ಮನೆಗೆ ನಾಲ್ಕು ಕಾಲಿನ ಹೊಸ ಸದಸ್ಯರನ್ನು ಕರೆ ತಂದಿದ್ದೀರಿ. ಅದು ಅತ್ತಿಂದಿತ್ತ ಓಡಾಡುವುದನ್ನು ನೋಡುವಾಗ ನಿಮ್ಮ ಉತ್ಸಾಹವೂ ಇಮ್ಮಡಿಯಾಗುವುದು. ಆದರೆ, ನಾಯಿಮರಿಯನ್ನು ಸಾಕುವುದು ಅಷ್ಟು ಸುಲಭದ ವಿಷಯವಲ್ಲ. ಅದೊಂದು ದೊಡ್ಡ ಜವಾಬ್ದಾರಿ. ಮಗುವಿನಷ್ಟೇ ಕಾಳಜಿ ನಾಯಿಮರಿಗೂ ಬೇಕು. ಪಪ್ಪಿಯನ್ನು ಸಾಕುವ ಮುನ್ನ ನೀವು ತಿಳಿದಿರಲೇಬೇಕಾದ ಕೆಲ ವಿಷಯಗಳಿವೆ. ಅವು ಯಾವುವು ಗೊತ್ತಾ?

ಈ ವಸ್ತುಗಳ ಶಾಪಿಂಗ್ ಮಾಡಿ

ನಾಯಿಮರಿಯನ್ನು ಮನೆಗೆ ಕರೆತರುವ ಮುನ್ನ ಡಾಗ್ ಫುಡ್, ಕಾಲರ್, ಬೆಲ್ಟ್, ಮಲಗಲು ಹಾಸಿಗೆ, ಫುಡ್ ಬೌಲ್, ಗೊಂಬೆಗಳು ಹಾಗೂ ಇತರೆ ಅಗತ್ಯ ವಸ್ತುಗಳನ್ನು ಖರೀದಿಸಿ ಸಿದ್ಧತೆ ಮಾಡಿಕೊಳ್ಳಿ. 

ವೆಟರ್ನರಿ ವೈದ್ಯರ ಭೇಟಿ

ಮುದ್ದು ಪಪ್ಪಿ ಮನೆಗೆ ಕರೆತಂದ ದಿನವೇ ಪಶುವೈದ್ಯರನ್ನು ಭೇಟಿಯಾಗುವುದು ಬಹಳ ಮುಖ್ಯ. ನೀವು ತಂದ ಜಾತಿಯ ನಾಯಿಮರಿಗೆ ಏನೇನು ಆಹಾರ ಕೊಡಬೇಕು, ಯಾವೆಲ್ಲ ವ್ಯಾಕ್ಸಿನೇಶನ್ಸ್ ಕೊಡಿಸಬೇಕು, ಯಾವಾಗಿನಿಂದ ಹೊರಗೆ ವಾಕ್ ಕರೆದುಕೊಂಡು ಹೋಗಬೇಕು ಎಂದೆಲ್ಲ ಕೇಳಿ ತಿಳಿದುಕೊಳ್ಳಿ. ಇದರೊಂದಿಗೆ ನಾಯಿಮರಿಯ ಆರೋಗ್ಯ ಪರೀಕ್ಷೆ ಕಡ್ಡಾಯ. 

ಬೆಂಗಳೂರಿನಲ್ಲಿ ಸಾಕುಪ್ರಾಣಿಗಳಿಗೆಂದೇ ಇದೆ ವಿಶಿಷ್ಟ ರೆಸಾರ್ಟ್

ಮನೆಯನ್ನು ಡಾಗ್‌ಪ್ರೂಫ್ ಮಾಡಿ

ಮಕ್ಕಳಂತೆ ನಾಯಿಮರಿಗಳೂ ಟೀತಿಂಗ್ ಹಂತ ದಾಟುತ್ತವೆ. ತಮ್ಮ ಹೊಸ ಮನೆಯನ್ನು ತಡಕಾಡಲು ನಾಯಿಮರಿಗಳಿಗೂ ಎಲ್ಲಿಲ್ಲದ ಉತ್ಸಾಹ. ಫರ್ನಿಚರ್, ಶೂಸ್, ಮನೆಯ ಇತರೆ ವಸ್ತುಗಳು ಯಾವುದು ಸಿಕ್ಕರೂ ಬಾಯಿಯಲ್ಲಿ ಕಚ್ಚಿ ನೋಡುವ ಆಟ. ಈ ಸಂದರ್ಭದಲ್ಲಿ ಅವುಗಳು ವಸಡಿಗೆ ಗಾಯ ಮಾಡಿಕೊಳ್ಳಬಹುದು. ಉತ್ಸಾಹದ ಚಿಲುಮೆಯಂತೆ ಓಡಾಡುವಾಗ ಮನೆಯ ಯಾವುದಾದರೂ ಶಾರ್ಪ್ ವಸ್ತುವಿನ ಮೂತಿ ತಾಗಿ ಗಾಯವಾಗಬಹುದು. ಹೀಗಾಗಿ, ನಾಯಿಮರಿಗೆ ಅಪಾಯ ಉಂಟುಮಾಡುವಂಥ ವಸ್ತುಗಳು ಅದು ಓಡಾಡುವ ಜಾಗಗಳಲ್ಲಿ ಇರದಂತೆ ಎಚ್ಚರ ವಹಿಸಿ. ಜಗಿಯಲು ಸಾಧ್ಯವಾಗುವಂಥ ಆಟಿಕೆಗಳನ್ನು ಒದಗಿಸಿ. 

ಇತರೆ ಪೆಟ್ ಪೇರೆಂಟ್ಸ್ ಜೊತೆಗೆ ಮಾತನಾಡಿ

ಪೆಟ್ ಪೇರೆಂಟಿಂಗ್ ನಿಮಗೆ ಹೊಸತಾದ್ದರಿಂದ, ಈಗಾಗಲೇ ಈ ವಿಷಯಕ್ಕೆ ಹಳಬರಾದ ಅನುಭವಸ್ಥರ ಬಳಿ ಮಾತನಾಡುವುದು ಒಳ್ಳೆಯದು. ಪಪ್ಪಿಯ ಆರೋಗ್ಯ ಕಾಳಜಿ ಮಾಡಿ, ಅದಕ್ಕೆ ಬೋರ್ ಆಗದಂತೆ ನೋಡಿಕೊಂಡು ಜವಾಬ್ದಾರಿ ಹೊರುವುದು ಒಮ್ಮೊಮ್ಮೆ ಸಾಕಪ್ಪಾ ಸಾಕು ಎನಿಸುವಂತೆ ಮಾಡಬಹುದು. ಇತರೆ ಪೆಟ್ ಪೇರೆಂಟ್ಸ್ ಬಳಿ ಮಾತನಾಡುವುದರಿಂದ ನೀವು ಬೇಗ ಕಾಮ್ ಡೌನ್ ಆಗಬಹುದು. ಜೊತೆಗೆ, ಈ ಹಂತವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಅವರು ನಿಮಗೆ ಖಂಡಿತಾ ಟಿಪ್ಸ್ ನೀಡುತ್ತಾರೆ. 

ನಾಯಿ ಜೊತೆ ಮಲಗುವ ಮಹಿಳೆಯರಿಗೆ ಸುಖನಿದ್ರೆ: ವರದಿ!

ಕೆಲ ನಿಯಮಗಳನ್ನು ಮಾಡಿ

ನಿಮ್ಮ ಪಪ್ಪಿಯ ಮುದ್ದಾದ ಕಣ್ಣುಗಳು ಮೌನದಲ್ಲೇ ನಿಮ್ಮ ಬಳಿ ಏನನ್ನಾದರೂ ಬೇಡುತ್ತಿರಬಹುದು. ಆ ಮುದ್ದು ಮುಖ ನೋಡಿದರೆ ಹೃದಯ ಕರಗಿ ಕೇಳಿದ್ದೆಲ್ಲ ನಡೆಸಿಕೊಡುವ ಎನಿಸಬಹುದು. ಆದರೆ, ಆರಂಭದಿಂದಲೇ ಕೆಲವು ನಿಯಮಗಳನ್ನು ಮಾಡುವುದು ಬಹಳ ಒಳ್ಳೆಯದು. ನಿಮ್ಮ ಆಹಾರವನ್ನು ಶೇರ್ ಮಾಡಿಕೊಳ್ಳುವ ಬಯಕೆಗೆ ಕಡಿವಾಣ ಹಾಕಿ, ಪಪ್ಪಿಗೆ ಅದರದೇ ಆದ ಸಮಯದಲ್ಲಿ ಮಾತ್ರ ಆಹಾರ ಹಾಕಿ. ನಿಮ್ಮ ವೆಟರ್ನರಿ ವೈದ್ಯರ ಬಳಿ ಮಾತನಾಡಿ, ಸರಿಯಾದ ಸಮಯದಲ್ಲಿ ಟಾಯ್ಲೆಟ್ ಟ್ರೇನಿಂಗ್ ಆರಂಭಿಸಿ. ನಿಮಗೆ ಪಪ್ಪಿಯು ಮಂಚ ಅಥವಾ ಸೋಫಾ ಹತ್ತುವುದು ಇಷ್ಟವಿಲ್ಲವೆಂದಾದಲ್ಲಿ, ಮೊದಲ ದಿನದಿಂದಲೇ ಅದಕ್ಕೆ ನಿರ್ಬಂಧ ಹೇರಿ ಅಭ್ಯಾಸ ಮಾಡಿಸಿ. 

ಪಪ್ಪಿಗೊಂದು ಜಾಗ ಕೊಡಿ

ಹೊಸ ಮನೆ, ಹೊಸ ಜಾಗಕ್ಕೆ ಅಜ್ಡಸ್ಟ್ ಆಗುವುದು ನಾಯಿಮರಿಗೆ ಕಷ್ಟವಾಗಬಹುದು. ತಾನು ಎಲ್ಲಿದ್ದೇನೆ, ಏನು ಮಾಡಬೇಕೆಂಬ ಗೊಂದಲ ಶುರುವಾಗಬಹುದು. ಇಂಥ ಸಂದರ್ಭದಲ್ಲಿ ಮನೆಯಲ್ಲಿ ಅದಕ್ಕಾಗೇ ಒಂದು ನಿರ್ದಿಷ್ಟ ಜಾಗ ಕಲ್ಪಿಸಿ, ಅದು ಸಣ್ಣ ಮಕ್ಕಳ ಹಾಗೂ ಇತರೆ ನಾಯಿಗಳಿಂದ ತೊಂದರೆ ಅನುಭವಿಸದಂತೆ ಎಚ್ಚರ ವಹಿಸಿ.