ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಬೆನ್ನಲ್ಲೇ, ಅವರ ಪುತ್ರ ಜಿ.ಡಿ.ಹರೀಶ್‌ಗೌಡರು ಪಕ್ಷದ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿಯವರ ಹೇಳಿಕೆಗಳು, ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಸ್ಪಷ್ಟ ಸೂಚನೆ ನೀಡಿದ್ದು, ಇದು ತಂದೆ-ಮಗನ ನಡುವಿನ ರಾಜಕೀಯ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.

ಮಹೇಂದ್ರ ದೇವನೂರು

ಮೈಸೂರು: ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಈಗ ಮತ್ತೊಮ್ಮೆ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಕ್ಷೇತ್ರದ ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರ ವಿರುದ್ಧ ಸ್ವಪಕ್ಷೀಯರೇ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ, ಅವರ ಪುತ್ರ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲಿ ‘ಜನರೊಂದಿಗೆ ಜನತಾದಳ’ ಆಯೋಜಿಸುವ ಮೂಲಕ ತೊಡೆ ತಟ್ಟಿದ್ದಾರೆ.

ತಂದೆ, ಮಗನ ನಡುವೆ ಮನಸ್ತಾಪ

ಜಿ.ಟಿ.ದೇವೇಗೌಡರು ಜೆಡಿಎಸ್ ಜೊತೆ ಅಂತರ ಕಾಯ್ದುಕೊಂಡು ಸ್ವಲ್ಪಮಟ್ಟಿಗೆ ಸಿದ್ದರಾಮಯ್ಯ ಅವರಿಗೆ ಹತ್ತಿರವಾದಾಗಲೇ ತಂದೆ, ಮಗನ ನಡುವೆ ಮನಸ್ತಾಪ ಆರಂಭವಾಗಿತ್ತು. ಈಗ ತಂದೆಯ ಕ್ಷೇತ್ರದಲ್ಲಿ ಮಗ ಆಯೋಜಿಸಿರುವ ಈ ಸಮಾವೇಶ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಮೊನ್ನೆಯಷ್ಟೇ ಜಿ.ಟಿ.ದೇವೇಗೌಡರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಬಂದಿದ್ದರು. ಇದರ ಬೆನ್ನಲ್ಲೇ ನಡೆದ ಈ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳು ಯಾವುದೇ ಕಾರಣಕ್ಕೂ ಮತ್ತೆ ಜಿ.ಟಿ.ದೇವೇಗೌಡರಿಗೆ ಮಣೆ ಹಾಕುವುದಿಲ್ಲ ಎಂಬ ಸಂದೇಶ ನೀಡಿತು.

ಚಾಮುಂಡೇಶ್ವರಿ ಕ್ಷೇತ್ರ, ವ್ಯಕ್ತಿಯ ಗೆಲುವಲ್ಲ, ಪಕ್ಷದ ಗೆಲುವು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯಿಂದ ಸತತವಾಗಿ ಜೆಡಿಎಸ್‌ ಗೆದ್ದಿದೆ. ಇದು ವ್ಯಕ್ತಿಯ ಗೆಲುವಲ್ಲ, ಪಕ್ಷದ ಗೆಲುವು. ಆದರೆ, ಪಕ್ಷದ ಕಾರ್ಯಕರ್ತರ ಭಾವನೆಗೆ ಅಗೌರವವಾಗಿದೆ. ಇದನ್ನು ಯಾವುದೇ ಒತ್ತಡಕ್ಕೂ ಮಣಿಯದೆ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಅವರ ಮಾತು ಪ್ರತ್ಯಕ್ಷವಾಗಿಯೇ ಜಿ.ಟಿ.ದೇವೇಗೌಡರನ್ನು ಗುರಿಯಾಗಿಸಿಕೊಂಡಿತ್ತು. ಇನ್ನು ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂಬ ಹೇಳಿಕೆಯು ಸ್ವತಃ ಎಚ್‌.ಡಿ.ದೇವೇಗೌಡರು ಹೇಳಿದರೂ ಮಣಿಯುವುದಿಲ್ಲ ಎಂಬುದನ್ನು ಸೂಚಿಸಿತು.

ಈ ಕ್ಷೇತ್ರ ವ್ಯಕ್ತಿಯಿಂದ ಗೆದ್ದಿಲ್ಲ. ಈ ಗೆಲುವು ನಿಮಗೆ ಸೇರಬೇಕು. 2028ರ ಚುನಾವಣೆಯಲ್ಲಿಯೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮ ಆಶೀರ್ವಾದದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ಜಿ.ಡಿ.ಹರೀಶ್‌ ಗೌಡ ಅವರು ಪಕ್ಷ ಸಂಘಟಿಸುತ್ತಿದ್ದಾರೆ. ಸಾ.ರಾ.ಮಹೇಶ್‌ ಮಾರ್ಗದರ್ಶನದಲ್ಲಿ ಗೊಂದಲದ ಅಗತ್ಯವಿಲ್ಲ. ಎಲ್ಲಿ ಏನು ತೀರ್ಮಾನಿಸಬೇಕೆಂದು ನನಗೆ ಗೊತ್ತಿದೆ ಎಂದರು ಕುಮಾರಸ್ವಾಮಿ.

ಜಿ.ಟಿ.ದೇವೇಗೌಡರ ಕಾಲೆಳೆದ ಸಾ.ರಾ.ಮಹೇಶ್

ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ಅವರಿಗೆ ಅಪಾರ ಗೌರವ, ಪ್ರೀತಿ ಇದೆ. ಯಾರು ಇರಲಿ, ಇಲ್ಲದಿರಲಿ ಪಕ್ಷದ ಕಾರ್ಯಕರ್ತರು ಮತದಾರರು ಇದ್ದಾರೆ ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡರ ಕಾಲೆಳೆದರು. ಮುಂದಿನ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಇಂಥವರೇ ನಾಯಕರು ಎಂದು ಹೇಳದಿದ್ದರೂ, ಪಕ್ಷದ ಕಾರ್ಯಕರ್ತರನ್ನೇ ಆಧಾರವಾಗಿಟ್ಟುಕೊಂಡು ವಾಗ್ದಾಳಿ ನಡೆಸಿದರು.

ಒಟ್ಟಾರೆ ಮನೆಗೆ ಸೀಮಿತವಾಗಿದ್ದ ತಂದೆ-ಮಗನ ನಡುವಿನ ವಿರಸಕ್ಕೆ ಚಾಮುಂಡೇಶ್ವರಿ ಕ್ಷೇತ್ರ ಮುಂದಿನ ದಿನಗಳಲ್ಲಿ ಬಹುದೊಡ್ಡ ವೇದಿಕೆ ಆಗಬಹುದು.