ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರದ ಪೂರ್ವಭಾವಿಯಾಗಿ, ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಮಾರ್ಗದಲ್ಲಿ ಮೊದಲ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ರೈಲು, ವೇಗ ನಿಯಂತ್ರಣ ಮತ್ತು ತುರ್ತು ಬ್ರೇಕ್ ವ್ಯವಸ್ಥೆಗಳ ಪರೀಕ್ಷೆಗೆ ಒಳಪಟ್ಟಿದ್ದು, ಮುಂದಿನ ಪರೀಕ್ಷೆಗಳು ಯಶಸ್ವಿಯಾದರೆ ಈ ಮಾರ್ಗದಲ್ಲಿ ಸೇವೆ ಆರಂಭವಾಗಲಿದೆ.

ಮಂಗಳೂರು: ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಪೂರ್ವಭಾವಿಯಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಘಾಟಿ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಮೊದಲ ಪ್ರಾಯೋಗಿಕ ಸಂಚಾರವನ್ನು ಬುಧವಾರ ಯಶಸ್ವಿಯಾಗಿ ನಡೆಸಿತು.

ಸ್ವಯಂಚಾಲಿತ ತುರ್ತು ಬ್ರೇಕ್ (ಎಇಬಿ) ವ್ಯವಸ್ಥೆ ಅಳವಡಿಸಿರುವ ವಿಶೇಷ 20 ಬೋಗಿಗಳ ವಂದೇ ಭಾರತ್ ರೈಲು ಬೆಳಗ್ಗೆ 6.42ಕ್ಕೆ ಸಕಲೇಶಪುರ ರೈಲು ನಿಲ್ದಾಣದಿಂದ ಹೊರಟು, ಬೆಳಗ್ಗೆ 10.55ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪಿತು. ಬಳಿಕ ರೈಲು ಸುಬ್ರಹ್ಮಣ್ಯ ರೋಡ್‌ನಿಂದ ಸಕಲೇಶಪುರದತ್ತ ಘಾಟಿ ಏರುವ ದಿಕ್ಕಿನಲ್ಲಿಯೂ ಪ್ರಾಯೋಗಿಕ ಸಂಚಾರ ನಡೆಸಿತು.

ಘಾಟಿ ಮಾರ್ಗದಲ್ಲಿ ಒಟ್ಟು ಸುಮಾರು 55 ಕಿ.ಮೀ. ಉದ್ದದ ಪ್ರದೇಶದಲ್ಲಿ ವಿವಿಧ ಹಂತಗಳ ಪರೀಕ್ಷೆ ನಡೆಯಲಿದೆ. ರೈಲ್ವೆ ಸಚಿವಾಲಯದ ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಮಾನದಂಡ ಸಂಸ್ಥೆ (ಆರ್‌ಡಿಎಸ್‌ಒ) ತಜ್ಞರ ತಂಡ ವೇಗ ನಿಯಂತ್ರಣ, ರೈಲಿನ ನಿಯಂತ್ರಣ ಸಾಮರ್ಥ್ಯ, ತುರ್ತು ಬ್ರೇಕ್ ಹಾಕಿದಾಗ ರೈಲು ನಿಲ್ಲಲು ಬೇಕಾಗುವ ಅಂತರ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸುತ್ತಿದೆ.

30 ಕಿ.ಮೀ. ವೇಗ ಮಿತಿ

ಘಾಟಿ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಎಇಬಿ ವ್ಯವಸ್ಥೆಯನ್ನು ಗಂಟೆಗೆ 30 ಕಿ.ಮೀ. ವೇಗಕ್ಕೆ ಪೂರ್ವ ನಿಗದಿಪಡಿಸಲಾಗಿದೆ. ಘಾಟಿ ಪ್ರದೇಶದಲ್ಲಿ ರೈಲು ಈ ವೇಗವನ್ನು ಮೀರದಂತೆ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಮಾರ್ಗದಲ್ಲಿ 1.50ರಷ್ಟು ತೀವ್ರ ಇಳಿಜಾರು/ಏರುಗತಿಯಾಗಿರುವ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಗಂಟೆಗೆ 30 ಕಿ.ಮೀ. ವೇಗದ ಮಿತಿಯನ್ನು ನಿಗದಿಪಡಿಸಿದ್ದಾರೆ.

ಆ.13ರಿಂದ ಮತ್ತೆ ಪರೀಕ್ಷೆ

ಆ.13ರಂದು ಹಾಗೂ ಆ.17ರಿಂದ 19ರ ವರೆಗೆ ಘಾಟಿ ಮಾರ್ಗದಲ್ಲಿ ಮತ್ತಷ್ಟು ಪ್ರಾಯೋಗಿಕ ಸಂಚಾರ ನಡೆಯಲಿದೆ. ಆ.20ರ ವರೆಗೂ ವಿವಿಧ ಹಂತಗಳ ಪರೀಕ್ಷೆ ಮುಂದುವರಿಯುವ ಸಾಧ್ಯತೆಯಿದೆ. ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಕರ್ನಾಟಕಕ್ಕೆ ವಂದೇ ಭಾರತ್ ಸೇವೆ ಆರಂಭಿಸುವ ಸಾಧ್ಯತೆ ಹೆಚ್ಚಲಿದೆ.

ವಂದೇ ಭಾರತ್ ರೈಲಿನ ಪ್ರಯೋಗಾತ್ಮಕ ಸಂಚಾರದ ಹಿನ್ನೆಲೆಯಲ್ಲಿ ಯಶವಂತಪುರ–ಮಂಗಳೂರು ಜಂಕ್ಷನ್/ಕಾರವಾರ ನಡುವೆ ಸಂಚರಿಸುವ ಹಗಲು ರೈಲುಗಳನ್ನು ಗರಿಷ್ಠ 30 ನಿಮಿಷಗಳವರೆಗೆ ನಿಯಂತ್ರಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ವಂದೇ ಭಾರತ್ ರೇಕ್:

ಸಾಮಾನ್ಯ ಡೀಸೆಲ್ ಅಥವಾ ವಿದ್ಯುತ್ ಎಂಜಿನ್‌ಗಳಿಂದ ಎಳೆಯುವ ರೈಲುಗಳಿಗೆ ಘಾಟಿ ಪ್ರದೇಶದಲ್ಲಿ ವೇಗ ನಿಯಂತ್ರಿಸಲು ಬ್ಯಾಂಕರ್ ಲೋಕೊಮೋಟಿವ್‌ಗಳನ್ನು ಬಳಸಲಾಗುತ್ತದೆ. ಈ ಲೋಕೊಗಳಿಗೆ 30 ಕಿ.ಮೀ. ವೇಗ ಮಿತಿಯ ಎಇಬಿ ವ್ಯವಸ್ಥೆ ಅಳವಡಿಸಲಾಗಿದೆ. ಏರುಗತಿ ಅಥವಾ ಇಳಿಜಾರಿನಲ್ಲಿ ರೈಲುಗಳ ನಿಯಂತ್ರಣಕ್ಕೆ ಇವುಗಳನ್ನು ಹೆಚ್ಚುವರಿ ಎಂಜಿನ್‌ಗಳಾಗಿ ಜೋಡಿಸಲಾಗುತ್ತದೆ.

ಆದರೆ ವಂದೇ ಭಾರತ್ ರೇಕ್‌ಗೆ ತಾಂತ್ರಿಕ ಹಾಗೂ ವಿನ್ಯಾಸದ ಕಾರಣಗಳಿಂದ ಬ್ಯಾಂಕರ್ ಲೋಕೊ ಜೋಡಿಸಲು ಸಾಧ್ಯವಿಲ್ಲ. ಹೀಗಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಘಾಟಿ ಮಾರ್ಗದ ಸಂಚಾರಕ್ಕೆ ಅನುಗುಣವಾಗಿ ವಿಶೇಷ 20 ಬೋಗಿಗಳ ವಂದೇ ಭಾರತ್ ರೇಕ್ ನಿರ್ಮಿಸಲಾಗಿದೆ. ಈ ರೇಕ್ ಕಳೆದ ವಾರ ಮೈಸೂರಿಗೆ ಆಗಮಿಸಿದ್ದು, ಆ.11ರಂದು ಮೈಸೂರಿನಲ್ಲಿ ಸ್ಥಿರ ಪರೀಕ್ಷೆ ನಡೆಸಿದ ಬಳಿಕ ಅದೇ ರಾತ್ರಿ ಸಕಲೇಶಪುರಕ್ಕೆ ತರಲಾಗಿತ್ತು.

ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದರೆ ಬೆಂಗಳೂರು-ಮಂಗಳೂರು ವಂದೇ ಭಾರತ್ ಸಂಚಾರಕ್ಕೆ ಮಾರ್ಗ ಸುಗಮವಾಗಲಿದೆ.

ಇದನ್ನೂ ಓದಿ: Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್‌ನ್ಯೂಸ್