Actor Vinod Raj: "ದುಡ್ಡು ನಿಮ್ಮನ್ನ ಆಳಬಾರದು, ನೀವೇ ದುಡ್ಡನ್ನ ಆಳಬೇಕು.." ರೈತರ ಕಷ್ಟ-ಸುಖಗಳನ್ನು ಹತ್ತಿರದಿಂದ ಕಂಡಿರುವ ಹಿರಿಯ ನಟ ವಿನೋದ್ ರಾಜ್, ಕೈತುಂಬ ಹಣ ಬಂದಾಗ, ಬ್ಯಾಂಕ್ನಲ್ಲಿ ಇಡುವಾಗ ಜನರು ಮಾಡುವ ಅತಿ ದೊಡ್ಡ ತಪ್ಪು ಯಾವುದು ಮತ್ತು ಅದಕ್ಕಿರುವ ಪರಿಹಾರವೇನು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಚಿತ್ರರಂಗದ ಗ್ಲಾಮರ್ನಿಂದ ದೂರವಿದ್ದು, ನೆಲಮಂಗಲದ ತೋಟದಲ್ಲಿ ಅಪ್ಪಟ ರೈತನಾಗಿ ಬದುಕುತ್ತಿರುವ ಹಿರಿಯ ನಟ ವಿನೋದ್ ರಾಜ್, ರೈತರು ಮತ್ತು ಸಾಮಾನ್ಯ ಜನರಿಗೆ ಕಣ್ಣು ತೆರೆಸುವಂತಹ ಆರ್ಥಿಕ ಪಾಠವೊಂದನ್ನು ಹೇಳಿಕೊಟ್ಟಿದ್ದಾರೆ. ಜಮೀನು ಮಾರಾಟವಾದಾಗಲೋ ಅಥವಾ ಬೆಳೆ ಬಂದಾಗಲೋ ಕೈಗೆ ದೊಡ್ಡ ಮೊತ್ತದ ಹಣ ಸೇರಿದಾಗ ಅದನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಅವರು ನೀಡಿರುವ 'FD ಸ್ಪ್ಲಿಟಿಂಗ್' ಲೆಕ್ಕಾಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
"ದುಡ್ಡು ನಿಮ್ಮನ್ನ ಆಳಬಾರದು, ನೀವೇ ದುಡ್ಡನ್ನ ಆಳಬೇಕು!"
ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತು ಆರಂಭಿಸಿದ ವಿನೋದ್ ರಾಜ್, "ದುಡ್ಡು ನಿಮ್ಮನ್ನ ನಿಯಂತ್ರಿಸಬಾರದು, ನೀವೇ ದುಡ್ಡನ್ನ ಗೌರವವಾಗಿಟ್ಟುಕೊಂಡು ನಿಯಂತ್ರಿಸಬೇಕು. ಕೈಗೆ ಹಣ ಬಂದ ತಕ್ಷಣ 'ಅಯ್ಯೋ ಇದೆಲ್ಲ ನಂದೇ ದುಡ್ಡು' ಅಂತ ಮೈಮರೆಯಬೇಡಿ. ಅದೆಲ್ಲ ದುಡ್ಡಲ್ಲ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಮಾಯವಾಗಿಬಿಡುತ್ತದೆ. ಅದಕ್ಕೆ ಸರಿಯಾದ ಲೆಕ್ಕಾಚಾರ ಬೇಕು" ಎಂದು ಎಚ್ಚರಿಸಿದ್ದಾರೆ.
ವಿನೋದ್ ರಾಜ್ ಬಿಚ್ಚಿಟ್ಟ 40 ಲಕ್ಷದ ಲೆಕ್ಕಾಚಾರ
ಒಂದು ವೇಳೆ ನಿಮ್ಮ ಕೈಗೆ 50 ಲಕ್ಷ ರೂಪಾಯಿ ಹಣ ಬಂದರೆ, ಅದನ್ನು ಬ್ಯಾಂಕ್ನಲ್ಲಿ ಹೇಗೆ ಹೂಡಿಕೆ ಮಾಡಬೇಕು ಎಂಬುದನ್ನು ಅವರು ಹಂತ ಹಂತವಾಗಿ ವಿವರಿಸಿದ್ದಾರೆ..
1. ಒಂದು ವರ್ಷದ ಖರ್ಚು ಪ್ರತ್ಯೇಕವಾಗಿರಲಿ
"ನಿಮ್ಮ ಕೈಗೆ 50 ಲಕ್ಷ ಬಂದರೆ, ಅದರಲ್ಲಿ ಮುಂದಿನ 1 ವರ್ಷದ ಕುಟುಂಬದ ಗರಿಷ್ಠ ಖರ್ಚಿಗೆ 10 ಲಕ್ಷ ರೂಪಾಯಿ ಪ್ರತ್ಯೇಕವಾಗಿ ಎತ್ತಿಟ್ಟುಕೊಳ್ಳಿ. ಇನ್ನುಳಿದ 40 ಲಕ್ಷ ರೂಪಾಯಿಯನ್ನು ಸುರಕ್ಷಿತವಾದ ಮತ್ತು ಹೆಚ್ಚು ಬಡ್ಡಿ ನೀಡುವ ಉತ್ತಮ ಕೋ-ಆಪರೇಟಿವ್ (ಸಹಕಾರಿ) ಬ್ಯಾಂಕ್ಗಳಲ್ಲಿ ಇಡಿ."
2. ಒಟ್ಟಿಗೆ 40 ಲಕ್ಷ ಒಂದೇ FD ಮಾಡಬೇಡಿ
"ಬ್ಯಾಂಕ್ಗೆ ಹಾಕುವಾಗ 40 ಲಕ್ಷವನ್ನು ಒಂದೇ ಠೇವಣಿ ಮಾಡಬೇಡಿ. ಅದನ್ನು ತುಂಡು ತುಂಡಾಗಿ (Split ಮಾಡಿ) ಹಾಕಿ. 5-5 ಲಕ್ಷದಂತೆ 6 FD ಗಳನ್ನು ಮಾಡಿ (ಒಟ್ಟು 30 ಲಕ್ಷ). ಇನ್ನುಳಿದ 10 ಲಕ್ಷವನ್ನು 2-2 ಲಕ್ಷದಂತೆ 5 ಸಣ್ಣ FD ಗಳನ್ನು ಮಾಡಿ. ಹೀಗೆ ಮಾಡಿದಾಗ ಒಟ್ಟು 40 ಲಕ್ಷ ರೂಪಾಯಿ ಡೆಪಾಸಿಟ್ ಆಗುತ್ತದೆ."
3. ಈ ಐಡಿಯಾದಿಂದಾಗುವ ಲಾಭವೇನು?
"ನಾಳೆ ನಿಮಗೆ ಹಠಾತ್ ಆಗಿ ಆಸ್ಪತ್ರೆಗೋ ಅಥವಾ ಮನೆಗೋ ತೀರಾ ತುರ್ತಾಗಿ 2 ಲಕ್ಷ ರೂಪಾಯಿ ಬೇಕಾಯಿತು ಎಂದಿಟ್ಟುಕೊಳ್ಳಿ. ಆಗ ನೀವು ಕೇವಲ ಆ 2 ಲಕ್ಷದ ಒಂದು ಸಣ್ಣ FDಯನ್ನು ಮಾತ್ರ ಮುರಿದುಕೊಳ್ಳಬಹುದು! ಇದರಿಂದ ನಿಮ್ಮ ಉಳಿದ 38 ಲಕ್ಷ ರೂಪಾಯಿ ಅಸಲು ಹಾಗೇ ಇರುತ್ತದೆ, ಅದಕ್ಕೆ ಬರುವ ಬಡ್ಡಿಗೂ ಯಾವುದೇ ಕತ್ತರಿ ಬೀಳುವುದಿಲ್ಲ. ಎಲ್ಲವೂ ಮ್ಯಾನೇಜ್ ಆದಂತಾಗುತ್ತದೆ. ಈ ಆರ್ಥಿಕ ಲೆಕ್ಕಾಚಾರವನ್ನು ಪ್ರತಿಯೊಬ್ಬ ಜನಸಾಮಾನ್ಯರು, ಅದರಲ್ಲೂ ಮುಖ್ಯವಾಗಿ ನಮ್ಮ ರೈತರು ಅರ್ಥ ಮಾಡಿಕೊಳ್ಳಲೇಬೇಕು" ಎಂದು ವಿನೋದ್ ರಾಜ್ ಕಿವಿಮಾತು ಹೇಳಿದ್ದಾರೆ.
ನೆಲದ ನಂಟನ್ನು ಉಳಿಸಿಕೊಂಡು, ಕೃಷಿ ಬದುಕಿನ ವಾಸ್ತವವನ್ನು ಅರಿತಿರುವ ನಟ ವಿನೋದ್ ರಾಜ್ ಅವರ ಈ ಪ್ರಾಕ್ಟಿಕಲ್ ಮಾತುಗಳು, ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ಳುವ ಎಷ್ಟೋ ರೈತ ಕುಟುಂಬಗಳಿಗೆ ನಿಜಕ್ಕೂ ದಾರಿದೀಪವಾಗಿದೆ.
ವಿನೋದ್ ರಾಜ್ ಕೇವಲ ಬಾಯುಪಚಾರಕ್ಕೆ ಈ ಆರ್ಥಿಕ ಸಲಹೆಗಳನ್ನು ನೀಡುತ್ತಿಲ್ಲ. ಚಿತ್ರರಂಗದ ಏಳು-ಬೀಳುಗಳನ್ನು, ಕಡುಬಡತನವನ್ನು, ಹಣದ ಮುಖಗಳನ್ನು ಮತ್ತು ರೈತರ ನೈಜ ಕಷ್ಟಗಳನ್ನು ಅತ್ಯಂತ ಹತ್ತಿರದಿಂದ ಕಂಡವರು. ಪ್ರತಿದಿನ ತೋಟದಲ್ಲಿ ಬೆವರು ಸುರಿಸಿ ದುಡಿಯುವ ಇವರಿಗೆ, ದುಡ್ಡಿನ ನಿಜವಾದ ಮೌಲ್ಯ ಮತ್ತು ಕಷ್ಟಪಟ್ಟು ಸಂಪಾದಿಸಿದ ಹಣ ಹೇಗೆ ಮಣ್ಣುಪಾಲಾಗುತ್ತದೆ ಎಂಬ ಕಹಿ ವಾಸ್ತವ ಚೆನ್ನಾಗಿ ಗೊತ್ತು.

