ಹೊಸಕೋಟೆ ಬಳಿ ಆನೆ ಬೈಕ್ ಸವಾರನ ಮೇಲೆ ದಾಳಿಗೆ ಯತ್ನಿಸಿದೆ. ಬೈಕ್ ತಿರುಗಿಸುವಷ್ಟರಲ್ಲೇ ದಾಳಿಗೆ ಮುಂದಾಗಿದೆ. ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೊಡಗು (ಮೇ.18) ಕೊಡಗಿನ ಹಲೆವೆಡೆ ಆನೆ ದಾಳಿ, ತೋಟಕ್ಕೆ ನುಗ್ಗಿ ಅವಾಂತರ ಸೃಷ್ಟಿಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿದೆ. ಆನೆಗಳ ಹಿಂಡುಗಳು ರಾತ್ರಿ ವೇಳೆ ಹೆದ್ದಾರಿ ಮೂಲಕವೇ ಸಾಗುತ್ತಿರುವ ಕೆಲ ಘಟನೆಗಳು ನಡೆದಿದೆ. ಇದೀಗ ಕುಶಾಲನಗರದ ಹೊಸಕೋಟೆ ಬಳಿ ಬೈಕ್ ಸವಾರನ ಮೇಲೆ ಆನೆ ದಾಳಿಗೆ ಯತ್ನಿಸಿದ ಘಟನೆ ನಡೆದಿದೆ. ಬೈಕ್ ಸವಾರ ತಕ್ಷಣವೇ ಎಚ್ಚೆತ್ತುಕೊಂಡು ಬೈಕ್ ತಿರುಗಿಸಿದ್ದಾನೆ. ಆದರೆ ಸ್ಕಿಡ್ ಆಗಿ ಬಿದ್ದ ಕಾರಣ ಆನೆ ಆತನ ಮೇಲೆ ದಾಳಿಗೆ ಯತ್ನಿಸಿದೆ. ಆದರೆ ಅದೃಷ್ಠವಶಾತ್ ಬೈಕ್ ಸವಾರ ಬೈಕ್ ಅಲ್ಲೆ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡ ಘಟನೆ ದೃಶ್ಯಗಳು ಸೆರೆಯಾಗಿದೆ.

ಬಿದ್ದ ಬೈಕ್ ಸವಾರನ ಮೇಲೆ ದಾಳಿಗೆ ಯತ್ನ
ಕುಶಾಲನಗರ ಮಡಿಕೇರಿ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಸವಾರ ಎದುರಿಗೆ ಬರುತ್ತಿದ್ದ ಆನೆ ಕೊನೆ ಕ್ಷಣದಲ್ಲಿ ಗಮನಿಸಿದ್ದಾನೆ. ಅಷ್ಟರೊಳಗೆ ಬೈಕ್ ಆನೆ ಹತ್ತರಕ್ಕೆ ಬಂದಾಗಿದೆ. ಆನೆ ಘೀಳಿಡುತ್ತಾ ಬೈಕ್ ಸವಾರನ ಮೇಲೆ ದಾಳಿಗೆ ಮುಂದಾಗಿದೆ. ಬೈಕ್ ಸವಾರ ಬೈಕ್ ತಿರುಗಿಸಿದ್ದಾನೆ. ಆದರೆ ಗಾಬರಿ ಹಾಗೂ ಭಯದಿಂದ ಬೈಕ್ ಸ್ಕಿಡ್ ಆಗಿದೆ. ರಸ್ತೆಯಲ್ಲಿ ಬಿದ್ದ ಬೈಕ್ ಸವಾರ ಇನ್ನೇನು ಆನೆ ದಾಳಿ ಮಾಡುತ್ತೆ ಅನ್ನೋವಷ್ಟರಲ್ಲೇ ಸ್ಥಳದಿಂದ ಎದ್ದು ಓಡಿದ್ದಾನೆ.
ಇತರ ವಾಹನಗಳ ಮೇಲೆ ದಾಳಿಗೆ ಯತ್ನ
ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪ್ರಾಣ ಉಳಿಸಿಕೊಂಡಿದ್ದಾನೆ. ಬೈಕ್ ಸವಾರ ಹಿಂದಿರುಗಿ ಓಡುತ್ತಿದ್ದಂತೆ ಅದೆ ದಾರಿಯಲ್ಲಿ ಬರುತ್ತಿದ್ದ ಇತರ ಬೈಕ್ ಸವಾರರು ಬೈಕ್ ತಿರುಗಿಸಿದ್ದಾರೆ. ಈ ವೇಳೆ ಮತ್ತಷ್ಟು ವಾಹನಗಳ ಮೇಲೆ ಆನೆ ದಾಳಿಗೆ ಮುಂದಾಗಿದೆ. ಬೈಕ್ ಸವಾರರನ್ನು ಅಟ್ಟಾಡಿಸಿಕೊಂಡು ಓಡಿಸಿದೆ. ಇತ್ತ ಕಾರುಗಳ ಮೇಲೂ ದಾಳಿಗೆ ಮುಂದಾಗಿದೆ. ಹೀಗಾಗಿ ಕಾರುಗಳು ಬಂದ ದಾರಿಯಲ್ಲಿ ರಿವರ್ಸ್ ಮೂಲಕ ಸಾಗಿದೆ.
ಆನೆ ಹಿಂದೆ ಇದ್ದ ವಾಹನದಲ್ಲಿ ದೃಶ್ಯ ಸೆರೆ
ಆನೆ ಹೊಸಕೋಟೆ ಬಳಿ ಹೆದ್ದಾರಿ ಮೂಲಕ ನಡೆದುಕೊಂಡು ಸಾಗುತ್ತಿದ್ದರೆ, ಹಿಂದಿನಿಂದ ಬಂದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಆನೆ ದಾಳಿಗೆ ಯತ್ನ ಸೇರಿದಂತೆ ಭೀಕರ ದೃಶ್ಯಗಳು ಸೆರೆಯಾಗಿದೆ. ಈ ದೃಶ್ಯ ಇದೀಗ ಕುಶಾಲನಗರ ಮಡಿಕೇರಿ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರ ಆತಂಕ ಹೆಚ್ಚಿಸಿದೆ.


