ಬೆಳಗಾವಿಯಲ್ಲಿ ಪರೀಕ್ಷೆಗೂ ಮುನ್ನವೇ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿ ಭೂಮಿಕಾ ಮಾಳಂಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಬೆಳಗಾವಿ (ಫೆ.28):ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಗೂ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿರುವ ದುರದೃಷ್ಟಕರ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು 17 ವರ್ಷದ ಭೂಮಿಕಾ ಮಾಳಂಗಿ ಎಂದು ಗುರುತಿಸಲಾಗಿದೆ. ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಇದ್ದ ಕಾರಣ, ಭೂಮಿಕಾ ಬೆಳಗ್ಗೆಯಿಂದಲೇ ಪರೀಕ್ಷೆಗೆ ಉತ್ಸಾಹದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು.
ಸ್ನಾನ ಮುಗಿಸಿ ಮನೆಯಿಂದ ಹೊರಬರುತ್ತಿದ್ದ ಸನ್ನಿವೇಶದಲ್ಲಿ ಆಕೆಗೆ ದಿಢೀರ್ ಆಗಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಆತಂಕಗೊಂಡ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಭೂಮಿಕಾ ಕೊನೆಯುಸಿರೆಳೆದಿದ್ದಾಳೆ.
ಶೈಕ್ಷಣಿಕ ಜೀವನದ ಪ್ರಮುಖ ಪರೀಕ್ಷೆಯನ್ನು ಎದುರಿಸಬೇಕಿದ್ದ ವಿದ್ಯಾರ್ಥಿನಿ, ವಿಧಿಯಾಟಕ್ಕೆ ಬಲಿಯಾಗಿ ಜೀವನದ ಪರೀಕ್ಷೆಯನ್ನೇ ಮುಗಿಸಿರುವುದು ಪೋಷಕರ ಹಾಗೂ ಗ್ರಾಮಸ್ಥರ ಎದೆಯನ್ನು ಭಾರವಾಗಿಸಿದೆ. ಪರೀಕ್ಷೆಯ ಒತ್ತಡ ಅಥವಾ ಆರೋಗ್ಯದ ಏರುಪೇರು ಈ ಸಾವಿಗೆ ಕಾರಣವೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ತುಂಬು ವಯಸ್ಸಿನ ಮಗಳ ಅನಿರೀಕ್ಷಿತ ಸಾವಿನಿಂದ ಬಂಬಲವಾಡ ಗ್ರಾಮದಲ್ಲಿ ಶೋಕಮಯ ವಾತಾವರಣ ನಿರ್ಮಾಣವಾಗಿದ್ದು, ಪೋಷಕರ ಕ್ರಂದನ ಮುಗಿಲು ಮುಟ್ಟಿದೆ.
ಪರೀಕ್ಷೆಗೆ ಹೆದರಿ ಎಸ್ಸೆಸ್ಸೆಲ್ಸಿ 6 ವಿದ್ಯಾರ್ಥಿಗಳು ಪರಾರಿ
ರಾಣಿಬೆನ್ನೂರು (ಹಾವೇರಿ): ಪರೀಕ್ಷೆಗೆ ಹೆದರಿ 6 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರಾರಿಯಾದ ಘಟನೆ ಶುಕ್ರವಾರ ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಜರುಗಿದೆ. ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆಗಳು ಪ್ರಾರಂಭವಾಗಿದ್ದವು. ಆದರೆ ಪರೀಕ್ಷೆಗೆ ಹೆದರಿ ಶಾಲೆಯ ಆರು ವಿದ್ಯಾರ್ಥಿಗಳು ಶುಕ್ರವಾರ ಬೆಳಗ್ಗೆ ವಸತಿ ಶಾಲೆ ಕಾಂಪೌಂಡ್ ಹಾರಿ ಪರಾರಿಯಾಗಿದ್ದರು. ಹುಡುಕಾಟ ನಡೆಸಿದಾಗ ಅವರೆಲ್ಲಾ ಶಿಗ್ಗಾಂವಿ ತಾಲೂಕು ಶಿಶುವಿನಹಾಳ ಗ್ರಾಮದ ಬಳಿ ಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳು ಪತ್ತೆ ಆಗಿರುವ ಕುರಿತು ಅವರ ಪೋಷಕರಿಗೆ ಮಾಹಿತಿ ನೀಡಿ ಅವರನ್ನು ಮರಳಿ ವಸತಿ ನಿಲಯಕ್ಕೆ ಕರೆತರಲಾಗಿದೆ.


