ರಾಜಸ್ಥಾನದಲ್ಲೊಂದು ಕುಲ್ಧಾರಾವೆಂಬ ಶಾಪಗ್ರಸ್ಥ ತಾಣ...!
ಎಲ್ಲೆಡೆ ವಿಚಿತ್ರ ತಾಣಗಳಿರುತ್ತವೆ. ತನ್ನದೇ ಆದ ವಿಶೇಷಗಳಿರುವ ಕೆಲವು ಊರುಗಳು ಹಲವಾರು ಚಿತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿರುತ್ತವೆ. ಕೆಲವೊಂದು ಊರು ಶಾಪಗ್ರಸ್ಥವಾಗಿರುತ್ತವೆ. ಅಂಥದ್ರಲ್ಲಿ ರಾಜಸ್ಥಾನದ ಈ ಊರೂ ಒಂದು.
ರಾಜಸ್ಥಾನದ ಸಾಂಸ್ಕೃತಿಕ ವಿರಾಸತ್‌ಗೆ ತನ್ನದೇ ಆದ ವಿಶೇಷತೆ ಇದೆ. ಇಲ್ಲಿನ ಸೌಂದರ್ಯ, ಸಂಸ್ಕೃತಿ, ಅರಮನೆ, ಎಲ್ಲವೂ ರಾಜಸ್ಥಾನವನ್ನು ಒಂದು ಅದ್ಭುತ ಲೋಕವಾಗಿಸಿದೆ. ಈ ರಾಜ್ಯದ ಜೈಸಲ್ಮೇರ್ ಜಿಲ್ಲೆಯ ಕುಲ್ಧಾರಾದಲ್ಲಿ ರಹಸ್ಯವೊಂದು ಅಡಗಿದೆ. ಆ ರಹಸ್ಯವೇ ಯಾತ್ರಿಗಳನ್ನು ಅಲ್ಲಿಗೆ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.
ರಾಜಸ್ಥಾನದ ಜೈಸಲ್ಮೇರ್‌ನ ಕುಲ್ಧಾರಾ ಹಳ್ಳಿ ಕಳೆದ 170 ವರ್ಷಗಳಿಂದ ಪೂರ್ತಿಯಾಗಿ ಖಾಲಿಯಾಗಿದೆ. ಒಂದು ಮನೆಯೂ ಇಲ್ಲ. ಏಕಂದರೆ ಇದು ಸಾವಿನ ಹಳ್ಳಿ ಎಂಬ ಕುಖ್ಯಾತವಾಗಿದೆ. ಇಲ್ಲಿನ ಜನರು ಒಂದೇ ರಾತ್ರಿಯಲ್ಲಿ ಈ ಊರನ್ನು ಖಾಲಿ ಮಾಡಿದ್ದಾರೆ. ಕೆಲವರು ಇಲ್ಲಿ ಕೆಟ್ಟ ಶಕ್ತಿ ಅಡಗಿದೆ ಎನ್ನುತ್ತಾರೆ. ಆದರೆ ಇಲ್ಲಿ ಅಂತಹ
ಯಾವುದೇ ಕೆಟ್ಟ ಆಟಗಳ ಅನುಭವ ಉಂಟಾಗಿಲ್ಲ. ಏನಿದು ಈ ಊರಿನ ಕಥೆ?
1291ರಲ್ಲಿ ಮೂಲತಃ ಈ ಹಳ್ಳಿಯನ್ನು ಸ್ಥಾಪಿಸಿದ್ದು ಪಲಿವಾಲ ಬ್ರಾಹ್ಮಣರು. ಕೃಷಿಯಲ್ಲಿ ವಿಪರೀತ ಜ್ಞಾನ ಹೊಂದಿದ್ದ ಈ ಬ್ರಾಹ್ಮಣರು ಮರಭೂಮಿಯಲ್ಲೂ ಹೆಚ್ಚಿನ ಫಸಲು ತೆಗೆಯುತ್ತಿದ್ದರು.
1825ರ ಕಾಲದಲ್ಲಿ ದಿವಾನ್ ಸಲೀಂ ಸಿಂಗ್ ಎಂಬಾತ ಇಲ್ಲಿ ತೆರಿಗೆ ಸಂಗ್ರಹಕ್ಕೆ ಬರುತ್ತಿದ್ದನಂತೆ. ಇವನಿಗೆ ಈ ಗ್ರಾಮದ ಮುಖಂಡನ ಸ್ಫುರದ್ರೂಪಿ ಮಗಳ ಮೇಲೆ ಪ್ರೀತಿ ಹುಟ್ಟಿತ್ತಂತೆ. ಆದರೆ ಅಲ್ಲಿದ್ದವರೆಲ್ಲ ಬ್ರಾಹ್ಮಣರಾದ ಕಾರಣ ಆ ಊರಿನವರಿಗೆಲ್ಲ ಆತ ಈ ಸುದ್ದಿಗೆ ಬಂದರೆ ಹೆಚ್ಚು ತೆರಿಗೆ ಪಾವತಿಸಬೇಕಾಗಬಹುದು ಎಂದು ಹೇಳಿ ಹೆದರಿಸಿದ್ದಂತೆ. ಅದೇ ದಿನ ಗ್ರಾಮಸ್ಥರೆಲ್ಲರೂ ಸಭೆ ಸೇರಿ ಗ್ರಾಮ ತೊರೆಯುವ ಯೋಚನೆ ಮಾಡಿ, ರಾತ್ರೋರಾತ್ರಿ ಇದಕ್ಕಿದ್ದಂತೆ ಹಳ್ಳಿ ತೊರೆದರು. ಅಲ್ಲದೇ ಇಲ್ಲಿ ಯಾರೇ ಬಂದು ನೆಲೆಸಿದರೂ ಸಾವು ಬರಲೆಂದು ಶಪಿಸಿದರಂತೆ. ಹೀಗಾಗಿ ಇದುವರೆಗೂ ಇಲ್ಲಿ ಯಾರೂ ವಾಸಿಸುವ ಬಗ್ಗೆ ಯೋಚಿಸಿಲ್ಲ ಎನ್ನಲಾಗಿದೆ. ಆದರೆ ಈವರೆಗೂ ಪಲಿವಾಲ ಬ್ರಾಹ್ಮಣರು ಎಲ್ಲಿ ಹೋಗಿ ನೆಲೆಸಿದರೂ ಎಂಬ ಬಗ್ಗೆಯೂ ಮಾಹಿತಿಯಿಲ್ಲ. ಈಗ ಅಲ್ಲಿ ಉಳಿದಿರುವುದು ಕಟ್ಟಡ, ಮನೆಗಳ ಅವಶೇಷಗಳು ಮಾತ್ರ. ಇಲ್ಲಿ ಯಾರೂ ವಾಸಿಸದ ಕಾರಣ ಈ ಸ್ಥಳವನ್ನು ರಾಜಸ್ಥಾನ ಸರಕಾರ ಪಾರಂಪರಿಕ ತಾಣವನ್ನಾಗಿ ಘೋಷಿಸಿದೆ. ಈ ರಹಸ್ಯ ತಾಣವನ್ನು ನೋಡಲೂ ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ.