಳೆಯಲಾರಂಭಿಸಿದವು. ಆಗ ಯಾರೂ ದಾನಿಗಳಿರಲಿಲ್ಲ. ಅಂಧರ ಶಾಲೆಯೆಂಬ ಕಲ್ಪನೆ ಶಿವಮೊಗ್ಗಕ್ಕೂ ಹೊಸದು.

ಸವಾಲನ್ನೆದುರಿಸುವ ಛಾತಿ:

ನಿಧಾನವಾಗಿ ಹತ್ತಾರು ಮಕ್ಕಳು ದೂರದ ಊರುಗಳಿಂದ ಈ ಶಾಲೆಗೆ ಬಂದು ಸೇರತೊಡಗಿದರು. ಕಣ್ಣಿದ್ದವರೆಂದರೆ ಪದ್ಮನಾಭನ್ ಅವರೊಬ್ಬರೆ. ಆಡಳಿತ ನಿರ್ವಹಣೆಗೆ ಜೊತೆಯಾದವರು ಅನಿತಾ. ಬೆಂಬಲಕ್ಕೆ ನಿಂತವರು, ಆಸರೆಯಾದವರು ಇವರ ಸೋದರಿಯರು. ಈ ಮಕ್ಕಳು ಅವರ ಕಾಲ ಮೇಲೆ ನಿಲ್ಲಬೇಕೆಂಬ ಗುರಿಯ ಹೊರತಾಗಿ ಅಲ್ಲಿ ಇನ್ನೇನೂ ಇರಲಿಲ್ಲ.

ನಿತ್ಯದ ಖರ್ಚು ಹೇಗೆ ಸಾಗುತ್ತಿತ್ತೋ ಗೊತ್ತಿಲ್ಲ. ಅಂತೂ ನಿತ್ಯ ಸವಾಲಿನೊಂದಿಗೆ ಆ ದಿನ ಕಳೆದು ಇನ್ನೊಂದು ಸವಾಲು ಎದುರಿಸುವ ದಿನ ಎದುರಾಗುತ್ತಿತ್ತು. ಹಠವಿತ್ತು, ಕತೃತ್ವ ಶಕ್ತಿಯಿತ್ತು. ಸ್ಪಷ್ಟವಾದ ಗುರಿಯಿತ್ತು. ಮನಸ್ಸಿನ ಒಳಗಿನ ಕಣ್ಣುಗಳಿಗೆ ಎಲ್ಲವೂ ಗೊತ್ತಾಗುತ್ತಿತ್ತು. ಹೀಗಾಗಿ ಯಶಸ್ಸಿನ ನಡೆ ಸಾಗುತ್ತಿತ್ತು.

loader