Shivamogga News: ಸಾಗರದ ಮಾರಿಜಾತ್ರೆ ಮಧ್ಯೆ ಮಗು ಚಿಕಿತ್ಸೆಗೆ ಝೀರೋ ಟ್ರಾಫಿಕ್!
- ಸಾಗರ ಮಾರಿಜಾತ್ರೆ ಮಧ್ಯೆ ಮಗು ಚಿಕಿತ್ಸೆಗೆ ಝೀರೋ ಟ್ರಾಫಿಕ್
- ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಿರಸಿ ದಂಪತಿಯ ಎರಡು ವರ್ಷದ ಮಗು
- ಎಲ್‌ಬಿ ಕಾಲೇಜಿನಿಂದ ತ್ಯಾಗರ್ತಿ ತಿರುವಿನ ತನಕ 10 ಕಿಮೀ ದೂರಕ್ಕೆ ಶೂನ್ಯ ಟ್ರಾಫಿಕ್ ವ್ಯವಸ್ಥೆ
- ಹೈವೇ ಪ್ಯಾಟ್ರೋಲ್ ಪೊಲೀಸರಿಗೆ ಖಾಸಗಿ ಆಂಬ್ಯುಲೆನ್ಸ್ ಸಹಕಾರ
- ಜಾತ್ರೆ ಜಂಜಾಟದಲ್ಲೂ ಹೈವೇ ಪ್ಯಾಟ್ರೋಲ್ ಪೊಲೀಸರ ಕಾಳಜಿಗೆ ಸಾರ್ವಜನಿಕರಿಂದ ಶ್ಲಾಘನೆ
ಸಾಗರ (ಫೆ.13) : ಪಟ್ಟಣದಲ್ಲಿ ನಡೆಯುತ್ತಿರುವ ಮಾರಿಕಾಂಬಾ ದೇವಿ ಜಾತ್ರೆಯ ಜನರ ಒತ್ತಡದ ನಡುವೆಯೂ ಮಗುವಿನ ಚಿಕಿತ್ಸೆಗಾಗಿ ತೆರಳುತ್ತಿದ್ದ ಆಂಬ್ಯುಲೆನ್ಸ್‌ಗೆ ಶೂನ್ಯ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿಕೊಟ್ಟಘಟನೆ ಭಾನುವಾರ ನಡೆದಿದೆ.
ಜಾತ್ರೆ(Maari jatre)ಯಲ್ಲಿ ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಜನಜಂಗುಳಿ ಇರುತ್ತದೆ. ಸಾವಿರಾರು ವಾಹನಗಳು ಹರಿದಾಡುತ್ತಿರುತ್ತವೆ. ಭಾನುವಾರವಂತೂ ಹಗಲಿನಲ್ಲಿಯೇ ಹೆಚ್ಚಿನ ಜನಜಂಗುಳಿ ಇತ್ತು. ಆದರೂ ಶಿರಸಿಯಿಂದ ಶಿವಮೊಗ್ಗಕ್ಕೆ ಚಿಕಿತ್ಸೆಗಾಗಿ ಮಗುವನ್ನು ಕರೆದೊಯ್ಯುವ ಸಲುವಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೂನ್ಯಟ್ರಾಫಿಕ್(zero traffic)ನಲ್ಲಿ ಆಂಬ್ಯುಲೆನ್ಸ್(Ambulance) ತೆರಳಲು ಅನುವು ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.
ಅದ್ಧೂರಿಯಾಗಿ ನೆರವೇರಿದ ಭಟ್ಕಳದ ಅಳ್ವೆಕೋಡಿ ಮಾರಿಜಾತ್ರೆ: ಬೇಡಿದ್ದನ್ನು ಕರುಣಿಸುವ ತಾಯಿ
ಶಿರಸಿ ಮೂಲದ ದಂಪತಿಯ ಎರಡು ವರ್ಷದ ಮಗುವಿನ ಮೆದುಳು ಸಂಬಂಧಿ ಕಾಯಿಲೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆ(Shivamogga hospital)ಗೆ ಝೀರೋ ಟ್ರಾಫಿಕ್ ಮಾಡಿಕೊಂಡು, ಸಾಗರದ ರಾಷ್ಟ್ರೀಯ ಹೆದ್ದಾರಿ ಮೂಲಕ ಭಾನುವಾರ ಮಧ್ಯಾಹ್ನ ಆಂಬ್ಯುಲೆನ್ಸ್ ಹೊರಟಿತ್ತು. ಪಟ್ಟಣದ ಹೊರವಲಯದ ಎಲ್.ಬಿ. ಕಾಲೇಜಿನಿಂದ ತ್ಯಾಗರ್ತಿ ತಿರುವಿನ ತನಕ 10 ಕಿಮೀ ದೂರಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ಮಗುವನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಸಾಗರ ಉಪ ವಿಭಾಗದ ಹೈವೇ ಪ್ಯಾಟ್ರೊಲ್ ಪೊಲೀಸ್ ವಾಹನ ಯಶಸ್ವಿಯಾಗಿ ಮಾಡಿಕೊಟ್ಟಿತು.
ಹೈವೇ ಪ್ಯಾಟ್ರೋಲ್ ಪೊಲೀಸರಿಗೆ ಖಾಸಗಿ ಆಂಬ್ಯುಲೆನ್ಸ್ ಸಹಕಾರ ನೀಡಿತ್ತು. ಹೈವೇ ಪ್ಯಾಟ್ರೋಲ್ ವಾಹನದ ಚಾಲಕ ಸಂದೀಪ್, ಎಎಸ್‌ಐ ಶ್ರೀನಿವಾಸ್, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹಾಗೂ ಖಾಸಗಿ ಆಂಬ್ಯುಲೆನ್ಸ್ ಚಾಲಕರಾದ ಇಮ್ರಾನ್, ಫಯಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜಾತ್ರೆಯ ಸಮಯದಲ್ಲೂ ಚಿಕಿತ್ಸೆಗೆ ಅಗತ್ಯ ಸಹಕಾರ ಕೊಟ್ಟಪೊಲೀಸರ ಕೆಲಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.