ಮಕ್ಕಳಿಗೆ ಕ್ಲೀನ್ ಕ್ಲೀನ್ ಅಂತ ಕಾಟ ಕೊಡುವ ಪೋಷಕರೇ ಒಮ್ಮೆ ಇದನ್ನು ಓದಿ!
ರೋಗ ನಿರೋಧಕ ವ್ಯವಸ್ಥೆಗೆ ಕೂಡಾ ಕೀಟಾಣುಗಳ ವಿರುದ್ಧ ಹೋರಾಡಲು, ಅವುಗಳಿಗೆ ಹೊಂದಿಕೊಳ್ಳಲು ಬಾಲ್ಯದಿಂದಲೇ ತರಬೇತಿ ನೀಡುವುದು ಅಗತ್ಯ. ಹಾಗಿದ್ದಾಗ, ದೊಡ್ಡವರಾಗುತ್ತಾ ಬಂದಂತೆಲ್ಲ ರೋಗ ನಿರೋಧಕ ಶಕ್ತಿ ಹೆಚ್ಚುತ್ತಾ ಹೋಗಿ, ಎಂಥ ಸೂಕ್ಷ್ಮಾಣುಗಳನ್ನು ಬಡಿದು ಬಗ್ಗಿಸುತ್ತವೆ.
ನೆನಪಿದ್ಯಾ? ನಾವು ನೀವು ಚಿಕ್ಕವರಿದ್ದಾಗ ಚಪ್ಪಲಿಯನ್ನು ಶಾಲೆಗೆ ಹಾಕಿಕೊಂಡು ಹೋದರೆ ಕದೀತಾರೆ ಅಂತ ಅದನ್ನು ಮನೆಯಲ್ಲೇ ಇಟ್ಟು ಬರಿಗಾಲಲ್ಲೇ ಶಾಲೆಗೆ ಹೋಗುತ್ತಿದ್ವಿ, ಮಳೆಗಾಲದಲ್ಲಂತೂ ಛತ್ರಿ ಇದ್ದವರೂ ಇಲ್ಲದವರ ನಡುವೆ ಬೇಧವೇ ಇಲ್ಲವೆಂಬಂತೆ ನೆನೆದು ಬರುತ್ತಿದ್ವಿ. ಇನ್ನು ಚರಂಡಿಯಲ್ಲಿಳಿದು ಪೇಪರ್ ದೋಣಿ ಬಿಟ್ಟು ಆದಷ್ಟು ದೂರ ಅದರ ಹಿಂದೆಯೇ ಓಡುತ್ತಾ, ಮಗುಚಿಕೊಂಡಾಗೆಲ್ಲ ಸರಿ ಮಾಡುತ್ತಾ ಕೆಸರುಕೊಳಕು ನೀರಲ್ಲೇ ಮೈಕೈ ಅದ್ದಿಕೊಂಡಿರುತ್ತಿದ್ವಿ. ಆಲಿಕಲ್ಲು ಬಿದ್ದರೆ ಅದನ್ನೇ ಎತ್ತಿಕೊಂಡು ಬಾಯಿಗೆ ಹಾಕಿಕೊಂಡು ಸಂಭ್ರಮ ಪಡುತ್ತಿದ್ವಿ. ಮಣ್ಣಿನಲ್ಲೇ ಮನೆ ಕಟ್ಟಿಕೊಂಡು, ಮರದಲ್ಲಿ ಸಿಕ್ಕಿಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ವಿ. ಗೇರು ಹೂವನ್ನು ಕೂಡಾ ಬಿಡುತ್ತಿರಲಿಲ್ಲ. ಹಿರಿಯರು ಎಷ್ಟು ಹೇಳಿದರೂ ಕೈತೊಳೆದು ತಿನ್ನುವ ಅಭ್ಯಾಸ ಕೂಡಾ ಇರಲಿಲ್ಲ. ಆದರೂ, ನಮಗೆ ಜ್ವರ ಬರುತ್ತಿರಲಿಲ್ಲ, ಕೆಮ್ಮುಶೀತ ಬಂದರೂ ಕ್ಯಾರೆ ಅನ್ನುತ್ತಿರಲಿಲ್ಲ, ಇನ್ನು ಹಂದಿ ಜ್ವರ, ಕೋಳಿ ಜ್ವರ, ಡೆಂಗ್ಯೂ ಮತ್ತೊಂದು ಅಂತೆಲ್ಲ ಕೇಳಿಯೂ ಗೊತ್ತಿರಲಿಲ್ಲ.
ಮಕ್ಕಳ ಭಾವನಾತ್ಮಕ ಆರೋಗ್ಯ ಕಾಪಾಡುವುದು ಹೇಗೆ?
ಆದರೆ, ಈಗಿನ ಮಕ್ಕಳಿಗೆ ಆರತಿ ತಗಂಡ್ರೆ ಜ್ವರ, ತೀರ್ಥ ತಗೊಂಡ್ರೆ ಶೀತ ಎಂಬಂತಾಗಿದೆ. ನಾವಾಡುತ್ತಿದ್ದ ಮಣ್ಣಾಟ, ಕಲ್ಲಾಟ, ನೀರಾಟ, ಚಿನ್ನಿದಾಂಡು, ಅಳಗೂಳಿಮನೆಯಂಥ ಆಟಗಳೇ ಈಗಿನ ಮಕ್ಕಳಿಗೆ ಗೊತ್ತಿಲ್ಲ. ಪ್ರಕೃತಿಯೊಂದಿಗೆ ಅವರ ಒಡನಾಟವಿಲ್ಲ. ಕಾರಣ ಪೋಷಕರು. ವಿಶ್ವಸಂಸ್ಥೆಯಲ್ಲಿ ಸ್ವಚ್ಛತಾ ರಾಯಭಾರಿಗಳೇನೋ ಎಂಬ ಮಟ್ಟಿಗೆ ಅವರು ತಮ್ಮ ಮಗು ಹುಟ್ಟಿದಾಗಿನಿಂದ ಸ್ವಚ್ಛವಾಗಿಡುವ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಮಕ್ಕಳನ್ನು ಎಲ್ಲ ಕಾಯಿಲೆಗಳಿಂದ ರಕ್ಷಿಸುತ್ತೇನೆ ಎಂಬ ಭರದಲ್ಲಿ ಅವರಿಗೆ ಮಳೆಗಾಲದಲ್ಲಿ ಹೊರ ಹೋಗಲು ಬಿಡುವುದಿಲ್ಲ, ಬೇಸಿಗೆಯ ಬಿಸಿಲಲ್ಲಿ ಕಪ್ಪಗಾಗಲು ಬಿಡುವುದಿಲ್ಲ. ತಮ್ಮ ಬಾಲ್ಯ ಮರೆತ ಅವರಿಗೆ ಮಕ್ಕಳನ್ನು ಜರ್ಮ್ಸ್ ಹಾಗೂ ಇನ್ಫೆಕ್ಷನ್‌ಗಳನ್ನು ಎದುರಿಸಲು ಬಿಡುವುದರ ಪ್ರಾಮುಖ್ಯತೆ ತಿಳಿದಿಲ್ಲ. ಬಾಲ್ಯದಲ್ಲಿ ಕೀಟಾಣು, ಸೂಕ್ಷ್ಮಾಣುಗಳೊಂದಿಗೆ ಗುದ್ದಾಡಿದರೆ, ಅದು ಆ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
'ನೇಚರ್ ರಿವ್ಯೂಸ್ ಕ್ಯಾನ್ಸರ್' ಎಂಬ ಜರ್ನಲ್‌ನಲ್ಲಿ ಇತ್ತೀಚೆಗೆ ವರದಿಯಾದ ಸಂಶೋಧನಾ ಫಲಿತಾಂಶವು ಜರ್ಮ್ ಫ್ರೀ ಬಾಲ್ಯದ ಅಪಾಯಗಳ ಕುರಿತು ವಿವರಿಸಿದೆ. ಹಾಗಾಗಿ, ನೀವು ನಿಮ್ಮ ಮಗುವನ್ನು ಅತಿಯಾಗಿ ಸ್ವಚ್ಛವಾಗಿಡುವ ಪೋಷಕರಾಗಿದ್ದರೆ ಇದನ್ನು ಓದಲೇಬೇಕು.
ಅಧ್ಯಯನ
ಅಧ್ಯಯನದ ಪ್ರಕಾರ, ಜರ್ಮ್ಸ್ ಮುಕ್ತ ಬಾಲ್ಯವು ಮಕ್ಕಳಲ್ಲಿ ಇನ್ಫೆಕ್ಷನ್, ಅಲರ್ಜಿ, ಅಸ್ತಮಾ ಹಾಗೂ ಲುಕೇಮಿಯಾ ತರುವ ಸಾಧ್ಯತೆ ಹೆಚ್ಚು. ಇದು ಬಹಳ ಸಾಮಾನ್ಯವಾದ ಬಾಲ್ಯ ಕಾಲದ ಕ್ಯಾನ್ಸರ್ ಆಗಿದೆ. ಮೊದಲ ವರ್ಷಗಳಲ್ಲಿ ವೈರಸ್, ಬ್ಯಾಕ್ಟೀರಿಯಾ ಹಾಗೂ ಇತರೆ ಸೂಕ್ಷ್ಮಾಣುಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಟ್ಟರೆ, ಆ ಬಳಿಕ ಅವರು ವಿವಿಧ ಇನ್ಫೆಕ್ಷನ್‌ಗಳಿಗೆ ತೆರೆದುಕೊಂಡರೆ ಅದನ್ನು ತಡೆದುಕೊಳ್ಳಲಾರರು.
ಇದಕ್ಕಾಗಿ ಮಕ್ಕಳನ್ನು ಸೂಕ್ಷ್ಮಾಣುಗಳಿಂದ ದೂರವಿಡುವ ಬದಲು, ಮೊದಲ ವರ್ಷದಿಂದಲೇ ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಪೋಷಕರು ಯೋಚಿಸಬೇಕು. ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿದರೆ ತನ್ನಿಂತಾನೇ ಇನ್ಫೆಕ್ಷನ್, ಲುಕೇಮಿಯಾ ಸೇರಿದಂತೆ ಯಾವುದೇ ಕಾಯಿಲೆಗಳ ವಿರುದ್ಧ ಅದು ಸಮರ್ಥವಾಗಿ ಹೋರಾಡಬಲ್ಲದು. ಇದಕ್ಕಾಗಿ ಮಕ್ಕಳನ್ನು ಸಾಮಾನ್ಯವಾದ ಹೆಚ್ಚು ಅಪಾಯಕಾರಿಯಲ್ಲದ ಜರ್ಮ್ಸ್‌ಗಳೊಂದಿಗೆ ಸ್ವತಃ ಹೋರಾಡಿ ಎಂದು ಬಿಡುವುದೇ ಒಳ್ಳೆಯದು ಎನ್ನುತ್ತಾರೆ ಸಂಶೋಧಕರು.
ಪಠ್ಯದಲ್ಲಿನ್ನು ಲಿವ್‌ಇನ್, ಸಲಿಂಗ, ಸಿಂಗಲ್‌ಪೇರೆಂಟ್‌ಗೂ ಕುಟುಂಬ ವ್ಯವಸ್ಥೆ ಸ್ಥಾನ!
ಮೆದುಳಿನ ಬೆಳವಣಿಗೆಗೆ ಹೇಗೆ ವಿವಿಧ ಸ್ಟಿಮುಲೇಶನ್‌ಗಳು ಬೇಕೋ, ಹಾಗೆಯೇ ರೋಗ ನಿರೋಧಕ ಶಕ್ತಿ ಬೆಳೆಯಲು ಸಣ್ಣ ವಯಸ್ಸಿನಲ್ಲೇ ಅದನ್ನು ಪ್ರತಿ ದಿನದ ಜರ್ಮ್ಸ್ ಜೊತೆ ಬಿಟ್ಟು ಹೋರಾಡಲು ಕಲಿಸುವುದು ಅಗತ್ಯ. ಮತ್ತೊಂದು ಅಧ್ಯಯನದ ಪ್ರಕಾರ, ಮಗುವಿರುವಾಗ ಪ್ರಾಣಿಗಳ ಮಲಕ್ಕೆ ಹೆಚ್ಚು ಎಕ್ಸ್‌ಪೋಸ್ ಆಗಿ 2 ವರ್ಷದೊಳಗೆ ಬಹಳ ಬಾರಿ ಬೇಧಿ ಅನುಭವಿಸಿದ ಮಕ್ಕಳು ದೊಡ್ಡವರಾದಾಗ ಹೃದಯ ರೋಗಗಳು, ಡಯಾಬಿಟೀಸ್ ಹಾಗೂ ಅಲ್ಜೀಮರ್ಸ್‌ನಿಂದ ದೂರವಿರುತ್ತಾರೆ. ಇನ್ನಾದರೂ ನಿಮ್ಮ ಮಕ್ಕಳನ್ನು ಮಳೆಯಲ್ಲಿ ಆಡಲು, ಕೆಸರಿನಲ್ಲಿ ಓಡಲು ಬಿಟ್ಟು ಬಿಡಿ. ಯಾರಿಗೆ ಗೊತ್ತು, ಭವಿಷ್ಯದ ಹಲವು ಕಾಯಿಲೆಗಳನ್ನು ಇದರಿಂದ ತಡೆಯುತ್ತಿರಬಹುದು.