Asianet Suvarna News Asianet Suvarna News

ಹಪ್ಪಳ ಮಾರಿ ತಿಂಗಳಿಗೆ 3 ಲಕ್ಷ ಆದಾಯ

ಒಬ್ಬ ಹಳ್ಳಿ ಹೆಣ್ಣುಮಗಳು ಕೇವಲ ಹಪ್ಪಳ ಮಾರಿ ತಿಂಗಳಿಗೆ ಮೂರು ಲಕ್ಷ ರುಪಾಯಿ ಆದಾಯ ಗಳಿಸುತ್ತಾಳೆ ಅಂದರೆ ಎಂಥ ಪಳಗಿದ ಉದ್ಯಮಿಗೂ ಅಚ್ಚರಿಯಾಗುತ್ತದೆ. ಏಕೆಂದರೆ  ಈ ಕಾಲದಲ್ಲಿ ಕಾಸು ಹುಟ್ಟಿಸುವುದು ಅಷ್ಟು ಸುಲಭದ ಮಾತಲ್ಲ.

3 crore turnover by selling Papadum

ಒಬ್ಬ ಹಳ್ಳಿ ಹೆಣ್ಣುಮಗಳು ಕೇವಲ ಹಪ್ಪಳ ಮಾರಿ ತಿಂಗಳಿಗೆ ಮೂರು ಲಕ್ಷ ರುಪಾಯಿ ಆದಾಯ ಗಳಿಸುತ್ತಾಳೆ ಅಂದರೆ ಎಂಥ ಪಳಗಿದ ಉದ್ಯಮಿಗೂ ಅಚ್ಚರಿಯಾಗುತ್ತದೆ. ಏಕೆಂದರೆ ಈ ಕಾಲದಲ್ಲಿ ಕಾಸು ಹುಟ್ಟಿಸುವುದು ಅಷ್ಟು ಸುಲಭದ ಮಾತಲ್ಲ.

ಸ್ಟಾರ್ಟ್‌ಅಪ್‌ಗಳು ಸಾವಿರಾರು ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಒಬ್ಬೊಬ್ಬ ಯುವ ಉದ್ಯಮಿಯೂ ತನ್ನ ಪ್ರಾಡಕ್ಟ್ ಜನರ ಬಳಿ ತಲುಪಿಸಲು ಇನ್ನಿಲ್ಲದಂತೆ ಹೆಣಗಾಡುತ್ತಾನೆ. ಎಷ್ಟೇ ತಿಪ್ಪರಲಾಗ ಹಾಕಿದ್ರೂ ಯಶಸ್ಸು ಬಿಸಿಲುಗುದುರೆಯೇ ಆಗುತ್ತದೆ. ಆದರೆ ಚಿಕ್ಕ ಪಟ್ಟಣದಲ್ಲಿದ್ದುಕೊಂಡು, ತನ್ನ ಉತ್ಪನ್ನದ ಮೂಲಕವೇ ಪ್ರಚಾರ ಗಿಟ್ಟಿಸಿಕೊಂಡು ತಿಂಗಳಿಗೆ ಲಕ್ಷಾಂತರ ರು. ಗಳಿಸುವ ಹೆಣ್ಣುಮಗಳು ಇಂದಿನ ಬ್ಯುಸಿನೆಸ್ ವಲ್ಡ್‌ಗೆ
ಹೊಸಪಾಠ ಮಾಡುತ್ತಾಳೆ.

ಈ ಮಹಿಳೆಯ ಹೆಸರು ಹರ್ಷಲಾ. ತುಮಕೂರು ಜಿಲ್ಲೆಯ ಸಿರಾ ನಗರದ ಬನ್ನಿಕಟ್ಟೆಯಲ್ಲಿ ವಾಸ. ಕಳೆದ ಆರು ವರ್ಷಗಳಿಂದ ಹಪ್ಪಳದ ಬ್ಯುಸಿನೆಸ್ ನಡೆಸುತ್ತಿದ್ದಾರೆ. ವೈವಿಧ್ಯಮಯ ರುಚಿಗಳಲ್ಲಿರುವ ಇವರ ‘ಹಳ್ಳಿ ರುಚಿ’ ಹಪ್ಪಳಕ್ಕೆ ನಗರ, ಹಳ್ಳಿಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಇವರ ಆದಾಯ ತಿಂಗಳಿಗೆ ಸುಮಾರು 3 ಲಕ್ಷ ರು.ಗಳು.

ನಷ್ಟದಿಂದ ಕಲಿತ ಪಾಠ

ಈಕೆ ಏಕ್‌ದಮ್ ಯಶಸ್ಸಿನ ಉತ್ತುಂಗಕ್ಕೇರಿದವರಲ್ಲ. ಸೋಲು, ಹಸಿವಿನ ರುಚಿ ಕಂಡವರು. ಹಪ್ಪಳದ ಉದ್ಯಮಕ್ಕೆ ಇಳಿಯುವ ಮೊದಲು ಇವರ ಪತಿ ಅಗರಬತ್ತಿ ಫ್ಯಾಕ್ಟರಿ ನಡೆಸುತ್ತಿದ್ದರು. ಒಂದಿಷ್ಟು ಕನಸು ಕಟ್ಟಿಕೊಂಡು ಆರಂಭಿಸಿದ ಉದ್ಯಮ ಸಾಕಷ್ಟು ಹೊಡೆತ ನೀಡಿತು. ಸಕಾಲಕ್ಕೆ ವ್ಯಾಪಾರವಾಗದೇ, ಏನೇನೋ ಸಮಸ್ಯೆಗಳುಂಟಾಗಿ ಆ ಬ್ಯುಸಿನೆಸ್ ಅನ್ನು ನಿಲ್ಲಿಸಲೇಬೇಕಾದ ಸ್ಥಿತಿ ಉಂಟಾಯಿತು. ಬರೋಬ್ಬರಿ 20 ಲಕ್ಷ ರು. ನಷ್ಟ ಉಂಟಾಯಿತು. ನಷ್ಟವನ್ನು ಭರಿಸಿ ಚೇತರಿಸಿಕೊಳ್ಳುವ ಶಕ್ತಿ ಈ ಕುಟುಂಬಕ್ಕಿರಲಿಲ್ಲ. ಇದರಿಂದ ಪಲಾಯನ ಮಾಡುವ ಏನೆಲ್ಲ ಕೆಟ್ಟ ಯೋಚನೆಗಳು ದಂಪತಿಗಳಿಗೆ ಬಂದವು. ಕೊನೆಗೆ ಗಟ್ಟಿಯಾಗಿ ನಿಂತವರು ಹರ್ಷಲಾ. ಸೋಲು ಮತ್ತು ಹಸಿವು ಆಕೆಗೆ

ಮುನ್ನುಗ್ಗುವ, ರಿಸ್ಕ್ ತೆಗೆದುಕೊಳ್ಳುವ ಪಾಠ ಕಲಿಸಿತ್ತು.
ಆರಂಭದಲ್ಲಿ ಜೀವನೋಪಾಯಕ್ಕೆಂದು ಮನೆಯಲ್ಲೇ ಸಣ್ಣ ಪ್ರಮಾಣದಲ್ಲಿ ಹಪ್ಪಳ, ಉಪ್ಪಿನಕಾಯಿ, ಚಟ್ನಿಪುಡಿ ಸಿದ್ಧಪಡಿಸಿದರು. ಕೆಜಿ ಲೆಕ್ಕದಲ್ಲಿ ಪ್ಯಾಕ್ ಮಾಡಿ ಸಮೀಪದ ಮನೆಗಳಿಗೆ ಕೊಟ್ಟರು. ಕ್ರಮೇಣ ಸಮೀಪದ ಅಂಗಡಿಗಳನ್ನು ಹುಡುಕಿ ಅಲ್ಲಿಗೆ ನೀಡತೊಡಗಿದರು. ಕೈ ಸಂಪೂರ್ಣ ಖಾಲಿಯಾಗಿದ್ದಾಗಿನ ಸನ್ನಿವೇಶಕ್ಕಿಂತ ಇದು ಬೆಟರ್ ಅನಿಸಿತು. ನೋವು ನುಂಗಿಕೊಂಡೇ ಪ್ರಯತ್ನ ಮುಂದುವರಿಸಿದರು.

ಸಕಾಲಕ್ಕೆ ಸಿಕ್ಕ ಸಹಾಯ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಟುವಟಿಕೆಗಳು  ಆಗಷ್ಟೇ ಸಿರಾದಲ್ಲಿ ಆರಂಭವಾಗಿತ್ತು. ಇದು ಹರ್ಷಲಾ ಅವರಿಗೆ ಆಶಾಕಿರಣದಂತೆ ಕಂಡಿತು. ಅಲ್ಲಿಗೆ ತೆರಳಿ ತಮ್ಮ ಕಷ್ಟ, ಅಸಹಾಯಕತೆ ಹಂಚಿಕೊಂಡರು. ಅವರಿಗೆ ಧೈರ್ಯ ತುಂಬಿದ ಸಂಸ್ಥೆ ಸಣ್ಣ ಪ್ರಮಾಣದಲ್ಲಿ ಅವರ ಕೆಲಸವನ್ನೇ ಮುಂದುವರೆಸಲು ಧನಸಹಾಯ ಮಾಡಲು ಮುಂದೆ ಬಂತು. ಅದನ್ನೇ ಬಳಸಿಕೊಂಡು ರಾತ್ರಿ ಹಗಲು ಕಷ್ಟಪಟ್ಟು ಹಪ್ಪಳ ಉದ್ಯಮವನ್ನು ಬೆಳೆಸಿದರು. ಈ ಹೆಣ್ಮಗಳ ವೃತ್ತಿಪರತೆ, ಉದ್ಯಮ ಕುಶಲತೆ ಗಮನಿಸಿದ ಸಂಸ್ಥೆ ಹೆಚ್ಚಿನ ಪ್ರಮಾಣದ ಆರ್ಥಿಕ ಸಹಾಯ ನೀಡಿತು.

ಉತ್ಪಾದನಾ ಘಟಕದ ಸ್ಥಾಪನೆ
ಈ ಆರ್ಥಿಕ ಬೆಂಬಲದಿಂದ ಹರ್ಷಲಾ ಉತ್ಸಾಹ ಹೆಚ್ಚಿತು. ಹುಮ್ಮಸ್ಸಿನಿಂದ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಪತ್ನಿಯ ಕೆಲಸಕ್ಕೆ ಪತಿ ಹೇಮಣ್ಣ ಸಹಕಾರವೂ ಸಿಕ್ಕಿತು. ಉತ್ಪನ್ನಗಳಿಗೆ ಹೆಚ್ಚೆಚ್ಚು ಬೇಡಿಕೆ ಬರತೊಡಗಿತು.  ಇಂದು ಇವರ ಬಳಿ ಸುಮಾರು 16 ಮಹಿಳೆಯರು ದಿನನಿತ್ಯದ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಅವರ ಜೀವನೋಪಾಯಕ್ಕೆ ಹರ್ಷಲಾ ಅವರ ಉತ್ಪಾದನಾ ಘಟಕವು ಮೂಲ ಕಾರಣವಾಗಿದೆ.

ದೇಶೀ ಹಪ್ಪಳಕ್ಕೆ ನಗರಗಳಲ್ಲಿ ಸಾಕಷ್ಟು ಬೇಡಿಕೆ ‘ಹಳ್ಳಿ ರುಚಿ’ ಎಂಬ ಹೆಸರಿನಲ್ಲಿ ವೈವಿಧ್ಯಮಯ ರುಚಿಯ ಹಪ್ಪಳಗಳನ್ನು ಕಳೆದ ಆರು ವರ್ಷಗಳಿಂದ ಹರ್ಷಲಾ ದಂಪತಿ ತಯಾರಿಸುತ್ತಿದ್ದಾರೆ. ಅಕ್ಕಿ, ಹುರುಳಿ ಹಾಗೂ ಉದ್ದಿನಬೇಳೆಯ ಹಿಟ್ಟನ್ನು ಬಾಯ್ಲರ್‌ಗಳಲ್ಲಿ ಬೇಯಿಸಿ, ಮುದ್ದೆ ಮಾಡಿ ಅದನ್ನು ಯಂತ್ರಗಳ ಮೂಲಕ ಹಪ್ಪಳದ ಆಕಾರ ನೀಡಿ ಡ್ರೈಯರ್ ಯಂತ್ರಗಳಲ್ಲಿ ಒಣಗಿಸುತ್ತಾರೆ. ದಿನವೊಂದಕ್ಕೆ ಸುಮಾರು 120 ರಿಂದ 150 ಕಿಲೋಗ್ರಾಂಗಳಷ್ಟು ಅಕ್ಕಿ ಹಿಟ್ಟಿನ ಹಪ್ಪಳ ಸಿದ್ಧಪಡಿಸುವ ಇವರ ಘಟಕವು ಸುಮಾರು 350 ಕಿಲೋಗ್ರಾಂಗಳಷ್ಟು ಪ್ರಮಾಣದ ಹಿಟ್ಟಿನಿಂದ ಚಿಪ್ಸ್‌ಗಳನ್ನೂ  ಸಿದ್ಧಪಡಿಸುತ್ತಾರೆ.

ಹಪ್ಪಳ ಹಾಗೂ ಚಿಪ್ಸ್ ಜೊತೆಗೆ ಎಳ್ಳು, ಮಾವು ಹಾಗೂ ನಿಂಬೆಯ ಉಪ್ಪಿನಕಾಯಿಯನ್ನೂ ಸಿದ್ಧಪಡಿಸುತ್ತಾರೆ. ಬೆಳಗ್ಗೆಯೆಲ್ಲಾ ಉತ್ಪಾದನಾ ಕಾರ್ಯದಲ್ಲಿ ತೊಡಗುವ ಇವರ ತಂಡ ಮಧ್ಯಾಹ್ನದ ನಂತರ ಅವುಗಳನ್ನು ಪ್ಯಾಕೆಟ್ ಮಾಡಿ ಮಾರುಕಟ್ಟೆಗೆ ಕಳುಹಿಸಲು ಸಿದ್ಧಪಡಿಸುತ್ತಾರೆ. ಈ ಉತ್ಪನ್ನಗಳನ್ನು ತಮ್ಮದೇ ಸ್ವಂತ ವಾಹನದಲ್ಲಿ ಖುದ್ದು ಕೊಂಡೊಯ್ದು ಸಿರಾ ನಗರದ ಎಲ್ಲಾ ಪ್ರಮುಖ ಅಂಗಡಿಗಳಿಗೂ ತಲುಪಿಸುವ ಹೊಣೆ ಹರ್ಷಲಾ ಪತಿ ಹೇಮಣ್ಣ ಅವರದ್ದು. ತಮ್ಮ ಉತ್ಪಾದನೆಗಳಿಗೆ ಸಾಕಷ್ಟು ಬೇಡಿಕೆ ದೊರೆತಿರುವುದರಿಂದ ಇಂದು ಸಿರಾ ಅಷ್ಟೇ ಅಲ್ಲದೇ ತುಮಕೂರು, ಪಾವಗಡ, ಹಿರಿಯೂರು, ಮಧುಗಿರಿ, ಚಿತ್ರದುರ್ಗಗಳಿಗೂ ತಲುಪಿಸುತ್ತಿದ್ದಾರೆ.

ತಿಂಗಳ ವಹಿವಾಟು
ಟನ್ನೊಂದಕ್ಕೆ ಸುಮಾರು 2 ಲಕ್ಷದಷ್ಟು ಹಪ್ಪಳದಂತೆ ಪ್ರತೀ ತಿಂಗಳೂ ಸರಾಸರಿ ಐದರಿಂದ ಆರು ಟನ್‌ಗಳಷ್ಟು ಹಿಟ್ಟಿನ ಹಪ್ಪಳ ಸಿದ್ಧವಾಗುತ್ತದೆ. ಕಚ್ಚಾವಸ್ತು ಖರೀದಿ, ಕಾರ್ಮಿಕರ ವೇತನ, ಸಾರಿಗೆ, ವಿದ್ಯುತ್ ಶುಲ್ಕ ಹೀಗೆ ತಿಂಗಳಿಗೆ ಸುಮಾರು 1.5  ಲಕ್ಷದಷ್ಟು ಖರ್ಚಾಗುತ್ತದೆ. ಆದಾಯ 2.5 ರಿಂದ 3 ಲಕ್ಷದಷ್ಟಿದೆ. ಕಾರ್ಮಿಕರಿಗೆ ಪ್ರೊಡಕ್ಷನ್ ಬೋನಸ್ ವಿಧಾನದಲ್ಲಿ ಉತ್ಪಾದನೆಯ ಆಧಾರದ ಮೇಲೆ ವೇತನದ ಜೊತೆಗೇ ಬೋನಸ್ ನೀಡುತ್ತಿರುವುದರಿಂದ ಉತ್ಪಾದನೆ ಮತ್ತಷ್ಟು ಹೆಚ್ಚಿದೆ.

ಗುಣಮಟ್ಟ ಹಾಗೂ ಶುಚಿ, ರುಚಿಗೆ ಒತ್ತು ಕೊಡುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಹೆಚ್ಚುತ್ತಲೇ ಇದೆ. ಮುಂದೆ ಇನ್ನೂ ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು
ಪ್ರಾರಂಭಿಸಿ ಅನೇಕ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡುವ ಆಸೆ ಹರ್ಷಲಾ ದಂಪತಿಗಿದೆ. ಆಸಕ್ತರು ಸಂಪರ್ಕಿಸಿ: 9148408223

Follow Us:
Download App:
  • android
  • ios