Asianet Suvarna News Asianet Suvarna News

ಮುಟ್ಟಿದರೆ ಮಣಿಯುವ, ಮುತ್ತಿಟ್ಟರೆ ಮುನಿಯದ ಮೃದು ತ್ವಚೆಯ 10 ರಹಸ್ಯಗಳು!

ನಾವು ಯಾರಿಗೆ, ಯಾವುದಕ್ಕೇ ಆಗಲಿ, ಪ್ರೀತಿ ಕಾಳಜಿ ತೋರಿಸಿದರೆ ಅದು ವ್ಯರ್ಥ ಹೋಗುವುದು ಸಾಧ್ಯವೇ ಇಲ್ಲ. ನಮ್ಮ ತ್ವಚೆಯ ವಿಷಯದಲ್ಲೂ ಅಷ್ಟೇ, ನೀವೆಷ್ಟು ಕಾಳಜಿ ವಹಿಸುತ್ತೀರೋ, ಅಷ್ಟು ಸಂತೋಷ ಆ ಚರ್ಮದಲ್ಲಿ ಪ್ರತಿಫಲಿಸುತ್ತದೆ. 

10 Skincare tips that everyone should know
Author
Bangalore, First Published Jul 7, 2019, 10:29 AM IST

ನೀವೆಷ್ಟು ಖುಷಿಯಾಗಿದ್ದೀರಾ, ಎಂಥ ಲೈಫ್‌ಸ್ಟೈಲ್ ಅಳವಡಿಸಿಕೊಂಡಿದ್ದೀರಾ ಎಂಬುದು ನಿಮ್ಮ ಮುಖ ನೋಡಿಯೇ ಹೇಳಬಹುದು. ತ್ವಚೆಯು ದೇಹದ ಅತಿ ದೊಡ್ಡ ಅಂಗ. ಹೀಗಾಗಿ, ಅದರ ಆರೋಗ್ಯ ಕಾಪಾಡುವತ್ತ ಹೆಚ್ಚಿನ ಗಮನ ನೀಡುವುದು ಮುಖ್ಯ. ತ್ವಚೆಯ ಹೊಳಪಿಗೆ ವಿಶೇಷ ಆರೈಕೆ ಬೇಡ. ಆದರೆ ದೈನಂದಿನ ಜೀವನಶೈಲಿಯ ಭಾಗವಾಗಿ ಕೆಲವು ಅಭ್ಯಾ‌ಸಗಳನ್ನು ನಡೆಸಬೇಕು. ಸಮಯ ಬೇಡದ ಸಿಂಪಲ್ ಆದ ಈ 10 ಸ್ಕಿನ್‌ಕೇರ್ ರೂಟಿನ್ ಪ್ರತಿಯೊಬ್ಬರೂ ತಿಳಿದಿರಲೇಬೇಕು. 

1. ಸಾಮಾನ್ಯವಾಗಿ ಮುಖದ ಅಂದ ಹಾಗೂ ಕಾಳಜಿಗಷ್ಟೇ ಗಮನ ವಹಿಸಲಾಗುತ್ತದೆ. ಆದರೆ, ಇಡೀ ದೇಹದ ಚರ್ಮಕ್ಕೆ ಆರೈಕೆಯ ಅಗತ್ಯವಿರುತ್ತದೆ. ಮಾಯಿಶ್ಚರೈಸಿಂಗ್ ಬಾಡಿವಾಶ್ ಬಳಸಿ, ಸ್ನಾನವಾಗುತ್ತಲೇ ಎಲ್ಲೆಡೆ ಲೋಶನ್ ಹಚ್ಚಿಕೊಂಡೇ ಬಾತ್‌ರೂಂನಿಂದ ಹೊರಬನ್ನಿ. ಇದರಿಂದ ದೇಹವನ್ನು ಹೈಡ್ರೇಟ್ ಮಾಡಿ ಲಾಕ್ ಮಾಡಿದಂತಾಗುತ್ತದೆ. ಈ ಅಭ್ಯಾಸವು ಸುಕ್ಕನ್ನು ತಡೆಯುವುದಲ್ಲದೆ, ಯಂಗ್ ಕಾಣುವಂತೆ ಮಾಡುತ್ತದೆ. 

ಮಿಲ್ಕಿ ಬ್ಯೂಟಿಗಾಗಿ ಹಾಲು, ಕೇಸರಿ ಪೇಸ್ಟ್!

2. ಮಕ್ಕಳಾದ ಮಹಿಳೆಯರಿಗೆ ಹೊಟ್ಟೆಯಲ್ಲಿ ಜೇಡದಂತೆ ಕಾಡುವುದು ಸ್ಟ್ರೆಚ್ ಮಾರ್ಕ್ಸ್. ದಪ್ಪಗಿರುವವರನ್ನೂ ಇದು ಕಾಡಬಹುದು. ಇದಕ್ಕೆ ಎಲ್ಲಕ್ಕಿಂತ ಉತ್ತಮ ಪರಿಹಾರ ಶಿಯಾ ಬಟರ್ ಹಾಗೂ ಕೋಕೋ ಬಟರ್. ಇವೆರಡನ್ನೂ ಸೇರಿಸಿ ಪ್ರತಿದಿನ ಸ್ಟ್ರೆಚ್ ಮಾರ್ಕ್ಸ್‌ಗೆ ಹಚ್ಚುತ್ತಾ ಬನ್ನಿ. ಇನ್ನೆಲ್ಲ ಕ್ರೀಂಗಳಿಗಿಂತಲೂ ಇದು ಹೆಚ್ಚು ಪರಿಣಾಮಕಾರಿ ಫಲಿತಾಂಶ ನೀಡುವುದು ಸಾಬೀತಾಗಿದೆ. ಇದರೊಂದಿಗೆ ಸ್ವಲ್ಪ ಸೂರ್ಯನ ಕಿರಣಗಳು ಸ್ಟ್ರೆಚ್ ಮಾರ್ಕ್ಸ್‌ಗೆ ಬೀಳುವಂತೆ ಕಾಳಜಿ ವಹಿಸಿ.

3. ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಹಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ಟ್ಯಾನಿಂಗ್ ಚರ್ಮವನ್ನು ಕಪ್ಪು ಕಾಣುವಂತೆ ಮಾಡುವುದಷ್ಟೇ ಅಲ್ಲ, ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಜೊತೆಗೆ, ಬೇಗ ವಯಸ್ಸಾದಂತೆ ಕಾಣಲಾರಂಭಿಸುತ್ತೀರಿ. ಹೀಗಾಗಿ, ಕಾಲಿಗೆ ಚಪ್ಪಲಿ ಧರಿಸುವುದು ಎಷ್ಟು ಅಗತ್ಯ ಹಾಗೂ ಸಲೀಸೋ, ಸನ್‌ಸ್ಕ್ರೀನ್ ಹಚ್ಚುವುದು ಕೂಡಾ ಅಷ್ಟೇ ಅಗತ್ಯ. ಅಷ್ಟೇ ಸಲೀಸಾಗಿಸಿಕೊಳ್ಳುವುದು ನಮ್ಮ ಕೈಲಿದೆ. ಎಸ್‌ಪಿಎಫ್ ಜಾಸ್ತಿಯಿರುವ ಸನ್‌ಸ್ಕ್ರೀನ್ಸ್ ಸೂರ್ಯನ ಅಪಾಯಕಾರಿ ಆಲ್ಟ್ರಾ ವಯಲೆಟ್ ಕಿರಣಗಳಿಂದ  ಹೆಚ್ಚು ರಕ್ಷಣೆ ಒದಗಿಸುತ್ತವೆ. 

ಗ್ಲಾಸ್ ರೀತಿ ಸ್ಕಿನ್ ಬೇಕು ಅಂದ್ರೆ ಇಲ್ಲಿದೆ ಟಿಪ್ಸ್....

4. ಸಿಗರೇಟ್ ಸೇವನೆಯು ಆರೋಗ್ಯ ಕೆಡಿಸುವುದಷ್ಟೇ ಅಲ್ಲ, ಅದು ಚರ್ಮ ಬೇಗ ಸುಕ್ಕುಗಟ್ಟುವಂತೆ ಮಾಡುತ್ತದೆ. ಹೀಗಾಗಿ, ಆರೋಗ್ಯಯುತ ಚರ್ಮಕ್ಕಾಗಿ ಸಿಗರೇಟ್ ಸೇವನೆ ಬಿಟ್ಟುಬಿಡಿ. ನಿಕೋಟಿನ್ ರಕ್ತ ನಾಳಗಳಲ್ಲಿ ರಕ್ತ ಸಂಚಲನವು ಸುಲಭವಾಗಿ ಆಗದಂತೆ ಕಟ್ಟಿಕೊಳ್ಳುವುದರಿಂದ ನಿಮ್ಮ ಮುಖ ಹಾಗೂ ದೇಹ ಪಡೆಯಬೇಕಾದ ನ್ಯೂಟ್ರಿಯೆಂಟ್ಸ್ ಹಾಗೂ ಆಮ್ಲಜನಕ ಅರ್ಧದಲ್ಲೇ ನಿಂತುಹೋಗುತ್ತವೆ. ಇದರಿಂದ ಚರ್ಮವು ಕೊಲ್ಯಾಜನ್ ಕಳೆದುಕೊಂಡು ಬೇಗ ಜೋತು ಬಿದ್ದು ಸುಕ್ಕುಗಟ್ಟುತ್ತದೆ.

5. ಚರ್ಮದ ಆರೋಗ್ಯಕ್ಕಾಗಿ ಆ್ಯಂಟಿ ಆಕ್ಸಿಡೆಂಟ್ಸ್ ಹೇರಳವಾಗಿರುವ ಆಹಾರಗಳನ್ನು ಸೇವಿಸಿ. ಏಕೆಂದರೆ, ಆ್ಯಂಟಿ ಆಕ್ಸಿಡೆಂಟ್ಸ್‌ನಿಂದ ತುಂಬಿರುವ ಆಹಾರವು ಚರ್ಮದ ರಕ್ಷಣೆ ಮಾಡುತ್ತವೆ. ಕಿತ್ತಳೆ, ಕ್ಯಾರೆಟ್, ಏಪ್ರಿಕಾಟ್, ಹಳದಿ ಬಣ್ಣದ ಹಣ್ಣುಗಳು, ಹಸಿರು ಸೊಪ್ಪುತರಕಾರಿಗಳಾದ ಪಾಲಕ್, ಬೀನ್ಸ್, ಬಟಾಣಿ, ಟೊಮ್ಯಾಟೋಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಅಧಿಕವಾಗಿರುತ್ತವೆ. ಇಎಫ್ಎ ಹೆಚ್ಚಿರುವ ಮೀನುಗಳು ಹಾಗೂ ಡ್ರೈಫ್ರೂಟ್ಸನ್ನು ಕೂಡಾ ಪ್ರತಿದಿನ ಸೇವಿಸಿ. 

6. ಚರ್ಮವು ದೇಹದ ಅತಿ ಮುಖ್ಯ ಭಾಗವಾಗಿದ್ದು, ಅದನ್ನು ಎಂದಿಗೂ ಕಡೆಗಣಿಸಬೇಡಿ. ಜೋರಾಗಿ ಉಜ್ಜುವುದು, ಕೊಳೆಯಾದ ಬಟ್ಟೆ ಧರಿಸುವುದು ಮುಂತಾದವನ್ನು ಮಾಡಬೇಡಿ. ಪ್ರತಿದಿನ ಒಗೆದು ಒಣಗಿಸಿದ ಬಟ್ಟೆಯನ್ನೇ ಧರಿಸಿ.

7. ಮನೆಯಲ್ಲೇ ಮಾಡಿದ ಲಿಪ್‌ಬಾಮ್ ಅಥವಾ ಮನೆಬಳಕೆಯ ವಸ್ತುಗಳನ್ನೇ ಲಿಪ್‌ಬಾಮ್ ಆಗಿ ಬಳಸಿ. ಉದಾಹರಣೆಗೆ ಸೌತೆಕಾಯಿ, ಜೇನು ಹಾಗೂ ಕೆನೆ ಸೇರಿಸಿ ತುಟಿಗೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದು ಬಾದಾಮಿ ಎಣ್ಣೆ ಸವರಿಕೊಳ್ಳಿ.

8. ಸ್ಕಿನ್‌ಕೇರ್ ಉತ್ಪನ್ನಗಳ ಆಯ್ಕೆ ಮಾಡುವಾಗ ವಯಸ್ಸಿನ ಆಧಾರದ ಮೇಲೆ ಮಾರ್ಕೆಟಿಂಗ್ ಮಾಡಿದ ಉತ್ಪನ್ನಗಳನ್ನು ಕೊಳ್ಳಬೇಡಿ. ವಯಸ್ಸು ಎಷ್ಟೇ ಆದರೂ, ನೀವು ಹೇಗೆ ನಿಭಾಯಿಸಿದ್ದೀರೋ, ಹಾಗಿರುತ್ತದೆ ತ್ವಚೆ. ನಿಮಗೆ 50 ವರ್ಷ ಇರಬಹುದು. ಆದರೆ ನಿಮ್ಮ ಎಣ್ಣೆ ತ್ವಚೆಯಿನ್ನೂ 25ರಲ್ಲಿರಬಹುದು. ಅಥವಾ ಸಂಪೂರ್ಣ ಉಲ್ಟಾ ಕೂಡಾ ಆಗಿರಬಹುದು. ಹಾಗಿದ್ದಾಗ, ನಿಮಗೆ ವಯಸ್ಸಾಗಿರುವುದರಿಂದ ತ್ವಚೆಯು ಒಣವಾಗಿರುತ್ತದೆ ಎಂದು ನಂಬಿಕೊಂಡು ಹೆಚ್ಚು ಆಯ್ಲಿಯಾದ ಉತ್ಪನ್ನವನ್ನು ಕಂಪನಿಯು ತಯಾರಿಸಿರುತ್ತದೆ. ಆದರೆ, ಇದು ನಿಮಗೆ ಸೂಟ್ ಆಗುವುದಿಲ್ಲ. ಹೀಗಾಗಿ, ನಿಮ್ಮ ಚರ್ಮ ಹೇಗಿದೆ ಎಂಬುದರ ಆಧಾರದ ಮೇಲೆ ಸ್ಕಿನ್ ಪ್ರಾಡಕ್ಟ್ಸ್ ಖರೀದಿಸಿ. ನಿಮ್ಮ ಬಳಿ ಇರುವ ಎಲ್ಲ ಸ್ಕಿನ್ ಕೇರ್ ಪ್ರಾಡಕ್ಟ್ಸ್‌ನ ಎಕ್ಸ್‌ಪೈರಿ ಡೇಟ್‌ನ್ನು ಆಗಾಗ ಗಮನಿಸುತ್ತಿರಿ. ಎಕ್ಸ್‌ಪೈರಿ ಆದ ಉತ್ಪನ್ನಗಳನ್ನು ಎಸೆದುಬಿಡಿ. ಎಲ್ಲವೂ ಅಪಾಯವೆಂದೇನೂ ಅಲ್ಲ, ಆದರೆ ಉಪಯೋಗವೂ ಇರುವುದಿಲ್ಲ. 

ಸ್ಟಾರ್ ನಟಿಯರ ಸೌಂದರ್ಯದ ಗುಟ್ಟು ಹಕ್ಕಿ ಪಿಕ್ಕೆ...

9. ಚರ್ಮವನ್ನು ಆರೋಗ್ಯಯುತವಾಗಿ, ಕಾಂತಿಯುತವಾಗಿಡಲು ಆಗಾಗ ಸತ್ತ ಚರ್ಮಕೋಶಗಳಿಗೆ ಮುಕ್ತಿ ನೀಡುವುದು ಮುಖ್ಯ. ಏಕೆಂದರೆ ಈ ಡೆಡ್ ಸ್ಕಿನ್ ಸೆಲ್ಸ್ ಒರಟಾಗಿ, ಕಳಾಹೀನವಾಗಿ ಚರ್ಮದ ಮೇಲೆ ಕುಳಿತು ಅದರ ಅಂದ ಮುಚ್ಚುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಆಗಾಗ ಸ್ಕ್ರಬ್ ಮಾಡುತ್ತಿರಿ. 

10. ಸೋಪ್‌ನಿಂದ ಕೈ ತೊಳೆಯುತ್ತೀರೋ ಅಥವಾ ಹಾಗೇ ತಣ್ಣೀರಿನಿಂದಲೋ, ಒಟ್ಟಿನಲ್ಲಿ ಪದೇ ಪದೆ ಕೈತೊಳೆಯುವುದರಿಂದ ಅಂಗೈ ಒಣಗುತ್ತದೆ. ಕೈತೊಳೆದ ಬಳಿಕ ಹ್ಯಾಂಡ್ ಕ್ರೀಮ್ ಹಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೈ ಯಾವಾಗಲೂ ಮೃದು ಹಾಗೂ ಕೋಮಲವಾಗಿರುತ್ತದೆ. 

Follow Us:
Download App:
  • android
  • ios