ಪಿ.ಲಂಕೇಶ್ ಅವರ ರೇಸು ಕುದುರೆಯ ಕಥಾಪ್ರಸಂಗ!

life | Monday, May 28th, 2018
Suvarna Web Desk
Highlights

ಪಿ. ಲಂಕೇಶ್ ಎರಡು ದಶಕಗಳ ಕಾಲ ಕನ್ನಡ ಮನಸ್ಸುಗಳನ್ನು ಪ್ರಸ್ತಾವಿಸಿದರು. ಪ್ರಖರ ಚಿಂತನೆ ಮತ್ತು ನಿಷ್ಠುರ ನೋಟದಿಂದಾಗಿ ಸಾಹಿತ್ಯ, ರಾಜಕಾರಣ ಮತ್ತು ಸಾಂಸ್ಕೃತಿಕ ಜಗತ್ತನ್ನು ಆಳಿದವರು. ಅವರ ಆಪ್ತ ಒಡನಾಡಿ, ಜೊತೆಗಾರ, ಲಂಕೇಶ್ ಪತ್ರಿಕೆಯ ಆರಂಭದಲ್ಲಿ ಅವರ ಜೊತೆಗೇ ಇದ್ದ ಎನ್ ಕೆ ಮೋಹನರಾಮ್ ಲಂಕೇಶರ ಕುರಿತು ವಿಸ್ತಾರವಾಗಿ ಬರೆದಿದ್ದಾರೆ. 'ಈ ಮೋಹನರಾಮ್ ಒಬ್ಬ ಜೊತೆಗಿದ್ದರೆ ಇಡೀ ಜಗತ್ತನ್ನೇ ಅಲ್ಲಾಡಿಸಬಲ್ಲೆ..' ಅಂತ ಲಂಕೇಶರು ಬರೆದುಕೊಂಡಿದ್ದರು. ಆ ಅನುಬಂಧದ ಕುರಿತು ಅವರಿಲ್ಲಿ ಕಟು ಮಧುರ ಆಖ್ಯಾನದೊಂದಿಗೆ ದಾಖಲಿಸಿದ್ದಾರೆ. ಅವರ ಪುಸ್ತಕದ ಆಯ್ದ ಭಾಗಗಳು ಇಲ್ಲಿವೆ.

ಶನಿವಾರ, 'ಭಾನುವಾರ ಲಂಕೇಶರ ಚಡಪಡಿಕೆಯ ದಿನಗಳು, ಹ್ಯಾಗಾದರೂ ಮಾಡಿ ಮಧ್ಯಾಹ್ನದ ವೇಳೆಗೆ ಅವರು ನೂರು ರೂಪಾಯಿಯಾದರೂ ಹೊಂಚಲೇ ಬೇಕಿತ್ತು. ಇದು ಕನಿಷ್ಠ ಅಗತ್ಯ. ತಿಂಗಳ ಮೊದಲ ವಾರದಲ್ಲಿ ನೂರೈವತ್ತು ಬೇಕಾಗುತ್ತಿದ್ದು, ಅದು ಸಂಬಳದ ದುಡ್ಡಿನಲ್ಲಿ ನಡೆಯುತ್ತಿತ್ತು. ಸಮಸ್ಯೆ ಇರುತ್ತಿದ್ದದ್ದು ತಿಂಗಳ ಮಧ್ಯಭಾಗದ ನಂತರ, ಇದೆಲ್ಲಾ 1970ರ ದಶಕದ ಆರಂಭದ ಲೆಕ್ಕಾಚಾರದಲ್ಲಿ. 

ಪುತ್ರ ವ್ಯಾಮೋಹಿ ಲಂಕೇಶ್

ರಿಕ್ಷಾಗೆ 10-12 ರೂಪಾಯಿ, ಸಿಗರೇಟಿಗೆ ಮೂರು ರೂಪಾಯಿ. ಇನ್ನುಳಿದದ್ದು ರೇಸಿಗೆ. ಅಷ್ಟನ್ನೂ ರೇಸಿನಲ್ಲಿ ಕಳೆದುಕೊಳ್ಳುವವರಲ್ಲ. ಒಮ್ಮೊಮ್ಮೆ ದುಡಿದದ್ದೂ ಉಂಟು, ಶನಿವಾರ-'ಭಾನುವಾರಗಳ ಅವರ ಚಡಪಡಿಕೆ, ಅವರು ದುಡ್ಡು ಎತ್ತುತ್ತಿದ್ದ ಕ್ರಮ, ವೈಖರಿ, ರೀತಿಗಳ ಬಗ್ಗೆ ಲಂಕೇಶರೇ ಬರೆದುಕೊಂಡಿದ್ದಾರೆ.  ಒಂದು ಫಿಫ್ಪಿ ರುಪೀಸ್ ಕೊಡಯ್ಯ, ಫಿಫ್ಟಿ ಇದೆ ಎಂದರು ಒಮ್ಮೆ. ಅದೂ ತಿಂಗಳ ಮೊದಲ ವಾರದಲ್ಲೇ, ಆಗ ನನ್ನ ತಿಂಗಳ ಸಂಬಳ ನಾನ್ನೂರು. ಮನೆಗೆ ಕೊಡಬೇಕಾದ್ದು ಇನ್ನೂರು. ಕೆಲಸಕ್ಕೆ ಸರಿಯಾಗಿ ಹೋಗದಿದ್ದರಿಂದ ಬರುತ್ತಿದ್ದ ಸಂಬಳ ಮುನ್ನೂರು ಮಾತ್ರ. ಎರಡು ರೂಪಾಯಿಗೂ ಒದ್ದಾಡುತ್ತಿದ್ದ ನಾನು ಇನ್ನು ಲಂಕೇಶರಿಗೆ ಎಲ್ಲಿಂದ ಕೊಡಬೇಕು ಫಿಫ್ಟಿ ರೂಪೀಸ್?  ಕಷ್ಟವೆಲ್ಲ ಹೇಳಿದೆ. ಶುದ್ಧ ನಾನ್‌ಸೆನ್ಸ್ ಕಣೋ ನೀನು, ಕೈಯಲ್ಲಿ ಐವತ್ತು ರೂಪಾಯಿ ಇಟ್ಟುಕೊಳ್ಳದ ನೀವು ಹ್ಯಾಗಯ್ಯಾ ಬದುಕುತ್ತೀರಿ? ಎಂದು ನನ್ನನ್ನು ಬೈದರು. 

ಸಹಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿದ ಪಿ.ಲಂಕೇಶ್

ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್!

ಒಂದು ಶನಿವಾರ, ಲಂಕೇಶ್ ಹೇಳಿದರು. ನಾಳೆ ಮಧ್ಯಾಹ್ನ ಒಂದು ಗಂಟೆಗೆ ಮನೆಗೆ ಬಾ, ಎಸ್. ವೆಂಕಟರಾಂ ಕಾಯುತ್ತಿದ್ದಾರೆ. ಅರ್ಜೆಂಟಾಗಿ ಬರಬೇಕಂತೆ ಎಂದು ಕರಿ ಎಂದರು. ಈ ವೆಂಕಟರಾಂ ಸಮಾಜವಾದಿ ಪಕ್ಷದ ರಾಜ್ಯ ಕಾರ್ಯದರ್ಶಿ. ಬಹುವಾಗಿ  ಓದಿದವರು. ಸಾಹಿತ್ಯ, ಸಂಸ್ಕತಿ, ರಾಜಕೀಯ, ಫಿಲಾಸಫಿ, ಸಮಾಜ ಶಾಸ್ತ್ರ...  ಎಲ್ಲವನ್ನೂ ಓದುತ್ತಿದ್ದವರು. ಅವರು ಹೇಳಿದಂತೆಯೇ ಮಾಡಿದೆ. ಮನೆಯಿಂದ ಆಚೆ ಬಂದ ಲಂಕೇಶರು, ಆಟೋದಲ್ಲಿ ನನ್ನನ್ನೂ ಕೂರಿಸಿಕೊಂಡು ಸೀದಾ ಹೋಗಿದ್ದು, ರೇಸ್‌ಕೋರ್ಸ್‌ಗೆ. ನೀನು ಮನೆಗೆ ಹೋಗು. ಸಂಜೆ ಐದಕ್ಕೆ ಇಲ್ಲಿಗೆ ಬಾ ಎಂದು ಒಳಗೆ ಹೋದರು. ಸರಿ, ನನ್ನ ಮನೆ ಶೇಷಾದ್ರಿಪುರದಲ್ಲಿದ್ದದ್ದು ಅವರಿಗೆ ಗೊತ್ತಿತ್ತು. ಸಂಜೆ ಐದಕ್ಕೆ ರೇಸ್‌ಕೋರ್ಸ್ ಮುಂದೆ ಹಾಜರಾದೆ, ಒಂದಕ್ಕೆ ಮೂರರಷ್ಟು ಗೆದ್ದಿದ್ದರು. ಖುಷಿಯಲ್ಲಿದ್ದ ಲಂಕೇಶರು ಬಾರಯ್ಯ ಬೀರ್ ಕುಡಿಯೋಣ ಎಂದು ಅಲ್ಲೇ ಬಳಿಯಲ್ಲಿದ್ದ ಎಂಬೆಸಿ ಬಾರ್‌ಗೆ ಕರೆದೊಯ್ದು ಬಿಯರ್ ಕೊಡಿಸಿದರು. ಆಗ ಬಾಟೆಲ್ ಬಿಯರ್ ಬೆಲೆ ಐದು-ಆರು ರೂಪಾಯಿ. ಈ ಎಂಬೆಸಿ ಬಾರ್ ಇದ್ದದ್ದು, ಈಗಿನ ಫಿಲಂ ಛೇಂಬರ್ಸ್‌ ಆಫ್ ಕಾಮರ್ಸ್ ಎದುರಿಗಿನ ಬಂಗಲೆಯೊಂದರಲ್ಲಿ. ಈಗ ಅದು ನಿರ್ನಾಮಗೊಂಡಿದೆ. ನವಕರ್ನಾಟಕ ಪ್ರಕಾಶನದ ಮುಖ್ಯ ಕಛೇರಿ ಈಗ ಇರುವುದು ಅದೇ ಜಾಗದಲ್ಲೇ.
ಮುಂದಿನ 'ಭಾನುವಾರ ಸಹ ಅದೇ ಕಾಯಕ ಮುಂದುವರೆಯಿತು. ಅಂದರೆ ಅದೇ ಆಹ್ವಾನ. ವೆಂಕಟರಾಂ ಕಾಯುತ್ತಿದ್ದಾರೆ. ರೇಸಿಗೆ ಹೋದೆವು. ಆ ವಾರ ಲಾಭ ಅಷ್ಟಾಗಿ ಕುದುರಲಿಲ್ಲದ ಕಾರಣ ಇಬ್ಬರೂ ಬಸವನಗುಡಿಯ ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದೆವು. ನೀನು ನನಗೆ ಲಕ್ಕಿ, ಮುಂದಿನವಾರವೂ ಬಾರಯ್ಯ ಎಂದರು. 

ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು!

ಪತ್ರಕರ್ತ ಲಂಕೇಶ್ ಹಿಂದಿದ್ದ ಪಿ ಅರ್ಥವೇನು?

ಎಡವಿದ್ದು ಅಲ್ಲೇ, ಸುಳ್ಳಿಗೂ ಮಿತಿ ಬೇಡವೇ? ಇಲ್ಲವಾದರೆ ಸಿಕ್ಕಿ ಬೀಳುವುದು ಗ್ಯಾರಂಟಿ. ಭಾನುವಾರ ಲಂಕೇಶ ಮಹಡಿ ಮನೆಯ ಮೆಟ್ಟಿಲು ಅರ್ಧ ಹತ್ತಿದ್ದೆ. ಮೆಟ್ಟಿಲು ಇಳಿಯುತ್ತಿದ್ದ ಇಂದಿರಾ ಎದುರಾದರು. ಒಮ್ಮೆಲೆ ಎಗರಿದರು, ಏನ್ರೀ ಈ ವಾರವೂ ಎಸ್. ವೆಂಕಟ್ರಾಂ 'ಭೇಟಿಯಿದೆಯಾ ಎಂದರು. ತಬ್ಬಿಬ್ಬಾಗಿ ಪೆದ್ದನಂತೆ ಹ್ಞೂಂ ಎಂದು ಬಿಟ್ಟೆ. ಅದೇ ಮುಳುವಾಯಿತು. ಇಂದಿರಮ್ಮನವರು ತರಾಟೆಗೆ ತೆಗೆದುಕೊಂಡರು. ರೀ, ನಿಮಗೇನು ಬೇರೆ ಕೆಲಸವಿಲ್ಲವೇ. ಪ್ರತಿ 'ಭಾನುವಾರ ಮಧ್ಯಾಹ್ನ ರೇಸಿಗೆ ಕರೆದುಕೊಂಡು ಹೋಗುವುದು ನನಗೆ ಗೊತ್ತಾಗಲ್ವೇ? ನಿಮಗಿನ್ನೂ ಚಿಕ್ಕ ವಯಸ್ಸು.  ಮದುವೆ-ಗಿದುವೆ ಆಗಿಲ್ಲಾ ಅಂತ ಕಾಣುತ್ತೆ, ನೀವೂ ರೇಸಿಗೆ ಬಿದ್ದು ಹಾಳಾಗ್ತೀರಾ, ಎಂದು ಝೂಡಿಸಿ ಬಿರ ಬಿರನೆ ಮೆಟ್ಟಲಿಳಿದು ಹೊರಟು ಹೋದರು. ಇಂಗುತಿಂದ ಮಂಗನಂತಾಗಿದ್ದ ನಾನು ಲಂಕೇಶರಿಗೆ ನಡೆದಿದ್ದನ್ನು ಸವಿಸ್ತಾರವಾಗೇ ಹೇಳಿದೆ. ಅವರಿಗೂ ಒಂದಷ್ಟು  ಕಿವಿಗೆ ಬಿದ್ದಿತ್ತು. ನೀನೊಬ್ಬ ನಾನ್‌ಸೆನ್ಸ್, ನ್ಯೂಸೆನ್ಸ್ ಎಂದು ನನಗೆ ಬೈದವರೇ ಬಾರಯ್ಯ, ಹೇಗಿದ್ದರೂ ಜಗಳ ಆಗಿದೆ. ಇದೇ ಕೊನೆ, ಮುಂದಿನವಾರದಿಂದ ಬರಬೇಡ. ಈವತ್ತು ಮಾತ್ರ ಹೋಗುತ್ತೇನೆ ಎಂದವರೇ, ಆಟೋ ಹತ್ತಿಸಿಕೊಂಡರು. ರೇಸ್‌ಕೋರ್ಸ್‌ನತ್ತ ನಮ್ಮ ಪ್ರಯಾಣ ಬೆಳೆಯಿತು. 

ಲಂಕೇಶರ ಆಕ್ಷೇಪಣೆ ರಿಕ್ಷಾದಲ್ಲಿ ಮುಂದುವರೆಯಿತು. ಅಲ್ಲಯ್ಯಾ, ನಿನಗೆ ಸ್ವಲ್ಪವೂ ಬುದ್ದಿ ಬೇಡವೇನಯ್ಯ. ಪ್ರತಿವಾರವೂ ಬಂದು ವೆಂಕಟ್ರಾಂ ಭೇಟಿಯಾಗುವುದಿದೆ ಎಂದು ಹೇಳುತ್ತಿಯಲ್ಲಾ, ಅಲ್ಲೇ ಗೊತ್ತಾಗುತ್ತೆ ಸುಳ್ಳು ಅಂತ. ವಾರ-ವಾರ ಬೇರೆಬೇರೆ ನೆಪ ಹೇಳಬೇಕು. ಒಂಚೂರೂ ಕ್ರಿಯೇಟಿವಿಟಿ ಇಲ್ಲದ್ದಕ್ಕೆ ಹೀಗೆ ಆಗೋದು. ನೀನು ಇನ್ನಾದರೂ ಒಂದಿಷ್ಟು ಕ್ರಿಯೇಟಿವ್ ಆಗಬೇಕು ಎಂದು ಷರಾ ಹಾಕಿದರು. 

ಹೀಗೂ ಇದ್ದರು ಪಿ.ಲಂಕೇಶ್: ಆಗಿನ ಕಾಲದ ಐಷಾರಾಮಿ ಕಾರು ಕೊಂಡಿದ್ದ ಕವಿ

Comments 0
Add Comment

    Celebrate the Spirit of your Personality Through colour

    video | Friday, March 16th, 2018
    Nirupama K S