ನಿಮ್ಮ ಮನೆಯ ಫ್ರಿಡ್ಜ್ನ ರಬ್ಬರ್ ಕೂಡ ಕಪ್ಪಾಗಿದ್ದರೆ ಅದನ್ನು ಸ್ವಚ್ಛಗೊಳಿಸಲು ದುಬಾರಿ ಕ್ಲೀನರ್ಗಳನ್ನು ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ ಅಡುಗೆ ಸೋಡಾ ಸೇರಿದಂತೆ ಕೆಲವು ಸಾಮಾನ್ಯ ವಸ್ತುಗಳನ್ನು ಬಳಸಿ ರಬ್ಬರ್ ಸೀಲ್ ಸ್ವಚ್ಛಗೊಳಿಸಬಹುದು.

ಫ್ರಿಡ್ಜ್ ಬಾಗಿಲು ಮುಚ್ಚಿದಾಗ ಒಳಗಿನ ತಂಪಾದ ಗಾಳಿ ಹೊರಗೆ ಹೋಗದಂತೆ ತಡೆಯಲು ಬಾಗಿಲಿನ ಅಂಚಿನಲ್ಲಿರುವ ರಬ್ಬರ್ ಸೀಲ್ ಪ್ರಮುಖ ಪಾತ್ರ ವಹಿಸುತ್ತದೆ. ಫ್ರಿಡ್ಜ್ನೊಳಗಿನ ತಂಪಾದ ಗಾಳಿಯನ್ನು ಹಾಗೆಯೇ ಉಳಿಸುವುದರ ಜೊತೆಗೆ ಹೊರಗಿನ ಬಿಸಿ ಗಾಳಿ ಒಳಗೆ ಪ್ರವೇಶಿಸದಂತೆ ಇದು ತಡೆಯುತ್ತದೆ. ಆದರೆ ನಿರಂತರ ಬಳಕೆ ಹಾಗೂ ತೇವಾಂಶದ ಕಾರಣದಿಂದ ಈ ರಬ್ಬರ್ ಮೇಲೆ ಧೂಳು, ಆಹಾರದ ಸಣ್ಣ ಕಣಗಳು ಮತ್ತು ಕೊಳೆ ಸಂಗ್ರಹವಾಗುತ್ತವೆ. ಕಾಲ ಕಳೆದಂತೆ ರಬ್ಬರ್ ಮೇಲೆ ಕಪ್ಪು ಕಲೆಗಳು, ಫಂಗಸ್ ಮತ್ತು ಕೊಳೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಅದನ್ನು ಸ್ವಚ್ಛಗೊಳಿಸಲು ಕೆಲ ಟಿಪ್ಸ್‌ ಫಾಲೋ ಮಾಡ್ಬಹುದು.

ಫ್ರಿಡ್ಜ್ನ ರಬ್ಬರ್ ಸ್ವಚ್ಛಗೊಳಿಸುವ ಸುಲಭ ವಿಧಾನ

ಮೊದಲಿಗೆ ಒಂದು ಬಟ್ಟಲಿನಲ್ಲಿ ಸುಮಾರು 2 ಕಪ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ 2 ದೊಡ್ಡ ಚಮಚ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಫ್ರಿಡ್ಜ್ನ ರಬ್ಬರ್ ಬಹಳ ದಿನಗಳಿಂದ ಸ್ವಚ್ಛಗೊಳಿಸದೆ ಇದ್ದರೆ ಅಥವಾ ಅದರ ಮೇಲೆ ಎಣ್ಣೆಯ ಜಿಡ್ಡು ಮತ್ತು ಹೆಚ್ಚು ಕೊಳೆ ಸಂಗ್ರಹವಾಗಿದ್ದರೆ ಈ ಮಿಶ್ರಣಕ್ಕೆ ಕೆಲವು ಹನಿ ಡಿಶ್ವಾಶ್ ಲಿಕ್ವಿಡ್ ಕೂಡ ಸೇರಿಸಬಹುದು. ಈಗ ಮೃದುವಾದ ಬ್ರಿಸಲ್ ಇರುವ ಹಳೆಯ ಟೂತ್ಬ್ರಷ್ ತೆಗೆದುಕೊಂಡು ಅದನ್ನು ಈ ಮಿಶ್ರಣದಲ್ಲಿ ಅದ್ದಿ. ಬಳಿಕ ಫ್ರಿಡ್ಜ್ ಬಾಗಿಲಿನ ಅಂಚಿನಲ್ಲಿರುವ ರಬ್ಬರ್ ಅನ್ನು ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ. ರಬ್ಬರ್ನ ಒಳಭಾಗದಲ್ಲಿರುವ ಸಣ್ಣ ಸಣ್ಣ ಮಡಿಕೆಗಳು ಮತ್ತು ಮೂಲೆಗಳ ಕಡೆಗೆ ಹೆಚ್ಚು ಗಮನ ಕೊಡಿ. ಬ್ರಷ್ನಿಂದ ಸ್ವಚ್ಛಗೊಳಿಸುವಾಗ ಆಗಾಗ ಅದನ್ನು ನೀರಿನಲ್ಲಿ ತೊಳೆಯುತ್ತಿರಿ. ಇದರಿಂದ ಹೊರಬಂದ ಕೊಳೆ ಮತ್ತೆ ರಬ್ಬರ್ ಮೇಲೆ ಅಂಟಿಕೊಳ್ಳುವುದಿಲ್ಲ. ಸ್ವಚ್ಛಗೊಳಿಸುವಾಗ ಹೆಚ್ಚು ಬಲ ಪ್ರಯೋಗಿಸುವ ಅಗತ್ಯವಿಲ್ಲ.

ಕೊನೆಯಲ್ಲಿ ಈ ರೀತಿ ಸ್ವಚ್ಛಗೊಳಿಸಿ

ರಬ್ಬರ್ ಅನ್ನು ಬ್ರಷ್ನಿಂದ ಸ್ವಚ್ಛಗೊಳಿಸಿದ ಬಳಿಕ ಒಂದು ಸ್ವಚ್ಛವಾದ ಮೈಕ್ರೋಫೈಬರ್ ಬಟ್ಟೆಯನ್ನು ತೆಗೆದುಕೊಳ್ಳಿ. ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ತೇವಗೊಳಿಸಿ, ಚೆನ್ನಾಗಿ ಹಿಂಡಿ. ಬಳಿಕ ರಬ್ಬರ್ ಮೇಲಿರುವ ಅಡುಗೆ ಸೋಡಾ ಮತ್ತು ಸೋಪ್ನ ಅಂಶಗಳನ್ನು ಬಟ್ಟೆಯಿಂದ ಒರೆಸಿ ತೆಗೆಯಿರಿ.

ನಂತರ ಒಣ ಮೈಕ್ರೋಫೈಬರ್ ಬಟ್ಟೆಯಿಂದ ರಬ್ಬರ್ ಅನ್ನು ಸಂಪೂರ್ಣವಾಗಿ ಒರೆಸಿ ಒಣಗಿಸಿ. ರಬ್ಬರ್ ಮೇಲೆ ತೇವಾಂಶ ಉಳಿಯದಂತೆ ನೋಡಿಕೊಳ್ಳುವುದು ಮುಖ್ಯ. ಏಕೆಂದರೆ ನಿರಂತರವಾಗಿ ತೇವಾಂಶ ಉಳಿದರೆ ಮತ್ತೆ ಫಂಗಸ್ ಮತ್ತು ದುರ್ವಾಸನೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಫ್ರಿಡ್ಜ್ನ ಫ್ರೀಜರ್ ಬಾಗಿಲಿನ ರಬ್ಬರ್ ಸೀಲ್ ಅನ್ನು ಕೂಡ ಇದೇ ವಿಧಾನದಲ್ಲಿ ಸ್ವಚ್ಛಗೊಳಿಸಬಹುದು. ಪ್ರತ್ಯೇಕ ಫ್ರೀಜರ್, ವೈನ್ ಕೂಲರ್ ಮತ್ತು ಐಸ್ ಮೇಕರ್ಗಳ ರಬ್ಬರ್ ಸೀಲ್ಗಳಿಗೂ ಈ ವಿಧಾನವನ್ನು ಬಳಸಬಹುದು.

ಫ್ರಿಜ್‌ ಬಹಳ ದಿನ ಸ್ವಚ್ಛವಾಗಿರಲು ಏನು ಮಾಡಬೇಕು?

ಫ್ರಿಡ್ಜ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಾಗ ಬಾಗಿಲಿನ ರಬ್ಬರ್ ಸೀಲ್ಗೂ ಗಮನ ಕೊಡಬೇಕು. ವಾರಕ್ಕೊಮ್ಮೆ ಉಗುರು ಬೆಚ್ಚಗಿನ ನೀರು ಮತ್ತು ಸ್ವಲ್ಪ ಅಡುಗೆ ಸೋಡಾ ಬಳಸಿ ರಬ್ಬರ್ ಅನ್ನು ನಿಧಾನವಾಗಿ ಒರೆಸುವುದರಿಂದ ಆಹಾರದ ಕಣಗಳು ಮತ್ತು ಕೊಳೆ ಹೆಚ್ಚು ದಿನಗಳ ಕಾಲ ಸಂಗ್ರಹವಾಗುವುದನ್ನು ತಡೆಯಬಹುದು. ಸ್ವಚ್ಛಗೊಳಿಸಿದ ನಂತರ ರಬ್ಬರ್ ಅನ್ನು ಸಂಪೂರ್ಣವಾಗಿ ಒಣಗಿಸಲು ಮರೆಯಬೇಡಿ. ಜೊತೆಗೆ ಆಗಾಗ ರಬ್ಬರ್ ಅನ್ನು ಪರಿಶೀಲಿಸುತ್ತಿರಿ.

ಈ ವಸ್ತುಗಳೂ ಪ್ರಯೋಜನಕಾರಿ

ಅಡುಗೆ ಸೋಡಾ ಮಾತ್ರವಲ್ಲದೆ ಇನ್ನೂ ಕೆಲವು ಸಾಮಾನ್ಯ ವಸ್ತುಗಳು ಫ್ರಿಡ್ಜ್ನ ರಬ್ಬರ್ ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ.

•ಡಿಶ್ವಾಶ್ ಲಿಕ್ವಿಡ್: ರಬ್ಬರ್ ಮೇಲೆ ಸಂಗ್ರಹವಾಗಿರುವ ಎಣ್ಣೆಯ ಜಿಡ್ಡನ್ನು ತೆಗೆಯಲು ಉಪಯುಕ್ತವಾಗಿದೆ.

•ಹೈಡ್ರೋಜನ್ ಪೆರಾಕ್ಸೈಡ್: ರಬ್ಬರ್ ಮೇಲೆ ಫಂಗಸ್ ಕಾಣಿಸಿಕೊಂಡಿದ್ದರೆ ಕೆಲವು ಸಂದರ್ಭಗಳಲ್ಲಿ ಇದನ್ನು ಬಳಸಲಾಗುತ್ತದೆ. ಬಳಸುವ ಮೊದಲು ಫ್ರಿಡ್ಜ್ ತಯಾರಕರ ಸೂಚನೆಗಳನ್ನು ಪರಿಶೀಲಿಸಿ. ನಂತರ ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಒರೆಸಿ ಸಂಪೂರ್ಣವಾಗಿ ಒಣಗಿಸಬೇಕು.

•ಬಿಳಿ ವಿನೆಗರ್: ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಸ್ವಚ್ಛತೆಗೆ ಬಳಸಬಹುದು. ಆದರೆ ಇದನ್ನು ರಬ್ಬರ್ ಮೇಲೆ ಹೆಚ್ಚು ಸಮಯ ಬಿಡಬಾರದು. ಸ್ವಚ್ಛಗೊಳಿಸಿದ ಬಳಿಕ ಚೆನ್ನಾಗಿ ಒರೆಸಬೇಕು.

ಈ ವಸ್ತುಗಳಿಂದ ರಬ್ಬರ್ ಸ್ವಚ್ಛಗೊಳಿಸಬೇಡಿ

ಫ್ರಿಡ್ಜ್ನ ರಬ್ಬರ್ ಸ್ವಚ್ಛಗೊಳಿಸುವಾಗ ಕ್ಲೋರಿನ್ ಬ್ಲೀಚ್ ಅಥವಾ ಅಮೋನಿಯಾ ಇರುವ ಪ್ರಬಲ ಕ್ಲೀನರ್ಗಳನ್ನು ಬಳಸಬಾರದು. ಇವು ರಬ್ಬರ್ ಅನ್ನು ಒಣಗಿಸಿ ದುರ್ಬಲಗೊಳಿಸಬಹುದು. ಇದರಿಂದ ಕಾಲಕ್ರಮೇಣ ರಬ್ಬರ್ನಲ್ಲಿ ಬಿರುಕುಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.