Asianet Suvarna News Asianet Suvarna News

ಸಹಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿದ ಪಿ.ಲಂಕೇಶ್

ಪಿ. ಲಂಕೇಶ್ ಎರಡು ದಶಕಗಳ ಕಾಲ ಕನ್ನಡ ಮನಸ್ಸುಗಳನ್ನು ಪ್ರಸ್ತಾವಿಸಿದರು. ಪ್ರಖರ ಚಿಂತನೆ ಮತ್ತು ನಿಷ್ಠುರ ನೋಟದಿಂದಾಗಿ ಸಾಹಿತ್ಯ, ರಾಜಕಾರಣ ಮತ್ತು ಸಾಂಸ್ಕೃತಿಕ ಜಗತ್ತನ್ನು ಆಳಿದವರು. ಇದೀಗ ಅವರ ಆಪ್ತ ಒಡನಾಡಿ, ಜೊತೆಗಾರ, ಲಂಕೇಶ್ ಪತ್ರಿಕೆಯ ಆರಂಭದಲ್ಲಿ ಅವರ ಜೊತೆಗೇ ಇದ್ದ ಎನ್ ಕೆ ಮೋಹನರಾಮ್ ಲಂಕೇಶರ ಕುರಿತು ವಿಸ್ತಾರವಾಗಿ ಬರೆದಿದ್ದಾರೆ. 'ಈ ಮೋಹನರಾಮ್ ಒಬ್ಬ ಜೊತೆಗಿದ್ದರೆ ಇಡೀ ಜಗತ್ತನ್ನೇ ಅಲ್ಲಾಡಿಸಬಲ್ಲೆ..' ಅಂತ ಲಂಕೇಶರು ಬರೆದುಕೊಂಡಿದ್ದರು. ಆ ಅನುಬಂಧದ ಕುರಿತು ಅವರಿಲ್ಲಿ ಕಟು ಮಧುರ ಆಖ್ಯಾನದೊಂದಿಗೆ ದಾಖಲಿಸಿದ್ದಾರೆ. ಅವರ ಪುಸ್ತಕದ ಆಯ್ದ ಭಾಗಗಳು ಇಲ್ಲಿವೆ.

6-untold-anecdotes-p-lankesh-kannada-writer-journalist-book-excerpts-7
  • Facebook
  • Twitter
  • Whatsapp

 

ಲಂಕೇಶರ ಹಠವೆಂದರೆ ತಮಗೆ ಸಹಾಯ ಮಾಡಿದವರನ್ನು ಬಹಿರಂಗವಾಗಿ ದ್ವೇಷಿಸುವುದು. ತಾನು ಅವರ ಮುಲಾಜಲ್ಲಿಲ್ಲ ಹಾಗೂ ತಾನು ಅವರಿಂದ ಸಹಾಯ ಪಡೆಯಲಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸುವುದು ಅವರ ಉದ್ದೇಶ. ಹಾ.ಮಾ. ನಾಯಕರೂ ಈ ಪಟ್ಟಿಯಲ್ಲಿದ್ದದ್ದು ಸಹಜವೇ. ಇದಕ್ಕಿದ್ದದ್ದು ಎರಡು ಕಾರಣಗಳು. ಒಂದು ಲಂಕೇಶರು ಹಾ.ಮಾ. ನಾಯಕರ ಮೂಲಕ ತಮ್ಮ 'ಈಡಿಪಸ್' ಮತ್ತು 'ಅಂತಿಗೊನೆ' ನಾಟಕಗಳನ್ನು ಮೈಸೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವಾಗಿಸಿದ್ದು. ಇದು 1972ರಲ್ಲಿ. ಇದಕ್ಕೂ ಮೊದಲು ಅವರ ಸಂಪಾದಿತ 'ಅಕ್ಷರ ಹೊಸ ಕಾವ್ಯ' ಕವನ ಸಂಕಲನದ ಚರ್ಚೆಯಲ್ಲಿ ಲಂಕೇಶರ ಪ್ರತಿಭೆ ಮೂರಾಬಟ್ಟೆಯಾಗಿದ್ದು. ಇದು 1980ರಲ್ಲಿ. ಇದಕ್ಕೆ ಕಾರಣವಾದ ಹಾ.ಮಾ. ನಾಯಕರ ಲೇಖನ.

ಪುತ್ರ ವ್ಯಾಮೋಹಿ ಲಂಕೇಶ್

 

ಲಂಕೇಶರಿಗೆ ಅವಕಾಶ ಅದಾಗೇ ಒದಗಿ ಬಂತು. 1982ರಲ್ಲಿ ಲಂಕೇಶರ ಪ್ರಯಾಣ ಒಮ್ಮೆ ಮೈಸೂರಿಗೆ ಬೆಳೆಸಿತು. ಅಲ್ಲಿ ಅವರ ಕಟ್ಟಾಭಿಮಾನಿ ಕೆ. ರಾಂದಾಸ್ ಎಲ್ಲ ವ್ಯವಸ್ಥೆ ಮಾಡಿದ್ದರು. ಪತ್ರಿಕೆಯ ಪ್ರಸಿದ್ಧಿಯ ನಂತರದಲ್ಲಿ ಬೆಳೆದ ಲಂಕೇಶರ ಕಟ್ಟಾಭಿಮಾನಿಗಳ ಪಟಾಲಂನಲ್ಲಿ ವಿಜೃಂಭಿಸಿದವರಲ್ಲಿ ಈ ರಾಂದಾಸ್ ಮುಖ್ಯರು. 1970ರ ದಶಕದಲ್ಲಿ ನಾನು ಲಂಕೇಶರ ಚೇಲಾ ಆಗಿದ್ದಾಗ ಈ ರಾಂದಾಸರನ್ನು 'ಭೇಟಿ ಮಾಡಿದ್ದಿರಲಿ ಅವರ ಹೆಸರನ್ನು ಕೇಳಿಯೂ ಇರಲಿಲ್ಲ. ಇವರ ಖ್ಯಾತಿ ಇದ್ದದ್ದು ಅತಿರೇಕದ, ಹುಂಬತನದ ಭಾಷಣ, ಮಾತುಗಳಿಂದಾಗಿಯೇ ಹೊರತು ಇವರು ಮೌಲಿಕವಾಗಿ ಬರೆದದ್ದಾಗಲಿ, ಮಾತನಾಡಿದ್ದಾಗಲಿ ಇಲ್ಲ. ಸಾಹಿತ್ಯ-ಸಂಸ್ಕತಿಗೆ ಇವರ ಕೊಡುಗೆಯೂ ಇಲ್ಲ.

ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್!

ಲಂಕೇಶರ ಮೈಸೂರು ಪ್ರಯಾಣದಲ್ಲಿ ರವೀಂದ್ರ ರೇಶ್ಮೆ, ಎಂ.ಎನ್. ಚಕ್ರವರ್ತಿ ಅಲಿಯಾಸ್ ನಚ್ಚಿಯೂ ಕೂಡಿದ್ದರು. ಮೈಸೂರಿನಲ್ಲಿ ಕೆ. ರಾಂದಾಸ್ 'ಭೇಟಿಯಾಯಿತು. ಅದು ಉದ್ದೇಶಿತ ಭೇಟಿಯೇ. ರಾಂದಾಸ್ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಕೆಲವು ಅವ್ಯವಹಾರಗಳನ್ನು ಪರ್ವತದಷ್ಟು  ದೊಡ್ಡದಾಗಿಸಿ ಹೇಳಿದರು, ಮುಖ್ಯವಾಗಿ ಹಾ.ಮಾ. ನಾಯಕರ ವಿರುದ್ಧ. ಆಗ ಅವರು ವಿಭಾಗದ ಮುಖ್ಯಸ್ಥರಾಗಿದ್ದರು. ಲಂಕೇಶ್ ಪತ್ರಿಕೆಯ ಮುಂದಿನ ಸಂಚಿಕೆ ಹಾ.ಮಾ. ನಾಯಕರ ವಿರುದ್ಧವಾಯಿತು. ನಚ್ಚಿ ಹೇಳಿದ ಪ್ರಕಾರ ಸೇರಿ ಲಂಕೇಶ್, ರೇಶ್ಮೆ ಎಲ್ಲರೂ ಒಂದೊಂದು ವರದಿ ಬರೆದಿದ್ದರೂ, ಒಂದು ವರದಿಗೆ ಮಾತ್ರ ನಚ್ಚಿಯ ಹೆಸರಿತ್ತು. ಉಳಿದಂತೆ ಇತರ ವರದಿಗಳು, ವರದಿಗಾರ ಎಂಬ ಹೆಸರಲ್ಲಿ ಪ್ರಕಟವಾದವು. ಇದರಲ್ಲಿ ಮುಖ್ಯವಾಗಿದ್ದದ್ದು ನಾಯಕರಿಗೆ ಕನ್ನಡ ಪ್ರೊಫೆಸರ್ ಆಗಲು ಕನಿಷ್ಟ ಅರ್ಹತೆಯೇ ಇಲ್ಲ ಎಂಬುದು.

ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು!

ಹಿಂದೆ ಆದ ಎರಡು ಅನು'ವಗಳೊಂದಿಗೆ ತಮ್ಮ ಮುಸ್ಸಂಜೆ ಕಥಾ ಪ್ರಸಂಗಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಡದಿದ್ದ  ಕಾರಣವನ್ನು ಸೇರಿಸಿಕೊಂಡು ಲಂಕೇಶರು ತಮ್ಮ ದ್ವೇಷ ಸಾಧಿಸಿದ್ದರು. ಅಲ್ಲದೆ ಹಾ.ಮಾ. ನಾಯಕರನ್ನು ಕೆಟ್ಟದಾಗೇ ಟೀಕಿಸಿ, ಹಾ.ಮಾ. ನಾಯಕರನ್ನು 'ಕೆಂಚ ಒಕ್ಕಲಿಗ' ಎಂಬುದು ನಚ್ಚಿಯ ವರದಿಯಲ್ಲಿ ಸೇರ್ಪಡೆಯಾಗಿತ್ತು. ಇದನ್ನು ಸೇರಿಸಿದ್ದು ಖುದ್ದು ಲಂಕೇಶರೇ. ಬೆಂಗಳೂರಿನ ಮಲ್ಲೇಶ್ವರದಲ್ಲೇ ಹುಟ್ಟಿ ಬೆಳೆದ, ಯಾವ ಜಾತಿಯ ಗೋಜಲೂ ಗೊತ್ತಿರದ ನಚ್ಚಿಗೆ, ನಾಯಕರು ಒಕ್ಕಲಿಗ ಎಂಬುದೇ ಗೊತ್ತಿರಲಿಲ್ಲ. ಅದರಲ್ಲೂ ಕೆಂಚ ಒಕ್ಕಲಿಗ ಎಂಬುದು ಆತನ ನಿಘಂಟಿನಲ್ಲಿ ಸಹ ಇರಲಿಲ್ಲ. ರಾಮದಾಸರು ಪತ್ರಿಕೆಯ ಸಂಚಿಕೆ ಮೈಸೂರು ವಿಶ್ವವಿದ್ಯಾಲಯದ ಮೂಲೆ ಮೂಲೆಗಳಿಗೆ, ಹಾಲಿ-ಮಾಜಿ ವಿದ್ಯಾರ್ಥಿಗಳಿಗೆ, ಸಮಸ್ತ ಕನ್ನಡ ಉಪನ್ಯಾಸಕರಿಗೆ ತಲುಪುವಂತೆ ನೋಡಿಕೊಂಡರು. ಹಾ.ಮಾ. ನಾಯಕರು ಮಾನಸಿಕವಾಗಿ 'ಧೂಳಿಪಟವಾಗಿದ್ದರು.

ಹೀಗೂ ಇದ್ದರು ಪಿ.ಲಂಕೇಶ್: ಆಗಿನ ಕಾಲದ ಐಷಾರಾಮಿ ಕಾರು ಕೊಂಡಿದ್ದ ಕವಿ

ಹಾ.ಮಾ. ನಾಯಕರು ಉಳಿದವರಂತೆ ಸುಮ್ಮನಿರಲಿಲ್ಲ. ಲಂಕೇಶರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದರು. ಲಂಕೇಶ್ ಮತ್ತು ನಚ್ಚಿಯ ಮೇಲೆ. ಒಂದೆರೆಡು ಬಾರಿ ಕೋರ್ಟ್‌ಗೆ ಹಾಜರಾಗದ್ದರಿಂದ ಇಬ್ಬರಿಗೂ ಜಾಮೀನುರಹಿತ ವಾರಂಟ್ ಜಾರಿಯಾಯಿತು. ಅದನ್ನು ಜಾರಿ ಮಾಡಿ, ಅವರನ್ನು ಬಂಧಿಸಲು ಬಂದ ಪೊಲೀಸರನ್ನು ತಮ್ಮದೇ ಕಾರಲ್ಲಿ ಕೂರಿಸಿಕೊಂಡು ಪ್ರಯಾಣಿಸಿ ನಚ್ಚಿ, ಲಂಕೇಶರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದರು. ನಚ್ಚಿ, ತಲೆ ತಲೆ ಚಚ್ಚಿಕೊಂಡರು.

ಕವಿ, ಪತ್ರಕರ್ತ ಪಿ.ಲಂಕೇಶ್‌ರಿಗಿತ್ತು ರೇಸ್ ಹುಚ್ಚು!

ಕೇಸು ಮುಂದುವರೆಯಿತು. ಒಂದು ವರ್ಷಕ್ಕೂ ಮೇಲಾಯಿತು. ನ್ಯಾಯಾಲಯದಲ್ಲಿ ನಾಯಕರ ಹೇಳಿಕೆಯೂ ಆಯಿತು. ಇನ್ನುಳಿದದ್ದು ನಾಯಕರ ಪಾಟೀ ಸವಾಲು ಮತ್ತು ವಾದ ಮಂಡನೆ ಅಷ್ಟೆ. ನಾಯಕರ ವಕೀಲ ವಿ.ಎಚ್. ಗೌಡ. ವೃತ್ತಿಯಲ್ಲಿ ಹೆಸರು ಮಾಡಿದವರು. ಮೈಸೂರು ವಿಶ್ವವಿದ್ಯಾಲಯದ ಸೆನೆಟ್-ಸಿಂಡಿಕೇಟ್ ಸದಸ್ಯರಾಗಿದ್ದವರು. ಸಜ್ಜನ, ಸಂಭಾವಿತ, ಮುಖ್ಯವಾಗಿ ಸಮಾಜವಾದಿ ಪಕ್ಷದಲ್ಲಿ ತೊಡಗಿಸಿಕೊಂಡವರು. ಲಂಕೇಶರಿಗೆ ಚೆನ್ನಾಗೇ ಪರಿಚಿತರು. ಲಂಕೇಶರ ಲಾಯರ್ ನಾಗರಾಜ್ ಸಹ ಸಮಾಜವಾದಿಗಳೇ. ಕೇಸನ್ನು ಮುಂದುವರೆಸುವುದು, ಇಬ್ಬರು ವಕೀಲರಿಗೂ ಬೇಡವಾಗಿತ್ತು. ಎಲ್ಲರಿಗೂ ಮುಜುಗರ ತಂದಿದ್ದ ಕೇಸು ಇದಾಗಿತ್ತು. ಲಂಕೇಶರಿಗೆ ಪಾರಾಗುವ ಅವಕಾಶಗಳು ಇಲ್ಲವೇ ಇಲ್ಲವಾಗಿತ್ತು. ಏನೇನೋ ನಡೆದು ನಾಯಕರು ಕೇಸು ಹಿಂಪಡೆಯಲು ಒಪ್ಪಿದರು, ಆದರೆ ಷರತ್ತಿನ ಮೇಲೆ. ಅದು ಲಂಕೇಶರ ಕ್ಷಮಾಪಣೆ, ಅದೂ ಬೇಷರತ್ತಾಗಿ. ಲಂಕೇಶರು ಒಪ್ಪಲೇಬೇಕಾಯಿತು. ಅವರಲ್ಲಿ ತಮ್ಮ ಪತ್ರಿಕೆಯ ವರದಿಗಳ ಪೂರಕವಾಗಿ ಒಂದು ದಾಖಲೆಯೂ ಇರಲಿಲ್ಲ. ಪರಿಸ್ಥಿತಿಯ ತೀವ್ರತೆ ತಿಳಿದಿದ್ದ ಅವರು ಕ್ಷಮಾಪಣೆ ಕೋರಲು ತಯಾರಾಗೇ ಇದ್ದರು. ಅದಕ್ಕಾಗಿ ಅವರು ತಮ್ಮ ಒಂದಿಬ್ಬರು ಏಜೆಂಟರನ್ನು ನಾಯಕರಲ್ಲಿಗೆ ಕಳಿಸಿದ್ದರು ಕೂಡ. ರಾಜಿಯನ್ನು ಕೋರ್ಟಿಗೆ ತಿಳಿಸಿದ್ದರಿಂದ ಕೇಸು ಅಲ್ಲಿಗೆ ಮುಗಿಯಿತು.

ಪತ್ರಕರ್ತ ಲಂಕೇಶ್ ಹಿಂದಿದ್ದ ಪಿ ಅರ್ಥವೇನು?

ಕ್ಷಮಾಪಣೆ ಕೋರುವಲ್ಲಿ ಲಂಕೇಶರು ತಮ್ಮ ಬುದ್ಧಿವಂತಿಕೆ ತೋರಿದ್ದರು. ಅದೊಂದು ಎಂಟು-ಹತ್ತು ವಾಕ್ಯಗಳ ಬಾಕ್ಸ್ ಐಟಂ ಆಗಿತ್ತು. ನಚ್ಚಿ ಬರೆದ ವರದಿ ಸತ್ಯಕ್ಕೆ ದೂರವಾದುದು, ಅದರಲ್ಲಿ ವಾಸ್ತವಿಕತೆಯಿಲ್ಲ. ಒಂದು ರೀತಿಯ ಬೇಜವಾಬ್ದಾರಿ ವರದಿ ಎಂದೆಲ್ಲ ಬರೆದು ಅವರು ಬಚಾವಾದರು. ಮಾಡದ ತಪ್ಪಿಗೆ ನಚ್ಚಿ ಬಲಿಪಶುವಾಗಿದ್ದರು. ಇದರಿಂದಾಗಿ ಪತ್ರಿಕೆಯೊಂದಿಗೆ ಸಂಬಂಧ ಕಳೆದುಕೊಂಡ ನಚ್ಚಿ. ಮುಂದೆ 'ಇಂಡಿಯನ್ ಎಕ್ಸ್‌ಪ್ರೆಸ್', 'ಡೆಕ್ಕನ್ ಕ್ರಾನಿಕಲ್' ಪತ್ರಿಕೆಗಳಲ್ಲಿ ಮೂವತ್ತು ವರ್ಷ ವರದಿಗಾರರಾಗಿ ನಿವೃತ್ತರಾದರು.

6-untold-anecdotes-p-lankesh-kannada-writer-journalist-book-excerpts-7

Follow Us:
Download App:
  • android
  • ios