ಬೈಕರ್‌ಗಳೂ ಒಂದು ತರದಲ್ಲಿ ಸಾಹಸಪ್ರಿಯರೇ. ಅದರಲ್ಲೂ ಮಳೆಗಾಲದಲ್ಲಿ ಮಳೆಯನ್ನು ಸೀಳಿ ಬೈಕ್ ಓಡಿಸಿಕೊಂಡು ಹೋಗಿ ರಸ್ತೆಯನ್ನೂ, ರಸ್ತೆಯ ಇಕ್ಕೆಲಗಳ ಹಸಿರು, ಕೆಸರು, ಜನಜೀವನ, ಜಲಜೀವನ ಮುಂತಾದವನ್ನೆಲ್ಲ ಎಂಜಾಯ್ ಮಾಡುತ್ತಾ ಹೊಸ ಅನುಭವಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಸಾಗುವ ಬೈಕರ್‌ಗಳ ಕ್ರೇಜ್ ಸ್ತುತ್ಯಾರ್ಹ. 
ಈ ಕಾಲವೇ ಹಾಗೆ- ಭೂಮಿ, ಆಕಾಶ, ಗಿಡಮರಗಳು ಎಲ್ಲವೂ ಹೊಸ ಬಣ್ಣ ಪಡೆದು ತೆರೆದು ಮನಸ್ಸಿನಿಂದ ನೋಡುವವರ ಮನಸ್ಸಿಗೂ ಆ ಬಣ್ಣಗಳನ್ನು ಅಂಟಿಸುತ್ತವೆ. ಬೈಕಿಂಗ್ ನಿಮ್ಮ ಹವ್ಯಾಸವಾಗಿದ್ದರೆ, ಈ ಮಳೆಗಾಲದಲ್ಲಿ ಬೈಕರ್‌ಗಳ ಈ ಫೇವರೇಟ್ ರೂಟ್‌ಗಳನ್ನು ಒಮ್ಮೆ ಹಾದು ಬನ್ನಿ. ಬೈಕಿಗಿಂತ ಕಾರೇ ಇಷ್ಟ ಎನ್ನುವವರಿಗೆ ಕೂಡಾ ಈ ಹಾದಿಗಳು ಅವಿಸ್ಮರಣೀಯ ಅನುಭವವನ್ನು ನೀಡದೆ ತೆಪ್ಪಗಿರಲಾರವು. ಮತ್ತೇಕೆ ತಡ, ಈಗಲೇ ಕೀಗಳನ್ನೆತ್ತಿಕೊಳ್ಳಿ.

ಮುಂಬಯಿಯಿಂದ ಗೋವಾ

ಕೋಸ್ಟಲ್ ರೈಡ್ ಎಂದಾಗ ಗೋವಾವನ್ನು ಮಿಸ್ ಮಾಡುವುದು ಸಾಧ್ಯವೇ ಇಲ್ಲ. ಈ ಟ್ರಿಪ್‌ನ ಮುಖ್ಯ ಆಕರ್ಷಣೆ ಗೋವಾವೇ ಆದರೂ, ಎಂಎಸ್ಎಚ್4ನಂಥ ರಸ್ತೆಯ ಮಾನ್ಸೂನ್ ಹಾದಿ ಕೊಡುವ ಮಜಾವೇ ಬೇರೆ. ಮರಾದ್, ರತ್ನಗಿರಿ, ತರ್ಕರ್ಲಿಯಂಥ ಕರಾವಳಿ ಸುಂದರಿಯರು ಪ್ರತಿ ಮೈಲಿಗೂ ನಿಮ್ಮ ಮೂಡ್ ಬೂಸ್ಟ್ ಮಾಡುವುದರಲ್ಲಿ ಅನುಮಾನವೇ ಇಲ್ಲ. ಸಹ್ಯಾದ್ರಿ ಬೆಟ್ಟಗಳು ಹಾಗೂ  ಅರೇಬಿಯನ್ ಸಮುದ್ರದ ನಡುವಿನ ಈ ಹಾದಿ, ಜಲಪಾತಗಳು, ಹಸಿರು ಕೋಟೆಗಳು, ಗುಹೆಗಳು, ಪಾಮ್ ಮರಗಳಿಂದ ಅಲಂಕರಿಸಿಕೊಂಡ ಬೀಚ್‌ಗಳು, ಕಾಡಿನ ಮರಗಳು ಎಲ್ಲವನ್ನೂ ತುಂಬಿಕೊಂಡು ಉದ್ದಕ್ಕೂ ನಿಸರ್ಗ ಸೌಂದರ್ಯ ಕಣ್ಣೆದುರೇ ನರ್ತಿಸುವುದನ್ನು ಕಾಣಬಹುದು. 

ಕೆಬಲ್ ಸ್ಪೀಯನ್- ಕಾಂಬೋಡಿಯಾದಲ್ಲಿದೆ ಸಾವಿರ ಲಿಂಗಗಳ ನದಿ!

ಟಿಪ್: ಈ ಹಾದಿಯಲ್ಲಿ ಕೆಲವು ಕಡೆ ಫೆರಿ ರೈಡ್‌ಗಳಿದ್ದು, ಜಲರಾಶಿಯ ಇನ್ನೊಂದು ಬದಿ ನಿಮ್ಮ ವಾಹನ ದಾಟಿಸಲು ಸಹಾಯ ಮಾಡುತ್ತವೆ. ಸೂರ್ಯಾಸ್ತದ ಬಳಿಕ ಇವು ಕೆಲಸ ಮಾಡುವುದಿಲ್ಲವಾದ್ದರಿಂದ ಅಷ್ಟರೊಳಗೆ ಇವುಗಳ ಸಹಾಯ ಪಡೆದುಕೊಳ್ಳಬೇಕಾಗುತ್ತದೆ.

ಡಾರ್ಜಿಲಿಂಗ್‌ನಿಂದ ಬಾಗ್ಡೋಗ್ರಾ

ಉತ್ತರ ಹಿಮಾಲಯವನ್ನು ಎಕ್ಪ್ಲೋರ್ ಮಾಡಲು ಮಳೆಗಾಲ ಸಕಾಲವಲ್ಲ ಎಂದು ಹಲವರು ಹೇಳಬಹುದು. ಆದರೆ, ಇದರ ಶುದ್ಧ ಸೌಂದರ್ಯ ನೋಡಬೇಕೆಂದರೆ ಮಳೆಗಾಲದಷ್ಟು ಉತ್ತಮ ಸಮಯ ಇನ್ನೊಂದಿಲ್ಲ. ಮಿರಿಕ್ ಮೂಲಕ ಹಾದು ಹೋಗುವ ಬಾಗ್ಡೋಗ್ರಾದಿಂದ ಡಾರ್ಜಿಲಿಂಗ್‌ನ ನಿಮ್ಮ ಬೈಕ್ ಪ್ರಯಾಣವು ಟೀ ಎಸ್ಟೇಟ್‌ಗಳು, ಕಡಿದಾದ ಬೆಟ್ಟದ ಇಳಿಜಾರು, ಮೋಡದ ಮೇಲೇ ಸಾಗುವಂತೆನಿಸುವಂತೆ ಮಾಡುವ ದಟ್ಟ ಮಂಜು, ಹಾಗೂ ಪ್ರವಾಸಿಗರಿಲ್ಲದ ಖಾಲಿ ರಸ್ತೆಗಳಿಂದಾಗಿ ಬೈಕರ್‌ಗಳಿಗೆ ಭೂರಿ ಭೋಜನ ಉಣಿಸುತ್ತವೆ. ಬಾಲಿವುಡ್‌ನ ಫೇವರೇಟ್ ಘೂಮ್ ರೈಲ್ವೆ ಸ್ಟೇಶನ್‌ನಲ್ಲಿ ಫೋಟೋ ತೆಗೆದುಕೊಳ್ಳುವುದು ಮರೆಯಬೇಡಿ. ಜೊತೆಗೆ, ಯಾವುದಾದರೂ ಟೀ ಎಸ್ಟೇಟ್ ಹೋಂಸ್ಟೇಯಲ್ಲಿ ಉಳಿದು, ಡಾರ್ಜಿಲಿಂಗ್ ಟೀ ಜೊತೆಗೆ ಅಲ್ಲಿನ ಹವಾಮಾನದ ಘಮಲನ್ನೂ ಸವಿಯಿರಿ. 

ಬಿನ್ಸರ್‌ನಿಂದ ಪಿತೋರಗರ್

ಕುಮಾನ್ ಹಿಲ್ಸ್ ನಡುವೆ ಬಿನ್ಸರ್‌ನಿಂದ ಪಿತೋರಗರ್ ಹಾದಿ, ಕೋಸಿ ಹಾಗೂ ಕಾಳಿ ನದಿ ಕಣಿವೆಗಳ ಸೌಂದರ್ಯದಿಂದ ಮಂತ್ರಮುಗ್ಧಗೊಳಿಸುತ್ತದೆ. ಈ ಹಾದಿಯಲ್ಲಿ ಹಸಿರು ಕೋನಿಫರ್ ಮರಗಳು, ಸೇಬು ತೋಟಗಳು, ಪ್ಲಮ್ ಮರಗಳು, ಹಕ್ಕಿಗಳ ಚಿಲಿಪಿಲಿ, ಹಿಮಾಲಯನ್ ಬೆಟ್ಟಗಳ ಪನೋರಮಾ ವ್ಯೂ- ರೋಡ್ ಟ್ರಿಪ್ ಮಾಡುವವರ ಮನಸ್ಸಿಗೆ ಧ್ಯಾನದ ಪರಿಣಾಮ ನೀಡುತ್ತವೆ.

ರಾಕ್ಷಸಿ ಹಿಡಿಂಬಿಗೂ ಇದೆ ಮನಾಲಿಯಲ್ಲಿ ದೇವಸ್ಥಾನ! 

ಮಂಗಳೂರಿನಿಂದ ಕೂರ್ಗ್

ಈ ಹಾದಿಯಲ್ಲಿ ಕಣ್ಮನ ಸೆಳೆವ ಕಾಫಿ ಕಣಿವೆಗಳು, ಮಸಾಲಾ ಫ್ಲ್ಯಾಂಟೇಶನ್‌ಗಳು, ಕಾವೇರಿ ನದಿ ನಿಮಗೆ ಕಂಪನಿ ಕೊಡುತ್ತವೆ. ಹೆಚ್ಚು ದೂರ ಹೋಗಲು ಸಾಧ್ಯವಿಲ್ಲ, ಒಂದೆರಡು ದಿನದ ಬೈಕ್ ಟ್ರಿಪ್ ಮಾಡುವ ಮನಸ್ಸಿದ್ದರೆ ಈ ಹಾದಿ ಬೆಸ್ಟ್. 

ಮನೋಕಾಮನೆ ಈಡೇರಿಸೋ ಸಂತಾನೇಶ್ವರ ಮಹಾದೇವ...

ಪೆಂಚ್‌ನಿಂದ ಕನ್ಹಾ

ಒಂದು ಟ್ರಿಪ್‌ನಲ್ಲಿ ಮಧ್ಯಪ್ರದೇಶವನ್ನು ಅಳತೆ ಮಾಡು ಪ್ರಯತ್ನ ಸಫಲವಾಗುವುದು ಸಾಧ್ಯವಿಲ್ಲ. ಕೋಟೆಕೊತ್ತಲಗಳು, ಅರಮನೆಗಳು, ದೇವಾಲಯಗಳು, ಹುಲಿ ಅಭಯಾರಣ್ಯಗಳ ತನಕ ಇಲ್ಲಿ ನೋಡಬೇಕಾಗಿರುವುದು ಸಾಕಷ್ಟು. ಆದರೆ, ಪೆಂಚ‌ನಿಂದಾ ಕನ್ಹಾ ರಾಷ್ಟ್ರೀಯ ಉದ್ಯಾನಗಳ ನಡುವಿನ ಹಾದಿ ಈ ರಾಜ್ಯದ ಪರಿಚಯವನ್ನು ಚೆನ್ನಾಗಿಯೇ ಮಾಡಿಸುತ್ತದೆ. ಈ ಟ್ರಿಪ್‌ನ ಬಹುತೇಕ ಹಾದಿ ಹೈವೇಯೇ ಆಗಿದ್ದರೂ ಮಳೆಗಾಲ ಪ್ರಕೃತಿಗೆ ನೀಡಿದ ಹಸಿರಿನ ವಿವಿಧ ಬಗೆಗಳು ಕಣ್ಮನ ಮುದಗೊಳಿಸುತ್ತವೆ.