property donation : ಹಿಮಾಲಯದ ನಿವೃತ್ತ ವೈದ್ಯರೊಬ್ಬರು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ತೀರ್ಮಾನ ಎಲ್ಲರನ್ನು ಆಶ್ಚರ್ಯಗೊಳಿಸಿದೆ. 100 ಕೋಟಿ ಆಸ್ತಿಯನ್ನು ದಾನ ಮಾಡಲು ಕಾರಣ ಏನು ಗೊತ್ತಾ?
ಹಣ ನೋಡಿದ್ರೆ ಹೆಣವೂ ಬಾಯಿ ಬಿಡುತ್ತೆ ಎನ್ನುವ ಮಾತಿದೆ. ಹಣ, ಆಸ್ತಿಗಾಗಿ ಜನ ಆಪ್ತರ ಪ್ರಾಣ ತೆಗೆಯೋಕೆ ಸಿದ್ಧವಿದ್ದಾರೆ. ಸಾಯುವವರೆಗೂ ಹಣ ಕೂಡಿಹಾಕಿ, ಬಂದಿದ್ದನ್ನು ಬಾಚಿಕೊಳ್ಳವವರ ಸಂಖ್ಯೆ ಹೆಚ್ಚಿರುವ ಈ ಜಗತ್ತಿನಲ್ಲಿ ಹಿಮಾಚಲದ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.
100 ಕೋಟಿ ಆಸ್ತಿ ದಾನ !
ಹಿಮಾಚಲ ಪ್ರದೇಶದ ನದೌನ್ನ ಜೋಲಾಸ್ಪಾಡ್ನ 77 ವರ್ಷದ ಪ್ರಸಿದ್ಧ ವೈದ್ಯ ಡಾ. ರಾಜೇಂದ್ರ ಕನ್ವರ್ ಕೆಲಸ ಎಲ್ಲರನ್ನು ಅಚ್ಚರಿಗೊಳಿಸಿದೆ. ಅವರು ತಮ್ಮ ಮತ್ತು ದಿವಂಗತ ಪತ್ನಿ ಕೃಷ್ಣ ಕನ್ವರ್ ಸಂಪಾದಿಸಿದ ಸುಮಾರು 100 ಕೋಟಿ ಮೌಲ್ಯದ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. 2021 ರಲ್ಲಿ, ಡಾ. ಕನ್ವರ್ ತಮ್ಮ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳನ್ನು ಸರ್ಕಾರಕ್ಕೆ ದಾನ ಮಾಡಿದ್ದರು. ಈಗ ಆಗಸ್ಟ್ 5, 2026 ರಂದು, ತಮ್ಮ ಜೀವಿತಾವಧಿಯಲ್ಲಿ ಅವರು ಸ್ವಯಂಪ್ರೇರಣೆಯಿಂದ ಉಡುಗೊರೆ ಪತ್ರಕ್ಕೆ ಸಹಿ ಹಾಕಿ ಸರ್ಕಾರಕ್ಕೆ ಆಸ್ತಿಯನ್ನು ವರ್ಗಾಯಿಸಿದ್ದಾರೆ.
ಅವರ ಈ ಉಡುಗೊರೆ ಆಸ್ತಿಯನ್ನು ರಾಜ್ಯ ಸರ್ಕಾರ, ಹಮೀರ್ಪುರದ ಡಾ. ರಾಧಾಕೃಷ್ಣನ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ನೋಂದಾಯಿಸಿದೆ. ಡಾ. ಕನ್ವರ್ ತಮ್ಮ ಮರಣದ ನಂತರ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗಕ್ಕೆ ಲಿಖಿತ ಒಪ್ಪಿಗೆಯನ್ನು ನೀಡಿದ್ದಾರೆ.
ಈ ನಿರ್ಧಾರಕ್ಕೆ ಕಾರಣ ಏನು?
ಡಾ. ರಾಜೇಂದ್ರ ಕನ್ವರ್, ಸಮಾಜದ ಹಿತಕ್ಕಾಗಿ ತಮ್ಮ ಆಸ್ತಿಯನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಅವರಿಗೆ ಮಕ್ಕಳಿಲ್ಲ. ಉಡುಗೊರೆ ಪತ್ರದಲ್ಲಿ ಎರಡು ಅಂತಸ್ತಿನ ಬಂಗಲೆ, ಸರಿಸುಮಾರು ಐದು ಕನಾಲ್ಗಳು ಮತ್ತು ಐದು ಮಾರ್ಲಾ ಭೂಮಿ, ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳು, ಕಾರುಗಳು, ಪೀಠೋಪಕರಣಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿದಂತೆ ಇತರ ಆಸ್ತಿಗಳು ಸೇರಿವೆ. ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಲೆಕ್ಕ ಹಾಕಿದ್ರೆ ಆಸ್ತಿ ಮೌಲ್ಯ 100 ಕೋಟಿ ಮೀರಿದೆ. ಡಾ. ಕನ್ವರ್, ಆರೋಗ್ಯ ಕ್ಷೇತ್ರದಲ್ಲಿ ಅಗತ್ಯವಿರುವವರಿಗೆ ಹಾಗೂ ವೃದ್ಧಾಶ್ರಮಕ್ಕೆ ಇದನ್ನು ಬಳಸಲು ಅವರು ಬಯಸುತ್ತಾರೆ. ತಮ್ಮ ದಿವಂಗತ ಪತ್ನಿಯ ನೆನಪಿಗಾಗಿ ಸಂಸ್ಥೆಗೆ 'ಕೃಷ್ಣ ರಾಜೇಂದ್ರ' ಎಂದು ಹೆಸರಿಸಬೇಕೆಂದು ಅವರು ಬಯಸುತ್ತಾರೆ.
ಡಾ. ಕನ್ವರ್ ಕುಟುಂಬ ಡಾ. ಕನ್ವರ್ ಅವರ ಪತ್ನಿ ಕೃಷ್ಣ ಕನ್ವರ್, ಸುಮಾರು 32 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಂತರ 2011 ರಲ್ಲಿ ಬಡಾದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿ ನಿವೃತ್ತರಾದರು. ಅವರು ಡಿಸೆಂಬರ್ 6, 2020 ರಂದು ನಿಧನರಾದರು. ಅವರ ಮರಣದ ಮೊದಲು, ದಂಪತಿ ತಮ್ಮ ಆಸ್ತಿಯನ್ನು ಸಮಾಜಕ್ಕೆ ಅರ್ಪಿಸಲು ನಿರ್ಧರಿಸಿದ್ದರು. ಡಾ. ರಾಜೇಂದ್ರ ಕನ್ವರ್ ಜನವರಿ 3, 1977 ರಂದು ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇರಿದರು ಮತ್ತು ಸುಮಾರು 33 ವರ್ಷಗಳ ಸರ್ಕಾರಿ ಸೇವೆಯ ನಂತರ, 2010 ರಲ್ಲಿ ಕಂಗುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿರಿಯ ವೈದ್ಯರಾಗಿ ನಿವೃತ್ತರಾದರು.


