ಕೋಪದಲ್ಲಿ ನೀವು ಜಮದಗ್ನಿಯೇ? ಬುದ್ಧನಾಗಲು ಹೀಗೆ ಮಾಡಿ
ಮಾತೆತ್ತಿದರೆ ಕೋಪ, ಮಾತಿಲ್ಲದಿದ್ದರೂ ಕೋಪ, ಮೆದುಳಿಗಿಂತ ಮೊದಲು ಕೋಪ ಕೆಲಸ ಮಾಡುತ್ತದೆಯೇ? ಕಷ್ಟ ಕಷ್ಟ. ಹೀಗಿದ್ದರೆ ಸಂಬಂಧಗಳನ್ನು ಉಳಿಸಿ ಬೆಳೆಸಿಕೊಳ್ಳುವುದು ಕಷ್ಟ. ಅನಾಹುತಗಳಿಗೆ ಆಸ್ಪದ ನೀಡದಂತಿರುವುದು ಕಷ್ಟ. ನಿಮ್ಮೊಂದಿಗೆ ಏಗುವವರಿಗೆ ಮಹಾ ಸಂಕಷ್ಟ. ಹಾಗಿದ್ದರೆ ನೀವೇನು ಮಾಡಬೇಕು? ಕೋಪ ನಿಯಂತ್ರಿಸಲು ಕಲಿಯಬೇಕು.
ಮಗು ಹೇಳಿದ್ದನ್ನು ಕೇಳಲಿಲ್ಲವೆಂದರೆ ಯೋಚಿಸುವ ಮೊದಲೇ ನಾಲ್ಕು ಏಟು ಹಾಕುವ ಜಾಯಮಾನದವರೇ? ಟ್ರಾಫಿಕ್‌ನಲ್ಲಿ ಯಾರೋ ಬಿಡದೆ ಹಾರ್ನ್ ಮಾಡುತ್ತಿದ್ದರೆ ಎದ್ದು ಹೋಗಿ ಗಲಾಟೆ ಎಬ್ಬಿಸುವಷ್ಟು ಕೋಪವೇ? ಹೇಳಿದ ಕೆಲಸ ಮಾಡದ ಕೈ ಕೆಳಗಿನ ಉದ್ಯೋಗಿಯನ್ನು ತಕ್ಷಣವೇ ವಜಾ ಮಾಡುವ ಮನಸ್ಸಾಗುತ್ತದೆಯೇ? ಹಾಗಿದ್ದರೆ, ಕೋಪದಲ್ಲಿ ನೀವು ಜಮದಗ್ನಿಯೇ ಸರಿ. ಕೋಪ ಎಂಬುದು ಸಾಮಾನ್ಯವಾದ ಆರೋಗ್ಯವಂತ ಎಮೋಶನ್. ಆದರೆ, ಅದನ್ನು ಸರಿಯಾಗಿ ನಿಭಾಯಿಸುವುದು ಮುಖ್ಯ. ಅತಿಯಾದ ಕೋಪದಿಂದ ಅನಾಹುತವಲ್ಲದೆ
ಮತ್ತೇನೂ ಆಗಲು ಸಾಧ್ಯವಿಲ್ಲ. ಕೋಪವನ್ನು ನಿಯಂತ್ರಿಸಲು ಏನೇನು ಮಾಡಬಹುದು ಗೊತ್ತಾ?
- 100ರಿಂದ 1ರವರೆಗೆ ಎಣಿಸಿ
ಸಿಟ್ಟು ಬಂದಾಗ 10ರ ತನಕ ಎಣಿಸುವಂತೆ ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಆದರೆ, 100ರಿಂದ 1ರವರೆಗೆ ಮೈನಸ್ 7 ಮಾಡುತ್ತಾ ಬರುವುದು ಉತ್ತಮ ಎನ್ನುತ್ತಾರೆ ತಜ್ಞರು. ಏಕೆಂದರೆ, ಇದಕ್ಕೆ ಹೆಚ್ಚು ಫೋಕಸ್ ಮಾಡಬೇಕಾಗುತ್ತದೆ. ಇನ್ನೇನು ಸಿಟ್ಟು ಬಂದೇ ಬಿಟ್ಟಿತು ಎನ್ನುವಾಗ ಹೀಗೆ 100ರಿಂದ ಮೈನಸ್ 7 ಮಾಡುತ್ತಾ ಬಂದರೆ, ಧೀರ್ಘವಾಗಿ ಉಸಿರಾಡುತ್ತಿದ್ದರೆ, ತಕ್ಷಣದಲ್ಲಿ ಬಾಯಿಗೆ ಬಂದದ್ದನ್ನು ಹೇಳುವುದು ತಪ್ಪುತ್ತದೆ. 1ಕ್ಕೆ ಬರುವಷ್ಟರಲ್ಲಿ ಸಿಟ್ಟು ತಹಬಂದಿಗೆ ಬಂದಿರುತ್ತದೆ. ಸುಮ್ಮನೆ ಕೂಗಾಡುವ ಬದಲು ನಿಮಗೇನು ಸಿಟ್ಟು ತರಿಸಿತು ಎಂಬುದನ್ನು ಸ್ಪಷ್ಟವಾಗಿ ಹೇಳಿ.
- 'ನಾನು' ಪದದ ವಾಕ್ಯ ಬಳಸಿ
ಸಿಟ್ಟು ಬಂದಾಗ ಇನ್ನೊಬ್ಬರ ಮೇಲೆ ದೂರು ಹಾಕುವ ಬದಲು ನಾನು, ನನಗೆ ಎಂಬ ಪದ ಬಳಸಿ ವಾಕ್ಯ ರಚನೆ ಮಾಡಿ. ಉದಾಹರಣೆಗೆ ನೀನು ಮನೆಯಲ್ಲಿ ಒಂದು ಕೆಲಸಕ್ಕೂ ಸಹಾಯ ಮಾಡುವುದಿಲ್ಲ ಎಂದು ದೂರುವುದಕ್ಕಿಂತಾ ನೀನು ಸಹಾಯ ಮಾಡದಿದ್ದರೆ ನನಗೆ ಬೇಜಾರಾಗುತ್ತದೆ ಎನ್ನಿ. ಇದರಿಂದ ಇನ್ನೊಬ್ಬರನ್ನು ಬೇಜಾರು ಮಾಡದೆಯೇ ನಿಮಗೇಕೆ ಸಿಟ್ಟು ಬರುತ್ತದೆ ಎಂಬ ವಿಷಯವನ್ನೂ ತಿಳಿಸಿದಂತಾಗುತ್ತದೆ. ನಿಮ್ಮ ಫ್ರಸ್ಟ್ರೇಶನ್ ಹೊರಹಾಕುವ ಶಾಂತಿಯುತ, ಗೌರವಯುತ ಹಾಗೂ ಪರಿಣಾಮಕಾರಿ ಮಾರ್ಗವಿದು.
- ಜಾಗ ಖಾಲಿ ಮಾಡಿ
ಇನ್ನೊಂದು ಮಾರ್ಗವೆಂದರೆ ಆ ಸ್ಥಳದಿಂದ ಬೇರೆಡೆ ಹೋಗುವುದು. ಮನೆಯಲ್ಲಿ ಎಷ್ಟು ಬಾರಿ ಹೇಳಿದರೂ ಮಕ್ಕಳು ಆಟದ ವಸ್ತುಗಳನ್ನು ತೆಗೆದೆಡುತ್ತಿಲ್ಲ ಎಂದೋ, ಅಥವಾ ಕಚೇರಿಯಲ್ಲಿ ಗೆಳೆಯ ನಿಮ್ಮ ಬಗ್ಗೆ ಮಾಡಿದ ಜೋಕಿಗೋ ಸಿಟ್ಟು ಬಂತೆಂದರೆ ತಕ್ಷಣ ಅಲ್ಲಿಂದ ಬೇರೆಡೆ ಹೋಗಿ. 10 ನಿಮಿಷ ತಿರುಗಾಡಿ ಹಿಂದಿರುಗುವಾಗ ಯೋಚನೆಗಳು ಸ್ಪಷ್ಟವಾಗಿರುತ್ತವೆ. ಆಗ ನಾನು ಪದದ ವಾಕ್ಯ ರಚಿಸಿ ವಿಷಯವನ್ನು ವ್ಯಕ್ತಪಡಿಸಿ. ಒಂದು ವೇಳೆ ಸ್ಥಳದಿಂದ ಬೇರೆಡೆ ಹೋಗಲಾಗದಿದ್ದರೆ?
ಮಕ್ಕಳಿಗೆ ಕ್ಲೀನ್ ಕ್ಲೀನ್ ಅಂತ ಕಾಟ ಕೊಡುವ ಪೋಷಕರೇ ಒಮ್ಮೆ ಇದನ್ನು ಓದಿ!
- ಧೀರ್ಘ ಉಸಿರಾಟ
ಧೀರ್ಘವಾಗಿ ಉಸಿರಾಡುವುದರಿಂದ ಒತ್ತಡ ಹೊರಹಾಕಿ, ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುತ್ತದೆ. ಹೊಟ್ಟೆಯಾಳದಿಂದ ನಿಧಾನವಾಗಿ ಉಸಿರು ತೆಗೆದುಕೊಳ್ಳಿ. ಸುಮಾರು 15 ಬಾರಿ ಹೀಗೆ ಮಾಡುವಾಗ ನೀವು ಎಷ್ಟೋ ಕಾಮ್ ಆಗಿರುತ್ತೀರಿ.
- ಸೆಲ್ಫ್ ಟಾಕ್
ಸಿಟ್ಟು ಬಂದೊಡನೆ ನಿಮಗೆ ನೀವೇ 'ಇದೇನು ದೊಡ್ಡ ವಿಷಯವಲ್ಲ, ರಿಲ್ಯಾಕ್ಸ್' ಎಂದೋ, 'ಇದೆಲ್ಲ ತಾತ್ಕಾಲಿಕವಷ್ಟೇ, ಆರಾಮಾಗಿ ತೆಗೆದುಕೊಳ್ತೀನಿ, ಕಂಟ್ರೋಲ್' ಎಂದೆಲ್ಲ ಹೇಳಿಕೊಳ್ಳುತ್ತಿದ್ದರೆ ಮನಸ್ಸು ತಹಬಂದಿಗೆ ಬರುತ್ತದೆ.
- ಎಕ್ಸರ್ಸೈಸ್
ವಾಕಿಂಗ್, ಜಾಗಿಂಗ್, ರನ್ನಿಂಗ್, ಜಿಮ್, ಮಾರ್ಷಿಯಲ್ ಆರ್ಟ್ಸ್, ಯೋಗ - ಯಾವುದೇ ರೀತಿಯ ವ್ಯಾಯಾಮ ಸಿಟ್ಟನ್ನು ನಿಯಂತ್ರಿಸುತ್ತದೆ. ವ್ಯಾಯಾಮದಿಂದ ಹ್ಯಾಪಿ ಹಾರ್ಮೋನ್ ಎಂಡೋರ್ಫಿನ್ ಬಿಡುಗಡೆಯಾಗುತ್ತದೆ. ಇದು ನಿಮ್ಮ ಮೂಡನ್ನು ಬದಲಿಸಿ ಹ್ಯಾಪಿಯಾಗಿರಿಸುತ್ತದೆ. ನಿರಂತರ ವ್ಯಾಯಾಮ ಮಾಡುವುದರಿಂದ ಸಣ್ಣಪುಟ್ಟ ವಿಷಯಗಳಿಗೂ ಕೋಪ ಬರುವುದೇ ನಿಂತು ಹೋಗುತ್ತದೆ. ಇನ್ನು ಧ್ಯಾನ ಹಾಗೂ ಯೋಗ ನಿಮ್ಮ ಅಭ್ಯಾಸವಾಗಿದ್ದರೆ ಅವು ಎಲ್ಲವನ್ನೂ ಒಪ್ಪಿಕೊಳ್ಳುವ, ಎಲ್ಲರನ್ನೂ ಪ್ರೀತಿಸುವ, ನಮ್ಮ ಬಗ್ಗೆ ಸದಾ ಜಾಗೃತ ಪ್ರಜ್ಞೆಯಿಂದಿರುವ ಗುಣಗಳನ್ನು ಬೆಳೆಸುತ್ತದೆ.
ಕಿಡ್ನಿಯಲ್ಲಿ ಕಲ್ಲುಗಳಿಗೇನು ಕೆಲಸ?
- ಆಯುರ್ವೇದಿಕ್ ವಿಧಾನಗಳು
ಆಯುರ್ವೇದದ ಪ್ರಕಾರ, ಪಿತ್ತ ದೇಹದಲ್ಲಿ ಅತಿಯಾದಾಗ ಕೋಪ ಹೆಚ್ಚುತ್ತದೆ. ಅಶ್ವಗಂಧ, ತುಳಸಿ, ಬ್ರಾಹ್ಮಿಯಂಥ ಔಷಧೀಯ ಎಲೆಗಳ ಸೇವನೆಯು ಪಿತ್ತವನ್ನು ಕಡಿಮೆ ಮಾಡಿ ನರಮಂಡಲವನ್ನು ಶಾಂತಗೊಳಿಸುತ್ತದೆ. ಆ ಮೂಲಕ ನಿಮ್ಮ ಒತ್ತಡ ಹಾಗೂ ಕೋಪವನ್ನು ಕಡಿಮೆ ಮಾಡುತ್ತದೆ. ಅಶ್ವಗಂಧ ಬೇರಿನ ಕಷಾಯ, ಲೇಹ, ಟೀ ನಿರಂತರ ಸೇವನೆಯಿಂದ ಆತಂಕ ಹಾಗೂ ಒತ್ತಡ ನಿವಾರಣೆಯಾಗುವುದು ವೈಜ್ಞಾನಿಕವಾಗಿ ಕೂಡಾ ಸಾಬೀತಾಗಿದೆ. ತುಳಸಿ ಟೀ ಸೇವನೆ ಹಾಗೂ ಬ್ರಾಹ್ಮಿ ಎಣ್ಣೆಯಿಂದ ಹೆಡ್ ಮಸಾಜ್ ಮಾಡಿಸಿಕೊಳ್ಳುವುದರಿಂದ ಕೂಡಾ ಕೋಪ, ಒತ್ತಡ, ಆತಂಕ ನಿಯಂತ್ರಣಕ್ಕೆ ಬರುತ್ತವೆ.
- ಬರೆಯಿರಿ
ನಿಮಗೆ ಯಾವುದರಿಂದ ಏತಕ್ಕಾಗಿ ಸಿಟ್ಟು ಬರುತ್ತಿದೆ ಎಂಬುದನ್ನು ಬರೆದಿಡಿ. ಆ ಸಮಯದಲ್ಲಿ ನಿಮ್ಮ ಫೀಲಿಂಗ್ಸ್ ಏನೇನಿದೆ ಎಂಬುದನ್ನು ವಿವರವಾಗಿ ಬರೆಯಿರಿ. ಇದರಿಂದ ಮನಸ್ಸೂ ಶಾಂತವಾಗುತ್ತದೆ. ನಿಮಗೆ ಕೋಪ ಬರಲು ನಿಜವಾಗಿಯೂ ಅಂಥ ಕಾರಣವಿತ್ತೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲೂ ಸಹಾಯವಾಗುತ್ತದೆ.