ಅತ್ತೆ ಮಾವನ ಜೊತೆಗಿರೋ ಸಂಸಾರ ಎಂದರೆ ಮಗುವಾದ ಮೇಲೆ ಸೊಸೆಗೆ ಧೈರ್ಯ. ಏನೇ ಆದರೂ ಅನುಭವವಿರುವ ಅತ್ತೆ ಮಾವ ಇದ್ದಾರಲ್ಲಾ ಎಂದು. ಅಲ್ಲದೆ, ಮಗು ಬೆಳೆಸುವ ಸಂಪೂರ್ಣ ಹೊರೆಯನ್ನು ಹೆಗಲಿಗೆ ಹಾಕಿಕೊಳ್ಳಬೇಕಿಲ್ಲ. ಅಷ್ಟಿಷ್ಟು ಸಹಾಯವನ್ನೂ ನಿರೀಕ್ಷಿಸಬಹುದು. ಆದರೆ, ಹಿಂದಿನ ಕಾಲದ ಅತ್ತೆಗೂ ಇಂದಿನ ಚಿಂತನೆಗಳಿರುವ ಹೊಸ ತಾಯಿಗೂ ಮಗು ಬೆಳೆಸೋ ವಿಚಾರದಲ್ಲಿ ಹಲವು ವಾದವಾಗ್ವಾದಗಳಾಗುವುದು ಸಾಮಾನ್ಯ. 

ಪ್ರತಿ ತಾಯಿಗೂ ತನ್ನ ಮಗುವಿಗೆ ಸಾಧ್ಯವಾದಷ್ಟು ಒಳ್ಳೆಯದೆಲ್ಲವನ್ನೂ ತಲುಪಿಸಬೇಕೆಂಬ ಆಸೆ ಇರುತ್ತದೆ. ಸಾಧ್ಯವಾದಷ್ಟು ಬಯಸಿದ್ದನ್ನು, ಕೊಡಿಸುವ, ಕಲಿಸುವ ಬಯಕೆ ಇರುತ್ತದೆ. ಆದರೆ, ಮಗುವಾದ ಮೇಲೆ ಸುತ್ತಮುತ್ತಲಿನ ಪ್ರತಿಯೊಬ್ಬರೂ ಸಲಹೆಗಳ ಸುರಿಮಳೆ ಸುರಿಸುವವರೇ. ಅದರಲ್ಲೂ ಅತ್ತೆಯ ನಂಬಿಕೆಗಳು(ಮೂಢನಂಬಿಕೆಗಳು ಕೂಡಾ), ಅವರು ಕಲಿತ ವಿಷಯಗಳನ್ನು ಫಾಲೋ ಮಾಡಬೇಕೇ ಅಥವಾ ಇಂದಿನ ತಲೆಮಾರಿನ ತಾಯಂದಿರ ಸಲಹೆಗಳನ್ನು ಪರಿಗಣಿಸಬೇಕೇ ಎಂಬ ಗೊಂದಲ ಮೂಡುವುದು ಸಹಜ. 

ಈ ವಿಷಯದಲ್ಲಿ ಇನ್-ಲಾಗಳನ್ನು ಹ್ಯಾಂಡಲ್ ಮಾಡುತ್ತಾ ನಿಮ್ಮದೇ ಲಾಗಳನ್ನು ನಡೆಸಲು ಹೀಗೆ ಮಾಡಬಹುದು.


- ಎಲ್ಲರ ಮಾತನ್ನೂ ಕೇಳಿ, ಮನ ಹೇಳಿದಂತೆ ಮಾಡಿ
ದೇವರು ಪಂಚೇಂದ್ರಿಯಗಳ ಹೊರತಾಗಿಯೂ ತಾಯಿಗೆ ಹೆಚ್ಚಿನ ಸಿಕ್ಸ್ತ್ ಸೆನ್ಸ್ ನೀಡಿರುತ್ತಾನೆ. ತನ್ನ ಮಗುವಿನ ಬಗ್ಗೆ ತನಗಿಂತಾ ಚೆನ್ನಾಗಿ ಅರಿತಿರಲು ಇನ್ನೊಬ್ಬರಿಗೆ ಸಾಧ್ಯವಿಲ್ಲ. ಹೀಗಾಗಿ, ಎಲ್ಲರ ಮಾತುಗಳನ್ನೂ ಕೇಳಿದ ಮೇಲೆ ನಿಮಗೆ ಸರಿ ಅನ್ನಿಸಿದ್ದನ್ನೇ ಮಾಡಿ. ಮಗುವಿನ ಕುರಿತ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅತ್ತೆಯ ಅಭಿಪ್ರಾಯ ಕೇಳಿ. ಸರಿಯಲ್ಲ ಎನಿಸಿದರೆ ನಿಮ್ಮ ಮನಸ್ಸು ಹೇಳಿದಂತೆ ಮಾಡಿ.

- ಇತರೆ ತಾಯಂದಿರ ಉದಾಹರಣೆ ನೀಡಿ
ಅತ್ತೆಯ ಕೆಲ ಮಾತುಗಳಿಗೆ, ಸಲಹೆಗಳಿಗೆ, ಮೂಢನಂಬಿಕೆಗಳಿಗೆ ನಿಮ್ಮ ವಿರೋಧವಿದ್ದಲ್ಲಿ, ಯಾವಾಗಲೂ ಇತರೆ ತಾಯಂದಿರ ಉದಾಹರಣೆ ನೀಡಿ ವಿವರಿಸುವುದು ಉತ್ತಮ. ಅವರು ಹೇಗೆ ತಮ್ಮ ಮಗುವಿಗೆ ಕಲಿಸುತ್ತಿದ್ದಾರೆ, ಈಗ ಕಾಲ ಬದಲಾಗಿದೆ, ಇದಕ್ಕೆ ಅನುಗುಣವಾಗಿ ಅವರು ಮಾಡುತ್ತಿರುವುದು ಸರಿಯಾಗಿದೆ ಎಂಬುದನ್ನು ವಿವರಿಸಿ.

- ವೈದ್ಯರ ಮಾತು ಅಂತಿಮ
ಕೆಲವು ಅತ್ತೆ ಮಾವಂದಿರು ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಕೆಲವು ಅಭ್ಯಾಸಗಳನ್ನು ಹೇರುತ್ತಾರೆ. ತಮ್ಮದೇ ನಡೆಸಬೇಕೆಂದು ಹಟಮಾರಿತನ ತೋರುತ್ತಾರೆ. ಆದರೆ, ಆ ಅಭ್ಯಾಸವು ನಿಮ್ಮ ಮಗುವಿಗೆ ಕೆಟ್ಟದ್ದೆಂದು ನಿಮಗನಿಸಿದರೆ ಆಗ ವೈದ್ಯರ ನೆರವು ಪಡೆಯಿರಿ. ವೈದ್ಯರು ನಿಮ್ಮ ಅತ್ತೆ ಮಾವಂದಿರಿಗೆ ಆ ಅಭ್ಯಾಸ ಹೇಗೆ ಕೆಟ್ಟದ್ದೆಂಬುದನ್ನು ವಿವರಿಸಲಿ. ಇಂಥ ವಿಷಯಗಳಲ್ಲಿ ವೈದ್ಯರ ಮಾತುಗಳನ್ನು ಯಾರೂ ಅಲ್ಲಗೆಳೆಯಲಾರರು. ಅಲ್ಲದೆ, ನಿಮಗನಿಸಿದಂತೆ ನೀವು ಮಾಡುತ್ತಿಲ್ಲ, ವೈದ್ಯರು ಹೇಳಿದಂತೆ ಮಾಡುತ್ತಿದ್ದೀರಿ ಎಂದು ಅತ್ತೆಗೆ ಅರ್ಥ ಮಾಡಿಸುವುದರಿಂದ ನಿಮ್ಮ ಬಗ್ಗೆ ಅವರು ಮುನಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.

- ತಾಳ್ಮೆ ಒಳ್ಳೆಯದು
ಕೆಲವೊಮ್ಮೆ ಅವರು ಹೇರಿದ ಅಭ್ಯಾಸ, ಸಲಹೆ ಮಗುವಿಗೆ ಹೇಗೆ ಕೆಟ್ಟದಾಯಿತು ಎಂದು ಪರಿಣಾಮ ಬೀರುವವರೆಗೆ ಕಾಯುವುದೇ ಉತ್ತಮ. ಏಕೆಂದರೆ, ಮಗು ಯಾವಾಗಲೂ ತಾಯಿಯೇ ಸರಿ ಎಂಬುದನ್ನು ಸಾಧಿಸಿತೋರುತ್ತದೆ.

ಅಮ್ಮನ ಭವಿಷ್ಯಕ್ಕೆ ಸೇವಿಂಗ್ಸ್ ಮಾಡೋದು ಹೇಗೆ?

- ಜ್ಞಾನವೇ ಪರಿಹಾರ
ಮಗುವನ್ನು ಬೆಳೆಸುವ ಕುರಿತ ಅಭಿಪ್ರಾಯಗಳ ಬಗ್ಗೆ ಆತ್ಮವಿಶ್ವಾಸವಿರಬೇಕೆಂದರೆ ಆ ವಿಷಯದಲ್ಲಿ ನಿಮಗೆ ಹೆಚ್ಚಿನ ಜ್ಞಾನವಿರಬೇಕು. ಜ್ಞಾನ ಬರಬೇಕೆಂದರೆ ತಾಯ್ತನ, ಚೈಲ್ಡ್‌ಕೇರ್‌ಗೆ ಸಂಬಂಧಿಸಿದ ಹಲವಾರು ಲೇಖನಗಳನ್ನು, ಪುಸ್ತಕಗಳನ್ನು ಓದಿಕೊಂಡಿರುವುದು, ಇತರೆ ತಾಯಂದಿರೊಂದಿಗೆ ಮನ ಬಿಚ್ಚಿ ಮಾತನಾಡುವುದು ಅಗತ್ಯ. ಓದಿನ ಬೆಂಬಲ ಇದ್ದಲ್ಲಿ, ಅತ್ತೆಯ ಸಲಹೆ ತಪ್ಪಾಗಿದ್ದರೆ ಅದನ್ನು ಹೇಳುವ ಧೈರ್ಯವೂ ಇರುತ್ತದೆ. ನೀವು ಮಾಡುತ್ತಿರುವುದು ಸರಿಯೆಂಬ ಆತ್ಮವಿಶ್ವಾಸವೂ ಇರುತ್ತದೆ.

ವಿಶೇಷ ಚೇತನ ಗೆಳೆಯನಿಗೆ ಕೈ ತುತ್ತು ನೀಡೋ ಗೆಳೆಯನ ವೀಡಿಯೋ ವೈರಲ್

- ವಿಧೇಯತೆ ಎಂಬ ಬ್ರಹ್ಮಾಸ್ತ್ರ
ಎಲ್ಲ ಅಸ್ತ್ರಗಳೂ ಸೋತಾಗ ವಿದೇಯತೆ ಎಂಬ ಬ್ರಹ್ಮಾಸ್ತ್ರಕ್ಕೆ ಕೈ ಹಾಕಿ. ಮಗುವು ಸಂಪೂರ್ಣ ನಿಮ್ಮ ಮೇಲೆ ಅವಲಂಬಿತವಾಗಿರುವುದರಿಂದ ಉತ್ತಮ ಭವಿಷ್ಯಕ್ಕಾಗಿ ಪ್ರತಿ ಕ್ಷಣದ ಸಿದ್ಧತೆಯಲ್ಲಿ ತೊಡಗಿಸುವುದು ನಿಮ್ಮ ಜವಾಬ್ದಾರಿ. ಹೀಗಾಗಿ, ವಿದೇಯತೆಯಿಂದಲೇ ಅತ್ತೆ ಮಾವನ ಮನ ಗೆದ್ದು, ಮಗುವಿನ ವಿಷಯದಲ್ಲಿ ನೀವು ತಿಳಿದುಕೊಂಡಿರುವುದು ಅವರು ನಂಬಿರುವುದಕ್ಕಿಂತಾ ಹೆಚ್ಚು ಸರಿ ಎಂಬುದನ್ನು ನಯವಾಗಿ ಹೇಳಿ.