ಆಸ್ಪತ್ರೆ ಬಾಗಿಲಲ್ಲೇ ಗರ್ಭದಿಂದ ಜಾರಿದ ಮಗು ಸಾವು : ವೈದ್ಯರ ವಿರುದ್ಧ ಆರೋಪ
- ಆಸ್ಪತ್ರೆ ಬಾಗಿಲಲ್ಲೇ ಗರ್ಭದಿಂದ ಜಾರಿ ಹಸುಗೂಸು
- ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ನಲ್ಲಿ ಘಟನೆ
- ಹೆರಿಗೆ ವಾರ್ಡ್ ಎದುರೇ ಹೆರಿಗೆಯಾಗಿ ಮಗು ಸಾವು
ಮಂಡ್ಯ (ಮೇ.27): ಗರ್ಭಿಣಿಯೊಬ್ಬರಿಗೆ ಆಸ್ಪತ್ರೆ ಬಾಗಿಲಲ್ಲೇ ಗರ್ಭದಿಂದ ಜಾರಿ ಹಸುಗೂಸು ಕೆಳಗೆ ಬಿದ್ದ ಪ್ರಸಂಗ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಂದೆ ಬುಧವಾರ ನಡೆದಿದೆ.
ನೆಲಕ್ಕೆ ಬಿದ್ದ ಮಗು ಅಸುನೀಗಿತ್ತು. ಸೋನು (23) ಎಂಬಾಕೆಗೆ ಹೆರಿಗೆ ವಾರ್ಡ್ ಎದುರೇ ಹೆರಿಗೆಯಾಗಿದೆ. ಮಂಗಳವಾರವೇ ಸೋನು ಹಾಗೂ ಕುಟುಂಬಸ್ಥರು ಮಂಡ್ಯ ಮಿಮ್ಸ್‌ಗೆ ಆಗಮಿಸಿದ್ದರು. ಆ ವೇಳೆ ಸ್ಕ್ಯಾನಿಂಗ್ ನಡೆಸಿದಾಗ ಮಗು ಗರ್ಭದಲ್ಲೇ ಅಸುನೀಗಿರುವುದು ವೈದ್ಯರ ಗಮನಕ್ಕೆ ಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಆದರೆ, ಇದನ್ನು ಧಿಕ್ಕರಿಸಿ ಮನೆಗೆ ತೆರಳಿದ್ದ ಸೋನು ಕುಟುಂಬಸ್ಥರು, ಬುಧವಾರ ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ್ದಾರೆ.
ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಲಸಿಕೆ ಪಡೆದುಕೊಳ್ಳಬಹುದಾ? ...
ಈ ವೇಳೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದು, ಒಂದು ತಾಸಿನೊಳಗೆ ನೆಗೆಟಿವ್ ವರದಿ ಬಂದ ನಂತರ ದಾಖಲು ಮಾಡಿಕೊಳ್ಳಲಾಗಿದೆ. ಈ ವೇಳೆ ವಾರ್ಡ್‌ನಲ್ಲಿದ್ದ ಸೋನು, ತನ್ನ ಮೈಮೇಲಿದ್ದ ಒಡವೆಗಳನ್ನು ಪೋಷಕರಿಗೆ ಕೊಡಲು ವಾರ್ಡ್‌ನಿಂದ ಹೊರಗೆ ಬಂದಾಗ ಬಾಗಿಲಲ್ಲೇ ಹೆರಿಗೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಕೋವಿಡ್ ಪರೀಕ್ಷೆ ನೆಪವೊಡ್ಡಿ ವೈದ್ಯರು ತಡಮಾಡಿದ್ದೆ ಅವಘಡಕ್ಕೆ ಕಾರಣ ಎಂದು ಪೋಷಕರು ದೂರಿದ್ದಾರೆ.