ತೂಕ ಕಳ್ಕೊಳೋ ಬಗ್ಗೆ ಎಲ್ಲರೂ ಮಾತಾಡ್ತಾರೆ, ಎಲ್ಲ ಪತ್ರಿಕೆಗಳಲ್ಲೂ ಅದಕ್ಕೆ ಸಂಬಂಧಪಟ್ಟ ಟಿಪ್ಸ್, ಲೇಖನ ದಿನಕ್ಕೊಂದರಂತೆ ಹರಿದು ಬರುತ್ತವೆ, ಇಂಟರ್ನೆಟ್‌ನಲ್ಲಿ ತೂಕ ಕಳೆದುಕೊಂಡವರ ಸಕ್ಸಸ್‌ ಸ್ಟೋರಿಗಳಿಗೂ ಕೊರತೆ ಇಲ್ಲ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ. ಕಡ್ಡಿ, ಸಿಳ್ಳೆಕ್ಯಾತ, ಅಸ್ಥಿಪಂಜರ ಎಂದೆಲ್ಲ ಕರೆಸಿಕೊಂಡು, ಉಫ್ ಅಂದ್ರೆ ಹಾರಿ ಹೋಗ್ತಿ ಅಂತ ರೇಗಿಸ್ಕೊಂಡು ಈ ಸಣಕಲು ಶರೀರದವರು ಬೇಸತ್ತು ಹೋಗಿರ್ತಾರೆ. ವೀಕ್ನೆಸ್, ಸುಸ್ತು, ನಿರುತ್ಸಾಹ, ನಿಶ್ಯಕ್ತಿಯಿಂದ ಬಳಲಿರ್ತಾರೆ. ಸರಿಯಾಗಿ ಊಟ ಮಾಡಿದ್ರೂ  ದಪ್ಪಗಾಗಲ್ಲ ಅನ್ನೋದು ಇವರ ಅಳಲು. ನೀವೂ ಇವರಲ್ಲಿ ಒಬ್ಬರಾಗಿದ್ದಲ್ಲಿ, ಬರೀ ಊಟವಲ್ಲ, ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ. ಜೊತೆಗೆ ಚೆನ್ನಾಗಿ ನಿದ್ದೆ, ಸರಿಯಾದ ವ್ಯಾಯಾಮ ಮೈಗೂಡಿಸಿಕೊಳ್ಳಿ. ವ್ಯಾಯಾಮದಲ್ಲಿ ವ್ಹೈಟ್ ಟ್ರೇನಿಂಗ್ ಕೂಡಾ ಇದ್ದರೆ ಬರೀ ಫ್ಯಾಟ್ ದೇಹ ಸೇರುವ ಬದಲು ಚೆನ್ನಾಗಿ ಮಸಲ್ ಬಿಲ್ಡ್ ಆಗುತ್ತದೆ. 

1. ಬಾಳೆಹಣ್ಣು

- ಹೆಚ್ಚಿನ ಬಾಡಿ ಬಿಲ್ಡರ್ಸ್ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಹೊಂದಿರುವ ಬಾಳೆಹಣ್ಣು ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯ. ಇದನ್ನು ನೀವು ಚಾಕೋಲೇಟ್ ಬನಾನಾ ಸ್ಮೂತಿಯ ರೂಪದಲ್ಲಿ ಸೇವಿಸಬಹುದು. 

ತೂಕ ಇಳಿಸಿಕೊಳ್ಳಲು ಮಳೆಗಾಲ ಬೆಸ್ಟ್ ಟೈಮ್...

2. ಪೀನಟ್ ಬಟರ್

- ಇದರಲ್ಲಿ ಪ್ರೋಟೀನ್, ಅಗತ್ಯ ಜೀವಸತ್ವಗಳು, ಮೆಗ್ನೀಷಿಯಂ, ಫೈಬರ್, ಫೋಲೇಟ್ ಉತ್ತಮ ಪ್ರಮಾಣದಲ್ಲಿದ್ದು, ನಿಯಮಿತವಾಗಿ ಸೇವಿಸಿದರೆ ಇದು ಹೃದಯದ ಆರೋಗ್ಯವನ್ನು ಕಾಪಾಡಿ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಚಪಾತಿಗೆ ಸವರಿಕೊಂಡು ರೋಲ್ ಮಾಡಿಕೊಂಡು ತಿನ್ನಲು ರುಚಿಯಾಗಿರುತ್ತದೆ. ಬ್ರೆಡ್‌ನೊಂದಿಗೆ ಕೂಡಾ ಸೇವಿಸಬಹುದು. 

3. ಮೊಟ್ಟೆ

-  ಮೊಟ್ಟೆಯಲ್ಲಿ ಎ, ಡಿ, ಇ ವಿಟಮಿನ್‌ಗಳು, ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ಸಾಕಷ್ಟು ಪ್ರೋಟೀನ್‌ ಇದೆ. ದೇಹದ ಸ್ನಾಯುಗಳು ಚೆನ್ನಾಗಿ ಬೆಳವಣಿಗೆಯಾಗಬೇಕೆಂದರೆ ಮೊಟ್ಟೆ ಅತ್ಯುತ್ತಮ ಆಯ್ಕೆ. ಅವುಗಳಲ್ಲಿರುವ ಹೈ ಕ್ವಾಲಿಟಿ ಪ್ರೋಟೀನ್ ಹಾಗೂ ಹೆಲ್ದೀ ಫ್ಯಾಟ್ಸ್ ದಪ್ಪಗಾಗಬೇಕೆನ್ನುವವರಿಗೆ ವರದಾನ. ದಿನಕ್ಕೆ 3 ಮೊಟ್ಟೆಗಳನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳಿ. 

4. ಸೋಯಾ

– ಸೋಯಾಬೀನ್‌ನಲ್ಲಿ ಅಮೈನೋ ಆಸಿಡ್ ಇದ್ದು, ಬಾಡಿ ಬಿಲ್ಡ್ ಮಾಡಲು ಸಹಕಾರಿಯಾಗಿದೆ.

ತೂಕ ಇಳಿಸಲು ಕೊತ್ತಂಬರಿಯಂಥ ಸೊಪ್ಪಿದು...!

5. ಬಾದಾಮಿ

- ಕೇವಲ ಸ್ವಲ್ಪವೇ ಬಾದಾಮಿಯಲ್ಲಿ ಕೂಡಾ 7 ಗ್ರಾಂನಷ್ಟು ಪ್ರೋಟೀನ್ ಹಾಗೂ 18 ಗ್ರಾಂನಷ್ಟು ಆರೋಗ್ಯಕರ ಫ್ಯಾಟ್ ಇರುತ್ತದೆ. ಪ್ರತಿನಿತ್ಯ ಬಾದಾಮಿ ಸೇವಿಸುವುದನ್ನು ಡಯಟ್‌ಗೆ ಸೇರಿಸಿಕೊಳ್ಳಿ. 

6. ದವಸ ಧಾನ್ಯಗಳು

- ಸದೃಢ ಮೈಕಟ್ಟು ಹೊಂದಬೇಕೆಂದಿದ್ದರೆ ಧಾನ್ಯಗಳನ್ನು ಅಪಾರ ಪ್ರಮಾಣದಲ್ಲಿ ಸೇವಿಸಬೇಕು! ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಜೊತೆಗೆ ಪ್ರೊಟೀನ್ ಹೇರಳವಾಗಿದ್ದು ಸ್ನಾಯುಗಳ ಆರೋಗ್ಯ ರಕ್ಷಿಸಲೂ ಸಹಾಯ ಮಾಡುತ್ತದೆ.

7. ಡ್ರೈಫ್ರೂಟ್ಸ್

- ವಾಲ್‌ನಟ್, ದ್ರಾಕ್ಷಿ, ಗೋಡಂಬಿ, ಅಂಜೂರ ಮುಂತಾದ ಡ್ರೈ ಫ್ರೂಟ್‌ಗಳಲ್ಲಿ ಶುಗರ್ ಹೆಚ್ಚಿದ್ದು, ತೂಕ ಹೆಚ್ಚಿಸುವುದಕ್ಕೆ ಸಹಕಾರಿ. ರುಚಿಯಲ್ಲಿ ಕೂಡಾ ರಾಜಿ ಮಾಡಿಕೊಳ್ಳಬೇಕಿಲ್ಲ. 

8. ಮೊಸರು

-  ಮೊಸರು ಸಂಕೀರ್ಣ ಸಕ್ಕರೆ, ಅಮೈನೋ ಆಮ್ಲಗಳು ಮತ್ತು ಕರಗಬಲ್ಲ ಪ್ರೊಟೀನ್ ಗಳ  ಮೂಲವಾಗಿದೆ. ಇವೆಲ್ಲವೂ ದಪ್ಪಗಾಗಲು ಸಹಾಯ ಮಾಡುತ್ತಲೇ, ಆರೋಗ್ಯವನ್ನೂ ಕಾಪಾಡುತ್ತವೆ. 

9. ಡಾರ್ಕ್ ಚಾಕೋಲೇಟ್

- ಡಾರ್ಕ್ ಚಾಕೋಲೇಟ್‌ಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್‌ಗಳು ಹೇರಳವಾಗಿರುತ್ತವೆ. ಕೋಕಾ ಪದಾರ್ಥವು ಶೇ.70ರಷ್ಟಾದರೂ ಇರುವ ಡಾರ್ಕ್ ಚಾಕೋಲೇಟ್ ಪ್ರತಿ ದಿನ ಸೇವಿಸಿ. ಪ್ರತಿ 100 ಗ್ರಾಂ ಬಾರ್‌ನಿಂದ 600 ಕ್ಯಾಲೋರಿಗಳನ್ನು ನೀವು ಪಡೆಯಬಹುದು. 

ಪ್ರಸವದ ನಂತರ ಶೇಪ್ ಬರಲು ಹೀಗ್ ಮಾಡಿ....

10. ಚೀಸ್

- ಡಾರ್ಕ್ ಚಾಕೋಲೇಟ್‌ನಂತೆಯೇ ಚೀಸ್ ಕೂಡಾ ಹೆಚ್ಚು ಕ್ಯಾಲೋರಿಗಳನ್ನೂ, ಫ್ಯಾಟನ್ನೂ ಹೊಂದಿದೆ. ನಿಮ್ಮ ಆಹಾರದಲ್ಲಿ ಚೀಸ್ ಬಳಕೆ ಹೆಚ್ಚಿಸಿದರೆ ಪ್ರೋಟೀನ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸಿಗುತ್ತದೆ.