Asianet Suvarna News Asianet Suvarna News

ಗೃಹಲಕ್ಷ್ಮೀ ಜಾರಿಯಾಗುತ್ತಿದ್ದಂತೆ ಮಹಿಳಾ ಪ್ರಯಾಣಿಕರ ಸಂಖ್ಯೆ ಕುಸಿತ!

ಇತ್ತ ಪ್ರತಿ ತಿಂಗಳು 2000 ವರದಾನವಾಗುವ ‘ಗೃಹಲಕ್ಷ್ಮೇ’ ಯೋಜನೆ ಹಾಗೂ ಸುರಿಯುವ ಮಳೆ ಪರಿಣಾಮದಿಂದಾಗಿ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯ ಶಕ್ತಿ ಕ್ಷೀಣಿಸಿದೆ. ದಿನೇ ದಿನೇ ಮಹಿಳಾ ಮಣಿಗಳ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಏಳು ದಿನದಲ್ಲಿ ಬರೋಬ್ಬರಿ 13 ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ.

women tours break after gruhalakshmi scheme implimentation at dharwad rav
Author
First Published Jul 27, 2023, 10:49 AM IST | Last Updated Jul 27, 2023, 10:49 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ (ಜು.27) :  ಇತ್ತ ಪ್ರತಿ ತಿಂಗಳು 2000 ವರದಾನವಾಗುವ ‘ಗೃಹಲಕ್ಷ್ಮೇ’ ಯೋಜನೆ ಹಾಗೂ ಸುರಿಯುವ ಮಳೆ ಪರಿಣಾಮದಿಂದಾಗಿ ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯ ಶಕ್ತಿ ಕ್ಷೀಣಿಸಿದೆ. ದಿನೇ ದಿನೇ ಮಹಿಳಾ ಮಣಿಗಳ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಏಳು ದಿನದಲ್ಲಿ ಬರೋಬ್ಬರಿ 13 ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ.

ಜೂ. 11ರಿಂದ ಶಕ್ತಿ ಯೋಜನೆ ಜಾರಿಯಾಗಿದೆ. ಪ್ರಾರಂಭದಲ್ಲಿ ಅಂದರೆ ಗೃಹಲಕ್ಷ್ಮೇ ಯೋಜನೆ ಜಾರಿಯಾಗುವ ದಿನದ ವರೆಗೂ ಎಲ್ಲ ಬಸ್‌ಗಳು ತುಂಬಿರುತ್ತಿದ್ದವು. ನಿರ್ವಾಹಕರು, ಚಾಲಕರಿಗಂತೂ ಸಾಕು ಸಾಕೆನಿಸಿತ್ತು. ಯಾಕಪ್ಪ ಈ ಶಕ್ತಿ ಯೋಜನೆ ಪ್ರಾರಂಭ ಮಾಡಿದರೊ ಎಂಬ ಸಿಟ್ಟಿನ ಮಾತು ಚಾಲಕರು, ನಿರ್ವಾಹಕರು ಸೇರಿದಂತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯಿಂದ ಕೇಳಿ ಬರುತ್ತಿತ್ತು. ಅತ್ತ ಧರ್ಮಸ್ಥಳ, ಹೊನ್ನಾವರ, ಕೊಲ್ಲೂರು, ಉಡುಪಿ ಸೇರಿದಂತೆ ಎಲ್ಲ ತೀರ್ಥ ಕ್ಷೇತ್ರಗಳು ಮಹಿಳಾ ಮಣಿಗಳಿಂದ ತುಂಬಿ ತುಳುಕುತ್ತಿದ್ದವು.

 

ಶಕ್ತಿ ಯೋಜನೆ ಎಫೆಕ್ಟ್, ಬಸ್‌ ದರ ಏರಿಕೆ ಮಾಡಿ ಕೆಎಸ್‌ ಆರ್‌ಟಿಸಿ ಆದೇಶ

ಜೂ. 11ರಿಂದ ಜೂ.30ರ ವರೆಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬರೋಬ್ಬರಿ .65 ಕೋಟಿ ಮೌಲ್ಯದ ಟಿಕೆಟ್‌ ಖರ್ಚಾಗಿದ್ದವು. 2.55 ಕೋಟಿ ಜನ ಮಹಿಳೆಯರು ಪ್ರಯಾಣಿಸಿದ್ದರು. ಅಲ್ಲಿಂದ ನಿರಂತರವಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿತ್ತು.

13 ಲಕ್ಷ ಇಳಿಕೆ:

ಈಗ ಅಂದರೆ ಗೃಹಲಕ್ಷ್ಮೇ ಯೋಜನೆ ಜಾರಿಯಾದ ಬಳಿಕ ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ಗೃಹಲಕ್ಷ್ಮೇ ಯೋಜನೆ ಜಾರಿಯಾಗುವ ಮೊದಲಿನ ಒಂದು ವಾರ ಎಂದರೆ ಏಳು ದಿನದ್ದು ಹಾಗೂ ನಂತರದ ಏಳು ದಿನದ ಲೆಕ್ಕ ಹಾಕಿದರೆ ಬರೋಬ್ಬರಿ 13 ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.

ಜು. 19ಕ್ಕೆ ಗೃಹಲಕ್ಷ್ಮೇ ಯೋಜನೆ ಜಾರಿಯಾಗಿದೆ. ಅದಕ್ಕಿಂತ ಮುಂಚಿನ ಏಳು ದಿನ ಎಂದರೆ ಜು. 12ರಿಂದ 18ರ ವರೆಗೆ ಲೆಕ್ಕ ಹಾಕಿದರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳ 9 ಘಟಕಗಳಲ್ಲಿ ಒಟ್ಟು 10930282 (1.09 ಕೋಟಿ) ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದರು. ಆಗ ಮಹಿಳಾ ಟಿಕೆಟ್‌ ಮೌಲ್ಯ .27.63 ಕೋಟಿ ಆಗಿತ್ತು.

ಗೃಹಲಕ್ಷ್ಮೇ ಜಾರಿಯಾದ ದಿನ ಅಂದರೆ ಜು. 19ರಿಂದ ಜು.25ರ ವರೆಗೆ ಏಳು ದಿನದ ಲೆಕ್ಕಹಾಕಿದರೆ 95.71 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅಂದರೆ ಒಂದು ವಾರದ ಲೆಕ್ಕ ಹಾಕಿದರೆ 13.58 ಲಕ್ಷ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಇನ್ನು ಟಿಕೆಟ್‌ ಮೌಲ್ಯ ಒಂದು ವಾರಕ್ಕೆ .22.79 ಕೋಟಿ ಆಗಿದೆ. ಅಂದರೆ .4.83 ಕೋಟಿ ಕಡಿಮೆಯಾಗಿರುವುದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಂಕಿ ಸಂಖ್ಯೆಯಿಂದ ಗೊತ್ತಾಗುತ್ತದೆ.

ಭಾನುವಾರದ್ದನ್ನು ಲೆಕ್ಕ ಹಾಕಿದರೆ ಜು. 16ರಂದು 16.88 ಲಕ್ಷ ಜನ ಮಹಿಳೆಯರು ಪ್ರಯಾಣಿಸಿದ್ದರು. ಅದೇ ಜು. 23ರಂದು 12.85 ಲಕ್ಷ ಮಹಿಳೆಯರು ಮಾತ್ರ ಪ್ರಯಾಣಿಸಿದ್ದಾರೆ.

ಯಾಕೆ ಕಡಿಮೆ?:

ಅತ್ತ ಪ್ರತಿ ತಿಂಗಳು .2 ಸಾವಿರ ಕೊಡುವ ಗೃಹಲಕ್ಷ್ಮೇ ಯೋಜನೆ ಅರ್ಜಿ ಗುಜರಾಯಿಸಬೇಕು. ಅದಕ್ಕೆ ಪಡಿತರ, ಆಧಾರ್‌ ಕಾರ್ಡ್‌, ಹೆಬ್ಬಟ್ಟಿನ ಗುರುತು ಎಲ್ಲವೂ ಬೇಕಾಗುತ್ತದೆ. ಮಹಿಳಾ ಮಣಿಗಳೆಲ್ಲ ಅತ್ತ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಯಾರು ಉಚಿತ ಪ್ರಯಾಣವಿದೆ ಎಂದು ಪ್ರಯಾಣಿಸಲು ಹೋಗುತ್ತಿಲ್ಲ. ಜತೆಗೆ ಮಳೆಯೂ ಶುರುವಾಗಿದೆ. ಇದರಿಂದ ಸಹಜವಾಗಿ ಕೃಷಿ ಚಟುವಟಿಕೆ ಪ್ರಾರಂಭವಾಗಿವೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಲು ಕಾರಣ ಎಂದು ಇಲಾಖೆಯ ಮೂಲಗಳು ಅಂದಾಜಿಸಿವೆ.

Bengaluru: ಟಿಕೆಟ್‌ ವಿಚಾರಕ್ಕೆ ಗಲಾಟೆ, ಪ್ರಯಾಣಿಕ-ಕಂಡಕ್ಟರ್‌ ನಡುವೆ ಬಸ್‌ನಲ್ಲೇ ಫೈಟ್‌!

 

ಮಳೆ ಸುರಿಯುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಮಹಿಳೆಯರು ನಿರತರಾಗಿದ್ದಾರೆ. ನದಿ ಪಾತ್ರದ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಹದಿಂದಾಗಿ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದೆ. ಜತೆಗೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕುವಲ್ಲಿ ಬಹಳಷ್ಟುಮಹಿಳೆಯರು ಬ್ಯುಜಿ ಆಗಿದ್ದಾರೆ. ಇದು ಕೂಡ ಸದ್ಯಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಲು ಕಾರಣವೆನ್ನಬಹುದು.

ಎಚ್‌. ರಾಮನಗೌಡರ, ಸಾರ್ವಜನಿಕ ಸಂಪರ್ಕಾಧಿಕಾರಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

Latest Videos
Follow Us:
Download App:
  • android
  • ios