ದಿನವೊಂದಕ್ಕೆ ಕೇವಲ ಐದೇ ಐದು ನಿಮಿಷದ ಶ್ರಮ ಹಾಗೂ 5 ರೂಪಾಯಿಗಳ ಖರ್ಚಿನಲ್ಲಿ ನಿಮ್ಮ ಶೌಚಾಲಯವನ್ನು ರಾಸಾಯನಿಕಗಳಿಲ್ಲದೆ ಸ್ವಚ್ಛವಾಗಿಟ್ಟುಕೊಳ್ಳಬಹುದು. ಈ ಸ್ಮಾರ್ಟ್ ಜೀವನಶೈಲಿಯ ಸಲಹೆಯನ್ನು ಇಂದೇ ಪಾಲಿಸಿ ಮತ್ತು ನಿಮ್ಮ ಮನೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ!

ಟಾಯ್ಲೆಟ್ ಕ್ಲೀನಿಂಗ್ ಟಿಪ್ಸ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಜೀವನಶೈಲಿಯಲ್ಲಿ ಮನೆಯ ಅಂದಚೆಂದಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ, ಅಷ್ಟೇ ಮನೆಯ ನೈರ್ಮಲ್ಯಕ್ಕೂ ನೀಡಬೇಕು. ಎಷ್ಟೇ ಸುಂದರವಾದ ಸೋಫಾ, ಪರದೆ ಅಥವಾ ಪೀಠೋಪಕರಣಗಳನ್ನು ಹೊಂದಿದ್ದರೂ, ಮನೆಯ ಶೌಚಾಲಯ ಅಥವಾ ಸ್ನಾನಗೃಹವು ಅಶುಚಿಯಾಗಿದ್ದರೆ ಇಡೀ ಮನೆಯ ಸಂಭ್ರಮವೇ ಹಾಳಾಗುತ್ತದೆ. ಶೌಚಾಲಯವು ಕೇವಲ ಮನೆಯ ಒಂದು ಭಾಗವಲ್ಲ, ಅದು ನಮ್ಮ ಜೀವನದ ಶಿಸ್ತು ಮತ್ತು ನೈರ್ಮಲ್ಯದ ಪ್ರತಿಬಿಂಬವೂ ಹೌದು.

ಮುಖ್ಯವಾಗಿ, ಮನೆಗೆ ಅತಿಥಿಗಳು ಬಂದಾಗ ಶೌಚಾಲಯವು ಗಲೀಜಾಗಿದ್ದರೆ ಅಥವಾ ದುರ್ವಾಸನೆ ಬರುತ್ತಿದ್ದರೆ, ನಮ್ಮ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಕ್ಷಣಾರ್ಧದಲ್ಲಿ ಮಣ್ಣುಪಾಲಾಗುವುದು ಖಂಡಿತ. ಇದು ಅನೇಕರ ನೆಮ್ಮದಿಗೆ ಭಂಗ ತರುವ ಸಂಗತಿ ಎಂಬುದು ಗುಟ್ಟಿನ ಸಂಗತಿಯೇನೂ ಅಲ್ಲ.

ಅನೇಕರು ಶೌಚಾಲಯ ಶುಚಿಗೊಳಿಸುವುದು ಒಂದು ದೊಡ್ಡ ಕಷ್ಟದ ಕೆಲಸ ಎಂದು ಭಾವಿಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಮತ್ತು ಘಾಟು ವಾಸನೆಯ ರಾಸಾಯನಿಕ ದ್ರವಗಳನ್ನು (Chemical cleaners) ಖರೀದಿಸಿ ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಾರೆ. ಆದರೆ ಇಂತಹ ರಾಸಾಯನಿಕಗಳು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ, ಪರಿಸರಕ್ಕೂ ಹಾನಿಕಾರಕ. ಆದರೆ, ಕೇವಲ 5 ರೂಪಾಯಿ ಖರ್ಚಿನಲ್ಲಿ, ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಮೂರು ನೈಸರ್ಗಿಕ ವಸ್ತುಗಳನ್ನು ಬಳಸಿ ನಿಮ್ಮ ಟಾಯ್ಲೆಟ್ ಅನ್ನು ಪಂಚತಾರಾ ಹೋಟೆಲ್‌ನ ಶೌಚಾಲಯದಂತೆ ಮಿರಮಿರ ಮಿಂಚಿಸಬಹುದು! ಆ ಅದ್ಭುತ ಕಿಚನ್ ಟಿಪ್ಸ್ ಇಲ್ಲಿದೆ ನೋಡಿ..

1. ಅಡುಗೆ ಸೋಡಾ (Baking Soda): ಕಲೆಗಳನ್ನು ಹೋಗಲಾಡಿಸೋ ಕಿಂಗ್

ಹೌದು, ಕಿಚನ್‌ನಲ್ಲಿ ಇರುವ ಅಡುಗೆ ಸೋಡಾವನ್ನು ಬಳಸಿರಿ. ಇದು ಟಾಯ್ಲೆಟ್ ಬೌಲ್‌ನ ಒಳಭಾಗದಲ್ಲಿ ಅಂಟಿಕೊಂಡಿರುವ ಗಟ್ಟಿ ಕಲೆಗಳು ಮತ್ತು ಜಿಡ್ಡಿನಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಎರಡರಿಂದ ಮೂರು ಚಮಚ ಅಡುಗೆ ಸೋಡಾವನ್ನು ತೆಗೆದುಕೊಂಡು ಅದನ್ನು ಟಾಯ್ಲೆಟ್ ಬೌಲ್‌ನ ಒಳಭಾಗದಲ್ಲಿ ಎಲ್ಲಾ ಕಡೆ ಹರಡುವಂತೆ ಸಿಂಪಡಿಸಿ. ಇದನ್ನು ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಡುಗೆ ಸೋಡಾ ತನ್ನ ಸ್ವಚ್ಛಗೊಳಿಸುವ ಗುಣದಿಂದಾಗಿ ಕೊಳೆಯನ್ನು ಸಡಿಲಗೊಳಿಸುತ್ತದೆ.

2. ಬಿಳಿ ವಿನೆಗರ್ (White Vinegar): ಹೊಳಪು ನೀಡುವ ಮಾಂತ್ರಿಕ

ಉಪ್ಪು ನೀರಿನಿಂದಾಗಿ ಶೌಚಾಲಯದ ಮೇಲೆ ಬಿಳಿ ಗೆರೆಗಳು ಅಥವಾ ಕಲೆಗಳು ಉಂಟಾಗುವುದು ಸಹಜ. ಇವುಗಳನ್ನು ಹೋಗಲಾಡಿಸಲು ವಿನೆಗರ್ ಅತ್ಯುತ್ತಮ. ಸೋಡಾ ಸಿಂಪಡಿಸಿದ 20 ನಿಮಿಷಗಳ ನಂತರ, ಒಂದು ಕಪ್ ಬಿಳಿ ವಿನೆಗರ್ ಅನ್ನು ಅದರ ಮೇಲೆ ಸುರಿಯಿರಿ. ವಿನೆಗರ್ ಸೋಡಾದ ಮೇಲೆ ಬಿದ್ದ ತಕ್ಷಣ ರಾಸಾಯನಿಕ ಕ್ರಿಯೆ ನಡೆದು ಗುಳ್ಳೆಗಳು ಏಳುತ್ತವೆ. ಇದು ಹಠಮಾರಿ ಕಲೆಗಳನ್ನು ಬುಡ ಸಮೇತ ಕಿತ್ತು ಹಾಕುತ್ತದೆ. ಸ್ವಲ್ಪ ಸಮಯದ ಬಳಿಕ ಟಾಯ್ಲೆಟ್ ಬ್ರಷ್‌ನಿಂದ ಸ್ವಲ್ಪ ಉಜ್ಜಿದರೆ, ಬೌಲ್ ಮೇಲೆ ಸಂಗ್ರಹವಾಗಿದ್ದ ಕಲೆಗಳು ಮಾಯವಾಗಿ ಬಿಳಿಯ ಅಥವಾ ಬೌಲ್ ಸಹಜ ಬಣ್ಣ ಮರಳುತ್ತದೆ.

3. ನಿಂಬೆ ಹಣ್ಣು (Lemon): ನೈಸರ್ಗಿಕ ಸುಗಂಧ ಮತ್ತು ಬ್ಯಾಕ್ಟೀರಿಯಾ ನಾಶಕ

ಇನ್ನು, ಶೌಚಾಲಯದಲ್ಲಿನ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ನಾಶಮಾಡಲು ಮತ್ತು ಅದ್ಭುತವಾದ ಪರಿಮಳವನ್ನು ನೀಡಲು ನಿಂಬೆ ಹಣ್ಣನ್ನು ಬಳಸಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ನೈಸರ್ಗಿಕ ಕ್ಲೀನರ್ ಆಗಿ ಕೆಲಸ ಮಾಡುತ್ತದೆ. ಒಂದು ನಿಂಬೆ ಹಣ್ಣಿನ ರಸವನ್ನು ಬೌಲ್‌ನ ಒಳಭಾಗಕ್ಕೆ ಸಿಂಪಡಿಸಿ ನಂತರ ನೀರು ಫ್ಲಶ್ ಮಾಡಿ. ಇದು ಶೌಚಾಲಯದ ದುರ್ವಾಸನೆಯನ್ನು ಹೋಗಲಾಡಿಸಿ ಇಡೀ ಬಾತ್‌ರೂಮ್ ಸಾಕಷ್ಟು ಫ್ರೆಶ್ ಆಗಿರುವಂತೆ ಮಾಡುತ್ತದೆ.

ಹೀಗೆ ದಿನವೊಂದಕ್ಕೆ ಕೇವಲ ಐದೇ ಐದು ನಿಮಿಷದ ಶ್ರಮ ಹಾಗೂ 5 ರೂಪಾಯಿಗಳ ಖರ್ಚಿನಲ್ಲಿ ನಿಮ್ಮ ಶೌಚಾಲಯವನ್ನು ರಾಸಾಯನಿಕಗಳಿಲ್ಲದೆ ಸ್ವಚ್ಛವಾಗಿಟ್ಟುಕೊಳ್ಳಬಹುದು. ಈ ಸ್ಮಾರ್ಟ್ ಜೀವನಶೈಲಿಯ ಸಲಹೆಯನ್ನು ಇಂದೇ ಪಾಲಿಸಿ ಮತ್ತು ನಿಮ್ಮ ಮನೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ!