Asianet Suvarna News Asianet Suvarna News

ಮನೆಯಲ್ಲಿಯೇ ಗಣಪ ಮೂರ್ತಿ ತಯಾರಿಸಿ!

pop ಗಣೇಶ ಪರಿಸರಕ್ಕೆ ತೀವ್ರ ಮಾರಕ ಎನ್ನುವ ಎಚ್ಚರಿಕೆ ಜನರಲ್ಲಿ ಮೂಡಿದ್ದು, ಈ ನಿಟ್ಟಿನಲ್ಲಿ ಮಣ್ಣಿನ ಮೂರ್ತಿಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. 

People Aware About Eco Friendly Ganesha
Author
Bengaluru, First Published Aug 30, 2019, 9:55 AM IST

ಎನ್‌.ಎಲ್‌.ಶಿವಮಾದು

 ಬೆಂಗಳೂರು [ಆ.30]: ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯೇ ಮೊದಲ ದೇವರು. ಸಕಲ ಜೀವರಾಶಿಗೂ ಜೀವನಾಧಾರವಾಗಿರುವ ಈ ಪ್ರಕೃತಿಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಮೂರ್ತಿಗಳಿಂದ ತೀವ್ರ ಧಕ್ಕೆ ಉಂಟಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ದಿನದಿಂದ ದಿನಕ್ಕೆ ಜಾಗೃತಿ ಮೂಡುತ್ತಿರುವ ಪರಿಣಾಮ ‘ಪರಿಸರ ಸ್ನೇಹಿ’ ಗಣೇಶನ ಪ್ರತಿಷ್ಠಾಪನೆ ಹಾಗೂ ಆರಾಧನೆಯತ್ತ ಆಸಕ್ತಿ ಹೊರಳುತ್ತಿದೆ.

ಬೆಂಗಳೂರಿನ ಹಲವಾರು ಸಂಘ-ಸಂಸ್ಥೆಗಳು, ಗಣೇಶ ಉತ್ಸವ ಸಮಿತಿಗಳು ವೈವಿಧ್ಯಮಯ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ ಮೂಲಕ ಆಕರ್ಷಿಸುತ್ತಿವೆ. ಜತೆಗೆ ಹತ್ತಾರು ಸಂಸ್ಥೆಗಳು ಪರಿಸರ ಸ್ನೇಹಿ ಆಕರ್ಷಕ ಗಣೇಶ ಮೂರ್ತಿ ತಯಾರಿ, ಮಣ್ಣಿನ ಗಣಪ-ತರಕಾರಿ ಗಣಪನಂತಹ ಆಕಾರದ ಮೂರ್ತಿಗಳಿಂದ ಅದ್ಧೂರಿ ಉತ್ಸವ ಆಚರಣೆಗಿರುವ ಆಯ್ಕೆಗಳನ್ನು ಜನರ ಮುಂದೆ ತೆರೆದಿಡುತ್ತಿವೆ.

ರಾಜ್ಯ ಸರ್ಕಾರವು 2014ರಲ್ಲೇ ರಾಜ್ಯದಲ್ಲಿ ವಿಷಕಾರಿ ಪಿಒಪಿ ಮೂರ್ತಿಗಳ ತಯಾರಿ ಹಾಗೂ ಮಾರಾಟ ನಿರ್ಬಂಧಿಸಿದೆ. 2016ರಿಂದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಯು ಕಟ್ಟುನಿಟ್ಟಾಗಿ ನಿಷೇಧ ಹೇರಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜಲಮೂಲಗಳಾದ ಕೆರೆ, ಕಟ್ಟೆಗಳಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆಯಿಂದ ಕೆರೆಗಳು ಮತ್ತಷ್ಟುಮಲಿನಗೊಂಡು ವಿಷಕಾರಿಯಾಗಿ ಬದಲಾಗುತ್ತಿವೆ. ಇದರ ನೇರ ಪರಿಣಾಮ ಪ್ರಕೃತಿ ಹಾಗೂ ಅದನ್ನು ಅವಲಂಬಿಸಿರುವ ಜೀವರಾಶಿಗಳ ಮೇಲೆ ಉಂಟಾಗುತ್ತಿದೆ ಎಂದು ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

-ಪರಿಸರ ಸ್ನೇಹಿ ಮಾದರಿಗಳಲ್ಲೂ ವೈಭವೋಪೇತವಾಗಿ ಗಣೇಶ ಉತ್ಸವವನ್ನು ಹೇಗೆ ಆಡಂಬರದಿಂದ ಆಚರಿಸಬಹುದು ಎಂಬ ಮಾದರಿಗಳು ಹಾಗೂ ಸಂಘ-ಸಂಸ್ಥೆಗಳ ಮಾರ್ಗದರ್ಶನಗಳು ಇಲ್ಲಿವೆ.

ಪಿಒಪಿಗೆ ಪರ್ಯಾಯ:

ಮಣ್ಣಿನಲ್ಲಿಯೇ 5.5 ಅಡಿಯಿಂದ 6 ಅಡಿವರೆಗಿನ ಉದ್ದದವರೆಗೆ ಮೂರ್ತಿಗಳನ್ನು ತಯಾರಿಸಬಹುದು. ಹೀಗಾಗಿ, ಸಾರ್ವಜನಿಕರು ತಮಗೆ ಬೇಕಾದ ರೂಪದಲ್ಲಿ ಮಣ್ಣು ಹಾಗೂ ಸಗಣಿ ಮಿಶ್ರಣದ ಮೂರ್ತಿಗಳನ್ನು ನಿರಾತಂಕವಾಗಿ ತಯಾರಿಸಬಹುದು. ಇಲ್ಲವೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಪರಿಸರ ಸ್ನೇಹಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಬಹುದು.

ಉಳಿದಂತೆ, ಬೃಹತ್‌ ಪಿಒಪಿ ಮೂರ್ತಿಗಳನ್ನೂ ಪ್ರತಿಷ್ಠಾಪಿಸಬಹುದು. ಆದರೆ, ಆ ಮೂರ್ತಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಬಳಿಕ ಮಾರಾಟಗಾರರಿಗೆ ಹಿಂತಿರುಗಿಸಬಹುದು. ಮೆರವಣಿಗೆಯಲ್ಲಿ ಬೃಹತ್‌ ಪಿಒಪಿ ಮೂರ್ತಿಯ ಜತೆಗೆ ಪುಟ್ಟಉತ್ಸವ ಮೂರ್ತಿಯನ್ನೂ ಮೆರವಣಿಗೆ ಮಾಡಲಾಗುವುದು. ಅಂತಿಮವಾಗಿ ನೀರಿನಲ್ಲಿ ಪುಟ್ಟಮೂರ್ತಿ ವಿಸರ್ಜಿಸಿ ಬೃಹತ್‌ ಮೂರ್ತಿಯನ್ನು ಜೋಪಾನ ಮಾಡಲಾಗುವುದು.

ಕಲಾವಿದರ ನೆರವು ಪಡೆದು ಧಾನ್ಯ, ಪೇಪರ್‌, ತರಕಾರಿ, ಹಣ್ಣು, ತೆಂಗಿನ ಕಾಯಿಯಂತಹ ವಿವಿಧ ಪ್ರಕೃತಿದತ್ತ ವಸ್ತುಗಳ ಬಳಕೆಯಿಂದ ಅದ್ಭುತ ಗಣೇಶ ಮೂರ್ತಿಗಳ ರಚನೆ ಮಾಡಬಹುದು. ಈ ಮೂಲಕ ಉತ್ಸವಕ್ಕೆ ಹೊಸ ಆಕರ್ಷಣೆ ಹಾಗೂ ಮೆರಗನ್ನೂ ತುಂಬಬಹುದು ಎನ್ನುತ್ತಾರೆ ಪರಿಸರ ಸ್ನೇಹಿ ಗಣೇಶಮೂರ್ತಿಗಳ ತಯಾರಕ ರಂಗನಾಯಕುಲು.

ಮನೆಯಲ್ಲೇ ಮೂರ್ತಿ ತಯಾರಿ:

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಗೆ ಪರಿಣಿತಿ ಬೇಕಾಗಿಲ್ಲ. ನಗರದ ಪಾಟರಿ ಟೌನ್‌ ಸೇರಿದಂತೆ ಹಲವೆಡೆ ಗಣೇಶ ಮೂರ್ತಿಗಳನ್ನು ತಯಾರಿಸಲು ಜೇಡಿ ಮಣ್ಣು ದೊರೆಯುತ್ತಿದೆ. ಒಂದು ಉಂಡೆ ಮಣ್ಣು .20ರಿಂದ .25ರ ವರೆಗೆ ಲಭ್ಯವಾಗುತ್ತದೆ. ಜೇಡಿ ಮಣ್ಣು, ಗಣಪನ ಕಣ್ಣು ಜೋಡಣೆಗೆ ಮೆಣಸು, ಹಲ್ಲುಗಳನ್ನು ಮಾಡುವುದಕ್ಕೆ ಟೂತ್‌ ಪಿಕ್‌, ಕಿರೀಟಕ್ಕಾಗಿ ಕಡಲೆ ಬೇಳೆಯಂತಹ ಆಯ್ಕೆಗಳನ್ನು ಬಳಸಿಕೊಂಡು ಸಲೀಸಾಗಿ ಗಣೇಶಮೂರ್ತಿ ತಯಾರಿಸಬಹುದು.

ಗಣೇಶನಿಗೆ ವಿಶೇಷ ಅಲಂಕಾರಕ್ಕಾಗಿ ತಮಗೆ ಇಷ್ಟವಾದ ಧಾನ್ಯಗಳನ್ನು ಸಿಂಗರಿಸಲು ಬಳಸಬಹುದು. ಈ ವೇಳೆ ಸಸಿ ರೂಪ ಪಡೆಯುವ ಬೀಜಗಳನ್ನು ಮೂರ್ತಿಗೆ ಅಂಟಿಸಿ ಒಂದು ಪಾಟ್‌ನಲ್ಲಿ ಪ್ರತಿಷ್ಠಾಪಿಸಬಹುದು. ಬಳಿಕ ಗಣೇಶ ವಿಸರ್ಜನೆ ವೇಳೆಗೆ ಪಾಟ್‌ನಲ್ಲಿಯೇ (ಹೂ ಮಡಿಕೆ) ನೀರು ಸುರಿದರೆ ಮಣ್ಣಾಗಿ ಬೀಜ ಮೊಳಕೆ ಒಡೆದು ಗಿಡವಾಗಬಲ್ಲದು ಎನ್ನುತ್ತಾರೆ ಸೂರ್ಯ ಫೌಂಡೇಷನ್‌ ಮಣ್ಣಿನ ಮೂರ್ತಿಗಳ ತರಬೇತುದಾರ ಶರವಣ ಸೂರ್ಯ.

ಕಲಿಕಾ ಕೌಶಲ್ಯ ಬೆಳೆಸುತ್ತೆ ಗಣಪ:

ಮಣ್ಣಿನ ಮೂರ್ತಿಗಳು ಕೇವಲ ಪರಿಸರ ಸ್ನೇಹಿ ಮಾತ್ರವಲ್ಲ ತಯಾರಕರ ಹಾಗೂ ಮಕ್ಕಳ ಕಲಿಕಾ ಕೌಶಲ್ಯ, ಕ್ರಿಯಾಶೀಲತೆಯನ್ನೂ ವೃದ್ಧಿಸುತ್ತವೆ. ತಾವು ತಯಾರಿಸಿದ ಮೂರ್ತಿಗಳ ಮೇಲೆ ಮಕ್ಕಳಿಗೆ ವಿಶೇಷ ಪ್ರೀತಿ ಮತ್ತು ಆಧ್ಯಾತ್ಮ ಭಾವ ಉಂಟಾಗಲಿದೆ. ಮಕ್ಕಳು ತಯಾರಿಸಿದ ಮೂರ್ತಿಯನ್ನು ಮನೆಯಲ್ಲೇ ಎಲ್ಲರೂ ಪೂಜಿಸುವುದರಿಂದ ‘ಪ್ರಕೃತಿ ಮತ್ತು ದೇವರು’ ಎರಡೂ ಪೂಜೆಗಳಿಂದ ಸಂಭ್ರಮ ನೆಲೆಯಾಗುತ್ತದೆ ಎನ್ನುವುದು ಪರಿಸರ ಸ್ನೇಹಿ ಗಣೇಶ ಸಮಿತಿಗಳ ವಾದ.

ಧಾನ್ಯ, ತರಕಾರಿಗಳ ಗಣೇಶ:

ಹಣ್ಣು ಮತ್ತು ತರಕಾರಿಗಳಿಂದಲೂ ಗಣಪತಿಗಳನ್ನು ಮಾಡಬಹುದು. ಇದಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುವ ಹಲವು ಮೂರ್ತಿಗಳು ಬೆಂಗಳೂರಿನಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡಿವೆ. ಗಣೇಶ ಪಾದ, ಹೊಟ್ಟೆ, ಸೊಂಡಿಲಿಗೆ ಎಲೆಕೋಸು, ಸೋರೆಕಾಯಿ, ಕ್ಯಾರೇಟ್‌, ಮೂಲಂಗಿ, ಮುಖ ಮತ್ತು ಕಿರೀಟಕ್ಕಾಗಿ ಹಲವು ರೀತಿಯ ತರಕಾರಿಗಳನ್ನು ಬಳಸಬಹುದಾಗಿದೆ. ತರಕಾರಿ ಬೇಡ ಎನ್ನುವವರು ಜೇಡಿ ಮಣ್ಣು ಮತ್ತು ಸಗಣಿ ಮಿಶ್ರಿತ ಮಣ್ಣಿನಿಂದ ಮಾಡಬಹುದು.

*ಜೇಡಿ ಮಣ್ಣಿಗಾಗಿ ಇಲ್ಲಿ ಸಂಪರ್ಕಿಸಿ

ಶಿವಾಜಿನಗರ ಬಳಿಯ ಪಾಟರಿ ಟೌನ್‌, ಮಲ್ಲೇಶ್ವರ, ಕೆ.ಆರ್‌.ಪುರ, ಹಲಸೂರು, ವೈಟ್‌ ಫೀಲ್ಡ್‌ ಸೇರಿದಂತೆ ಬೆಂಗಳೂರು ಕೇಂದ್ರ ಮತ್ತು ಉತ್ತರ ಭಾಗದವರು ಪ್ರಕಾಶ್‌- 99161 09592 ಅವರನ್ನು ಸಂಪರ್ಕಿಸಬಹುದು. ಜಯನಗರ, ಬನಶಂಕರಿ, ಹನುಮಂತನಗರ, ಶ್ರೀನಗರ, ಜೆ.ಪಿ. ನಗರ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಭಾಸ್ಕರ್‌- 72042 01503 ಅವರನ್ನು ಸಂಪರ್ಕಿಬಹುದು. ಉಳಿದಂತೆ, ಬೆಂಗಳೂರು ಗಣೇಶ ಉತ್ಸವ, ಬಿ. ಪ್ಯಾಕ್‌, ಬೆಂಗಳೂರು ವಿವಿ ಸೇರಿದಂತೆ ಹಲವಾರು ಕಡೆ ಗಣೇಶ ಮೂರ್ತಿಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತಿದೆ. ಸಾರ್ವಜನಿಕರು ಸಂಪರ್ಕಿಸಿ ಸದ್ಬಳಕೆ ಮಾಡಿಕೊಂಡು ಪರಿಸರ ಗಣಪತಿಗಳ ಪ್ರತಿಷ್ಠಾಪನೆಗೆ ಮುಂದಾಗಬಹುದು.

ನಗರದಲ್ಲಿ ತಲೆ ಎತ್ತಿದೆ 30 ಅಡಿ ‘ತೆಂಗಿನ ಕಾಯಿ ಗಣೇಶ’!

ಜೆ.ಪಿ. ನಗರದ ಪುಟ್ಟೇನಹಳ್ಳಿಯಲ್ಲಿ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ ವತಿಯಿಂದ 30 ಅಡಿ ಎತ್ತರದ ‘ತೆಂಗಿನಕಾಯಿ ಗಣೇಶ’ ನಿರ್ಮಾಣ ಮಾಡಲಾಗಿದೆ.

ಕಳೆದ ಬಾರಿ 400 ಕೆ.ಜಿ ಕಬ್ಬು ಬಳಸಿ 30 ಅಡಿ ಎತ್ತರದ ಕಬ್ಬಿನ ಜೊಲ್ಲೆ ಗಣಪತಿ ನಿರ್ಮಿಸಿ ದಾಖಲೆ ಮಾಡಿದ್ದ ಟ್ರಸ್ಟ್‌ ಈ ಬಾರಿ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಒಂಭತ್ತು ಸಾವಿರ ತೆಂಗಿನ ಕಾಯಿ ಹಾಗೂ ಮೂರು ಸಾವಿರ ಎಳನೀರು ಬಳಸಿ 30 ಎತ್ತರದ ಗಣಪತಿಯನ್ನು ನಿರ್ಮಿಸಿದೆ. ಈ ಮೂಲಕ ಪರಿಸರ ಸ್ನೇಹಿಯಲ್ಲೂ ಆಕರ್ಷಣೆ ಹಾಗೂ ವಿಜೃಂಭಣೆ ಮೆರೆಯಬಹುದು ಎಂಬುದನ್ನು ನಿರೂಪಿಸಿದೆ.

ಪ್ರತಿಮೆಗೆ 21 ಬಗೆಯ ತರಕಾರಿಗಳನ್ನು ಬಳಸಿ ಅಲಂಕಾರ ಮಾಡಲಾಗುತ್ತಿದೆ. ಗಣೇಶ ಮೂರ್ತಿ ನಿರ್ಮಾಣಕ್ಕಾಗಿ ಕಳೆದ 21 ದಿನಗಳಿಂದ 50 ಮಂದಿ ಕೆಲಸ ಮಾಡುತ್ತಿದ್ದು, ಮುಂದಿನ ಸೋಮವಾರ ದರ್ಶನಕ್ಕೆ ಸಿದ್ಧವಾಗಲಿದೆ ಎಂದು ಟ್ರಸ್ಟ್‌ ತಿಳಿಸಿದೆ.

Follow Us:
Download App:
  • android
  • ios