Ridge Gourd Food ತೆಂಗಿನಕಾಯಿ ಮತ್ತು ಕಡಲೆಬೀಜ ಬಳಸದೆ ಅತ್ಯಂತ ಸರಳವಾಗಿ ಹೀರೆಕಾಯಿ ಪಲ್ಯ ಮಾಡುವ ವಿಧಾನವಿದು. ಇದು ಚಪಾತಿ, ದೋಸೆ, ರೊಟ್ಟಿಹಾಗೂ ಅನ್ನಕ್ಕೆ ಅತ್ಯುತ್ತಮ ಕಾಂಬಿನೇಷನ್ ಆಗಿದೆ.

ಚಪಾತಿ ಮಾಡುತ್ತಿದ್ರೆ ಅದಕ್ಕೆ ಪಲ್ಯ ಏನು ಮಾಡಬೇಕೆಂದು ಗೃಹಿಣಿಯರು ಯೋಚಿಸುತ್ತಿರುತ್ತಾರೆ. ಇಂದು ನಾವು ನಿಮಗೆ ಹೀರೆಕಾಯಿ ಬಳಸಿ ರುಚಿಯಾದ ಪಲ್ಯ ಮಾಡೋದು ಹೇಗೆ ಎಂದು ಹೇಳುತ್ತಿದ್ದೇವೆ. ತೆಂಗಿನಕಾಯಿ, ಕಡಲೆಬೀಜ ಸೇರಿಸದೇ ತುಂಬಾನೇ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ಹೀರೆಕಾಯಿ ಪಲ್ಯವನ್ನು ಮಾಡಬಹುದು. ಈ ರೀತಿಯ ಪಲ್ಯ ಬಿಸಿಬಿಸಿಯಾದ ದೋಸೆ, ಚಪಾತಿ, ರೊಟ್ಟು ಮತ್ತು ಅನ್ನಕ್ಕೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಹೀರೆಕಾಯಿ ಪಲ್ಯ ಮಾಡೋದು ಹೇಗೆ ಮತ್ತು ಬೇಕಾಗುವ ಸಾಮಾಗ್ರಿಗಳು ಏನು ಎಂದು ನೋಡೋಣ ಬನ್ನಿ.

ಹೀರೆಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಾಗ್ರಿಗಳು

ಹೀರೆಕಾಯಿ: 250 ಗ್ರಾಂ

ಈರುಳ್ಳಿ: ಮಧ್ಯಮ ಗಾತ್ರದ್ದು ಒಂದು

ಟೊಮೆಟೋ: 2

ಅಚ್ಚಖಾರದ ಪುಡಿ: 1 ಟೀ ಸ್ಪೂನ್

ಅಡುಗೆಎಣ್ಣೆ: 3-4 ಟೀ ಸ್ಪೂನ್

ಕಡಲೆಬೇಳೆ: 2 ಟೀ ಸ್ಪೂನ್

ಸಾಸವೆ-ಜೀರಿಗೆ: ಅರ್ಧ ಟೀ ಸ್ಪೂನ್

ಅರಿಶಿನ: ಚಿಟಿಕೆ

ಉಪ್ಪು: ರುಚಿಗೆ ತಕ್ಕಷ್ಟು

ಕೋತಂಬರಿ ಸೊಪ್ಪು

ಹೀರೆಕಾಯಿ ಪಲ್ಯ ಮಾಡುವ ವಿಧಾನ

ಮೊದಲಿಗೆ ಕಡಲೆಬೇಳೆಯನ್ನು ಬಿಸಿನೀರಿನಲ್ಲಿ ಹಾಕಿ ಎತ್ತಿಟ್ಟುಕೊಳ್ಳಿ. ನಂತರ ಹೀರೆಕಾಯಿಯ ಮೇಲ್ಭಾಗದ ಒರಟು ಭಾಗವನ್ನು ತೆಗೆದುಕೊಂಡು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ನಂತರ ಮಧ್ಯಮ ಗಾತ್ರದಲ್ಲಿ ಈರುಳ್ಳಿ, ಟೊಮೆಟೋ, ಕೋತಂಬರಿಯನ್ನು ಸಹ ಸಣ್ಣದಾಗಿ ಕೊಚ್ಚಿಕೊಳ್ಳಬೇಕು. (ಕಡಲೆಬೇಳೆ ಕನಿಷ್ಠ 10 ರಿಂದ 15 ನಿಮಿಷ ನೆನೆಸಿಟ್ಟುಕೊಳ್ಳೋದನ್ನು ಮರೆಯಬೇಡಿ)

ಈಗ ಒಲೆ ಆನ್ ಮಾಡ್ಕೊಂಡು ಬಾಣಲೆ/ಪಾತ್ರೆಯನ್ನಿಟ್ಟುಕೊಳ್ಳಿ. ಪಾತ್ರೆ ಬಿಸಿಯಾಗುತ್ತಿದ್ದಂತೆ ಅಡುಗೆಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸಿವೆ ಹಾಕಿಕೊಳ್ಳಿ. ಸಾಸಿವೆ ಸಿಡಿಯುತ್ತಿದ್ದಂತೆ ಜೀರಿಗೆ, ನೆನೆಸಿಕೊಂಡಿರುವ ಕಡಲೆಬೇಳೆ, ಈರುಳ್ಳಿ ಹಾಕಿಕೊಳ್ಳಬೇಕು. ಈರುಳ್ಳಿಯ ಹಸಿ ವಾಸನೆ ಹೋಗುತ್ತಿದ್ದಂತೆ ಟೊಮೆಟೋ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಟೊಮೆಟೋ ಸಾಫ್ಟ್ ಆಗುತ್ತಿದ್ದಂತೆ ಅಚ್ಚಖಾರದ ಪುಡಿ, ಅರಿಶಿನ, ಉಪ್ಪು ಸೇರಿಸಿಕೊಳ್ಳಬೇಕು. ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಈ ಮಸಾಲೆಯನ್ನು ಬೇಯಿಸಿಕೊಳ್ಳಬೇಕು. ಮಸಾಲೆಯ ಸುತ್ತಲೂ ಎಣ್ಣೆಯಂಶ ಬರುತ್ತಿದ್ದಂತೆ ಕತ್ತರಿಸಿಕೊಂಡಿರುವ ಹೀರೆಕಾಯಿ ಸೇರಿಸಿಕೊಂಡು ಮಿಕ್ಸ್ ಮಾಡಿಕೊಂಡು 4 ರಿಂದ 5 ನಿಮಿಷ ಬೇಯಿಸಿಕೊಂಡ್ರೆ ರುಚಿಯಾದ ಪಲ್ಯ ಸೇವಿಸಲು ಸಿದ್ಧವಾಗುತ್ತದೆ. ಅಂತಿಮವಾಗಿ ಕೋತಂಬರಿ ಸೊಪ್ಪು ಸೇರಿಸಿಕೊಳ್ಳಿ.

ಇದನ್ನೂ ಓದಿ: ಇಡ್ಲಿ-ದೋಸೆ ಎರಡಕ್ಕೂ ಒಂದೇ ಹಿಟ್ಟು ರುಬ್ಬಿಕೊಳ್ಳೋದು ಹೇಗೆ? 2 In 1 ಟಿಪ್ಸ್ ಇಲ್ಲಿದೆ