ನೀವು ಆರೋಗ್ಯವಂತರಾಗಿದ್ದೀರಿ ಎಂದುಕೊಳ್ಳುವುದೂ, ನಿಜವಾಗಿಯೂ ಆರೋಗ್ಯದಿಂದಿರುವುದು ಎರಡು ಬೇರೆ ಬೇರೆ ವಿಷಯಗಳು. ಜಿಮ್‌ಗೆ ಹೋಗುತ್ತೀರಿ, ಉತ್ತಮ ಆಹಾರವನ್ನಷ್ಟೇ ಸೇವಿಸುತ್ತೀರಿ, ರಾತ್ರಿ 10 ಗಂಟೆಗೆ ಮುಂಚೆ ನಿದ್ರಿಸುತ್ತೀರಿ - ಎಲ್ಲ ಸರಿಯಷ್ಟೇ. ಆದರೂ ಕೆಲವೊಮ್ಮೆ ಆರೋಗ್ಯ ಕೈಕೊಡುತ್ತದೆ. ದೇಹವು ಅನಾರೋಗ್ಯದ ಕುರಿತು ಸೈಲೆಂಟಾಗಿ ಕೆಲ ಸೂಚನೆಗಳನ್ನು ರವಾನಿಸುತ್ತಿರಬಹುದು. ಅದನ್ನು ನೀವು ಗಮನಿಸಲು ಸೋಲುತ್ತಿರಬಹುದು. 

1. ನಿರಂತರ ತಿನ್ನುವುದೇ ಯೋಚನೆ

ತಿನ್ನುವುದರಲ್ಲಿ ಖುಷಿಯಿದೆ. ಹಾಗಂತ ಇಡೀ ದಿನ ತಲೆಯಲ್ಲಿ ಈಗೇನು ತಿನ್ನೋಣ ಎಂದೇ ಓಡುತ್ತಿದ್ದರೆ, ನೀವು ದೇಹಕ್ಕೆ ಅಗತ್ಯವಾದಷ್ಟನ್ನು ತಿನ್ನುತ್ತಿಲ್ಲ ಎಂದರ್ಥ. ನಮ್ಮಲ್ಲಿ ಆರೋಗ್ಯವಂತರಾಗಿರುವುದಕ್ಕಾಗಿ ಡಯಟ್ ಮಾಡುವವರನ್ನು, ತೂಕ ಇಳಿಸಲು ನೋಡುವವರನ್ನು ಜನ ಶ್ಲಾಘಿಸುವುದೇನೋ ನಿಜ, ಅದಕ್ಕಾಗಿ ತಪ್ಪಾದ ರೀತಿಯ ಡಯಟ್ ಮಾಡಿದರೆ ಈಟಿಂಗ್ ಡಿಸಾರ್ಡರ್‌ಗಳು ಶುರುವಾಗಬಹುದು. ಮಾನಸಿಕ ಕಾಯಿಲೆಗಳಲ್ಲಿ ಈಟಿಂಗ್ ಡಿಸಾರ್ಡರ್‌ನಿಂದ ಸಾಯುವವರ ಸಂಖ್ಯೆಯೇ ಜಾಸ್ತಿ ಎಂಂಬುದು ನಿಮಗೆ ಗೊತ್ತಿರಲಿ.

2. ಅತಿಯಾಗಿ ಕೂದಲುದುರುವಿಕೆ

ಕೂದಲುದುರುವುದು ದೇಹದಲ್ಲಿ ಪ್ರೋಟೀನ್ ಕೊರತೆಯಾಗಿರುವುದನ್ನು ಸೂಚಿಸುತ್ತದೆ. ತಕ್ಷಣ ಸರಿ ಮಾಡಿಕೊಳ್ಳಲಿಲ್ಲವೆಂದರೆ ಅತಿಯಾದ ಸುಸ್ತು, ರೋಗ ನಿರೋಧಕ ವ್ಯವಸ್ಥೆ ಹದಗೆಡುವಿಕೆ ಕಾಣಿಸಿಕೊಳ್ಳುತ್ತದೆ.

3. ಮಧ್ಯವಯಸ್ಸಿನಲ್ಲೇ ಅತಿಯಾದ ಸುಕ್ಕು

ಸುಕ್ಕು ಕೂಡಾ ಪ್ರೋಟೀನ್ ಕೊರತೆಯಿಂದಲೇ ಬೇಗ ಅಮರಿಕೊಳ್ಳುತ್ತದೆ. 2007ರಲ್ಲಿ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್‌ನಲ್ಲಿ ಈ ಸಂಬಂಧ ಪ್ರಕಟವಾದ ಅಧ್ಯಯನ ವರದಿಯು ಪ್ರೋಟೀನ್ ಚೆನ್ನಾಗಿ ತೆಗೆದುಕೊಳ್ಳುವವರಲ್ಲಿ ಸುಕ್ಕು ಕಡಿಮೆ ಇರುವುದನ್ನು ತಿಳಿಸಿದೆ. 

4. ಸ್ಕಿನ್ ಟ್ಯಾಗ್ಸ್

ಚರ್ಮದ ಮೇಲೆ, ವಿಶೇಷವಾಗಿ ಕಣ್ಣಿನ ಸುತ್ತಮುತ್ತ ಸ್ವಲ್ಪ ಹಳದಿ ಬಣ್ಣದ ಚಿಮುಕಲು ರೀತಿಯ ಗುಳ್ಳೆಗಳು ಎದ್ದಿದ್ದರೆ ಅದನ್ನು ನೆಗ್ಲೆಕ್ಟ್ ಮಾಡಬೇಡಿ. ಬಹುಷಃ ಅದು ದೇಹದಲ್ಲಿ ಕೊಲೆಸ್ಟೆರಾಲ್ ಹೆಚ್ಚಾಗಿರುವುದನ್ನು ಸೂಚಿಸುತ್ತಿರಬಹುದು. ತಕ್ಷಣ ವೈದ್ಯರನ್ನು ಕಂಡು ನಿಮ್ಮ ಕೊಲೆಸ್ಟೆರಾಲ್ ಮಟ್ವವನ್ನು ಪರೀಕ್ಷಿಸಿಕೊಳ್ಳಿ. ಹೆಚ್ಚಿದ್ದರೆ, ಕೂಡಲೇ ಅದನ್ನು ತಗ್ಗಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಿ. 

5. ಉಗುರಿನಲ್ಲಿ ವ್ಯತ್ಯಾಸ

ಅನಾರೋಗ್ಯವನ್ನು ಉಗುರುಗಳು ಬಹುಬೇಗ ತಿಳಿಸುತ್ತವೆ. ಉಗುರು ಕಂತು, ಕಪ್ಪಾಗುವುದು, ಹಳದಿ ಬಣ್ಣಕ್ಕೆ ತಿರುಗುವುದು, ಬೇಗ ಮುರಿಯುವುದು ಮುಂತಾದ ವ್ಯತ್ಯಾಸಗಳು ಕಂಡುಬಂದಲ್ಲಿ ಅವು ನೀವು ಸೇವಿಸುತ್ತಿರುವ ಆಹಾರ ಸರಿಯಿಲ್ಲವೆಂದೋ, ಸ್ಮೋಕಿಂಗ್‌ನಿಂದ ಶ್ವಾಸಕೋಶಗಳು ಸುಸ್ತಾಗಿವೆ ಎಂದೋ ಅಥವಾ ಇತರೆ ಆಂತರಿಕ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು. 

6. ಯಾವಾಗಲೂ ಬಾಯಾರಿಕೆ

ವರ್ಕೌಟ್ ಬಳಿಕ ನೀರು ಕುಡಿಯಲೇಬೇಕೆನಿಸುವುದು ನಾರ್ಮಲ್. ಆದರೆ ಕುಳಿತಲ್ಲಿ, ನಿಂತಲ್ಲಿ ಬಾಯಾರಿಕೆಯಾಗುತ್ತಿದ್ದರೆ ಅದು ನಿಮ್ಮ ಬ್ಲಡ್ ಶುಗರ್ ಮಟ್ಟದಲ್ಲಿ ವ್ಯತ್ಯಾಸವಾಗಿರುವುದನ್ನು ಸೂಚಿಸುತ್ತಿರಬಹುದು. ಇದು ಡಯಾಬಿಟೀಸ್‌ನ ಆರಂಭಿಕ ಸೂಚನೆಯಾಗಿರಬಹುದು.

7. ವಾಸನೆಯ ಉಸಿರು

ಈರುಳ್ಳಿ ಬೆಳ್ಳುಳ್ಳಿ ಸೇವಿಸಿದಾಗ ಉಸಿರಾಟ ವಾಸನೆ ಬರುವುದು ಸಹಜ. ಆದರೆ, ಅದರ ಹೊರತಾಗಿಯೂ ಯಾವಾಗಲೂ ಉಸಿರು ವಾಸನೆ ಬರುತ್ತಿದ್ದರೆ ಅದು ಬಾಯಿಯ ಅಥವಾ ಹಲ್ಲಿಗೆ ಸಂಬಂಧಿಸಿದ ಕಾಯಿಲೆಯ ಸೂಚನೆಯಾಗಿರಬಹುದು. ಅಷ್ಟೇ ಅಲ್ಲ, ಹೃದಯ ಸಮಸ್ಯೆಗಳ ಕುರಿತ ಎಚ್ಚರಿಕೆಯನ್ನೂ ನೀಡುತ್ತಿರಬಹುದು.

ಗರ್ಭಿಣಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದಾ?

8. ಗಾಯಗಳು ಗುಣವಾಗದಿರುವುದು

ಗಾಯಗಳಾದರೆ ಅವು ಗುಣವಾಗಲು ಸಾಮಾನ್ಯಕ್ಕಿಂತ ಬಹಳ ದಿನಗಳನ್ನು ತೆಗೆದುಕೊಳ್ಳುತ್ತಿವೆ ಎಂದರೆ ಅದು ವಿಟಮಿನ್ ಡಿ ಕೊರತೆಯನ್ನು ಸಾರಿ ಹೇಳುತ್ತಿರುತ್ತದೆ. 

9. ಕಣ್ಣಿನ ಬಣ್ಣ ಬದಲಾವಣೆ

ಸಾಮಾನ್ಯವಾಗಿ ಬಿಳಿಯಾಗಿರುವ ಕಣ್ಣಿನ ಬಣ್ಣ ಸ್ವಲ್ಪ ಹಳದಿಯಾದರೂ ಅದನ್ನು ನೆಗ್ಲೆಕ್ಟ್ ಮಾಡಬೇಡಿ. ಅದು ಲಿವರ್, ಯಕೃತ್ತು ಹಾಗೂ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುತ್ತಿರಬಹುದು. 

ಮ್ಯಾಂಗೋ ಮಾಸ್ಕ್ ಎಂಬ ಕೇಶ ಆರೋಗ್ಯ ವರ್ಧಕ!

10. ಅತಿಯಾದ ತಾಪಮಾನ ಸೆನ್ಸಿಟಿವಿಟಿ

ಬಿಸಿ ಅಥವಾ ತಂಪನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ, ದೇಹ ಸಹಕಾರ ನೀಡುತ್ತಿಲ್ಲವೆಂದರೆ ಅದು ಥೈರಾಯ್ಡ್ ಸಮಸ್ಯೆಯ ಸೂಚಕ. ಈ ತಾಪಮಾನ ಸೆನ್ಸಿಟಿವಿಟಿ ಹೊಸದಾಗಿ ಶುರುವಾಗಿದ್ದರೆ ಕೂಡಲೇ ವೈದ್ಯರನ್ನು ಕಂಡು ವಿಚಾರಿಸಿ.

11. ಅತಿಯಾದ ತೂಕ ಕಳೆದುಕೊಳ್ಳುವಿಕೆ

ನೀವು ಪ್ರಯತ್ನಿಸಿ ತೂಕ ಕಳೆದುಕೊಂಡಾಗ ಅದು ಖುಷಿ ಪಡುವ ವಿಷಯ. ಆದರೆ, ಪ್ರಯತ್ನಿಸದಿದ್ದರೂ ನಿರಂತರವಾಗಿ ತೂಕ ಇಳಿಯುತ್ತಲೇ ಇದೆ ಎಂದರೆ ಅದು ಡಯಾಬಿಟೀಸ್, ಹಾರ್ಟ್ ಫೇಲ್ಯೂರ್ ಅಥವಾ ಕ್ಯಾನ್ಸರನ್ನು ಸೂಚಿಸುತ್ತಿರಬಹುದು.